ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಧನಿಕ. ಇನ್ನೊಬ್ಬ ಬಡವ . ಒಂದು ಸಾರಿ
ಅವರು ಸಂಧಿಸಿದರು , ವಾಗ್ವಾದದಲ್ಲಿ ತೊಡಗಿದರು . ಬಡವ ಸೋದರ ಹೇಳಿದ : “ ಈ
ಪ್ರಪಂಚದಲ್ಲಿ ಎಷ್ಟು ಕಷ್ಟ ಕಾರ್ಪಣ್ಯಗಳಿವೆ . ಆದರೂ ಸತ್ಯದಲ್ಲಿ ಜೀವನ ನಡೆಸುವುದೇ ಲೇಸು ! ”
- ಧನಿಕ ಹೇಳಿದ : “ ಈ ಕಾಲದಲ್ಲಿ ನೀನು ಎಲ್ಲಿ ಸತ್ಯವನ್ನು ಕಾಯ? ಇಲ್ಲಪ್ಪ, ಈ ಪ್ರಪಂಚ
ದಲ್ಲಿ ಸತ್ಯ ಅನ್ನೋದೇ ಇಲ್ಲ. ಈಗ ಎಲ್ಲೆಲ್ಲೂ ಕಾಣುವುದು ಒಂದೇ – ಅಸತ್ಯ , ಅಸತ್ಯದಲ್ಲಿ ಬಾಳು
ವುದೇ ಲೇಸು ! ”
ಬಡವ ತನ್ನ ವಾದವನ್ನೇ ಸಮರ್ಥಿಸಿದ : “ ಇಲ್ಲ, ಅಣ್ಣ , ಸತ್ಯದಲ್ಲಿ ಬಾಳುವುದೇ ಲೇಸು ! ”
ಆಗ ಧನಿಕ ಹೇಳಿದ : “ ಆಗಲಿ , ಪಣ ಕಟೋಣ. ಜನರ ಬಳಿಗೆ ಹೋಗಿಕೇಳೋಣ. ಯಾರು
ಸಿಕ್ಕಿದರೆ ಅವರನ್ನು ಕೇಳೊಣ. ಹೀಗೆಮೂರು ಮಂದಿಯನ್ನು ಕೇಳೋಣ. ಅವರು ನಿನ್ನ ಪರವಾಗಿ
ಹೇಳಿದರೆ ನನ್ನ ಆಸ್ತಿ ಎಲ್ಲ ನಿನ್ನದು. ಅವರು ನನ್ನ ಪರವಾಗಿ ಹೇಳಿದರೆ ಆಗ ನಿನ್ನ ಆಸ್ತಿಯನ್ನೆಲ್ಲ
ನಾನು ತೆಗೆದುಕೊಳ್ಳುತ್ತೇನೆ. ಆಗಬಹುದಾ ? ”
ಬಡವ ಹೇಳಿದ : “ ಆಗಲಿ ! ”
ಇಬ್ಬರೂ ಮಾರ್ಗದಲ್ಲಿ ಹೊರಟರು . ಹೋಗ್ತಾರೆ, ಹೋಗ್ತಾರೆ. ಅವರಿಗೆ ಒಬ್ಬ ವ್ಯಕ್ತಿ
ಸಿಕ್ಕಿದ. ಅವನು ಕೆಲಸದಿಂದ ಹಿಂದಿರುಗುತ್ತಿದ್ದ. ಅವರು ಅವನನ್ನು ನಿಲ್ಲಿಸಿದರು : “ ನಮಸ್ಕಾರ,
ಸಜ್ಜನನೇ ! ”
“ನಮಸ್ಕಾರ ! ”
“ ನಾವು ನಿನ್ನನ್ನು ಒಂದು ಪ್ರಶ್ನೆ ಕೇಳಬೇಕೂಂತ ... ”
“ಕೇಳಿ ! ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದಲೋ ಅಥವಾ ಅಸತ್ಯದಲೋ ? ”
“ ಅಯ್ಯೋ , ಪುಣ್ಯಾತ್ಮರಾ !” ಎಂದು ಹೇಳಿದ ಆ ವ್ಯಕ್ತಿ . ನೀವು ಈ ಕಾಲದಲ್ಲಿ ಸತ್ಯವನ್ನು
ಎಲ್ಲಿ ಕಾಣೀರ? ನೋಡಿ, ನಾನು ಎಷ್ಟು ದುಡಿದರೂ ಎಲ್ಲ ನಿಷ್ಪಲ. ಸಿಗೋ ಅಲ್ಪ ಜೀತದಲ್ಲೂ
ಒಡೆಯ ಬೇರೆ ಒಂದಷ್ಟು ಕಡೀತಾನೆ. ಹೀಗಿರುವಾಗ ಸತ್ಯದಲ್ಲಿ ಎಲ್ಲಿ ಬಾಳೊದು! ಸತ್ಯದಲ್ಲಿ
ಬಾಳೋದಕ್ಕಿಂತ ಅಸತ್ಯದಲ್ಲಿ ಬಾಳೋದೇ ಉತ್ತಮ ! ”
“ನೋಡಿದೆಯಾ, ತಮ್ಮ ” ಅಂದ ಧನಿಕಸೋದರ, “ ನನ್ನ ಮಾತು ನಿಜ ಅನ್ನೋದಕ್ಕೆ ನಿನಗೆ
ಮೊದಲ ಪುರಾವೆ.”
ಬಡವನ ಮುಖ ಸಪ್ಪಗಾಯಿತು. ಅವರು ಮುಂದೆ ಹೋದರು . ಅವರಿಗೆ ಒಬ್ಬ ವರ್ತಕ
ಸಿಕ್ಕಿದ.
“ ನಮಸ್ಕಾರ, ವರ್ತಕ ಶ್ರೇಷ್ಟ !”
“ ನಮಸ್ಕಾರ !”
