ಮಾಂತ್ರಿಕ ಕೈಗವಸು

ರಾದುಗ ಪ್ರಕಾಶನ, ಮಾಸ್ಕೋದ – ಉಕ್ರೇನಿನ‍ ಜಾನಪದ ಕಥೆಗಳು

ಒಮ್ಮೆ ಒಬ್ಬ ಅಜ್ಜ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ.

ಅವನ ಹಿಂದೆ ಒಂದು ಪುಟ್ಟ ನಾಯಿ ಓಡಿ ಹೋಗುತ್ತಿತ್ತು. ಅಜ್ಜ ಹೋಗುತ್ತಿದ್ದ. ಹೋಗುತ್ತಿದ್ರ. ತನ್ನ ಕೈಗವಸನ್ನು ಕಳೆದುಕೊಂಡ. ಒಂದು ಇಲಿ ಓಡಿ ಬಂದು ಈ ಕೈಗವಸಿನೊಳ ಹೊಕ್ಕಿತು. ಅಲ್ಲೇ ಕುಳಿತು ಹೇಳಿಕೊಂಡಿತು:

“ಇಲ್ಲಿ ನಾನು ವಾಸಮಾಡುತ್ತೇನೆ.”

ಸ್ವಲ್ಪ ಹೊತ್ತಿಗೆ ಒಂದು ಕಪ್ಪೆ ಕುಪ್ಪಳಿಸಿಕೊಂಡು ಅಲ್ಲಿಗೆ ಬಂದಿತು. ಅದು ಕೈಗವಸಿನ ಮುಂದೆ ನಿಂತು ಕೇಳಿತು:

“ಹೇಯ್‌, ಯಾರದು, ಈ ಕೈಗವಸಿನಲ್ಲಿ ವಾಸವಾಗಿರೋದು?”

“ನಾನು ಕೀಚೋ ಇಲಿ. ನೀನು ಯಾರು?”

“ನಾನು ಕುಪ್ಪೋ  ಕಪ್ಪೆ. ನನ್ನನ್ನೂ ಒಳಗೆ ಬಿಡ್ತೀಯ?”

“ಆಗಲಿ, ಬಾ!”

ಆಮೇಲೆ ಒಂದು ಮೊಲ ಓಡಿಕೊಂಡು ಬಂದಿತು. ಅದು ಕೈಗವಸಿನ ಮುಂದೆ ನಿಂತು ಕೇಳಿತು:

“ಯಾರದು, ಈ ಕೈಗವಸಿನಲ್ಲಿ ವಾಸವಾಗಿರೋದು?”

“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ. ನೀನು ಯಾರು?”

“ನಾನು ಓಡೋ ಮೊಲ. ನಾನೂ ಒಳಗೆ ಬರಲಾ?”

“ಆಗಲಿ, ಬಾ!”

ಸ್ವಲ್ಪ ಹೊತ್ತಾದ ಮೇಲೆ ಒಂದು ನರಿಯಕ್ಕ ಆತುರಾತುರವಾಗಿ ಅಲ್ಲಿಗೆ ಬಂದಿತು. ಅದು ಕೈಗವಸಿನ ಮುಂದೆ ನಿಂತು ಕೇಳಿತು:

“ಯಾರದು. ಈ ಕೈಗವಸಿನಲ್ಲಿ ವಾಸಿಸುತ್ತಿರೋದು?”

“ನಾವು ಕೀಚೋ ಇಲ್ಲಿ ಕುಪ್ಪೋ ಕಪ್ಪ ಹಾಗೂ ಓಡೋ ಮೊಲ. ನೀನು ಯಾರು?”

“ನಾನು ನಸುನಗೆಯ ನರಿಯಕ್ಕ. ನನಗೂ ನಿಮ್ಮಲ್ಲಿ ಸ್ವಲ್ಪ ಜಾಗ ಕೊಡುವಿರಾ?”

“ಅದಕ್ಕೇನಂತೆ? ಬಾ ಒಳಗೆ !”

