ಮಾಂತ್ರಿಕ ಕೈಗವಸು
ರಾದುಗ ಪ್ರಕಾಶನ, ಮಾಸ್ಕೋದ – ಉಕ್ರೇನಿನ ಜಾನಪದ ಕಥೆಗಳು
ಒಮ್ಮೆ ಒಬ್ಬ ಅಜ್ಜ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ.
ಅವನ ಹಿಂದೆ ಒಂದು ಪುಟ್ಟ ನಾಯಿ ಓಡಿ ಹೋಗುತ್ತಿತ್ತು. ಅಜ್ಜ ಹೋಗುತ್ತಿದ್ದ. ಹೋಗುತ್ತಿದ್ರ. ತನ್ನ ಕೈಗವಸನ್ನು ಕಳೆದುಕೊಂಡ. ಒಂದು ಇಲಿ ಓಡಿ ಬಂದು ಈ ಕೈಗವಸಿನೊಳ ಹೊಕ್ಕಿತು. ಅಲ್ಲೇ ಕುಳಿತು ಹೇಳಿಕೊಂಡಿತು:

“ಇಲ್ಲಿ ನಾನು ವಾಸಮಾಡುತ್ತೇನೆ.”
ಸ್ವಲ್ಪ ಹೊತ್ತಿಗೆ ಒಂದು ಕಪ್ಪೆ ಕುಪ್ಪಳಿಸಿಕೊಂಡು ಅಲ್ಲಿಗೆ ಬಂದಿತು. ಅದು ಕೈಗವಸಿನ ಮುಂದೆ ನಿಂತು ಕೇಳಿತು:
“ಹೇಯ್, ಯಾರದು, ಈ ಕೈಗವಸಿನಲ್ಲಿ ವಾಸವಾಗಿರೋದು?”
“ನಾನು ಕೀಚೋ ಇಲಿ. ನೀನು ಯಾರು?”
“ನಾನು ಕುಪ್ಪೋ ಕಪ್ಪೆ. ನನ್ನನ್ನೂ ಒಳಗೆ ಬಿಡ್ತೀಯ?”
“ಆಗಲಿ, ಬಾ!”
ಆಮೇಲೆ ಒಂದು ಮೊಲ ಓಡಿಕೊಂಡು ಬಂದಿತು. ಅದು ಕೈಗವಸಿನ ಮುಂದೆ ನಿಂತು ಕೇಳಿತು:
“ಯಾರದು, ಈ ಕೈಗವಸಿನಲ್ಲಿ ವಾಸವಾಗಿರೋದು?”
“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ. ನೀನು ಯಾರು?”
“ನಾನು ಓಡೋ ಮೊಲ. ನಾನೂ ಒಳಗೆ ಬರಲಾ?”
“ಆಗಲಿ, ಬಾ!”
ಸ್ವಲ್ಪ ಹೊತ್ತಾದ ಮೇಲೆ ಒಂದು ನರಿಯಕ್ಕ ಆತುರಾತುರವಾಗಿ ಅಲ್ಲಿಗೆ ಬಂದಿತು. ಅದು ಕೈಗವಸಿನ ಮುಂದೆ ನಿಂತು ಕೇಳಿತು:
“ಯಾರದು. ಈ ಕೈಗವಸಿನಲ್ಲಿ ವಾಸಿಸುತ್ತಿರೋದು?”
“ನಾವು ಕೀಚೋ ಇಲ್ಲಿ ಕುಪ್ಪೋ ಕಪ್ಪ ಹಾಗೂ ಓಡೋ ಮೊಲ. ನೀನು ಯಾರು?”
“ನಾನು ನಸುನಗೆಯ ನರಿಯಕ್ಕ. ನನಗೂ ನಿಮ್ಮಲ್ಲಿ ಸ್ವಲ್ಪ ಜಾಗ ಕೊಡುವಿರಾ?”
“ಅದಕ್ಕೇನಂತೆ? ಬಾ ಒಳಗೆ !”
ಹೀಗೆ ಅದರಲ್ಲಿ ನಾಲ್ಕು ಪ್ರಾಣಿಗಳು ಕುಳಿತವು. ಸ್ನಲ್ಪ ಹೊತ್ತಾದ ಮೇಲೆ ಒಂದು
ತೋಳ ಗತ್ತಿನಿಂದ ಹೆಜ್ಜೆ ಹಾಕಿಕೊಂಡು ಬಂದಿತು. ಅದು ಕೈಗವಸಿನ ಮುಂದೆ ನಿಂತು
ಕೇಳಿತು:
“ಹಲೋ, ಯಾರದು ಈ ಕೈಗವಸಿನಲ್ಲಿ ವಾಸಿಸುತ್ತಿರೋದು?
“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ, ಓಡೋ ಮೊಲ ಹಾಗೂ ನಸುನಗೆಯ ನರಿಯಕ್ಕ ನೀನು ಯಾರು?”
“ನಾನು ಅರುಚೋ ತೋಳ. ನಾನೂ ನಿಮ್ಮ ಮನೆಯ ಒಳಕ್ಕೆ ಬರೋಣ ಅಂದುಕೊಂಡಿದೀನಿ.”
“ಆಗಲಿ, ಬಾ!”
ಅದಾದ ಮೇಲೆ ಒಂದು ಕರಡಿ ಒಡ್ಡೊಡ್ಡಾಗಿ ಕಾಲು ಹಾಕಿಕೊಂಡು ಬಂದಿತು. ಅದು
ಗುಟುರು ಹಾಕುತ್ತ ಗರ್ಜಿಸುತ್ತ ಕೇಳಿತು:
“ಹಲೋ, ಯಾರದು ಈ ಕೈಗವಸಿನಲ್ಲಿ ವಾಸಿಸುತ್ತಿರೋದು?”
“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ, ಓಡೋ ಮೊಲ, ನಸುನಗೆಯ ನರಿಯಕ್ಕ ಹಾಗೂ ಅರುಚೋ ತೋಳ. ನೀನು ಯಾರು?”
“ನಾನು ಗುಡುಗೋ ಕರಡಿ. ನನಗೆ ಗೊತ್ತು ನೀವು ನನಗೂ ನಿಮ್ಮಲ್ಲಿ ಸ್ವಲ್ಪ ಜಾಗ ಕೊಡುತ್ತೀರ, ಅಲ್ಲವೇ?”
“ಓಹೋ, ಬಾ ಒಳಕ್ಕೆ!”