“ ನಾವು ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕೂಂತ ...”
“ಕೇಳಿ, ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದ ಅಥವಾ ಅಸತ್ಯದಲ್ಲೂ ? ”
“ ಅಯ್ಯೋ , ಪುಣ್ಯಾತ್ಮರಾ ! ಈ ಕಾಲದಲ್ಲಿ ಸತ್ಯದಿಂದ ಬಾಳೊದು ಎಲ್ಲಿ ಸಾಧ್ಯ ? ಮಾರಾಟ
ಮಾಡಬೇಕಾದರೆ ನೂರು ಬಾರಿ ಸುಳ್ಳು ಹೇಳಬೇಕಾಗುತ್ತೆ , ನೂರು ಬಾರಿ ವಂಚನೆ ಮಾಡ
ಬೇಕಾಗುತ್ತೆ . ಇಲ್ಲದಿದ್ದರೆ ಮಾರಾಟವನ್ನೇ ಮಾಡೋಕಾಗೊಲ್ಲ.”
ಹಾಗೆಂದು ಅವನು ಮುಂದೆ ಹೊರಟ.
“ನೋಡಿದೆಯಾ, ತಮ್ಮ , ಎರಡನೆಯ ಪುರಾವೆ ನನ್ನ ಮಾತಿಗೆ ” ಎಂದ ಧನಿಕ.
ಬಡವನ ಮನಸ್ಸು ಇನ್ನಷ್ಟು ಕುಂದಿತು . ಅವರು ಮುಂದೆ ಹೋದರು .
ಹೋಗುತ್ತಾರೆ, ಹೋಗುತ್ತಾರೆ, ಕೊನೆಗೆ ಒಬ್ಬ ಸಾಹುಕಾರನನ್ನು ಸಂಧಿಸುತ್ತಾರೆ.
“ನಮಸ್ಕಾರ , ಸ್ವಾಮಿ ! ”
“ನಮಸ್ಕಾರ! ”
“ ನಾವು ನಿಮ್ಮನ್ನು ಒಂದು ಮಾತು ಕೇಳಬೇಕೂಂತ ...”
“ಕೇಳಿ, ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದ ಅಥವಾ ಅಸತ್ಯದಲ್ಲೋ ? ”
“ ಅಯ್ಯೋ , ಪುಣ್ಯಾತ್ಮರಾ ! ಈ ಪ್ರಪಂಚದಲ್ಲಿ ಸತ್ಯ ಅನ್ನೋದಾದರೂ ಎಲ್ಲಿದೆ? ಸತ್ಯದಲ್ಲಿ
ಬಾಳೊಕೆ ಎಂದಿಗೂ ಆಗದು . ನಾನೇನಾದರೂ ಸತ್ಯದಲ್ಲಿ ಬಾಳಿದ್ದರೆ, ಹೀಗೆ...”
ಅವನು ತನ್ನ ಮಾತು ಮುಗಿಸಲೇ ಇಲ್ಲ, ಮುಂದೆ ಹೋದ.
“ನೋಡಿದೆಯಾ, ತಮ್ಮ ! ನಡಿ, ಮನೆಗೆ ಹೋಗೋಣ” ಎಂದ ಧನಿಕ. “ ನಿನ್ನ ಆಸ್ತಿಯ
ನ್ನೆಲ್ಲ ನನಗೆ ಕೊಡು! ”
ಬಡವ ಮನೆಗೆ ಹೋದ. ಅವನು ದುಃಖಾಕ್ರಾಂತನಾದ. ಧನಿಕ ಅಣ್ಣ ಬಂದ. ತನ್ನ ಬಡ
ತಮ್ಮನ ಖಾಲಿ ಮನೆಯೊಂದನ್ನು ಬಿಟ್ಟು ಅವನಲ್ಲಿದ್ದ ಎಲ್ಲ ಆಸ್ತಿಯನ್ನೂ ಕೊಂಡೊಯ್ದ .
“ನೀನು ಸ್ವಲ್ಪ ಕಾಲ ಬೇಕಾದರೆ ಇಲ್ಲೇ ವಾಸವಾಗಿರು . ಮನೆ ಸದ್ಯಕ್ಕೆ ನನಗೆ ಬೇಡ. ಆಮೇಲೆ
ಎಲ್ಲಾದರೂ ಬೇರೆ ಕಡೆಗೆ ಹೋಗುವಿಯಂತೆ ” ಎಂದ ಆ ಧನಿಕ ಸೋದರ .
ಹೀಗೆ ದುಃಖಭರಿತನಾಗಿ ತಲೆ ತಗ್ಗಿಸಿ ತನ್ನ ಕುಟುಂಬದೊಂದಿಗೆ ಬಡವ ಸೋದರ ಮನೆಯಲ್ಲಿ
ಕುಳಿತ . ಮನೆಯಲ್ಲಿ ತಿನ್ನಲು ಒಂದು ಚೂರುರೊಟ್ಟಿಯೂ ಇಲ್ಲ. ಕೆಲಸಕ್ಕೂ ಎಲ್ಲಿಗೂ ಹೋಗುವ
ಹಾಗಿಲ್ಲ – ಆ ವರ್ಷ ಸುಗ್ಗಿ ಬೇರೆ ಏನೇನೂ ಚೆನ್ನಾಗಿರಲಿಲ್ಲ. ಬಡತನದ ಬವಣೆ ಸಹಿಸಲಸಾಧ್ಯ
ವಾಗಿತ್ತು ... ಮಕ್ಕಳು ಅಳುತ್ತಿದ್ದರು ... ಅವನು ಒಂದು ಅಳತೆಪಾತ್ರೆ ತೆಗೆದುಕೊಂಡು ತನ್ನ ಧನಿಕ
ಅಣ್ಣನ ಮನೆಗೆ ಹೋದ.
