ಪಿಂಕ್ ಫ್ಲೆಮಿಂಗೋ

ಪುಟಾಣಿಗಳೇ ನಿಮಗೆ ಫ್ಲೆಮಿಂಗೋ ಪಕ್ಷಿಯ ಬಗ್ಗೆ ಗೊತ್ತಾ?

Flemingo Painting

ಮಾರುದ್ದ ಕತ್ತು, ಕಾಲು ಮತ್ತು ದೇಹ ಪೂರ್ತಿ ಬೇಬಿ ಪಿಂಕ್ ಬಣ್ಣದ ಫ್ಲೆಮಿಂಗೋ ಪಕ್ಷಿ ನೋಡೋಕೆ ಬಲು ಚೆಂದ. ಇವು ಕೆರೇಬಿಯನ್, ಅಮೇರಿಕಾ ಮತ್ತು ಯೂರೋಪ್ನಲ್ಲಿವೆ. ಎರಡೂವರೆಯಿಂದ ಐದು ಅಡಿ ಎತ್ತರವಿರುವ ಇವು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಹಾರತ್ತೆ.

ಫ್ಲೆಮಿಂಗೋ ವರ್ಷಕ್ಕೊಂದೇ ಮೊಟ್ಟೆ ಇಡೋದು, ಅದ್ರ ಮೊಟ್ಟೆ ನಮ್ಮ ಕೋಳಿಮರಿ ಮೊಟ್ಟೆಗಿಂತ ಸ್ವಲ್ಪ ದೊಡ್ಡದಾಗಿರತ್ತೆ, ಒಂದು ತಿಂಗಳು ಮುಗಿಯೋದ್ರೊಳಗೆ ಮರಿ ಫ್ಲೆಮಿಂಗೋ ಹೊರ ಬರತ್ತೆ. ಹುಟ್ಟಿದಾಗ ಮರಿ ಫ್ಲೆಮಿಂಗೋ ಬಿಳಿ ಬಣ್ಣದಲ್ಲಿರತ್ತೆ, ಮೂರರಿಂದ ಐದು ವರ್ಷ ತುಂಬೋದ್ರೊಳಗೆ ಅದಕ್ಕೆ ಗುಲಾಬಿ ಬಣ್ಣ ಬರತ್ತೆ.

ಈ ಗುಲಾಬಿ ಬಣ್ಣ ಎಲ್ಲಿಂದ ಬರತ್ತೆ ಗೊತ್ತಾ? ಅವು ತಿನ್ನೋ ಆಹಾರದಿಂದ! ಇವು ತಿನ್ನೋದು ಸಸ್ಯ, ಲಾರ್ವ, ಹುಳು ಹುಪ್ಪಟಿಗಳನ್ನ. ಆಹಾರದಲ್ಲಿರೋ ಬೀಟಾ ಕ್ಯಾರೋಟೀನ್ ಅಂಶದ ಆಧಾರದ ಮೇಲೆ ಫ್ಲೆಮಿಂಗೋ ಪಕ್ಷಿಯ ಬಣ್ಣ ಕೆಂಪು, ಕೇಸರಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರತ್ತೆ.

ಈ ಕ್ಯಾರೋಟೀನ್ ಅಂಶ ಪಾಲಕ್ ಸೊಪ್ಪು, ಟೊಮ್ಯಾಟೋ, ಮಾವಿನಹಣ್ಣು, ಕುಂಬಳಕಾಯಿ, ಸಿಹಿಗೆಣಸು, ಕ್ಯಾರೆಟ್ ಮತ್ತು ಹಲವಾರು ಸಸ್ಯಳಲ್ಲಿವೆ. ಕ್ಯಾರೋಟೀನನ್ನು ಕ್ಯಾನ್ಡ್ ಜ್ಯೂಸ್ಗಳಲ್ಲಿ, ಕೇಕ್ ಪೇಸ್ಟರಿಗಳಲ್ಲಿ ಬಣ್ಣ ಬರಲು ಉಪಯೋಗಿಸ್ತಾರೆ ಗೊತ್ತಾ!