ಹೀಗೆ ಅದರಲ್ಲಿ ನಾಲ್ಕು ಪ್ರಾಣಿಗಳು ಕುಳಿತವು. ಸ್ನಲ್ಪ ಹೊತ್ತಾದ ಮೇಲೆ ಒಂದು

ತೋಳ ಗತ್ತಿನಿಂದ ಹೆಜ್ಜೆ ಹಾಕಿಕೊಂಡು ಬಂದಿತು. ಅದು ಕೈಗವಸಿನ ಮುಂದೆ ನಿಂತು

ಕೇಳಿತು:

“ಹಲೋ, ಯಾರದು ಈ ಕೈಗವಸಿನಲ್ಲಿ ವಾಸಿಸುತ್ತಿರೋದು?

“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ, ಓಡೋ ಮೊಲ ಹಾಗೂ ನಸುನಗೆಯ ನರಿಯಕ್ಕ ನೀನು ಯಾರು?”

“ನಾನು ಅರುಚೋ ತೋಳ. ನಾನೂ ನಿಮ್ಮ ಮನೆಯ ಒಳಕ್ಕೆ ಬರೋಣ ಅಂದುಕೊಂಡಿದೀನಿ.”

“ಆಗಲಿ, ಬಾ!”

ಅದಾದ ಮೇಲೆ ಒಂದು ಕರಡಿ ಒಡ್ಡೊಡ್ಡಾಗಿ ಕಾಲು ಹಾಕಿಕೊಂಡು ಬಂದಿತು. ಅದು

ಗುಟುರು ಹಾಕುತ್ತ ಗರ್ಜಿಸುತ್ತ ಕೇಳಿತು:

“ಹಲೋ, ಯಾರದು ಈ ಕೈಗವಸಿನಲ್ಲಿ ವಾಸಿಸುತ್ತಿರೋದು?”

“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ, ಓಡೋ ಮೊಲ, ನಸುನಗೆಯ ನರಿಯಕ್ಕ ಹಾಗೂ ಅರುಚೋ ತೋಳ. ನೀನು ಯಾರು?”

“ನಾನು ಗುಡುಗೋ ಕರಡಿ. ನನಗೆ ಗೊತ್ತು ನೀವು ನನಗೂ ನಿಮ್ಮಲ್ಲಿ ಸ್ವಲ್ಪ ಜಾಗ ಕೊಡುತ್ತೀರ, ಅಲ್ಲವೇ?”

“ಓಹೋ, ಬಾ ಒಳಕ್ಕೆ!”

ಸರಿ, ಕರಡಿಯೂ ಆ ಕೈಗವಸಿನೊಳಕ್ಕೆ ತೂರಿಕೊಂಡಿತು

ಸ್ವಲ್ಪ ಹೊತ್ತಾದ ಮೇಲೆ ಒಂದು ಕಾಡುಹಂದಿ ಆರಾಮದಿಂದ ಅಡ್ಡಾಡಿಕೊಂಡು ಅತ್ತ

ಕಡೆಗೆ ಬಂದಿತು. ಕೈಗವಸಿನ ಮುಂದೆ ನಿಂತು ಅದು ಗುಟುರು ಹಾಕಿ ಕೇಳಿತು:

“ಹಲೋ, ಯಾರದು ಈ ಈ ಕೈಗವಸಿನಲ್ಲಿ ವಾಸಿಸುತ್ತಿರೋದು?”

“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ, ಓಡೋ ಮೊಲ, ನಸುನಗೆಯ ನರಿಯಕ್ಕ, ಅರುಚೋ ತೋಳ ಹಾಗೂ ಗುಡುಗೋ ಕರಡಿ. ನೀನು ಯಾರು?”

“ನಾನು ಚೂಪು ಮೂತಿಯ ಹಂದಿ. ನನಗೂ ನಿಮ್ಮಲ್ಲಿ ಒಂದಿಷ್ಟು ಸ್ಥಳ ಕೊಡುವಿರಿ, ಅಲ್ಲವೇ?”

“ಓಹೋ ಖಂಡಿತ! ಬಾ, ಒಳಗೆ!”