“ ಅಣ್ಣ ! ಈ ಅಳತೆಪಾತ್ರೆಯಲ್ಲಿ ಒಂದಿಷ್ಟು ಏನಾದರೂ ಹಿಟ್ಟು ಕೊಡು. ನಮಗೆ ತಿನ್ನೋಕೆ
ಏನೂ ಇಲ್ಲ. ಮಕ್ಕಳು ಹಸಿವಿನಿಂದ ಅಳುತ್ತಿದಾರೆ !”
ಅವನು ಹೇಳಿದ : “ನಿನ್ನ ಒಂದು ಕಣ್ಣು ಕೊಡು. ನಿನಗೆ ಒಂದು ಅಳತೆ ಹಿಟ್ಟು ಕೊಡುತ್ತೇನೆ. ”
ಬಡವ ಯೋಚಿಸಿದ, ಯೋಚಿಸಿದ. ವಿಧಿಯಿಲ್ಲದೆ ಒಪ್ಪಿಕೊಂಡ.
“ ಹುಂ . ತಗೋ ನನ್ನ ಒಂದು ಕಣ್ಣು . ಏನನ್ನಾದರೂ ಒಂದಿಷ್ಟು ತಿನ್ನಲುಕೊಡು. ದೇವರಿಗೆ
ಪ್ರೀತಿಯಾಗಲಿ ! ”
ಧನಿಕ ಬಡವನ ಒಂದು ಕಣ್ಣು ಕಳಚಿಕೊಂಡು ಅವನಿಗೆ ಒಂದು ಅಳತೆ ಹುಳು ಹತ್ತಿದ
ಹಿಟ್ಟು ಕೊಟ್ಟ . ಅದನ್ನು ತೆಗೆದುಕೊಂಡು ಬಡವ ತನ್ನ ಮನೆಗೆ ಹೋದ. ಹೆಂಡತಿ ಅವನನ್ನು
ನೋಡಿದ್ದೇ ಕೂಗಿಕೊಂಡಳು :
“ ಏನು ಮಾಡಿಬಿಟ್ಟೆ ನೀನು ? ಎಲ್ಲಿ ನಿನ್ನ ಕಣ್ಣು ? ”
“ಓಹ್ , ಏನು ಮಾಡೋದು? ಅಣ್ಣ ತೆಗೆದುಕೊಂಡ !”
ಹಾಗೆಂದು ಅವನು ಅವಳಿಗೆ ಎಲ್ಲವನ್ನೂ ವಿವರಿಸಿದ. ಎಲ್ಲರೂ ಕೂತು ಅತ್ತರು. ಆಮೇಲೆ
ಜೀವನ ನಡೆಸಿಕೊಂಡು ಹೋದರು . ಅವನು ತಂದ ಹಿಟ್ಟನ್ನೇ ತಿಂದುಕೊಂಡು ಜೀವಿಸುತ್ತಿದ್ದರು .
ಒಂದು ವಾರವೋ ಏನೋ ಕಳೆಯಿತು. ಒಂದು ಅಳತೆ ಒಟ್ಟು ಎಷ್ಟು ದಿವಸ ಬರುತ್ತೆ ? ಬರಿ
ದಾಯಿತು. ಬಡವ ಮತ್ತೆ ಅಳತೆಪಾತ್ರೆ ಹಿಡಿದುಕೊಂಡು ಸೋದರನ ಬಳಿಗೆ ಹೋದ.
“ಪ್ರೀತಿಯ ಅಣ್ಣ , ಒಂದಿಷ್ಟು ಹಿಟ್ಟು ಕೊಡು! ನೀನು ಕೊಟ್ಟಿದ್ದೆಲ್ಲ ಮುಗಿದು ಹೋಯಿತು. ”
“ ನಿನ್ನ ಇನ್ನೊಂದು ಕಣ್ಣನ್ನೂ ಕಳಚಿಕೊಡು. ಇನ್ನೊಂದು ಅಳತೆ ಹಿಟ್ಟು ತಗೊಂಡುಹೋಗು! ”
“ ಅದು ಹೇಗೆ ಸಾಧ್ಯ , ಅಣ್ಣ ? ಕಣ್ಣಿಲ್ಲದೆ ಈ ಪ್ರಪಂಚದಲ್ಲಿ ವಾಸಮಾಡೋದು ಹೇಗೆ ?
ಒಂದನ್ನಾಗಲೇ ತೆಗೆದುಕೊಂಡಿದೀಯಲ್ಲ. ದಯವಿಟ್ಟು ಇನ್ನೂ ಒಂದು ಅಳತೆ ಹಿಟ್ಟು ಸುಮ್ಮನೆ
ಕೊಡು! ”
“ ಇಲ್ಲ. ಸುಮ್ಮನೆ ನಾನು ಕೊಡೋದಿಲ್ಲ. ಕಣ್ಣು ಕಳಚಿಕೊಡು. ಆಗಷ್ಟೆ ಇನ್ನೊಂದು ಅಳತೆ
ಹಿಟ್ಟು ನಿನಗೆ ಕೊಡುತ್ತೇನೆ.”
ಬಡವನಿಗೆ ತುಂಬ ದುಃಖವಾಯಿತು. ಆದರೆ ಮಾಡುವುದೇನು ? “ಸರಿ ” ಅವನೆಂದ.