ಸರಿ, ಕರಡಿಯೂ ಆ ಕೈಗವಸಿನೊಳಕ್ಕೆ ತೂರಿಕೊಂಡಿತು
ಸ್ವಲ್ಪ ಹೊತ್ತಾದ ಮೇಲೆ ಒಂದು ಕಾಡುಹಂದಿ ಆರಾಮದಿಂದ ಅಡ್ಡಾಡಿಕೊಂಡು ಅತ್ತ
ಕಡೆಗೆ ಬಂದಿತು. ಕೈಗವಸಿನ ಮುಂದೆ ನಿಂತು ಅದು ಗುಟುರು ಹಾಕಿ ಕೇಳಿತು:
“ಹಲೋ, ಯಾರದು ಈ ಈ ಕೈಗವಸಿನಲ್ಲಿ ವಾಸಿಸುತ್ತಿರೋದು?”
“ನಾವು ಕೀಚೋ ಇಲಿ, ಕುಪ್ಪೋ ಕಪ್ಪೆ, ಓಡೋ ಮೊಲ, ನಸುನಗೆಯ ನರಿಯಕ್ಕ, ಅರುಚೋ ತೋಳ ಹಾಗೂ ಗುಡುಗೋ ಕರಡಿ. ನೀನು ಯಾರು?”
“ನಾನು ಚೂಪು ಮೂತಿಯ ಹಂದಿ. ನನಗೂ ನಿಮ್ಮಲ್ಲಿ ಒಂದಿಷ್ಟು ಸ್ಥಳ ಕೊಡುವಿರಿ, ಅಲ್ಲವೇ?”
“ಓಹೋ ಖಂಡಿತ! ಬಾ, ಒಳಗೆ!”
ಕಾಡುಹಂದಿಯೂ ಕೈಗವಸಿನೊಳಕ್ಕೆ ತೂರಿಕೊಂಡಿತು. ಹೀಗೆ ಆ ಪುಟ್ಟ ಕೈಗವಸಿನೊಳಗೆ ಏಳು ಪ್ರಾಣಿಗಳು ಮುದುಡಿ ಕುಳಿತಿದ್ದವು.
ಆ ಹೊತ್ತಿಗೆ ಅಜ್ಜ ನೋಡುತ್ತಾನೆ – ಕೈಗವಸು ಇಲ್ಲ. ಅದಕ್ಕೋಸ್ಕರ ಅವನು ಹಿಂದಿರು
ಗಿದ. ನಾಯಿ ಮುಂದೆ ಓಡಿತು. ಓಡಿತು, ಓಡಿತು, ನೋಡುತ್ತದೆ – ಆ ಕೈಗವಸು ಅಲ್ಲಿ ಬಿದ್ದಿದೆ, ಮಾಂತ್ರಿಕವೋ ಅನ್ನುವಂತೆ ಮಿಸುಕಾಡುತ್ತಿದೆ. ನಾಯಿ ಆಗ “ಬೌವ್-ಬೌವ್-ಬೌವ್” ಎಂದು ಬೊಗುಳಿತು. ಕೈಗವಸಿನೊಳಗಿದ್ದ ಏಳು ಪ್ರಾಣಿಗಳೂ ಹೆದರಿ ಅದರೊಳಗಿನಿಂದ ಹೊರಬಂದು ದಿಕ್ಕಾಪಾಲಾಗಿ ಓಡಿದವು. ಆಗ ಅಜ್ಜ ಬಂದ. ಕೈಗವಸನ್ನು ತೆಗೆದುಕೊಂಡ.
ಮೋಸದ ಮೇಕೆ
ರಾದುಗ ಪ್ರಕಾಶನ, ಮಾಸ್ಕೋದ – ಉಕ್ರೇನಿನ ಜಾನಪದ ಕಥೆಗಳು
ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬ ಮುದುಕಿ ವಾಸವಾಗಿದರು. ಒಂದು ಸಾರಿ ಮುದುಕ ಸಂತೆಗೆ ಹೋಗಿ ಒಂದು ಮೇಕೆಯನ್ನು ಕೊಂಡುಕೊಂಡು ಬಂದ. ಅದನ್ನು ಮನೆಗೆ ಕರೆತಂದವನೇ ಅವನು ಮಾರನೆಯ ದಿನ ಬೆಳಿಗ್ಗೆ ತನ್ನ ಹಿರಿಯ ಮಗನನ್ನು ಕರೆದು ಮೇಕೆಯನ್ನು

ಮೇಯಿಸಿಕೊಂಡು ಬರುವಂತೆ ತಿಳಿಸಿದ. ಮಗನು ಮೇಕೆಯನ್ನು ಸಂಜೆಯವರೆಗೂ ಮೇಯಿಸಿ ಕೊಂಡು ಆಮೇಲೆ ಮನೆಗೆ ಕರೆತಂದ. ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತಿದ್ದ ಮುದುಕ ಮೇಕೆಯನ್ನು ಕೇಳುತ್ತಾನೆ:
“ಏನು, ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”
“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಸೇತುವೆ ದಾಟಿ ಹೋಗುವಾಗ ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು.”

ಮುದುಕನಿಗೆ ಮಗನ ಮೇಲೆ ತುಂಬ ಕೋಪ ಬಂತು. ಅವನನ್ನು ಮನೆಯಿಂದ ಹೊರಕ್ಕೆ ಅಟ್ಟಿದ.
ಮಾರನೆಯ ಬೆಳಿಗ್ಗೆ ಮುದುಕ ತನ್ನ ಕಿರಿಯ ಮಗನನ್ನು ಕರೆದು ಮೇಕೆಯನ್ನು ಮೇಯಿಸಿಕೊಂಡು ಬರುವಂತೆ ತಿಳಿಸಿದ. ಅವನೂ ಮೇಕೆಯನ್ನು ಸಂಜೆಯವರೆಗೂ ಮೇಯಿಸಿಕೊಂಡು ಆಮೇಲೆ ಮನೆಗೆ ಕರೆತಂದ. ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತಿದ್ವ ಮುದುಕ ಮೇಕೆಯನ್ನು ಕೇಳುತ್ತಾನೆ:
“ಏನು ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”
“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು”
ಮುದುಕ ತನ್ನ ಕಿರಿಯ ಮಗನನ್ನೂ ಮನೆಯಿಂದ ಹೊರಕ್ಕೆ ಅಟ್ಟಿದ.
ಮೂರನೆಯ ದಿನ ಮುದುಕ ಮುದುಕಿಯನ್ನು ಮೇಕೆಯನ್ನು ಮೇಯಿಸಲು ಕೊಟ್ಟ.
ಮುದುಕಿಯೂ ಮೇಕೆಯನ್ನು ಸಂಜೆಯವರೆಗೂ ಮೇಯಿಸಿಕೊಂಡು ಆಮೇಲೆ ಮನೆಗೆ ಕರೆತಂದಳು. ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತಿದ್ದ ಮುದುಕ ಮೇಕೆಯನ್ನು ಕೇಳುತ್ತಾನೆ:
“ಏನು ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”
“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಸೇತುವೆ ದಾಟಿ ಹೋಗುವಾಗ ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು.”