ಸ್ಪ್ಯಾನಿಷ್ನಲ್ಲಿ ಫ್ಹ್ಲೆಮೆಂಕೋ ಅನ್ನೋ ಡಾನ್ಸ್ ಈ ಫ್ಲೆಮಿಂಗೋ ಪಕ್ಷಿಯ ನೃತ್ಯ ಶೈಲಿಯಿಂದ ಬಂದಿದೆ ಅನ್ನೋ ಪ್ರತೀತಿ. ಇಲ್ನೋಡಿ ಫ್ಲೆಮಿಂಗೋ ಪಕ್ಷಿಯ ಟ್ಯಾಪ್ ಡಾನ್ಸ್!

ಸಂಘಜೀವಿಗಳಾದ ಇವು ಗುಂಪಿನಲ್ಲಿ ನರ್ತಿಸೋದನ್ನ ನೋಡೋಕೆ ಇನ್ನೂ ಚೆನ್ನಾಗಿರತ್ತೆ. ನೀವೂ ನೋಡಿ ಆನಂದಿಸಿ.

ಚಿತ್ರ ಕೃಪೆ: ಸ್ವಂತದ್ದು

ವೀಡಿಯೋ ಕೃಪೆ: ಯೂಟ್ಯೂಬಿನದ್ದು

ಧನ್ಯವಾದಗಳು

ಸವಿತ ಎಸ್.ಆರ್.

ನಾನು ಕೋಳೀಕೆ ರಂಗ

ಹಲೋ ಪುಟಾಣಿಗಳೇ,

ನೀವು ಟಿ.ಪಿ.ಕೈಲಾಸಂರವರ “ನಾನು ಕೋಳೀಕೆ ರಂಗ” ಹಾಡು ಕೇಳಿದ್ದೀರಾ? ಇಲ್ಲಾಂದ್ರೆ ಇಲ್ಲಿ ನೋಡಿ ಮತ್ತು ಕೇಳಿ ಮೊದಲೆರಡು ಟಂಗ್ ಟ್ವಿಸ್ಟರ್  ಸಾಲುಗಳು ಪುಟಾಣಿ ವರ್ಷಳ ದನಿಯಲ್ಲಿ.

ಜೊತೆಗೆ ನೀವೂ ಕಲಿತು ಹಾಡಿರಿ.

“ನಾನು ಕೋಳೀಕೆ ರಂಗ, ಕೋನು ಳೀನು ಕೆನು ರನು ಸೊನ್ನೆ ಗ

ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ

ಇದನ್ನ ಹಾಡಕ್ ಬರ್ದೆ ಬಾಯ್ ಬಿಡೋನು ಬೆಪ್ಪು ನನ್ಮಗ!!”

ಸಿದ್ಧಿ ಫೌಂಡೇಷನ್ – ಕಥಾ ಕಮ್ಮಟಗಳು

ಸಿದ್ಧಿ ಫೌಂಡೇಷನ್ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಥಾ ಕಮ್ಮಟಗಳ ಮೂಲಕ ಮಕ್ಕಳಲ್ಲಿ ಕಥೆ ಓದುವ ಮತ್ತು ಬರೆಯುವ ಪರಿಣಿತಿಯನ್ನು ಬೆಳೆಸುತ್ತಿದೆ. ಇದರ ಮೂಲಕ ಸಂವಹನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಒತ್ತುಕೊಡುವುದಾಗಿದೆ.