“ಕಳಚಿಕೊ , ಇನ್ನೊಂದು ಕಣ್ಣನ್ನೂ , ದೇವರಿಗೆ ಪ್ರೀತಿಯಾಗಲಿ ! ”
ಧನಿಕ ಸೋದರ ಅವನ ಇನ್ನೊಂದು ಕಣ್ಣನ್ನೂ ಕಳಚಿಕೊಂಡು ಇನ್ನೊಂದು ಅಳತೆ ಹಿಟ್ಟು
ಕೊಟ್ಟ. ಕುರುಡ ಅದನ್ನು ತೆಗೆದುಕೊಂಡು ಮನೆಯ ಕಡೆಗೆ ತಿರುಗಿದ. ಬೇಲಿಯ ಕಟಕಟೆಯನ್ನೇ
ಹಿಡಿದುಕೊಂಡು ತಡವರಿಸಿಕೊಂಡು ಹೇಗೋ ಮನೆಯವರೆಗೂ ಬಂದ . ಹಿಟ್ಟನ್ನೂ ಹೊತ್ತು
ತಂದ. ಹೆಂಡತಿ ಅವನನ್ನು ಕಂಡವಳೇ ಸಿಡಿಲು ಬಡಿದವಳಂತಾದಳು .
“ ಏನು ನೀನು ? ಎಂಥ ದುಃಖ ತಂದುಕೊಂಡೆಯಲ್ಲ! ಕಣ್ಣಿಲ್ಲದೆ ಜೀವಿಸುವುದು ಹೇಗೆ ?
ನಾವು ಹಿಟ್ಟಿಲ್ಲದೆಯೇ ಹೇಗೋ ಇದ್ದುಕೊಂಡಿರಬಹುದಿತ್ತು . ಆದರೆ ಈಗ...”
ಅಳುತ್ತಾಳೆ, ಗೋಳಾಡುತ್ತಾಳೆ. ಅವಳ ಆಕ್ರಂದನವನ್ನು ಮಾತುಗಳಲ್ಲಿ ವರ್ಣಿಸಿ ತಿಳಿಸು
ವುದು ಸಾಧ್ಯವಿಲ್ಲ.
ಕುರುಡ ಹೇಳಿದ: “ ಅಳಬೇಡಕಣೇ ! ಏನು ಈ ಪ್ರಪಂಚದಲ್ಲಿ ನಾನೊಬ್ಬನೇಯೇ ಕಣ್ಣಿಲ್ಲದೆ
ಇರುವವನು ! ಎಷ್ಟೋ ಮಂದಿ ಕುರುಡರಿದ್ದಾರೆ. ಅವರೆಲ್ಲ ದೃಷ್ಟಿ ಇಲ್ಲದೆ ಜೀವಿಸುತ್ತಿಲ್ಲವೇ ? ”
ಸರಿ, ಅವರು ಹೀಗೇ ಸ್ವಲ್ಪ ಕಾಲ ತಳ್ಳಿದರು . ಅವನು ತಂದಿದ್ದ ಆ ಹಿಟ್ಟೂ ಮುಗಿಯಿತು.
ಒಂದು ಅಳತೆ ಹಿಟ್ಟು ಇಡೀ ಕುಟುಂಬಕ್ಕೆ ಎಷ್ಟು ಕಾಲ ಬರುತ್ತೆ !
“ ಈಗ ಏನು ಮಾಡೋದು? ” ಕುರುಡ ಹೆಂಡತಿಗೆ ಹೇಳಿದ. “ ಇನ್ನು ಅಣ್ಣನ ಬಳಿಗೆ
ನಾನು ಹೋಗಲಾರೆ. ಈಗ ಹೀಗೆ ಮಾಡು . ಹಳ್ಳಿಯ ಬೀದಿಯ ಪಕ್ಕದಲ್ಲಿ ಒಂದು ದೊಡ್ಡ
ಪೊಪ್ಪಾರ್ ಮರ ಇದೆಯಲ್ಲ, ಅದರ ಕೆಳಗೆ ನನ್ನನ್ನು ಕರೆದುಕೊಂಡು ಹೋಗಿಕೂರಿಸು , ಅಲ್ಲೇ
ನನ್ನನ್ನು ಇಡೀ ದಿನ ಬಿಟ್ಟಿರು . ಸಾಯಂಕಾಲ ಬಂದು ಮನೆಗೆ ಕರೆದುಕೊಂಡು ಹೋಗು. ದಾರಿ
ಯಲ್ಲಿ ಹೋಗುವವರೂ ಬರುವವರೂ ಯಾರಾದರೂ ಬಹುಶಃ ಒಂದೊಂದು ಚೂರು ರೊಟ್ಟಿ
ಭಿಕ್ಷೆಯಾಗಿ ಕೊಡಬಹುದು.” ಹೆಂಡತಿ ಹಾಗೆಯೇ ಮಾಡಿ ತಾನೇ ಮನೆಗೆ ಹಿಂದಿರುಗಿದಳು.
ಈ ವ್ಯಕ್ತಿ ಅಲ್ಲಿ ಹೀಗೆ ಕುಳಿತಿದ್ದ . ಯಾರು ಯಾರೋ ಅವನಿಗೆ ಚೂರುಪಾರು ಭಿಕ್ಷೆ ನೀಡಿ
ದರು . ಸಾಯಂಕಾಲವಾಯಿತು. ಹೆಂಡತಿ ಬರಲೇ ಇಲ್ಲ . ಅವನಿಗೆ ಕೂತುಕೂತು ಸಾಕಾಯಿತು.
ಒಬ್ಬನೇ ಮನೆಗೆ ಹೋಗಲು ಬಯಸಿದ. ಎದ್ದು ಹೊರಟ. ಆದರೆ ತಪ್ಪು ತಿರುಗಿದ, ಹೋದ,
ಹೋದ. ಅವನಿಗೇ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದ ಅಂತ. ಕೂಡಲೇ ಅವನಿಗೆ ಕೇಳಿಸಿತು -
ಹತ್ತಿರದಲ್ಲೇ ಕಾಡಿನ ಮರ್ಮರ ಶಬ್ದ . ಅಯ್ಯೋ , ಹಾಗಾದರೆ ಇಡೀ ರಾತ್ರಿ ಕಾಡಿನಲ್ಲೇ ಕಳೆಯ
ಬೇಕು ! ಅವನಿಗೆ ಕಾಡು ಪ್ರಾಣಿಗಳ ಭಯವಾಯಿತು. ಹತ್ತಿರದಲ್ಲೇ ಇದ್ದ ಓಕ್ ಮರ ಹತ್ತಿ
ಕುಳಿತ .