ಕಾಡುಹಂದಿಯೂ ಕೈಗವಸಿನೊಳಕ್ಕೆ ತೂರಿಕೊಂಡಿತು. ಹೀಗೆ ಆ ಪುಟ್ಟ ಕೈಗವಸಿನೊಳಗೆ ಏಳು ಪ್ರಾಣಿಗಳು ಮುದುಡಿ ಕುಳಿತಿದ್ದವು.

ಆ ಹೊತ್ತಿಗೆ ಅಜ್ಜ ನೋಡುತ್ತಾನೆ – ಕೈಗವಸು ಇಲ್ಲ. ಅದಕ್ಕೋಸ್ಕರ ಅವನು ಹಿಂದಿರು

ಗಿದ. ನಾಯಿ ಮುಂದೆ ಓಡಿತು. ಓಡಿತು, ಓಡಿತು, ನೋಡುತ್ತದೆ – ಆ ಕೈಗವಸು ಅಲ್ಲಿ ಬಿದ್ದಿದೆ, ಮಾಂತ್ರಿಕವೋ ಅನ್ನುವಂತೆ ಮಿಸುಕಾಡುತ್ತಿದೆ. ನಾಯಿ ಆಗ “ಬೌವ್‌-ಬೌವ್‌-ಬೌವ್‌” ಎಂದು ಬೊಗುಳಿತು. ಕೈಗವಸಿನೊಳಗಿದ್ದ ಏಳು ಪ್ರಾಣಿಗಳೂ ಹೆದರಿ ಅದರೊಳಗಿನಿಂದ ಹೊರಬಂದು ದಿಕ್ಕಾಪಾಲಾಗಿ ಓಡಿದವು. ಆಗ ಅಜ್ಜ ಬಂದ. ಕೈಗವಸನ್ನು ತೆಗೆದುಕೊಂಡ.

ಮೋಸದ ಮೇಕೆ

ರಾದುಗ ಪ್ರಕಾಶನ, ಮಾಸ್ಕೋದ – ಉಕ್ರೇನಿನ‍ ಜಾನಪದ ಕಥೆಗಳು

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬ ಮುದುಕಿ ವಾಸವಾಗಿದರು. ಒಂದು ಸಾರಿ ಮುದುಕ ಸಂತೆಗೆ ಹೋಗಿ ಒಂದು ಮೇಕೆಯನ್ನು ಕೊಂಡುಕೊಂಡು ಬಂದ. ಅದನ್ನು ಮನೆಗೆ ಕರೆತಂದವನೇ ಅವನು ಮಾರನೆಯ ದಿನ ಬೆಳಿಗ್ಗೆ ತನ್ನ ಹಿರಿಯ ಮಗನನ್ನು ಕರೆದು ಮೇಕೆಯನ್ನು

ಮೇಯಿಸಿಕೊಂಡು ಬರುವಂತೆ ತಿಳಿಸಿದ. ಮಗನು ಮೇಕೆಯನ್ನು ಸಂಜೆಯವರೆಗೂ ಮೇಯಿಸಿ ಕೊಂಡು ಆಮೇಲೆ ಮನೆಗೆ ಕರೆತಂದ. ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತಿದ್ದ ಮುದುಕ ಮೇಕೆಯನ್ನು ಕೇಳುತ್ತಾನೆ:

“ಏನು, ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”

“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಸೇತುವೆ ದಾಟಿ ಹೋಗುವಾಗ ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು.”

ಮುದುಕನಿಗೆ ಮಗನ ಮೇಲೆ ತುಂಬ ಕೋಪ ಬಂತು. ಅವನನ್ನು ಮನೆಯಿಂದ ಹೊರಕ್ಕೆ ಅಟ್ಟಿದ.