ಮುದುಕ ಮುದುಕಿಯನ್ನೂ ಮನೆಯಿಂದ ಹೊರಕ್ಕೆ ಆಟ್ಟಿದ.
ನಾಲ್ಕನೆಯ ದಿನ ಮುದುಕ ತಾನೇ ಮೇಕೆಯನ್ನು ಮೇಯಿಸಲು ಕರೆದೊಯ್ದ. ಇಡೀ ದಿನ, ಸಂಜೆಯಾಗುವವರೆಗೂ ಮೇಯಿಸಿಕೊಂಡು ಮನೆಗೆ ಕರೆತಂದ. ತಾನೇ ಮುಂದೆ ನಡೆದು. ಹೋಗಿ ಗೇಟಿನ ಬಳಿ ಕೆಂಪು ಬೂಟು ತೊಟ್ಟು ನಿಂತು ಮೇಕೆಯನ ಕೇಳುತ್ತಾನೆ:
“ಏನು ನನ್ನ ಮುದ್ದಿನ ಮೇಕೆಯ ಮರಿ! ಹೊಟ್ಟೆ ತುಂಬ ತಿಂದೆಯಾ, ಹೊಟ್ಟೆ ತುಂಬ ಕುಡಿದೆಯಾ?”
“ಇಲ್ಲ, ಅಜ್ಜಯ್ಯ. ತಿನ್ನಲೂ ಇಲ್ಲ, ಕುಡಿಯಲೂ ಇಲ್ಲ. ಸೇತುವೆ ದಾಟಿ ಹೋಗುವಾಗ ಒಂದೆರಡು ಎಲೆ ಕಿತ್ತು ತಿಂದೆ. ತೊರೆಯನ್ನು ದಾಟಿ ಹೋಗುವಾಗ ಒಂದೆರಡು ಹನಿ ನೀರು ಕುಡಿದೆ. ಅಷ್ಟೆ ನಾನು ತಿಂದದ್ದು, ಅಷ್ಟೆ ನಾನು ಕುಡಿದದ್ದು.”
ಮುದುಕನಿಗೆ ಕೋಪ ಬಂತು. ನೇರವಾಗಿ ಕಮ್ಮಾರನ ಬಳಿಗೆ ಹೋಗಿ ಮಚ್ಚು ಮಸೆಯಿಸಿ ಕೊಂಡು ಬಂದ. ಮೇಕೆಯನ್ನು ತುಂಡರಿಸಲು ಹೋದ. ಆದರೆ ಮೇಕೆ ಹಗ್ಗ ಕಿತ್ತುಕೊಂಡು ಕಾಡಿಗೆ ಓಡಿಹೋಯಿತು. ಅಲ್ಲಿ ಅದು ಒಂದು ಮೊಲದ ಗುಡಿಸಿಲನ್ನು ಕಂಡಿತು. ಅದರ ಒಳಗೆ
ಹೋಗಿ ಒಲೆಯ ಹಿಂದೆ ಅಡಗಿ ಕುಳಿತಿತು.
ಸ್ವಲ್ಪ ಹೊತ್ತಾದ ಮೇಲೆ ಮೊಲ ತನ್ನ ಗುಡಿಸಿಲಿಗೆ ಬಂದಿತು. ಒಳಗೆ ಯಾರೋ ಇರುವುದನ್ನು ಕಂಡಿತು. ಅದು ಕೇಳಿತು:
“ಯಾರು ನನ್ನ ಗುಡಿಸಿಲಿನಲ್ಲಿ ಇರೋದು?”
ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:
“ಘೋರ ಭೀಕರ ಮೇಕೆಯು ನಾನು,
ಕೊಂಡರು ನನ್ನನು ಕಾಸಿಗೆ ಮೂರು!
ಹರಿದಿದೆ. ಎನ್ನಯ ಬೆನ್ನಿನ ತೊಗಲು,
ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,
ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,
ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,
ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,
ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”
ಮೊಲಕ್ಕೆ ಹೆದರಿಕೆಯಾಯಿತು. ಗುಡಿಸಿಲಿನಿಂದ ಓಡಿ ಹೋಗಿ ಒಂದು ಮರದ ಕೆಳಗೆ ಕುಳಿತು ಗಟ್ಟಿಯಾಗಿ. ಅಳ ತೊಡಗಿತು. ಅಷ್ಟು ಹೊತ್ತಿಗೆ ಅಲ್ಲಿಗೆ ಒಂದು. ಕರಡಿ ಬಂತು. ಅದು ಕೇಳಿತು:
“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?”
“ಅಳದೆ ಹ್ಯಾಗಿರಲಿ ಹೇಳು, ಗುರ್‌ಗುರ್ ಕರಡಿ, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು ಕುಳಿತಿರುವಾಗ?”
ಕರಡಿ ಹೇಳಿತು: “ಅಳಬೇಡ, ಸುಮ್ನಿರು, ನಾನು ಅದನ್ನು ಓಡಿಸ್ತೀನಿ !”
ಅದು ಗುಡಿಸಿಲಿನ ಬಳಿಗೆ ಓಡಿ ಹೋಗಿ ಕೇಳಿತು:
“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”
ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:
“ಘೋರ ಭೀಕರ ಮೇಕೆಯು ನಾನು,
ಕೊಂಡರು ನನ್ನನು ಕಾಸಿಗೆ ಮೂರು!
ಹರಿದಿದೆ. ಎನ್ನಯ ಬೆನ್ನಿನ ತೊಗಲು,
ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,
ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,
ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,
ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,
ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”
ಕರಡಿಗೆ ತುಂಬ ಹೆದರಿಕೆಯಾಯಿತು. ಅದು ಗುಡಿಸಿಲಿನಿಂದ ಹೊರಕ್ಕೆ ಓಡಿ ಬಂದಿತು.
“ಉಹೂಂ, ವೇಗ ಓಟದ ಮೊಲವೇ ! ಅದನ್ನು ಓಡಿಸಲು ನನ್ನ ಕೈಲಾಗದು. ನನಗೆ ಭಯ !”
ಮೊಲ ಮತ್ತೆ ಹೋಗಿ ಮರದ ಕೆಳಗೆ ಕುಳಿತು ಗಟ್ಟಿಯಾಗಿ ಅಳ ತೊಡಗಿತು. ಅಷ್ಟು ಹೊತ್ತಿಗೆ ಒಂದು ತೋಳ ಅಲ್ಲಿಗೆ ಬಂದಿತು. ಅದು ಕೇಳಿತು:
“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?”
“ಅಳದೆ ಹ್ಯಾಗಿರಲಿ ಹೇಳು, ಬೂದುಮೈಯಿನ ತೋಳವೇ, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು ಕುಳಿತಿರುವಾಗ?”