ಸಿದ್ಧಿ ಈ ಕಥಾ ಕಮ್ಮಟಗಳನ್ನು ಕರ್ನಾಟಕದಾದ್ಯಂತ ನಡೆಸುವುದಕ್ಕಾಗಿ ಆಸಕ್ತ ಕಾರ್ಯಕರ್ತರನ್ನು ಹುಡುಕುತ್ತಿದೆ. ನಿಮಗೆ ಈ ವಿಷಯವು ಆಸಕ್ತಿದಾಯಕ ಎನಿಸಿದಲ್ಲಿ ಈ ಈ-ಮೈಲ್ ವಿಳಾಸಕ್ಕೆ ನಿಮ್ಮ ವಾಸಸ್ಥಳ ಮತ್ತು ಇತರೆ ವಿವರಗಳೊಂದಿಗೆ ಬರೆಯಿರಿ – [email protected] ಕನ್ನಡ ಮಾತನಾಡಲು ಮತ್ತು ಓದಲು ಬರುವುದು ಅತ್ಯವಶ್ಯ.

ಸಿದ್ಧಿ ಫೌಂಡೇಷನ್ ಬಗ್ಗೆ ಹೆಚ್ಚ್ಚಿನ ಮಾಹಿತಿಗಾಗಿ https://www.facebook.com/Siddhi.Foundation ಗೆ ಭೇಟಿ ನೀಡಿ.

ಹಾವು ಏಣಿ ಆಟ

ಕಳೆದ ತಿಂಗಳ ಜಯನಗರ ಸೈಕಲ್ ದಿನದಲ್ಲಿ (ತಿಂಗಳ ಕೊನೆಯ ಭಾನುವಾರ ನೆಡೆಯುವ ಕಾರ್ಯಕ್ರಮ) ಮಕ್ಕಳಿಗೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಹಾವು ಏಣಿ ಆಟ ಕೂಡ ಒಂದು.
ಅದರ ಒಂದು ಕಿರು ಚಿತ್ರಣ ಇಲ್ಲಿದೆ.

ವಿಜ್ಞಾನ ಬೆಳಕಿಗೊಂದು ಶಿಬಿರ

`ಪರೀಕ್ಷೆಗಷ್ಟೇ ಪಾಠ’ ಇಂದಿನ ಬಹುತೇಕ ಶಾಲೆಗಳ ಮೂಲಮಂತ್ರ. ಆದರೆ ಮಕ್ಕಳಿಗೆ ಪಾಠಕ್ಕೂ ಮೀರಿ ಅಗತ್ಯವಾದ ವಿಶೇಷ ಜ್ಞಾನವೂ ಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡಿದೆ ಬಸವನಗುಡಿಯ ನ್ಯಾಷನಲ್ ಕಾಲೇಜು.

ಈ ಜ್ಞಾನ ಸಂಪಾದನೆ ಸಾಧ್ಯವಾಗುವುದು ವಿಜ್ಞಾನದಿಂದ ಎಂಬ ಉದ್ದೇಶದಿಂದ ಆರಂಭಿಸಿದ್ದು `ಬೆಂಗಳೂರು ವಿಜ್ಞಾನ ವೇದಿಕೆ‘. ಇಂದಿಗೂ ಅದೇ ಛಾಪನ್ನು ಉಳಿಸಿಕೊಂಡು ಸಾಗುತ್ತಿರುವ ವೇದಿಕೆ ಈ ಬಾರಿಯೂ ಅಂತಹ ವಿಜ್ಞಾನ ಸರಮಾಲೆಯನ್ನು ತಿಂಗಳ ಕಾರ್ಯಕ್ರಮ ಮತ್ತು ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಪಸರಿಸಲಿದೆ.

ಪ್ರತಿ ತಿಂಗಳೂ ಕಾಲೇಜಿನಲ್ಲಿ ಒಂದಿಲ್ಲೊಂದು ವಿಜ್ಞಾನ ಸಂಬಂಧಿ ಚಟುವಟಿಕೆ ಇದ್ದೇ ಇರುತ್ತದೆ. ಅದರಂತೆ ಈ ಏಪ್ರಿಲ್‌ನಲ್ಲೂ ವಿಶೇಷ ಉಪನ್ಯಾಸಗಳನ್ನು ಸಂಸ್ಥೆ ಆಯೋಜಿಸಿದೆ.