ಮಾರನೆಯ ಬೆಳಿಗ್ಗೆ ಮುದುಕ ತನ್ನ ಕಿರಿಯ ಮಗನನ್ನು ಕರೆದು ಮೇಕೆಯನ್ನು ಮೇಯಿಸಿಕೊಂಡು ಬರುವಂತೆ ತಿಳಿಸಿದ. ಅವನೂ ಮೇಕೆಯನ್ನು ಸಂಜೆಯವರೆಗೂ ಮೇಯಿಸಿಕೊಂಡು ಆಮೇಲೆ ಮನೆಗೆ ಕರೆತಂದ. ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತಿದ್ವ ಮುದುಕ ಮೇಕೆಯನ್ನು ಕೇಳುತ್ತಾನೆ:

“ಏನು ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”

“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು”

ಮುದುಕ ತನ್ನ ಕಿರಿಯ ಮಗನನ್ನೂ ಮನೆಯಿಂದ ಹೊರಕ್ಕೆ ಅಟ್ಟಿದ.

ಮೂರನೆಯ ದಿನ ಮುದುಕ ಮುದುಕಿಯನ್ನು ಮೇಕೆಯನ್ನು ಮೇಯಿಸಲು ಕೊಟ್ಟ.

ಮುದುಕಿಯೂ ಮೇಕೆಯನ್ನು ಸಂಜೆಯವರೆಗೂ ಮೇಯಿಸಿಕೊಂಡು ಆಮೇಲೆ ಮನೆಗೆ ಕರೆತಂದಳು. ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತಿದ್ದ ಮುದುಕ ಮೇಕೆಯನ್ನು ಕೇಳುತ್ತಾನೆ:

“ಏನು ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”

“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಸೇತುವೆ ದಾಟಿ ಹೋಗುವಾಗ ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು.”

ಮುದುಕ ಮುದುಕಿಯನ್ನೂ ಮನೆಯಿಂದ ಹೊರಕ್ಕೆ ಆಟ್ಟಿದ.

ನಾಲ್ಕನೆಯ ದಿನ ಮುದುಕ ತಾನೇ ಮೇಕೆಯನ್ನು ಮೇಯಿಸಲು ಕರೆದೊಯ್ದ. ಇಡೀ ದಿನ, ಸಂಜೆಯಾಗುವವರೆಗೂ ಮೇಯಿಸಿಕೊಂಡು ಮನೆಗೆ ಕರೆತಂದ. ತಾನೇ ಮುಂದೆ ನಡೆದು. ಹೋಗಿ ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತು ಮೇಕೆಯನ ಕೇಳುತ್ತಾನೆ:

“ಏನು ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”

“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಸೇತುವೆ ದಾಟಿ ಹೋಗುವಾಗ ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು.”

‍ಮುದುಕನಿಗೆ ಕೋಪ ಬಂತು. ನೇರವಾಗಿ ಕಮ್ಮಾರನ ಬಳಿಗೆ ಹೋಗಿ ಮಚ್ಚು ಮಸೆಯಿಸಿ ಕೊಂಡು ಬಂದ. ಮೇಕೆಯನ್ನು ತುಂಡರಿಸಲು ಹೋದ. ಆದರೆ ಮೇಕೆ ಹಗ್ಗ ಕಿತ್ತುಕೊಂಡು ಕಾಡಿಗೆ ಓಡಿಹೋಯಿತು. ಅಲ್ಲಿ ಅದು ಒಂದು ಮೊಲದ ಗುಡಿಸಿಲನ್ನು ಕಂಡಿತು. ಅದರ ಒಳಗೆ

ಹೋಗಿ ಒಲೆಯ ಹಿಂದೆ ಅಡಗಿ ಕುಳಿತಿತು.

ಸ್ವಲ್ಪ ಹೊತ್ತಾದ ಮೇಲೆ ಮೊಲ ತನ್ನ ಗುಡಿಸಿಲಿಗೆ ಬಂದಿತು. ಒಳಗೆ ಯಾರೋ ಇರುವುದನ್ನು ಕಂಡಿತು. ಅದು ಕೇಳಿತು:

“ಯಾರು ನನ್ನ ಗುಡಿಸಿಲಿನಲ್ಲಿ ಇರೋದು?”

ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:

“ಘೋರ ಭೀಕರ ಮೇಕೆಯು ನಾನು,

ಕೊಂಡರು ನನ್ನನು ಕಾಸಿಗೆ ಮೂರು!