ತೋಳ ಹೇಳಿತು: “ಅಳಬೇಡ, ಸುಮ್ನಿರು. ನಾನು ಅದನ್ನು ಓಡಿಸ್ತೀನಿ !”
“ನಿನಗೆ ಎಲ್ಲಿ ಓಡಿಸೋಕಾಗುತ್ತೆ? ಕರಡಿಯ ಕೈಲೇ ಆಗಲಿಲ್ಲ. ಇನ್ನು ನಿನ್ನ ಕೈಲಿ ಎಲ್ಲಾಗುತ್ತೆ?”
“ನೋಡ್ತಿರು. ನಾನು ಓಡಿಸ್ತೇನೆ !”
ತೋಳ ಗುಡಿಸಿಲಿನ ಕಡೆಗೆ ಓಡಿತು. ಕೇಳಿತು:
“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”
ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:
“ಘೋರ ಭೀಕರ ಮೇಕೆಯು ನಾನು,
ಕೊಂಡರು ನನ್ನನು ಕಾಸಿಗೆ ಮೂರು !
ಹರಿದಿದೆ ಎನ್ನಯ ಬೆನ್ನಿನ ತೊಗಲು,
ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,
ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,
ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,
ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,
ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು !”
ತೋಳಕ್ಕೆ ತುಂಬ ಹೆದರಿಕೆಯಾಯಿತು. ಅದೂ ಗುಡಿಸಿಲಿನಿಂದ ಹೊರಕ್ಕೆ ಓಡಿತು.
“ಉಹೂಂ, ವೇಗ ಓಟದ ಮೊಲವೇ ! ಅದನ್ನು ಓಡಿಸಲು ನನ್ನ ಕೈಲಾಗದು. ನನಗೆ ಭಯ !”
ಮೊಲ ಮತ್ತೆ ಹೋಯಿತು. ಮರದ ಕೆಳಗೆ ಕುಳಿತು ಗಟ್ಟಿಯಾಗಿ ಅಳ ತೊಡಗಿತು. ಅಷ್ಟು ಹೊತ್ತಿಗೆ ಒಂದು ನರಿ ಅಲ್ಲಿಗೆ ಬಂದಿತು. ಮೊಲವನ್ನು ಕಂಡು ಕೇಳಿತು
“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?”
“ಅಳದೆ ಹ್ಯಾಗಿರಲಿ ಹೇಳು, ನರಿಯಕ್ಕ, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು ಕುಳಿತಿರುವಾಗ?”
ನರಿ ಹೇಳಿತು: “ಅಳಬೇಡ, ಸುಮ್ನಿರು. ನಾನು ಅದನ್ನು ಓಡಿಸ್ತೀನಿ !”
“ನಿನಗೆ ಎಲ್ಲಿ ಓಡಿಸೋಕಾಗುತ್ತೆ? ಕರಡಿ ಪ್ರಯತ್ನ ಮಾಡಿತು. ಆಗಲಿಲ್ಲ. ತೋಳ ಪ್ರಯತ್ನ ಮಾಡಿತು. ಆಗಲಿಲ್ಲ. ನಿನ್ನ ಕೈಲೂ ಆಗೊಲ್ಲ.”
“ನೋಡ್ತಿರು. ನಾನು ಓಡಿಸ್ಕೇನೆ [
ನರಿ ಗುಡಿಸಿಲಿನ ಕಡೆಗೆ ಓಡಿತು. ಕೇಳಿತು:
“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”
ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:
“ಘೋರ ಭೀಕರ ಮೇಕೆಯು ನಾನು,
ಕೊಂಡರು ನನ್ನನು ಕಾಸಿಗೆ ಮೂರು!
ಹರಿದಿದೆ. ಎನ್ನಯ ಬೆನ್ನಿನ ತೊಗಲು,
ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,
ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,
ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,
ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,
ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”
ನರಿಗೆ ತುಂಬ ಹೆದರಿಕೆಯಾಯಿತು. ಅದು ಗುಡಿಸಿಲಿನಿಂದ ಓಟ ಕಿತ್ತಿತು.
“ಉಹೂಂ, ವೇಗ ಓಟದ ಮೊಲವೇ ! ಅದನ್ನು ಓಡಿಸಲು ನನ್ನ ಕೈಲಾಗದು. ನನಗೆ ಭಯ !
ಮೊಲ ಮತ್ತೆ ಹೋಯಿತು. ಮರದ ಕೆಳಗೆ ಕುಳಿತು ಗಟ್ಟಿಯಾಗಿ ಅಳ ತೊಡಗಿತು. ಅಷ್ಟು ಹೊತ್ತಿಗೆ ಒಂದು ಮುಳ್ಳುನಳ್ಳಿ ಅಲ್ಲಿಗೆ ತೆವಳಿಕೊಂಡು ಬಂದಿತು.
“ಯಾಕೆ ಅಳುತಿದೀಯ, ವೇಗ ಓಟದ ಮೊಲವೇ?” ಅದು ಕೇಳಿತು.
“ಅಳದೆ ಹ್ಯಾಗಿರಲಿ ಹೇಳು, ನನ್ನ ಗುಡಿಸಿಲಿನಲ್ಲಿ ಯಾವುದೋ ಭಯಂಕರ ಮೃಗ ಬಂದು
ಕುಳಿತಿರುವಾಗ?”
ಮುಳ್ಳುನಳ್ಳಿ ಹೇಳಿತು: “ಹೌದೆ? ನಾನು ಅದನ್ನು ಓಡಿಸ್ತೀನಿ !”
“ನಿನಗೆ ಎಲ್ಲಿ ಓಡಿಸೋಕಾಗುತ್ತೆ? ಕರಡಿ ಪ್ರಯತ್ನ ಮಾಡಿತು. ಓಡಿಸೋಕಾಗಲಿಲ್ಲ. ತೋಳ ಪ್ರಯತ್ನ ಮಾಡಿತು. ಓಡಿಸೋಕಾಗಲಿಲ್ಲ. ಆಮೇಲೆ ನರಿ ಪ್ರಯತ್ನ ಮಾಡಿತು. ಅದರ ಕೈಲೂ ಓಡಿಸೋಕಾಗಲಿಲ್ಲ. ಇನ್ನು ನಿನ್ನ ಕೈಲಿ ಎಲ್ಲಿ ಆಗುತ್ತೆ?”
“ನೋಡ್ತಿರು. ನಾನು ಓಡಿಸ್ತೇನೆ !”
ಮುಳ್ಳುನಳ್ಳಿ ಮೊಲದ ಗುಡಿಸಿಲಿನೊಳಗೆ ತೆವಳಿಕೊಂಡು ಹೋಗಿ ಕೇಳಿತು:
“ಯಾರದು, ಮೊಲದ ಗುಡಿಸಿಲಿನಲ್ಲಿ ಇರೋದು?”