ಸುಮಾರು ಮಧ್ಯರಾತ್ರಿಯಾಗಿರಬೇಕು ಆಗ ಆ ಸ್ಥಳಕ್ಕೆ , ಅದೇ ಮರದ ಕೆಳಕ್ಕೆ , ಕೆಲವು
ದುಷ್ಟ ಶಕ್ತಿಗಳು - ಪಿಶಾಚಿಗಳು - ತಮ್ಮ ನಾಯಕನೊಂದಿಗೆ ಬಂದವು. ನಾಯಕ- ಪಿಶಾಚಿ ಉಳಿ
ದವುಗಳನ್ನು ಅವು ಏನೇನು ಅನಿಷ್ಟ ಕೆಲಸಗಳನ್ನು ಮಾಡಿದವು ಎಂದು ವಿಚಾರಿಸ ತೊಡಗಿತು .
ಒಂದು ಪಿಶಾಚಿ ಹೇಳಿತು :
“ ನಾನು ಏನು ಮಾಡಿದೆ ಅಂದರೆ - ಒಬ್ಬ ಅಣ್ಣ ಅವನ ತಮ್ಮನಿಂದ ಎರಡು ಅಳತೆ ಹಿಟ್ಟಿಗೆ
ಬದಲು ಜೀವಂತ ಕಣ್ಣುಗಳನ್ನೇ ಕಿತ್ತುಕೊಳ್ಳೋ ಹಾಗೆ ಮಾಡಿದೆ.”
ನಾಯಕ- ಪಿಶಾಚಿ ಹೇಳಿತು : “ ಚೆನ್ನಾದ ಕೆಲಸ ಮಾಡಿದೆ. ಆದರೂ ಅದೇನೂ ಪೂರ್ತಿ
ಚೆನ್ನಾಗಲಿಲ್ಲ !”
“ ಅದು ಹೇಗೆ ? ”
“ಕಣ್ಣು ಕಳೆದುಕೊಂಡ ಆ ಕುರುಡ ತನ್ನ ಕಣ್ಣುಗಳಿಗೆ ಈ ಮರದ ಕೆಳಗೆ ಹುಲ್ಲಿನ ಮೇಲೆ
ಹರಡಿರುವ ಇಬ್ಬನಿಯನ್ನು ಹಚ್ಚಿಕೊಂಡರೆ ಅವನಿಗೆ ಮತ್ತೆ ದೃಷ್ಟಿ ಬಂದು ಬಿಡುತ್ತೆ ! ”
“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ”
“ಸರಿ , ನೀನು ಏನು ಮಾಡಿದೆ ? ” ಎಂದು ನಾಯಕ- ಪಿಶಾಚಿ ಇನ್ನೊಂದು ಪಿಶಾಚಿಯನ್ನು
ಕೇಳಿತು .
“ ನಾನು ಒಂದು ಹಳ್ಳಿಯಲ್ಲಿದ್ದ ನೀರನ್ನೆಲ್ಲ ಒಣಗಿಸಿ ಬಿಟ್ಟೆ . ಅಲ್ಲಿ ಒಂದು ಹನಿ ನೀರನ್ನೂ
ಬಿಡಲಿಲ್ಲ. ಅಲ್ಲಿನ ಜನ ಈಗ ನೀರನ್ನು ಮೂವತ್ತು - ನಾಲ್ವತ್ತು ವೆರ್ಸ್ಟ್ ದೂರದಿಂದ ತರಬೇಕು.
ಅನೇಕರು ಬಾಯಾರಿಕೆಯಿಂದ ಸಾಯ್ತಿದಾರೆ .”
“ ಚೆನ್ನಾದ ಕೆಲಸಮಾಡಿದೆ. ಆದರೂ ಅದೇನೂ ಪೂರ್ತಿ ಚೆನ್ನಾಗಲಿಲ್ಲ ! ”
“ ಅದು ಹೇಗೆ? ”
“ ಹಳ್ಳಿಯ ಹತ್ತಿರದಲ್ಲೇ ಇರೋ ನಗರದಲ್ಲಿ ಒಂದು ಬಂಡೆ ಇದೆ. ಅದನ್ನು ಯಾರಾ
ದರೂ ಪಕ್ಕಕ್ಕೆ ಸರಿಸಿದರೆ, ಅದರ ಕೆಳಗಿನಿಂದ ನೀರು ಚಿಮ್ಮಿ ಬರುತ್ತೆ , ಸುತ್ತಮುತ್ತ ಎಲ್ಲ ಹರಡಿ
ಕೊಳ್ಳುತ್ತೆ !”
“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ”
“ ಸರಿ, ನೀನು ಏನು ಮಾಡಿದೆ ? ” ಎಂದು ನಾಯಕ- ಪಿಶಾಚಿ ಮೂರನೆಯದನ್ನು
ಕೇಳಿತು .