ಹರಿದಿದೆ. ಎನ್ನಯ ಬೆನ್ನಿನ ತೊಗಲು,

ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,

ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,

ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,

ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,

ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”

ಮೊಲಕ್ಕೆ ಹೆದರಿಕೆಯಾಯಿತು. ಗುಡಿಸಿಲಿನಿಂದ ಓಡಿ ಹೋಗಿ ಒಂದು ಮರದ ಕೆಳಗೆ ಕುಳಿತು ಗಟ್ಟಿಯಾಗಿ. ಅಳ ತೊಡಗಿತು. ಅಷ್ಟು ಹೊತ್ತಿಗೆ ಅಲ್ಲಿಗೆ ಒಂದು. ಕರಡಿ ಬಂತು. ಅದು ಕೇಳಿತು:

“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?”

“ಅಳದೆ ಹ್ಯಾಗಿರಲಿ ಹೇಳು, ಗುರ್‌ಗುರ್‌ ಕರಡಿ, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು ಕುಳಿತಿರುವಾಗ?”

ಕರಡಿ ಹೇಳಿತು: “ಅಳಬೇಡ, ಸುಮ್ನಿರು, ನಾನು ಅದನ್ನು ಓಡಿಸ್ತೀನಿ !”

ಅದು ಗುಡಿಸಿಲಿನ ಬಳಿಗೆ ಓಡಿ ಹೋಗಿ ಕೇಳಿತು:

“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”

ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:

“ಘೋರ ಭೀಕರ ಮೇಕೆಯು ನಾನು,

ಕೊಂಡರು ನನ್ನನು ಕಾಸಿಗೆ ಮೂರು!

ಹರಿದಿದೆ. ಎನ್ನಯ ಬೆನ್ನಿನ ತೊಗಲು,

ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,

ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,

ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,

ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,

ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”

ಕರಡಿಗೆ ತುಂಬ ಹೆದರಿಕೆಯಾಯಿತು. ಅದು ಗುಡಿಸಿಲಿನಿಂದ ಹೊರಕ್ಕೆ ಓಡಿ ಬಂದಿತು.

“ಉಹೂಂ, ವೇಗ ಓಟದ ಮೊಲವೇ ! ಅದನ್ನು ಓಡಿಸಲು ನನ್ನ ಕೈಲಾಗದು. ನನಗೆ ಭಯ !”

ಮೊಲ ಮತ್ತೆ ಹೋಗಿ ಮರದ ಕೆಳಗೆ ಕುಳಿತು ಗಟ್ಟಿಯಾಗಿ ಅಳ ತೊಡಗಿತು. ಅಷ್ಟು ಹೊತ್ತಿಗೆ ಒಂದು ತೋಳ ಅಲ್ಲಿಗೆ ಬಂದಿತು. ಅದು ಕೇಳಿತು:

“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?”

“ಅಳದೆ ಹ್ಯಾಗಿರಲಿ ಹೇಳು, ಬೂದುಮೈಯಿನ ತೋಳವೇ, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು ಕುಳಿತಿರುವಾಗ?”

ತೋಳ ಹೇಳಿತು: “ಅಳಬೇಡ, ಸುಮ್ನಿರು. ನಾನು ಅದನ್ನು ಓಡಿಸ್ತೀನಿ !”

“ನಿನಗೆ ಎಲ್ಲಿ ಓಡಿಸೋಕಾಗುತ್ತೆ? ಕರಡಿಯ ಕೈಲೇ ಆಗಲಿಲ್ಲ. ಇನ್ನು ನಿನ್ನ ಕೈಲಿ ಎಲ್ಲಾಗುತ್ತೆ?”

“ನೋಡ್ತಿರು. ನಾನು ಓಡಿಸ್ತೇನೆ !”

ತೋಳ ಗುಡಿಸಿಲಿನ ಕಡೆಗೆ ಓಡಿತು. ಕೇಳಿತು:

“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”

ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:

“ಘೋರ ಭೀಕರ ಮೇಕೆಯು ನಾನು,

ಕೊಂಡರು ನನ್ನನು ಕಾಸಿಗೆ ಮೂರು !