ಮೇಕೆ ಒಲೆಯ ಹಿಂದುಗಡೆಯಿಂದ ಹೇಳಿತು:
“ಘೋರ ಭೀಕರ ಮೇಕೆಯು ನಾನು,
ಕೊಂಡರು ನನ್ನನು ಕಾಸಿಗೆ ಮೂರು!
ಹರಿದಿದೆ. ಎನ್ನಯ ಬೆನ್ನಿನ ತೊಗಲು,
ಹೊಸಕಿ ಹಾಕುವೆ ನಿನ್ನನು ನನ್ನ ಪಾದಗಳಿಂದ,
ತಿವಿಯುವೆ ನಿನ್ನನು ನನ್ನ ಚೂಪು ಕೊಂಬುಗಳಿಂದ,
ಚುಚ್ಚುವೆ, ಸೀಳುವೆ ನಿನ್ನನು ಉಗುರುಗಳಿಂದ,
ಗುಡಿಸಿ ಹಾಕುವೆ ನಿನ್ನನು ನನ್ನ ಬಾಲದಿಂದ,
ಮುಗಿಯುತ್ತೆ ಅಲ್ಲಿಗೆ ನಿನ್ನಯ ಕಥೆಯು!”
ಮುಳ್ಳುನಳ್ಳಿ ಮುಂದೆ ಮುಂದೆ ತೆವಳಿಕೊಂಡು ಹೋಯಿತು. ಒಲೆಯ ಮೇಲಕ್ಕೇ ತೆವಳಿ ಕೊಂಡು ಹೋಗಿ ಹೇಳಿತು:
“ನಾನು ಮುಳ್ಳುನಳ್ಳಿ – ಮಳ್ಳನಲ್ಲ. ಹೆದರುವರು ನನಗೆ ಎಲ್ಲ. ಕಚ್ಚಿದರೆ ನಾನು ಎಗರಾಡುವೆ ನೀನು. ಕುಟುಕಿದರೆ ನಾನು ಗೋಳಾಡುವೆ ನೀನು !”
ಹೌದು, ಮುಳ್ಳುನಳ್ಳಿ ಹಾಗೆಯೇ ಮಾಡಿತು. ಮೇಕೆಯನ್ನು ತನ್ನ ಮೊನೆಯುಗುರುಗಳಿಂದ ಗಟ್ಟೆಯಾಗಿ ಚುಚ್ಚಿತು. ಮೇಕೆ ಹೇಗೆ ಗೋಳಾಡಿತು ! ಅದು ತಕ್ಷಣವೇ ಒಲೆಯ ಹಿಂದುಗಡೆಯಿಂದ ಹೊರಗೆ ಬಂದಿತು. ಗುಡಿಸಿಲಿನಿಂದ ಹೊರಕ್ಕೆ ಬಂದು ಓಟ ಕಿತ್ತಿತು.
ಮೊಲಕ್ಕೆ ತುಂಬ ಸಂತೋಷವಾಯಿತು. ಗುಡಿಸಿಲಿನ ಒಳಕ್ಕೆ ಹೋಯಿತು. ಅದು ಮುಳ್ಳು ನಳ್ಳಿಗೆ ಎಷ್ಟು ವಿಧದಲ್ಲಿ ತನ್ನ ಕೃತಜ್ಞತೆ ತಿಳಿಸಿತು ! ಹೀಗೆ ಅದು ಇಂದಿಗೂ ತನ್ನ ಗುಡಿಸಿಲಿನಲ್ಲಿ ವಾಸಿಸುತ್ತಿದೆ, ಸುಖಸಂತೋಷಗಳಿಂದ.
ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ
(ಒಂದು ಊರಿನಲ್ಲಿ ಒಂದು ಕಾಡು ಆ ಕಾಡಿನಲ್ಲಿ ಹಲವು ಪ್ರಾಣಿಗಳಿದ್ದವು. ಆ ಕಾಡಿಗೆ ಬರ ಬಂದಿತು)
ಆಮೆ: ಹೇಗೆ ಇತ್ತು ನಮ್ಮ ಕಾಡು. ಹೇಗೆ ಆಗಿ ಹೋಯಿತು. ಮಳೆ ಮುಖ ಕಂಡು ವರ್ಷದ ಮೇಲೆ
ಆರು ತಿಂಗಳೇ ಆಯ್ತಲ್ಲ.
ಚಿರತೆ: ನನ್ನ ಅಪ್ಪ ಹೇಳುತಿದ್ದರು. ಆ ನೇರಳೆ ಮರದ ಮುಂದೆ ನಿಂತಿಕೊಂಡು ಅದು ಯಾವುದೋ
ಮಂತ್ರ ಹೇಳಿದರೆ ಅದು ಈ ಕಾಡಿನಲ್ಲಿರುವ ಪ್ರಾಣಿಗಳಿಗೆಲ್ಲ ಬೇಕಾಗುವಷ್ಟು ಆಹಾರ
ಕೊಡುವುದಂತೆ.(ಆಗ ಮೊಲ ಮೆಲ್ಲನೆ ಪುಟಿಯುತ್ತಾ ಬಂದಿತು)
ಮೊಲ:ಹೌದಾ!
ಆಮೆ: ನೀನು ಯಾವಾಗ ಬಂದೆ.
ಮೊಲ:ನಾನು ನೀವು ಮಾತನಾಡುವಾಗಲೆ ಬಂದೆ.
ಚಿರತೆ: ಆ ಮಂತ್ರ ಆ ಬೆಟ್ಟಕ್ಕೆ ಮಾತ್ರ ಗೊತ್ತು.(ಎಂದು ಕೈ ಚಾಚಿ ತೋರಿಸಿ ಹೇಳಿತು )
ಮೊಲ:ಹೌದಾ!
ಮೊಲ:ಹಾಗಾದರೆ ನಾವು ಅಲ್ಲಿಗೆ ನಾವು ಹೋಗೋಣ(ಇದನ್ನು ಎಲ್ಲರಿಗೂ ಹೇಳಿತು)
ಎಲ್ಲಾ ಪ್ರಾಣಿಗಳು: ಚಿರತೆ ಎಲ್ಲರಿಗಿಂತ ವೇಗ ಚಿರತೆಯನ್ನೆ ಕಳಿಸೋಣ.