“ ಒಂದಾನೊಂದು ರಾಜ್ಯದಲ್ಲಿ ರಾಜನಿಗೆ ಒಬ್ಬಳೇ ಒಬ್ಬ ಮಗಳಿದ್ದಾಳೆ. ನಾನು ಅವಳನ್ನು
ಕುರುಡಳನ್ನಾಗಿ ಮಾಡಿಬಿಟ್ಟೆ . ಯಾವ ಔಷಧಿಯ ಅವಳನ್ನು ಗುಣಪಡಿಸೋಕೆ ಆಗೋಲ್ಲ. ”
“ ಚೆನ್ನಾದ ಕೆಲಸ ಮಾಡಿದೆ. ಆದರೂ ಅದೇನೂ ಪೂರ್ತಿ ಚೆನ್ನಾಗಲಿಲ್ಲ ! ”
“ ಅದು ಹೇಗೆ? ”
“ ಈ ಮರದ ಕೆಳಗಿರೋ ಇಬ್ಬನಿಯನ್ನು ಅವಳ ಕಣ್ಣಿಗೆ ಹಚ್ಚಿದರೆ ಅವಳಿಗೆ ದೃಷ್ಟಿ ಮತ್ತೆ
ಬಂದು ಬಿಡುತ್ತೆ ! ”
“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ”
ಮನುಷ್ಯ ಮರದ ಮೇಲೆ ಕುಳಿತು ಇವೆಲ್ಲವನ್ನೂ ಕೇಳಿಸಿಕೊಂಡ. ಆ ಪಿಶಾಚಿಗಳು ಹೊರಟು
ಹೋದಮೇಲೆ ಅವನು ಆ ಮರದ ಕೆಳಗಿದ್ದ ಇಬ್ಬನಿಯಿಂದ ತನ್ನ ಕಣ್ಣುಗಳನ್ನು ಉಜ್ಜಿಕೊಂಡ -
ತಕ್ಷಣವೇ ಅವನಿಗೆ ದೃಷ್ಟಿ ಬಂದಿತು . ಆಗ ಅವನು ತನ್ನಲ್ಲೇ ಹೇಳಿಕೊಂಡ: “ ಈಗ ಹೋಗಿ ಜನರಿಗೆ
ಸಹಾಯ ಮಾಡ್ತೀನಿ. ” ಆ ಮರದ ಕೆಳಗಿದ್ದ ಒಂದಿಷ್ಟು ಇಬ್ಬನಿಯನ್ನು ತೊಗಟೆಯಲ್ಲಿ ಸಂಗ್ರ
ಹಿಸಿಕೊಂಡು ಅವನು ಹೊರಟ .
ಅವನು ಯಾವ ಹಳ್ಳಿಯಲ್ಲಿ ನೀರೆಲ್ಲ ಇಂಗಿ ಹೋಗಿತ್ತೋ ಆ ಹಳ್ಳಿಗೆ ಬಂದ. ನೋಡ್ತಾನೆ -
ಅಲ್ಲೊಬ್ಬ ಮುದುಕಿ ಹೋಗಿದಾಳೆ. ಅವಳು ಒಂದು ಅಡ್ಡೆಯಲ್ಲಿ ಒಂದು ಬಕೆಟ್ ಇಟ್ಟುಕೊಂಡು
ನೀರು ಹೊತ್ತುಕೊಂಡು ಹೋಗ್ತಿದಾಳೆ. ಅವನು ಅವಳ ಬಳಿಗೆ ಹೋಗಿಕೇಳಿದ:
“ ಅಜ್ಜಿ , ನನಗೆ ಬಾಯಾರಿಕೆ, ಸ್ವಲ್ಪ ನೀರು ಕೊಡ್ತೀಯ ಕುಡಿಯೋಕೆ! ”
“ ಅಯ್ಯೋ , ಮಗು, ಏನು ಹೇಳೀಯ ? ನಾನು ಈ ನೀರನ್ನು ಮೂವತ್ತು ವೆರ್ಸ್ಟ್ ದೂರದಿಂದ
ಹೊತ್ತು ತರುತ್ತಿದೀನಿ. ಇದರಲ್ಲೂ ಅರ್ಧ ಎಲ್ಲ ಆಗಲೇ ತುಳುಕಿ ಚೆಲ್ಲಿ ಹೋಗಿದೆ. ನನ್ನ
ಕುಟುಂಬವೋ ದೊಡ್ಡದು. ನೀರಿಲ್ಲದೆ ಸಾಯ್ತಾರೆ! ”
“ ನಾನು ನಿಮ್ಮ ಹಳ್ಳಿಗೇ ಬರುತ್ತಿದೀನಿ, ಅಜ್ಜಿ , ಎಲ್ಲರಿಗೂ ನೀರು ಸಿಗೋ ಹಾಗೆ ಮಾಡ್ತೀನಿ.”
ಅವಳು ಅವನಿಗೆ ಕುಡಿಯಲು ಸ್ವಲ್ಪ ನೀರು ಕೊಟ್ಟಳು. ಅವಳಿಗೆ ಎಷ್ಟು ಆನಂದವಾಯಿತು
ಅಂದರೆ ತಕ್ಷಣವೇ ಹಳ್ಳಿಗೆ ಓಡಿ ಹೋಗಿ ಎಲ್ಲರಿಗೂ ಈ ವ್ಯಕ್ತಿಯ ವಿಷಯ ಹೇಳಿದಳು . ಕೆಲವರು
ನಂಬಿದರು , ಕೆಲವರು ನಂಬಲಿಲ್ಲ. ಆದರೂ ಎಲ್ಲರೂ ಅವನನ್ನು ಸಂಧಿಸಲು ಓಡೋಡಿ ಬಂದರು.
ಅವನಿಗೆ ಬಾಗಿ ನಮಸ್ಕರಿಸಿದರು : “ಸತ್ಪುರುಷನೇ , ನಮ್ಮನ್ನು ಈ ಕೂರ ಸಾವಿನಿಂದ
ರಕ್ಷಿಸು ! ”
“ ಆಗಲಿ ” ಅವನೆದ, “ ಆದರೆ ನೀವು ನನಗೆ ಸಹಾಯ ಮಾಡಬೇಕು. ನನ್ನನ್ನು ನಿಮ್ಮ
ಹಳ್ಳಿಗೆ ಸಮೀಪವಿರುವ ನಗರಕ್ಕೆ ಕರೆದುಕೊಂಡು ಹೋಗಿ.”