ಹರಿದಿದೆ ಎನ್ನಯ ಬೆನ್ನಿನ ತೊಗಲು,

ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,

ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,

ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,

ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,

ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು !”

ತೋಳಕ್ಕೆ ತುಂಬ ಹೆದರಿಕೆಯಾಯಿತು. ಅದೂ ಗುಡಿಸಿಲಿನಿಂದ ಹೊರಕ್ಕೆ ಓಡಿತು.

“ಉಹೂಂ, ವೇಗ ಓಟದ ಮೊಲವೇ ! ಅದನ್ನು ಓಡಿಸಲು ನನ್ನ ಕೈಲಾಗದು. ನನಗೆ ಭಯ !”

ಮೊಲ ಮತ್ತೆ ಹೋಯಿತು. ಮರದ ಕೆಳಗೆ ಕುಳಿತು ಗಟ್ಟಿಯಾಗಿ ಅಳ ತೊಡಗಿತು. ಅಷ್ಟು ಹೊತ್ತಿಗೆ ಒಂದು ನರಿ ಅಲ್ಲಿಗೆ ಬಂದಿತು. ಮೊಲವನ್ನು ಕಂಡು ಕೇಳಿತು

“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?”

“ಅಳದೆ ಹ್ಯಾಗಿರಲಿ ಹೇಳು, ನರಿಯಕ್ಕ, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು ಕುಳಿತಿರುವಾಗ?”

ನರಿ ಹೇಳಿತು: “ಅಳಬೇಡ, ಸುಮ್ನಿರು. ನಾನು ಅದನ್ನು ಓಡಿಸ್ತೀನಿ !”

“ನಿನಗೆ ಎಲ್ಲಿ ಓಡಿಸೋಕಾಗುತ್ತೆ? ಕರಡಿ ಪ್ರಯತ್ನ ಮಾಡಿತು. ಆಗಲಿಲ್ಲ. ತೋಳ ಪ್ರಯತ್ನ ಮಾಡಿತು. ಆಗಲಿಲ್ಲ. ನಿನ್ನ ಕೈಲೂ ಆಗೊಲ್ಲ.”

“ನೋಡ್ತಿರು. ನಾನು ಓಡಿಸ್ಕೇನೆ [

ನರಿ ಗುಡಿಸಿಲಿನ ಕಡೆಗೆ ಓಡಿತು. ಕೇಳಿತು:

“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”

ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:

“ಘೋರ ಭೀಕರ ಮೇಕೆಯು ನಾನು,

ಕೊಂಡರು ನನ್ನನು ಕಾಸಿಗೆ ಮೂರು!

ಹರಿದಿದೆ. ಎನ್ನಯ ಬೆನ್ನಿನ ತೊಗಲು,

ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,

ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,

ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,

ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,

ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”

ನರಿಗೆ ತುಂಬ ಹೆದರಿಕೆಯಾಯಿತು. ಅದು ಗುಡಿಸಿಲಿನಿಂದ ಓಟ ಕಿತ್ತಿತು.

“ಉಹೂಂ, ವೇಗ ಓಟದ ಮೊಲವೇ ! ಅದನ್ನು ಓಡಿಸಲು ನನ್ನ ಕೈಲಾಗದು. ನನಗೆ ಭಯ !

ಮೊಲ ಮತ್ತೆ ಹೋಯಿತು. ಮರದ ಕೆಳಗೆ ಕುಳಿತು ಗಟ್ಟಿಯಾಗಿ ಅಳ ತೊಡಗಿತು. ಅಷ್ಟು ಹೊತ್ತಿಗೆ ಒಂದು ಮುಳ್ಳುನಳ್ಳಿ ಅಲ್ಲಿಗೆ ತೆವಳಿಕೊಂಡು ಬಂದಿತು.

“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?” ಅದು ಕೇಳಿತು.

“ಅಳದೆ ಹ್ಯಾಗಿರಲಿ ಹೇಳು, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು

ಕುಳಿತಿರುವಾಗ?”