ಚಿರತೆ: ಆಯಿತು ನಾನೆ ಹೋಗುತ್ತೇನೇ.(ಅದು ಬೆಟ್ಟದ ಹತ್ತಿರಾ ಹೋಗಿ)
ಚಿರತೆ: ಬೆಟ್ಟ ಬೆಟ್ಟ ನಮ್ಮ ಕಾಡಿಗೆ ಬರ . ಅದಕ್ಕಾಗಿ ಆ ನೇರಳೆ ಮರದ ಮುಂದೆ ನಿಂತುಕೊಂಡು ಹೇಳಬೇಕಾಗಿರುವ ಮಂತ್ರ ಹೇಳು ಅದರಿಂದ ನಮಗೆಲ್ಲರಿಗೂ ಊಟ ಸಿಗುವುದು, ಅದಕ್ಕಾಗಿ ನೀನು ಆ ಮಂತ್ರ ಹೇಳು.
ಬೆಟ್ಟ: ನಾನು ಹೇಳುವುದ್ದಿಲ್ಲ.
ಚಿರತೆ:ದಯವಿಟ್ಟು. ಹೇಳು
ಬೆಟ್ಟ:ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪಾರಳ್ಳಿ ತಿಪ್ಪ, ದೋಸೆ ಮೇಲೆ ತುಪ್ಪ, ಭೂಮಿಗೆಲ್ಲ ಬೆಪ್ಪ, ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
(ಚಿರತೆ ಮತ್ತೇ ಕಾಡಿಗೆ ಬರುವಾಗ ಕಲ್ಲಿಗೆ ಕಾಲು ಎಡವಿ ಬಿದ್ದು ಆ ಮಂತ್ರ ಮರೆತು ಹೋಯಿತು)
ಎಲ್ಲಾ ಪ್ರಾಣಿಗಳು: ಚಿರತೆ ಹೇಳು ಆ ಮಂತ್ರ ಹೇಳು
ಚಿರತೆ: ನನಗೆ ಆ ಮಂತ್ರ ಮರೆತು ಹೋಯಿತು
ಎಲ್ಲಾ ಪ್ರಾಣಿಗಳು: ಏನುನಿನಗೆ ಆ ಮಂತ್ರ ಮರೆತು ಹೋಯಿತೆ
ಎಲ್ಲಾ ಪ್ರಾಣಿಗಳು: ಈಗ ನಾವು ಮೊಲವನ್ನು ಕಳಿಸಬೇಕು
ಮೊಲ: ಆಯಿತು ನಾನು ಅಲ್ಲಿಗೆ ಹೋಗುತ್ತೇನೆ.
ಮೊಲ: ಬೆಟ್ಟ ಬೆಟ್ಟ ಚಿರತೆ ಆ ಮಂತ್ರವನ್ನು ಮರೆತು ಹೋಯಿತು ಅದ್ದಕ್ಕಾಗಿ ಆ ಮಂತ್ರವನ್ನು ಮತ್ತೊಮ್ಮೆ ಹೇಳು
ಬೆಟ್ಟ: ನಾನು ಹೇಳುವುದ್ದಿಲ್ಲ.
ಮೊಲ:ದಯವಿಟ್ಟು. ಹೇಳು
ಬೆಟ್ಟ: ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪಾರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
(ಮೊಲ ಮತ್ತೇ ಕಾಡಿಗೆ ಬರುವಾಗ ಕಲ್ಲಿಗೆ ಕಾಲು ಎಡವಿ ಬಿದ್ದು ಆ ಮಂತ್ರ ಮರೆತು ಹೋಯಿತು)
ಎಲ್ಲಾ ಪ್ರಾಣಿಗಳು:ಮೊಲ ಹೇಳು ಆ ಮಂತ್ರ ಹೇಳು
ಮೊಲ: ನನಗೆ ಆ ಮಂತ್ರ ಮರೆತು ಹೋಯಿತು
ಎಲ್ಲಾ ಪ್ರಾಣಿಗಳು: ಈಗ ನಾವು ಯಾರನ್ನು ಕಳಿಸುವುದು
ಆಮೆ: ನಾನು ಹೋಗುತ್ತೇನೇ
ಎಲ್ಲಾ ಪ್ರಾಣಿಗಳು: ನೀನು ಹೋದರೆ ಒಂದು ತಿಂಗಳುಆಗುವುದು
ಆಮೆ:ಆದರೇನಂತೆ ನಾನು ಚಿರತೆ ಮತ್ತು ಮೊಲದಂತಲ್ಲ.
ಎಲ್ಲಾ ಪ್ರಾಣಿಗಳು: ಆಯಿತು ನೀನೇ ಹೋಗಿ ಬಾ ಆದರೆ ಆ ಮಂತ್ರವನ್ನು ಮಾತ್ರ ಚಿರತೆ ಮತ್ತು ಮೊಲ ತರಹ ಮರೆಯ ಬೇಡ .
ಆಮೆ:(೧೫ ದಿನಗಳ ನಂತರ) ಬೆಟ್ಟ ಬೆಟ್ಟ ಮೊಲ ಆ ಮಂತ್ರವನ್ನು ಮರೆತು ಹೋಯಿತು
ಅದ್ದಕ್ಕಾಗಿ ಆ ಮಂತ್ರವನ್ನು ಮತ್ತೊಮ್ಮೆ ಹೇಳು
ಬೆಟ್ಟ: ನಾನು ಹೇಳುವುದಿಲ.
ಆಮೆ:ದಯವಿಟ್ಟು. ಹೇಳು
ಬೆಟ್ಟ: ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
ಎಲ್ಲಾ ಪ್ರಣಿಗಳು:(೧೫ ದಿನಗಳ ನಂತರ) ಆಮೆ ಹೇಳು ಆ ಮಂತ್ರ ಹೇಳು
ಆಮೆ: ಕೇಳಿ ಆ ಮಂತ್ರವನ್ನು ಹೇಳುತ್ತೇನೆ “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ” ಈದೇ ಆ ಮಂತ್ರ
ಚಿರತೆ: ಆಯಿತು ಆ ಮಂತ್ರವನ್ನು ಆ ನೆರಳೆ ಮರದ ಮುಂದೆ ಹೇಳೋಣ ಬನ್ನಿ
ಎಲ್ಲಾ ಪ್ರಣಿಗಳು (ನೆರಳೆ ಮರದ ಮುಂದೆ ನಿಂತು) “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
(ಆ ಕ್ಷಣವೇ ಆ ಕಾಡಿಗೆ ಮಳೆ ಬಂದಿತು)
ನೀತಿ:ನಿಧಾನವೇ ಪ್ರಧಾನ.
