ನೀರು ಅತ್ಯಮೂಲ್ಯವೇಕೆ?

ಭೂಪಟವನ್ನೋ, ಭೂಗೋಲವನ್ನೋ ನೋಡಿದಾಗ ಕಾಣುವ ನೀಲಿ ಬಣ್ಣದ್ದೆಲ್ಲವೂ ನೀರು ಎಂಬುದು ಗೊತ್ತಿರುವ ಸಂಗತಿಯಷ್ಟೆ. ಭೂಗ್ರಹದ ಮುಕ್ಕಾಲು ಭಾಗ ನೀರಿದ್ದೂ, ಕೇವಲ ಕಾಲು ಭಾಗವಷ್ಟೇ ನೆಲವೆಂಬ ವಿಷಯವನ್ನು ಪ್ರಾಥಮಿಕ ಶಾಲೆಯಾಲ್ಲೇ ಕಲಿತಿರುತ್ತೇವೆ. ಅಷ್ಟೊಂದು ನೀರಿದ್ದೂ ನಾವು “ಕೊರತೆ”ಯ ಬಗ್ಗೆ ಮಾತನಾಡುತ್ತಿರುತ್ತೇವೆ. ಏಕೆ?


ವಿಶ್ವಸಂಸ್ಥೆಯ ವರದಿಯ ಪ್ರಕಾರ ಭೂಗ್ರಹದಲ್ಲಿ ಸುಮಾರು ಒಂದುವರೆ ಸಾವಿರ ಮಿಲಿಯನ್ ಕ್ಯುಬಿಕ್ ಕಿಲೋಮೀಟರು ನೀರಿದೆಯಂತೆ.

ಇದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದು ಕಿಲೋಮೀಟರು ಉದ್ದದ, ಒಂದು ಕಿಲೋಮೀಟರು ಅಗಲದ, ಒಂದು ಕಿಲೋಮೀಟರು ಆಳದ ಘನವಸ್ತುವನ್ನು ನೀರಿನಿಂದ ತುಂಬಿಸಿದರೆ ಅದು ಒಂದು ಕ್ಯುಬಿಕ್ ಕಿಲೋಮೀಟರ್. ಇದನ್ನು ಸಾವಿರದೈನೂರರಿಂದ ಗುಣಿಸಿದರೆ ನೀರಿನ ಪ್ರಮಾಣವು ಕಲ್ಪನೆಗೆ ಸಿಕ್ಕೀತು.

ಇಷ್ಟೊಂದು ನೀರಿನಲ್ಲಿ ಶೇ. 98ರಷ್ಟು ಸಮುದ್ರವೇ ಆಗಿದೆ. ಅಂದರೆ, ಒಟ್ಟು ನೀರಿನಲ್ಲಿ ಕೇವಲ ಶೇ. ಎರಡರಷ್ಟು ಮಾತ್ರ ಶುದ್ಧ ಜಲ ಇರುವುದೆಂದಾಯಿತಷ್ಟೆ?

ಈ ಶೇ. ಎರಡರಷ್ಟು ಶುದ್ಧಜಲದಲ್ಲಿ ಮುಕ್ಕಾಲು ಭಾಗ ಧ್ರುವಪ್ರದೇಶಗಳಲ್ಲಿ ಮಂಜುಗೆಡ್ದೆಗಳ ರೂಪದಲ್ಲಿದೆ. ಇನ್ನು ಶೇ 22.5ರಷ್ಟು ನೀರು ಅಂತರ್ಜಲದ ರೂಪದಲ್ಲಿ ಅತಲ, ವಿತಲ, ರಸಾತಲ, ಪಾತಾಲವನ್ನು ಸೇರಿಕೊಂಡಿದೆ.


ಅಂದರೆ, ಒಟ್ಟು ಇರುವ ಶುದ್ಧಜಲದಲ್ಲಿ (ಶೇ. ಎರಡರಲ್ಲಿ) ಶೇ. 97.5ರಷ್ಟು ಪ್ರಮಾಣವು ನಮಗೆ ದೊರಕದ ರೂಪದಲ್ಲಿದೆ. ಇನ್ನು ಉಳಿದಿರುವುದು ಶೇ. ಎರಡೂವರೆಯಷ್ಟು ಶುದ್ಧಜಲ ಮಾತ್ರವೇ ಇಡೀ ಭೂಮಿಯಲ್ಲೆಲ್ಲಾ ಹಂಚಿಹೋಗಿರುವುದು. ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ, ಭೂಗ್ರಹದ ಮುಕ್ಕಾಲು ಭಾಗ ನೀರೇ ಆಗಿದ್ದು, ಅದರಲ್ಲಿ ನಮಗೆ ದೊರಕುವ ರೂಪದಲ್ಲಿರುವ ಶುದ್ಧ ನೀರು ಕೇವಲ ಶೇ. 0.06 ಆಗಿದೆ!

ನೀರು ಅತ್ಯಮೂಲ್ಯವಲ್ಲದೆ ಇನ್ನೇನು ಮತ್ತೆ!

ಮೂಲ: ಅರುಣ್ ಅವರ ಕ್ಷಿತಿಜದೆಡೆಗೆ… ಬ್ಲಾಗ್ ನಿಂದ…