ಏಪ್ರಿಲ್ 3ರಂದು ಭಾರತೀಯ ವಾಯು ಪಡೆಯ ಜಿ.ಬಿ. ಅತ್ರಿ, ಭಾರತೀಯ ವಾಯು ಪಡೆಯಲ್ಲಿನ ಆವಿಷ್ಕಾರ, ಆಗುಹೋಗುಗಳ ಕುರಿತು ಮಾತನಾಡಲಿದ್ದಾರೆ. `ಆ್ಯನ್ ಅಡ್ವೆಂಚರ್ ಆಫ್ ಇಂಡಿಯನ್ ಏರ್‌ಫೋರ್ಸ್ ವಿತ್ ಎ ಕರಿಯರ್‘ ಎಂಬುದು ಅವರ ಉಪನ್ಯಾಸದ ತಿರುಳು.

ಇನ್ನು ಪ್ರಾಣಿ ಸಂಕುಲದ ಬಗ್ಗೆ ಆಸಕ್ತಿ ಇರುವವರಿಗೆ ಏಪ್ರಿಲ್ 4ರಂದು ಹಾವುಗಳ ಕುರಿತು ವಿಶೇಷ ಸ್ಲೈಡ್ ಶೋ ಏರ್ಪಡಿಸಲಾಗಿದೆ. ಇದರ ಬಗ್ಗೆ ಪರಿಸರವಾದಿ ಎಸ್. ಅಜಯ್ ಪ್ರಭು, `ಕಾಮನ್ ಸ್ನೇಕ್ಸ್ ಆಫ್ ಬ್ಯಾಂಗಲೊರ್; ಆರ್ ದೇ ಡಿಸಪಿಯರಿಂಗ್?‘ ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಏಪ್ರಿಲ್ 17ರಂದು ಬೆಂಗಳೂರು ವಿವಿ ಕುಲಪತಿ ಡಾ. ಬಿ. ತಿಮ್ಮೇಗೌಡ ಅವರು ರಸಾಯನಶಾಸ್ತ್ರದ ವಿವಿಧ ಮಜಲುಗಳನ್ನು ಪರಿಚಯಿಸಿಕೊಡಲಿದ್ದು, `ಇಂಪಾರ್ಟೆಂಟ್ ಮೈಲ್‌ಸ್ಟೋನ್ಸ್ ಇನ್ ದಿ ಫೀಲ್ಡ್ ಆಫ್ ಕೆಮಿಸ್ಟ್ರಿ‘ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ಇದು 2500ನೇ ಉಪನ್ಯಾಸ ಎಂಬುದು ಸಂಸ್ಥೆಯ ಅಗ್ಗಳಿಕೆ.

ಏಪ್ರಿಲ್ 24ರಂದು ಆರ್.ವಿ. ದಂತವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ದಿನೇಶ್ ದಂತವೈದ್ಯಕೀಯದಲ್ಲಿನ ವಿದ್ಯಮಾನಗಳ ಕುರಿತು `ಕಾಂಟೆಂಪೊರರಿ ಡೆಂಟಿಸ್ಟ್ರಿ‘ ಉಪನ್ಯಾಸ ನೀಡುತ್ತಾರೆ.

ಕೇವಲ ಉಪನ್ಯಾಸ ಮಾತ್ರವಲ್ಲದೆ ಸಂವಾದ ಮತ್ತು ಸಿನಿಮಾ ಪ್ರದರ್ಶನವೂ ಇಲ್ಲಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳೂ ಸಂಜೆ 6ರಿಂದ ಡಾ. ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ಬಸವನ ಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತವೆ.

