ಮಾರುದ್ದ ಕತ್ತು, ಕಾಲು ಮತ್ತು ದೇಹ ಪೂರ್ತಿ ಬೇಬಿ ಪಿಂಕ್ ಬಣ್ಣದ ಫ್ಲೆಮಿಂಗೋ ಪಕ್ಷಿ ನೋಡೋಕೆ ಬಲು ಚೆಂದ. ಇವು ಕೆರೇಬಿಯನ್, ಅಮೇರಿಕಾ ಮತ್ತು ಯೂರೋಪ್ನಲ್ಲಿವೆ. ಎರಡೂವರೆಯಿಂದ ಐದು ಅಡಿ ಎತ್ತರವಿರುವ ಇವು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಹಾರತ್ತೆ.
ಫ್ಲೆಮಿಂಗೋ ವರ್ಷಕ್ಕೊಂದೇ ಮೊಟ್ಟೆ ಇಡೋದು, ಅದ್ರ ಮೊಟ್ಟೆ ನಮ್ಮ ಕೋಳಿಮರಿ ಮೊಟ್ಟೆಗಿಂತ ಸ್ವಲ್ಪ ದೊಡ್ಡದಾಗಿರತ್ತೆ, ಒಂದು ತಿಂಗಳು ಮುಗಿಯೋದ್ರೊಳಗೆ ಮರಿ ಫ್ಲೆಮಿಂಗೋ ಹೊರ ಬರತ್ತೆ. ಹುಟ್ಟಿದಾಗ ಮರಿ ಫ್ಲೆಮಿಂಗೋ ಬಿಳಿ ಬಣ್ಣದಲ್ಲಿರತ್ತೆ, ಮೂರರಿಂದ ಐದು ವರ್ಷ ತುಂಬೋದ್ರೊಳಗೆ ಅದಕ್ಕೆ ಗುಲಾಬಿ ಬಣ್ಣ ಬರತ್ತೆ.
ಈ ಗುಲಾಬಿ ಬಣ್ಣ ಎಲ್ಲಿಂದ ಬರತ್ತೆ ಗೊತ್ತಾ? ಅವು ತಿನ್ನೋ ಆಹಾರದಿಂದ! ಇವು ತಿನ್ನೋದು ಸಸ್ಯ, ಲಾರ್ವ, ಹುಳು ಹುಪ್ಪಟಿಗಳನ್ನ. ಆಹಾರದಲ್ಲಿರೋ ಬೀಟಾ ಕ್ಯಾರೋಟೀನ್ ಅಂಶದ ಆಧಾರದ ಮೇಲೆ ಫ್ಲೆಮಿಂಗೋ ಪಕ್ಷಿಯ ಬಣ್ಣ ಕೆಂಪು, ಕೇಸರಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರತ್ತೆ.
ಈ ಕ್ಯಾರೋಟೀನ್ ಅಂಶ ಪಾಲಕ್ ಸೊಪ್ಪು, ಟೊಮ್ಯಾಟೋ, ಮಾವಿನಹಣ್ಣು, ಕುಂಬಳಕಾಯಿ, ಸಿಹಿಗೆಣಸು, ಕ್ಯಾರೆಟ್ ಮತ್ತು ಹಲವಾರು ಸಸ್ಯಳಲ್ಲಿವೆ. ಕ್ಯಾರೋಟೀನನ್ನು ಕ್ಯಾನ್ಡ್ ಜ್ಯೂಸ್ಗಳಲ್ಲಿ, ಕೇಕ್ ಪೇಸ್ಟರಿಗಳಲ್ಲಿ ಬಣ್ಣ ಬರಲು ಉಪಯೋಗಿಸ್ತಾರೆ ಗೊತ್ತಾ!
ಸ್ಪ್ಯಾನಿಷ್ನಲ್ಲಿ ಫ್ಹ್ಲೆಮೆಂಕೋ ಅನ್ನೋ ಡಾನ್ಸ್ ಈ ಫ್ಲೆಮಿಂಗೋ ಪಕ್ಷಿಯ ನೃತ್ಯ ಶೈಲಿಯಿಂದ ಬಂದಿದೆ ಅನ್ನೋ ಪ್ರತೀತಿ. ಇಲ್ನೋಡಿ ಫ್ಲೆಮಿಂಗೋ ಪಕ್ಷಿಯ ಟ್ಯಾಪ್ ಡಾನ್ಸ್!