ಅವರು ಅವನನ್ನು ಅಲ್ಲಿಗೆ ಕರೆದೊಯ್ದರು. ಅವನು ಅಲ್ಲಿ ಹುಡುಕ ತೊಡಗಿದ – ಆ ಬಂಡೆ
ಯನ್ನು ಕಂಡುಹಿಡಿದ. ಎಲ್ಲರೂ ಸೇರಿ ಅದನ್ನು ಪಕ್ಕಕ್ಕೆ ಸರಿಸಿದರು. ಅದರ ಕೆಳಗಿನಿಂದ ನೀರು
ಚಿಮ್ಮಿ ಹೊರಬಂತು . ಹ್ಯಾಗೆ ಹರಿದುಕೊಂಡು ಬಂತು – ಎಲ್ಲ ಬಾವಿಗಳೂ ಎಲ್ಲ ಕೊಳಗಳೂ
ಎಲ್ಲ ಹೊಂಡಗಳೂ ನೀರಿನಿಂದ ತುಂಬಿಕೊಂಡವು ! ಜನರಿಗೆ ಭಾರಿ ಸಂತೋಷವಾಯಿತು. ಆ ವ್ಯಕ್ತಿಗೆ
ತಮ್ಮ ಕೃತಜ್ಞತೆ ಸಲ್ಲಿಸಿದರು. ಅವನಿಗೆ ಬೇಕಾದಷ್ಟು ಹಣ ಮತ್ತಿತರ ವಸ್ತುಗಳನ್ನು ಕೊಟ್ಟರು.
ಅವನು ಕುದುರೆ ಏರಿ ಮುಂದೆ ಹೊರಟ . ದಾರಿಯಲ್ಲಿ ಎಲ್ಲರನ್ನೂ , ರಾಜಕುಮಾರಿ ಹಾಸಿಗೆ ಹಿಡಿದು
ಮಲಗಿರುವ ರಾಜ್ಯ ಎಲ್ಲಿದೆ, ಎಂದು ವಿಚಾರಿಸುತ್ತ ಹೋದ. ದೀರ್ಘ ಕಾಲವೋ ಸ್ವಲ್ಪ ಕಾಲವೋ
ಪ್ರಯಾಣ ಮಾಡಿಕೊಂಡು ಅವನು ಅಂತೂ ಆ ರಾಜ್ಯ ತಲುಪಿದ . ರಾಜನ ಅರಮನೆಗೆ ಹೋಗಿ
ಅಲ್ಲಿದ್ದ ಭಟರನ್ನು ಕೇಳಿದ : “ನಿಮ್ಮ ರಾಜನ ಮಗಳಿಗೆ ಮೈ ಚೆನ್ನಾಗಿಲ್ಲ ಅಂತ ಕೇಳಿದೆ. ನಾನು
ಅವಳನ್ನು ಗುಣಪಡಿಸಬಲ್ಲೆ ! ”
“ ಅಯ್ಯೋ , ನಿನಗೆಲ್ಲಿ ಆಗುತ್ತೆ ! ಮಹಾಮಹಾ ಪಂಡಿತರಿಗೇ ಅವಳನ್ನು ಗುಣಪಡಿಸಲು
ಆಗಲಿಲ್ಲ. ನಿನ್ನ ಕೈಲೂ ಏನೂ ಮಾಡೋಕೆ ಆಗೋಲ್ಲ.”
“ ಆದರೂ ರಾಜನಿಗೆ ವಿಷಯ ತಿಳಿಸಿ ! ”
ಅವರಿಗೆ ಇಷ್ಟವಿರಲಿಲ್ಲ . ಆದರೂ ಅವನು ಹಟ ಹಿಡಿದ: “ನೀವು ಹೋಗಿ ತಿಳಿಸಿ ಬಿಡಿ.
ಅಷ್ಟೇ ಸಾಕು ! ”
ಅವರು ಹೋಗಿ ತಿಳಿಸಿದರು . ರಾಜ ಅವನನ್ನು ಅರಮನೆಯ ಒಳಗೆ ಬರುವಂತೆ
ಹೇಳಿದ.
“ನೀನು ನನ್ನ ಮಗಳನ್ನು ಗುಣಪಡಿಸಬಲ್ಲೆಯಾ ? ” ರಾಜ ಕೇಳಿದ.
“ ಬಲ್ಲೆ ” ಉತ್ತರಿಸಿದ.
“ಸರಿ , ಪ್ರಯತ್ನ ಮಾಡು. ನಿನಗೆ ಏನು ಬೇಕೋ ಎಲ್ಲ ಕೊಡುತ್ತೇನೆ. ”
ಅವನು ರಾಜಕುಮಾರಿ ಮಲಗಿದ್ದ ಕೋಣೆಗೆ ಹೋದ. ತಾನು ತಂದಿದ್ದ ಇಬ್ಬನಿಯನ್ನು
ಅವಳ ಕಣ್ಣಿಗೆ ತಿಕ್ಕಿದ. ತಕ್ಷಣವೇ ಅವಳಿಗೆ ದೃಷ್ಟಿ ಬಂದಿತು . ರಾಜನಿಗೆ ಎಷ್ಟು ಮಹದಾನಂದವಾ
ಯಿತು, ಹೇಳಿ ತಿಳಿಸುವುದು ಸಾಧ್ಯವಿಲ್ಲ ! ರಾಜ ಅವನಿಗೆ ಎಷ್ಟು ಸಂಪತ್ತನ್ನು ಬಳುವಳಿಯಾಗಿ
ನೀಡಿದನೆಂದರೆ, ಅವನು ಅವುಗಳನ್ನು ಅನೇಕ ಬಂಡಿಗಳಲ್ಲಿ ತುಂಬಿಕೊಂಡು ಸಾಗಿಸಬೇಕಾಯಿತು.