ಬೇಸಿಗೆ ವಿಜ್ಞಾನ ಶಿಬಿರ
ಸತತ 45 ವರ್ಷಗಳಿಂದ ಬೇಸಿಗೆ ಶಿಬಿರ ನಡೆಸುತ್ತಾ ಬಂದಿರುವ ಕಾಲೇಜು, ಈ ಬಾರಿಯೂ ಅಂತಹ ಶಿಬಿರವನ್ನು ಹಮ್ಮಿಕೊಂಡಿದೆ. 8ನೇ ತರಗತಿ ಮಕ್ಕಳಿಗೆ ನಡೆಸುವ 23ನೇ ವಾರ್ಷಿಕ ಶಿಬಿರ ಇದಾಗಿದ್ದು, ಏಪ್ರಿಲ್ 4ರಿಂದ ಏಪ್ರಿಲ್ 21ರವರೆಗೆ ಶಿಬಿರ ನಡೆಯುತ್ತದೆ.

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಏಪ್ರಿಲ್ 22ರಿಂದ ಆರಂಭಗೊಂಡು ಮೇ.11ರವರೆಗೂ ಶಿಬಿರ ಮುಂದುವರೆಯಲಿದ್ದು, ಬರೋಬ್ಬರಿ 46ನೇ ವಾರ್ಷಿಕ ಶಿಬಿರ ಇದಾಗಿದೆ. ವಿಜ್ಞಾನದ ಬಗ್ಗೆ ಕುತೂಹಲವಿರುವ ಮಕ್ಕಳಿಗೆ ಉತ್ತಮ ಅವಕಾಶ ಇದಾಗಿದ್ದು, ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನದ ಆವಿಷ್ಕಾರ, ಹೀಗೆ ಹಲವು ವಿಚಾರಗಳು ಮಕ್ಕಳಲ್ಲಿ ಚಿಂತನೆಗೆ ಎಡೆಮಾಡಿಕೊಡಲಿದೆ.

ಬೆಳಿಗ್ಗೆ 8.30ರಿಂದ 11.30ರವರೆಗೆ ನಡೆಯುವ ತರಗತಿಗಳಲ್ಲಿ ಉಪನ್ಯಾಸಗಳೊಂದಿಗೆ ವೈಜ್ಞಾನಿಕ ಸಾಕ್ಷ್ಯ ಚಿತ್ರಗಳು, ವೈಜ್ಞಾನಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಮಕ್ಕಳಿಗಿದೆ.

ಬೇಸಿಗೆ ಶಿಬಿರವನ್ನು ಏಪ್ರಿಲ್ 4ರಂದು ಬೆಳಿಗ್ಗೆ 10ಕ್ಕೆ ಭೂವಿಜ್ಞಾನಿ ಮತ್ತು ವೈಜ್ಞಾನಿಕ ಬರಹಗಾರ ಪ್ರೊ. ಟಿ. ಆರ್. ಅನಂತರಾಮು ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರು ವಿಜ್ಞಾನ ವೇದಿಕೆ ಅಧ್ಯಕ್ಷ ಪ್ರೊ. ಎ.ಎಚ್. ರಾಮರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ನಿಮ್ಹಾನ್ಸ್‌ನ ಡಾ. ಸಿ. ಆರ್. ಚಂದ್ರ ಶೇಖರ್, ನ್ಯಾಷನಲ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಬಾಲಚಂದ್ರರಾವ್, ಪ್ರೊ. ಬಿ.ಕೆ. ವಿಶ್ವನಾಥ್‌ರಾವ್, ಪ್ರೊ. ಎಚ್.ಆರ್. ರಾಮಕೃಷ್ಣ ರಾವ್, ಡಾ. ವೈ. ತುಳಜಪ್ಪ, ಒಟ್ಟು 23 ಮಂದಿ ಪರಿಣತರು ಉಪನ್ಯಾಸ ಕೈಗೊಳ್ಳಲಿದ್ದಾರೆ. ವಿಜ್ಞಾನದ ಹಲವು ಮಜಲುಗಳನ್ನು ತಿಳಿಯಲು ನಿಮಗೂ ಕುತೂಹಲವಿದ್ದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಶುಲ್ಕ ರೂ 250. ಸಂಪರ್ಕಕ್ಕೆ: 080-26674441/9900320532.

ಸುದ್ದಿ ಮೂಲ: ಪ್ರಜಾವಾಣಿ