ಸಂಘಜೀವಿಗಳಾದ ಇವು ಗುಂಪಿನಲ್ಲಿ ನರ್ತಿಸೋದನ್ನ ನೋಡೋಕೆ ಇನ್ನೂ ಚೆನ್ನಾಗಿರತ್ತೆ. ನೀವೂ ನೋಡಿ ಆನಂದಿಸಿ.
ಜಾನುವಾರು ಬೆಳ್ಳಕ್ಕಿ (Cattle Egret) ಏಶ್ಯಾ, ಆಫ್ರಿಕಾ, ಯೂರೋಪ್ನಂತಹ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಕಂಡುಬರುವ, ಕೊಕ್ಕರೆಯನ್ನು ಹೋಲುವ ಅಚ್ಚ ಬಿಳಿ ಬಣ್ಣದ ಹಕ್ಕಿ.
ಇದರ ಅಗಲ ೮೮-೯೬ ಸೆ.ಮೀ. (ರೆಕ್ಕೆ ಬಿಡಿಸಿದಾಗ), ಉದ್ದ ೪೬-೫೬ ಸೆ.ಮೀ, ಹಾಗೂ ೨೭೦-೫೧೨ ಗ್ರಾಂಗಳವರೆಗೆ ತೂಗುತ್ತದೆ.
ಬಲಿಷ್ಟ ಹಳದಿ ಬಣ್ಣದ ಕೊಕ್ಕು, ಗಿಡ್ಡಗಿನ ಅಗಲವಾದ ಕುತ್ತಿಗೆ(ಇತರ ಕೊಕ್ಕರೆ ಜಾತಿಯ ಹಕ್ಕಿಗಳಿಗೆ ಹೋಲಿಸಿದಲ್ಲಿ), ಗೂನು ಬೆನ್ನಿನ ನಿಲುವು, ಬಿಳಿ ಬಣ್ಣದ ಗರಿ, ಬೂದು ಮಿಶ್ರಿತ ಹಳದಿ ಬಣ್ಣದ ಕಾಲು.
ಈ ಹಕ್ಕಿಗಳು ಕೂಡುವ ಸಮಯದಲ್ಲಿ ನೆತ್ತಿ, ಬೆನ್ನು ಮತ್ತು ಎದೆಯ ಮೇಲೆ ಕಿತ್ತಳೆ ಬಣ್ಣದ ಗರಿ ಮತ್ತು ಕಣ್ಪೊರೆ, ಕೊಕ್ಕು, ಕಾಲುಗಳು ಕೆಂಪು ಬಣ್ಣ ತಳೆಯುತ್ತದೆ. ಗಂಡು ಹಕ್ಕಿ ಹೆಣ್ಣಿಗಿಂತ ಉದ್ದನೆಯ ಪುಕ್ಕವನ್ನು ಹೊಂದಿರುತ್ತದೆ.
ನೀರಿನ ಒರತೆಯ ಬಳಿ, ಮರ ಗಿಡಗಳ ಕಡ್ಡಿಯಿಂದ ಗೂಡು ಕಟ್ಟಿ, ಇತರ ನೀರಿನ ಹಕ್ಕಿಗಳೊಂದಿಗೆ ಸಾಮೂಹಿಕವಾಗಿ ನೆಲೆಸುತ್ತದೆ.
ಕೆಲವು ಜಾತಿಯ ಜಾನುವಾರು ಬೆಳ್ಳಕ್ಕಿಗಳು, ವಲಸೆ ಹೋಗುವುದೂ ಉಂಟು.
ಆಹಾರ ಕೆರೆ, ಜವುಗು ಪ್ರದೇಶದಲ್ಲಿನ ಕಪ್ಪೆ, ಏಡಿ, ಪುಡಿ ಮೀನುಗಳೂ ಅಲ್ಲದೇ ಸಾಮಾನ್ಯವಾಗಿ ದನ, ಎಮ್ಮೆ ಮೊದಲಾದ ಜಾನುವಾರುಗಳು ಹುಲ್ಲು ಮೇಯುವಲ್ಲಿ ಹಾರುವ ಕೀಟಗಳನ್ನೂ, ಜಾನುವಾರಿನ ಮೇಲಿನ ಪರಾವಲಂಭಿ ಜೀವಿಗಳನ್ನೂ ತಿನ್ನುತ್ತದೆ.