ಅಜ್ಜಿ ಹೇಳಿದ ಕಥೆ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ 3 ಜನ ಮಕ್ಕಳು. ಹಿರಿಯ ರಾಜಕುಮಾರಣ ಹೆಸರು ರಾಜೇಂದ್ರ. ಎರಡನೇ ರಾಜಕುಮಾರ ಸೋಮೆಂದ್ರ. ಹಾಗೂ ಮೂರನೇ ರಾಜಕುಮಾರ ದೇವೇಂದ್ರ. ಮೂವರೂ ರಾಜಕುಮಾರರೂ ವಿದ್ಯಾರ್ಜನೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಮೇಲೆ ರಾಜನಿಗೆ ಒಂದು ಯೋಚನೆ ಬಂತು. ಮೂರು ಜನ ರಾಜಕುಮಾರರಲ್ಲಿ ಯಾರು ತನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಪರೀಕ್ಷಿಸಲು ನಿರ್ಧರಿಸಿದ. ಆ ಯೋಚನೆ ಬಂದ ಕೂಡಲೇ ರಾಜ ಮೂವರೂ ರಾಜಕುಮಾರರನ್ನು ಕರೆಸಿದ. ಅವರೆಲ್ಲರಿಗೆ ಒಂದು ಪ್ರಶ್ನೆ ಹಾಕಿದ . ಅದೇನೆಂದರೆ ರಾಜನನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂಬ ಪ್ರಶ್ನೆ ಹಾಕಿ ಮಾರನೇ ದಿನ ಉತ್ತರಿಸಲು ಹೇಳಿದ. ಮರುದಿನ ಹಿರಿಯ ರಾಜಕುಮಾರ ರಾಜೇಂದ್ರ ಬಂದು ತಾನು ರಾಜನನ್ನು ನಗ, ನಾಣ್ಯ, ಸಂಪತ್ತು ಎಲ್ಲವುಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಸಂತೋಷವಾಯಿತು. ಎರಡನೇ ರಾಜಕುಮಾರ ಸೋಮೆಂದ್ರ ಬಂದು ತಾನು ರಾಜನನ್ನು ಎಲ್ಲಾ ಸಿಹಿತಿಂಡಿಗಳು ಕಜ್ಜಾಯಗಳಿಗಿಂತ ತುಂಬಾ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಕುಶಿಯಾಯ್ತು. ಮೂರನೇ ರಾಜಕುಮಾರ ದೇವೇಂದ್ರ ಬಂದು ತಾನು ರಾಜನನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ತುಂಬಾ ಕೋಪ ಬಂತು. ತನ್ನನ್ನು ಆ ಕನಿಷ್ಠ ಉಪ್ಪಿಗಿಂತ ಪ್ರೀತಿಸುತ್ತಾನೆಂದು ಹೇಳುತ್ತಾನಲ್ಲ ದೇವೇಂದ್ರ ಎಂದು. ರಾಜ ಕೋಪದಿಂದ ದೇವೇಂದ್ರನಿಗೆ ಬೈದು ತನ್ನನ್ನು ಪ್ರೀತಿಸದ ಮೇಲೆ ತನ್ನ ರಾಜ್ಯ ಸಂಪತ್ತು ಯಾವೂದರಲ್ಲೂ ನಿನಗೆ ಹಕ್ಕಿಲ್ಲ ಎಂದು ಹೇಳಿ ದೇವೇಂದ್ರನನ್ನು ರಾಜ್ಯದಿಂದ ಹೊರಕ್ಕೆ ಹಾಕಿಬಿಟ್ಟ.
ತಂದೆಯು ತನ್ನನ್ನು ಮನೆಯಿಂದ ಹೊರಹಾಕಿದ್ದಕ್ಕೆ ದೇವೇಂದ್ರ ತುಂಬಾ ನೊಂದುಕೊಂಡ. ಹೀಗೆ ದು:ಖಿಸುತ್ತಾ ಒಂದು ದಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಒಬ್ಬಳು ತುಂಬಾ ವಯಸ್ಸಾದ ಅಜ್ಜಿ ನಡೆಯಲಾರದೇ ಕಷ್ಟ ಪಡುತ್ತಿರುವುದನ್ನು ನೋಡಿದ ದೇವೇಂದ್ರ ಆ ಅಜ್ಜಿಯನ್ನು ಕೈ ಹಿಡಿದು ಆಕೆಯ ಮನೆಯವರೆಗೂ ಆಕೆಗೆ ನಡೆಯಲು ಸಹಾಯ ಮಾಡಿದ. ದೇವೇಂದ್ರನ ಈ ಸಹಾಯದಿಂದ ತುಂಬಾ ಸಂತೋಷಗೊಂಡ ಆ ಅಜ್ಜಿ ದೇವೇಂದ್ರ ನ ಪೂರ್ವಾಪರಗಳನ್ನು ವಿಚಾರಿಸಿದಳು. ದೇವೇಂದ್ರ ನಡೆದ ಕತೆಯನ್ನೆಲ್ಲ ಅಜ್ಜಿಗೆ ವಿವರಿಸಿದ. ಕಥೆಯನ್ನು ಕೇಳಿದ ಅಜ್ಜಿ ದೇವೇಂದ್ರನಿಗೆ ಸಹಾಯ ಮಾಡಲು ನಿರ್ಧರಿಸಿದಳು. ದೇವೇಂದ್ರನನ್ನು ಕರೆದು ಹೀಗೆ ಹೇಳಿದಳು. “ನನಗೆ ಮಾಯಾವಿ ಶಕ್ತಿಯಿದೆ, ಆ ಶಕ್ತಿಯನ್ನು ಬಳಸಿ ನಿನಗೆ ಒಂದು ರಾಜ್ಯ ನಿರ್ಮಿಸಿ ಕೊಡುತ್ತೇನೆ. ನೀನು ಇದೆ ರೀತಿ ಒಳ್ಳೆಯತನದಿಂದ ಆ ರಾಜ್ಯವನ್ನು ಆಳಬೇಕು” ಎಂದು ಆದೇಶಿಸಿದಳು. ಇದಾರಿಂದ ಸಂತೋಷಗೊಂಡ ದೇವೇಂದ್ರ ಆದೇಶವನ್ನು ಶಿರಸಾ ಪಾಲಿಸುತ್ತೇನೆ ಎಂದು ಮಾತು ಕೊಟ್ಟ. ಮಾತಿನಂತೆ ಅಜ್ಜಿ ದೇವೇಂದ್ರನಿಗೆ ಒಂದು ಸುಂದರ ಸಂಪದ್ಭರಿತ ರಾಜ್ಯ ಕಟ್ಟಿ ಕೊಟ್ಟಳು. ಸಂತೋಷಗೊಂಡ ದೇವೇಂದ್ರ ಅಜ್ಜಿಗೆ ಧನ್ಯವಾದ ಹೇಳಿ ತನ್ನ ರಾಜ್ಯಕ್ಕೆ ಹೋಗಿ ದಕ್ಷತೆಯಿಂದ ರಾಜ್ಯಭಾರ ಮಾಡತೊಡಗಿದ.