ಮುಳ್ಳುನಳ್ಳಿ ಹೇಳಿತು: “ಹೌದೆ? ನಾನು ಅದನ್ನು ಓಡಿಸ್ತೀನಿ !”

“ನಿನಗೆ ಎಲ್ಲಿ ಓಡಿಸೋಕಾಗುತ್ತೆ? ಕರಡಿ ಪ್ರಯತ್ನ ಮಾಡಿತು. ಓಡಿಸೋಕಾಗಲಿಲ್ಲ. ತೋಳ ಪ್ರಯತ್ನ ಮಾಡಿತು. ಓಡಿಸೋಕಾಗಲಿಲ್ಲ. ಆಮೇಲೆ ನರಿ ಪ್ರಯತ್ನ ಮಾಡಿತು. ಅದರ ಕೈಲೂ ಓಡಿಸೋಕಾಗಲಿಲ್ಲ. ಇನ್ನು ನಿನ್ನ ಕೈಲಿ ಎಲ್ಲಿ ಆಗುತ್ತೆ?”

“ನೋಡ್ತಿರು. ನಾನು ಓಡಿಸ್ತೇನೆ !”

ಮುಳ್ಳುನಳ್ಳಿ ಮೊಲದ ಗುಡಿಸಿಲಿನೊಳಗೆ ತೆವಳಿಕೊಂಡು ಹೋಗಿ ಕೇಳಿತು:

“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”

ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:

“ಘೋರ ಭೀಕರ ಮೇಕೆಯು ನಾನು,

ಕೊಂಡರು ನನ್ನನು ಕಾಸಿಗೆ ಮೂರು!

ಹರಿದಿದೆ. ಎನ್ನಯ ಬೆನ್ನಿನ ತೊಗಲು,

ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,

ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,

ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,

ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,

ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”

ಮುಳ್ಳುನಳ್ಳಿ ಮುಂದೆ ಮುಂದೆ ತೆವಳಿಕೊಂಡು ಹೋಯಿತು. ಒಲೆಯ ಮೇಲಕ್ಕೇ ತೆವಳಿ ಕೊಂಡು ಹೋಗಿ ಹೇಳಿತು:

“ನಾನು ಮುಳ್ಳುನಳ್ಳಿ – ಮಳ್ಳನಲ್ಲ. ಹೆದರುವರು ನನಗೆ ಎಲ್ಲ. ಕಚ್ಚಿದರೆ ನಾನು ಎಗರಾಡುವೆ ನೀನು. ಕುಟುಕಿದರೆ ನಾನು ಗೋಳಾಡುವೆ ನೀನು !”

ಹೌದು, ಮುಳ್ಳುನಳ್ಳಿ ಹಾಗೆಯೇ ಮಾಡಿತು. ಮೇಕೆಯನ್ನು ತನ್ನ ಮೊನೆಯುಗುರುಗಳಿಂದ ಗಟ್ಟೆಯಾಗಿ ಚುಚ್ಚಿತು. ಮೇಕೆ ಹೇಗೆ ಗೋಳಾಡಿತು ! ಅದು ತಕ್ಷಣವೇ ಒಲೆಯ ಹಿಂದುಗಡೆಯಿಂದ ಹೊರಗೆ ಬಂದಿತು. ಗುಡಿಸಿಲಿನಿಂದ ಹೊರಕ್ಕೆ ಬಂದು ಓಟ ಕಿತ್ತಿತು.

ಮೊಲಕ್ಕೆ ತುಂಬ ಸಂತೋಷವಾಯಿತು. ಗುಡಿಸಿಲಿನ ಒಳಕ್ಕೆ ಹೋಯಿತು. ಅದು ಮುಳ್ಳು ನಳ್ಳಿಗೆ ಎಷ್ಟು ವಿಧದಲ್ಲಿ ತನ್ನ ಕೃತಜ್ಞತೆ ತಿಳಿಸಿತು ! ಹೀಗೆ ಅದು ಇಂದಿಗೂ ತನ್ನ ಗುಡಿಸಿಲಿನಲ್ಲಿ ವಾಸಿಸುತ್ತಿದೆ, ಸುಖಸಂತೋಷಗಳಿಂದ.