ಮೊಟ್ಟೆ ಇಟ್ಟು ಮರಿ ಮಾಡುವ ಕಾಲ, ನವೆಂಬರಿನಿಂದ ಫೆಬ್ರವರಿಯವರೆಗೆ.
ಗೊರವಂಕ, ಮೈನ(Common Myna, Indian Myna) ಎಂಬಿತ್ಯಾದಿ ಹೆಸರಿನಿಂದ ಗುರುತಿಸಿಕೊಳ್ಳುವ ಈ ಹಕ್ಕಿಯ ಮೂಲ ಏಶಿಯಾ. ಸಾಮಾನ್ಯವಾಗಿ ಭಾರತ, ಇರಾನ್, ಕಜಖಸ್ತಾನದಿಂದ ಮಲೇಶಿಯ ಹಾಗೂ ಚೀನಾದಲ್ಲಿ ಕಂಡುಬರುವುದಾದರೂ ಪ್ರಪಂಚದ ಇನ್ನಿತರ ಪ್ರದೇಶಗಳಲ್ಲೂ ಇದರ ವಾಸ್ತವ್ಯ ವಿಸ್ತರಿಸಿದೆ.
Myna | ಮೈನಾ | ಗೊರವಂಕ
ಕಪ್ಪು ಮಿಶ್ರಿತ ಕಂದು ಮೈಬಣ್ಣ, ರೆಕ್ಕೆಯಲ್ಲಿ ಬಿಳಿ ಬಣ್ಣದ ರೇಖೆ, ಕಪ್ಪು ತಲೆ, ಕಣ್ಣಿನ ಸುತ್ತ ಹಳದಿ ಬಣ್ಣದ ಪುಕ್ಕ ರಹಿತ ಚರ್ಮ, ಕಾಲು ಮತ್ತು ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಮತ್ತು ಗಂಡು ಒಂದೇ ರೀತಿ ಇದ್ದು, ಗುಂಪುಗಳಲ್ಲಿ ಅಥವಾ ಜೋಡಿಯಾಗಿ ಕಾಣಿಸುತ್ತವೆ.
೨೦೦೮ರ ಆಸ್ಟ್ರೇಲಿಯಾದ ಸಮೀಕ್ಷೆಯ ಪ್ರಕಾರ “The Most Important Pest” ಎಂದು ಕುಖ್ಯಾತಿ ಪಡೆದ ಗೊರವಂಕ, “100 of the World’s Worst Invasive Alien Species” ಕ್ರಮಾಂಕದಲ್ಲಿ ಮೂರನೇ ಸ್ಥಾನ ಪಡೆದಿದೆ. ೧೮೬೩ -೧೮೭೨ರ ಸಮಯದಲ್ಲಿ ಕೀಟಗಳ ನಿಯಂತ್ರಣಕ್ಕಾಗಿ ಈ ಜಾತಿಯ ಹಕ್ಕಿಗಳನ್ನು ಆಸ್ಟ್ರೇಲಿಯಾಕ್ಕೆ ಪರಿಚಯಿಸಲಾಯ್ತು. ಈ ಹಕ್ಕಿ ಆಕ್ರಮಣ ಶೀಲ ಸ್ವಭಾವದ್ದಾಗಿದ್ದು, ವಾತಾವರಣ ವೈಪರೀತ್ಯಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲದು. ಕೀಟಗಳನ್ನು ಧ್ವಂಸ ಮಾಡುವುದರ ಜೊತೆಗೆ ತನ್ನ ಗೂಡಿನ ಬಳಿ ಬರುವ ಇತರ ಹಕ್ಕಿಗಳ ಮೇಲೆ ಆಕ್ರಮಿಸಿ ಅವುಗಳ ಸಂತತಿಗೆ ಮಾರಕವಾಗಿ, ಬೆಳೆ ನಾಷಕ ಪಿಡುಗಾಗಿ ತನ್ನ ಸಂತಾನ ವೃದ್ಧಿಸಿಕೊಂಡಿದೆ. ಒಂದು ಭೂಭಾಗದ ಜೀವಿಯನ್ನು ಹೊಸ ವಾತಾವರಣಕ್ಕೆ ಪರಿಚಯಿಸಿದಲ್ಲಿ ಆಗಬಹುದಾದ ತೊಂದರೆಗಳಿಗೆ ಗೊರವಂಕ ಉತ್ತಮ ಉದಾಹರಣೆ.