ಈಮಧ್ಯೆ ಅವನ ಹೆಂಡತಿ ತುಂಬ ದುಃಖಿಸಿದಳು , ಗೋಳಾಡಿದಳು . ಗಂಡ ಎಲ್ಲಿ ಅನ್ನು
ವುದೇ ಅವಳಿಗೆ ತಿಳಿಯದು. ಅವನು ಆಗಲೇ ಈ ಪ್ರಪಂಚದಲ್ಲಿ ಇಲ್ಲ ಎಂದೇ ಭಾವಿಸಿಕೊಂಡಿದ್ದಳು .
ಆಗ ಇದ್ದಕ್ಕಿದ್ದಂತೆ ಅವನು ಬರುತ್ತಾನೆ. ಕಿಟಕಿಯ ಬಳಿ ನಿಂತು ಕೂಗುತ್ತಾನೆ: “ ಹೆಂಡತಿ , ಬಾಗಿಲು
ತೆರೆ ! ”
ಅವನ ಧ್ವನಿಯಿಂದ ತನ್ನ ಪತಿ ಬಂದನೆಂದು ಅವಳು ತಿಳಿದಳು . ತುಂಬ ಸಂತೋಷಪಟ್ಟಳು.
ಓಡಿ ಹೋಗಿ ಬಾಗಿಲು ತೆರೆದಳು . ಅವನನ್ನು ಒಳಕ್ಕೆ ಕರೆದೊಯ್ದಳು. ಅವನಿನ್ನೂ ಕುರುಡ
ಎಂದೇ ಅವಳ ಭಾವನೆ.
“ ದೀಪ ಹಚ್ಚು ! ” ಅವನು ಹೇಳಿದ .
ಅವಳು ದೀಪ ಹಚ್ಚಿದಳು . ಅವನನ್ನು ನೋಡಿದ್ದೇ ಕೈ ಚಪ್ಪಾಳೆ ತಟ್ಟಿದಳು - ದೃಷ್ಟಿ ಬಂದಿದೆ !
“ಓಮ್, ದೇವರೇ ! ಎಷ್ಟು ಚೆನ್ನಾಗಿ ಆಗಿಬಿಟ್ಟಿದೀಯ ! ಹೇಗಾಯಿತು ಇದೆಲ್ಲ ? ಹೇಳು ! ”
“ ತಾಳು , ಹೆಂಡತಿ, ಮೊದಲು ನಾನು ತಂದಿರುವ ಸಂಪತ್ತನ್ನೆಲ್ಲ ಒಳಕ್ಕೆ ತರೋಣ.”
ಎಷ್ಟೊಂದು ಸಂಪತ್ತನ್ನು ಒಳ ತಂದರು . ಇದರ ಮುಂದೆ ಅವನ ಧನಿಕಸೋದರನ ಸಂಪತ್ತು
ತೃಣ ಸಮಾನ !
ಅವರು ಶ್ರೀಮಂತರಾಗಿ ಜೀವನ ನಡೆಸ ತೊಡಗಿದರು . ಧನಿಕ ಸೋದರನಿಗೆ ಈ ವಿಷಯ
ತಿಳಿಯಿತು. ಅವನು ಓಡೋಡಿ ಬಂದ : “ ಇದು ಹೇಗೆ ಹೀಗೆ, ತಮ್ಮ ? ನೀನು ಹೇಗೆ ಮತ್ತೆ
ದೃಷ್ಟಿ ಪಡೆದೆ, ಹೇಗೆ ಇಷ್ಟು ಶ್ರೀಮಂತನಾದೆ ? ”
ಅವನು ಎಲ್ಲವನ್ನೂ ರಹಸ್ಯವಾಗಿಡದೆ ವಿವರಿಸಿ ತಿಳಿಸಿದ.
ಈಗ ಆ ಧನಿಕ ಅಣ್ಣನಿಗೆ ತಾನೂ ಇನ್ನಷ್ಟು ಸಂಪತ್ತು ಪಡೆಯಬೇಕೆಂದು ಆಸೆಯಾಯಿತು.
ರಾತ್ರಿಯಾದಾಗ ಯಾರಿಗೂ ಕಾಣದಂತೆ ಅದೇ ಕಾಡಿಗೆ ಹೋಗಿ ಅದೇ ಮರದ ಮೇಲೆ ಹತ್ತಿ
ಕುಳಿತ. ಮಧ್ಯ ರಾತ್ರಿ ಪಿಶಾಚಿಗಳು ತಮ್ಮ ನಾಯಕ- ಪಿಶಾಚಿಯೊಂದಿಗೆ ಬಂದವು. ಅವು
ತಮ್ಮಲ್ಲೇ ಮಾತನಾಡಿಕೊಂಡವು:
“ ಏನಿದು ? ಯಾರೂ ಕೇಳಿಸಿಕೊಂಡಿಲ್ಲ, ಯಾರಿಗೂ ತಿಳಿದಿಲ್ಲ. ಆದರೂ ಆಗಲೇ ಕುರುಡ
ಸೋದರನಿಗೆ ದೃಷ್ಟಿ ಬಂತು . ಬಂಡೆಯ ಕೆಳಗಿನಿಂದ ನೀರು ಹರಿದು ಬರುತ್ತಿದೆ, ರಾಜಕುಮಾರಿ
ಮತ್ತೆ ಆರೋಗ್ಯವಂತಳಾಗಿದ್ದಾಳೆ ! ಯಾರೋ ನಮ್ಮ ಮಾತನ್ನು ಕದ್ದು ಕೇಳುತ್ತಿರಬಹುದೆ ?
ಹುಡುಕಿ ನೋಡೋಣ! ”
ಅವು ಹುಡುಕ ತೊಡಗಿದವು. ಮರ ಹತ್ತಿದವು. ಅಲ್ಲಿ ಕುಳಿತಿದಾನೆ ಧನಿಕ ಸೋದರ ! ಅವು
ಅವನನ್ನು ಹಿಡಿದು ತುಂಡುತುಂಡು ಮಾಡಿದವು.
Related