ಕೆಲ ಕಾಲದ ನಂತರ ದೇವೇಂದ್ರನಿಗೆ ತನ್ನ ತಂದೆ ತಾಯಿ ಸಹೋದರರನ್ನು ಭೇಟಿಯಾಗುವ ಆಸೆಯಾಯ್ತು. ಆದರೆ ತಂದೆ ಗೆ ತನ್ನ ಮೇಲಿರುವ ಕೋಪ ಇನ್ನೂ ಕಡಿಮೆಯಾಗಿದೆಯೋ ಇಲ್ಲವೋ ಎನ್ನುವ ಆತಂಕ. ಅದಕ್ಕೆ ಅವನು ಒಂದು ಉಪಾಯ ಯೋಚಿಸಿದ. ತನ್ನ ಸುತ್ತ ಮುತ್ತಲಿನ ಎಲ್ಲಾ ರಾಜ್ಯದ ರಾಜರಿಗೆ ಒಂದು ಔತಣಕೂಟ ಏರ್ಪಡಿಸಿದ. ಆ ಔತಣಕೂಟಕ್ಕೆ ದೇವೇಂದ್ರನ ತಂದೆ ತಾಯಿ ಸಹೋದರರನ್ನೂ ಆಮಂತ್ರಿಸಿದ.
ಔತಣಕೂಕ್ಕೆ ಆಮಂತ್ರಣ ನೀಡಿದ ರಾಜ ಯಾರೆಂದು ತಿಳಿದಿಲ್ಲವಾದರೂ ದೇವೇಂದ್ರನ ತಂದ ಪರಿವಾರ ಸಮೇತ ಆಗಮಿಸಿದ. ಎಲ್ಲಾ ರಾಜರೂ ಆಗಮಿಸಿದ ಮೇಲೆ ರಾಜ ಅಂದರೆ ದೇವೇಂದ್ರ ಸಭೆಗ ಆಗಮಿಸದೆ ತನ್ನ ಮಂತ್ರಿಯನ್ನು ಕಳುಹಿಸಿ ಔತಣದ ನಂತರ ರಾಜ ಆಗಮಿಸುತ್ತಾರೆ ಎಂಬ ಸಂದೇಶವನ್ನು ಸಭೆಯಲ್ಲಿ ಘೋಷಿಸಿದ. ಔತಣಕೂಟಕ್ಕೆ ಸಿದ್ದಪಡಿಸಿದ ಎಲ್ಲಾ ತಿನಿಸುಗಳನ್ನು ತಂದು ಸಭೆಯಲ್ಲಿ ಇಟ್ಟರು ವಿಧ ವಿಧ ಕಜ್ಜಾಯಗಳು ತಿಂಡಿ ತಿನಿಸುಗಳು ನೋಡಿದ ತಕ್ಷಣ ಬಾಯಲ್ಲಿ ನೀರೂರುವಂತಿತ್ತು. ಸಭೆಯಲ್ಲಿ ಕುಳಿತಿದ್ದ ರಾಜರುಗಳಿಗೆಲ್ಲಾ ಊಟ ಬಡಿಸಲಾಯ್ತು. ಒಂದೆರಡು ತುತ್ತು ಊಟ ಮಾಡಿ ಎಲ್ಲರೂ ಮುಖ ಮುಖ ನೋಡಿಕೊಳ್ಳಲಾರಂಭಿಸಿದರು. ಯಾಕೆಂದರೆ ಯಾವ ಅಡುಗೆಗೂ ಉಪ್ಪೇ ಹಾಕಿರಲಿಲ್ಲ. ನೋಡಲು ತುಂಬಾ ಸುಂದರವಾಗಿ ಕಂಡ ಆ ಎಲ್ಲಾ ತಿಂಡಿ ತಿನಿಸುಗಳೂ ಸಪ್ಪೆ ಸಪ್ಪೆ. ಉಪ್ಪಿಲ್ಲದ ಆ ಅಡುಗೆ ಸ್ವಲ್ಪವೂ ರುಚಿಕರವಾಗಿರಲಿಲ್ಲ. ಎಲ್ಲರೂ ಉಪ್ಪಿಲ್ಲದ ಆ ಸಪ್ಪೆ ಊಟವನ್ನು ತೆಗಳಲು ಶುರು ಮಾಡಿದರು. ದೇವೇಂದ್ರ ನ ತಂದೆ ಸಹ ಇದೆಂತ ಕೆಟ್ಟ ಊಟ ಎಂದು ಬಯ್ದ. ಆಗ ಸಭೆಗೆ ದೇವೇಂದ್ರ ಆಗಮಿಸಿದ. ಉಪ್ಪಿಲ್ಲದೆ ಊಟ ತಯಾರಿಸಿದುದರ ಕಾರಣ ಘೋಷಿಸಿದ. ತಾನು ತನ್ನ ತಂದೆಯನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದಾಗ ತನ್ನ ತಂದೆ ಉಪ್ಪನ್ನು ತುಂಬಾ ಕನಿಷ್ಠ ವಸ್ತುವೆಂದು ಪರಿಗಣಿಸಿ ತನ್ನನ್ನು ಮನೆಯಿಂದ ಹೊರಗೆ ಹಾಕಿದ ವಿಷಯ ತಿಳಿಸಿದ. ಅದಕ್ಕಾಗಿಯೇ ಉಪ್ಪಿನ ಬೆಲೆಯನ್ನು ಎಲ್ಲರಿಗೂ ಮನವರಿಕೆ ಮಾಡಲೆಂದೆ ಉಪ್ಪಿಲ್ಲದ ಅಡುಗೆಯನ್ನು ಎಲ್ಲರಿಗೂ ತಿನಿಸಿದ್ದಾಗಿ ಹೇಳಿದ. ಆಗ ದೇವೇಂದ್ರನ tandege ತಾನು ಮಾಡಿದ ತಪ್ಪಿನ ಅರಿವಾಯ್ತು. ದೇವೇಂದ್ರನಲ್ಲಿ ಕ್ಷಮೆ ಕೇಳಿದ. ದೇವೇಂದ್ರ ಮತ್ತೆ ತನ್ನ ತಂದೆ ತಾಯಿ ಪರಿವಾರದೊಡಗೂಡಿ ಸಂತೋಷವಾಗಿ ಒಳ್ಳೆಯತನದಿಂದ ರಾಜ್ಯಭಾರ ಮಾಡಿದ.
ನೀತಿ : ಪ್ರತಿಯೊಂದು ವಸ್ತುವಿಗೂ ಅದರದೇ ಆದ ಬೆಲೆ ಇರುತ್ತದೆ. ಯಾವ ವಸ್ತುವನ್ನೂ ಅಥವಾ ಯಾರನ್ನೂ ಕನಿಷ್ಟವೆಂದು ಹೀಗಳೆಯಬಾರದು.
ಕಥೆ ಕೇಳಿಸಿದವರು: ಚೇತನಾ ನಂಜುಂಡ್