ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬಳು ಮುದುಕಿ ವಾಸಿಸುತ್ತಿದ್ದರು . ಅವರು
ತುಂಬ ಬಡವರಾಗಿದ್ದರು . ಒಂದು ದಿನ ಮುದುಕಿ ಮುದುಕನಿಗೆ ಹೇಳಿದಳು :
“ ಮುದುಕ , ಕಾಡಿಗೆ ಹೋಗಿಒಂದು ಲಿಂಡನ್ ಮರ ಕಡಿದುಕೊಂಡು ಬಾ . ಅದನ್ನು ಉರಿಸಿ
ನಮ್ಮ ಮನೆಯನ್ನು ಸ್ವಲ್ಪ ಬೆಚ್ಚಗಾದರೂ ಇರಿಸಬಹುದು.”
“ ಆಗಲಿ ” ಮುದುಕ ಹೇಳಿದ, ಕೊಡಲಿ ತೆಗೆದುಕೊಂಡು ಕಾಡಿಗೆ ಹೋದ.
ಕಾಡಿಗೆ ಬಂದವನೇ ಒಂದು ಒಳ್ಳೆಯ ಲಿಂಡನ್ ಮರವನ್ನು ಆಯ್ಕೆ ಮಾಡಿದ. ಅದನ್ನು
ಕಡಿದು ಕೆಡವಲೆಂದು ಕೊಡಲಿಯನ್ನು ಮೇಲಕ್ಕೆತ್ತಿದ. ಕೂಡಲೇ ಅವನಿಗೆ ಕೇಳಿಸಿತು - ಲಿಂಡನ್
ಮರ ಮನುಷ್ಯರ ಧ್ವನಿಯಲ್ಲಿ ಮಾತನಾಡುತ್ತಿದೆ:
- “ಓಮ್, ದಯವಿಟ್ಟು ನನ್ನನ್ನು ಕೆಡವಬೇಡ, ಮುದುಕಪ್ಪ, ನಿನಗೆ ಕಷ್ಟ ಬಂದಾಗ ನಾನು
ಸಹಾಯ ಮಾಡ್ತೀನಿ! ”
ಮುದುಕ ಹೆದರಿ ಕೊಡಲಿಯನ್ನು ಕೆಳಗೆ ಬೀಳಿಸಿದ. ಸ್ವಲ್ಪ ಹೊತ್ತು ಹಾಗೇ ನಿಂತ, ಯೋಚನೆ
ಮಾಡಿದ. ಆಮೇಲೆ ಮನೆಗೆ ಹಿಂದಿರುಗಿದ.
ಮನೆಗೆ ಹಿಂದಿರುಗಿದವನೇ ತನಗಾದುದನ್ನೆಲ್ಲ ಮುದುಕಿಗೆ ತಿಳಿಸಿದ . ಮುದುಕಿ ಹೇಳಿದಳು :
“ನೀನು ಎಂಥ ಮೂರ್ಖ! ಈಗಿಂದೀಗಲೇ ಲಿಂಡನ್ ಮರದ ಬಳಿಗೆ ಹೋಗಿ ನಮಗೆ ಒಂದು
ಕುದುರೆ, ಒಂದು ಗಾಡಿಕೊಡು ಅಂತ ಕೇಳು. ನಾವು ಇಷ್ಟು ದಿನದವರೆಗೂ ನಡೆದದ್ದು ಸಾಲದೆ ? ”
“ ಆಗಲಿ , ನಿನಗೆ ಅದು ಇಷ್ಟವಾದರೆ ಹಾಗೇ ಮಾಡ್ತೀನಿ” ಎಂದು ಮುದುಕ ಹೇಳಿದ , ಟೋಪಿ
ಹಾಕಿಕೊಂಡು ಕಾಡಿಗೆ ಹೊರಟ.
* ಲಿಂಡನ್ ಮರದ ಬಳಿ ಬಂದು ಹೇಳಿದ :
“ ಲಿಂಡನ್ ಮರ, ಲಿಂಡನ್ ಮರ ! ನನ್ನ ಮುದುಕಿ ಹೇಳ್ತಾಳೆ ನೀನು ನಮಗೆ ಒಂದು ಕುದುರೆ,
ಒಂದು ಗಾಡಿ ಕೊಡು ಅಂತ. ”
“ ಆಗಲಿ ” ಎಂದಿತು ಲಿಂಡನ್ ಮರ, “ ಮನೆಗೆ ಹೋಗು. ”
ಮುದುಕ ಮನೆಗೆ ಹಿಂದಿರುಗಿದ. ನೋಡ್ತಾನೆ - ಮನೆಯ ಮುಂದೆ ಒಂದು ಕುದುರೆ, ಒಂದು
ಗಾಡಿ ನಿಂತಿವೆ.
“ನೋಡು, ಮುದುಕ ” ಎಂದಳು ಮುದುಕಿ. “ ಇದೀಗ ನಾವೂ ಜನ ಅಂತ ಆದಿವಿ . ಆದರೆ
ನಮ್ಮ ಮನೆ ಎಲ್ಲಿ ಮುರುಕಲು , ಹೋಗುಕಾಡಿಗೆ ಹೋಗಿ ಲಿಂಡನ್ ಮರವನ್ನು ಕೇಳು, ನಮಗೆ
ಒಂದು ಹೊಸ ಮನೆ ಕೊಡು, ಅಂತ, ಅದು ಕೊಟ್ಟರೂ ಕೊಡಬಹುದು. ”
ಮುದುಕ ಲಿಂಡನ್ ಮರದ ಬಳಿಗೆ ಹೋಗಿಹೊಸ ಮನೆ ಬೇಕು ಅಂತ ಕೇಳಿದ .
“ ಆಗಲಿ , ಮನೆಗೆ ಹೋಗು” ಅಂದಿತು ಲಿಂಡನ್ ಮರ.
ಮುದುಕ ಮನೆಗೆ ಹಿಂದಿರುಗಿದ. ಅವನಿಗೆ ಗುರುತೇ ಸಿಗಲಿಲ್ಲ. ಹಳೆಯ ಮನೆಯ ಸ್ಥಳದಲ್ಲಿ
ಒಂದು ಹೊಸತಾದ ಸುಂದರವಾದ ಮನೆ ನಿಂತಿದೆ. ಇಬ್ಬರೂ ಮಕ್ಕಳಷ್ಟು ಸಂತೋಷಪಟ್ಟರು.
“ ಏನು, ಮುದುಕ , ನೀನು ಮತ್ತೆ ಆ ಮರದ ಬಳಿಗೆ ಹೋಗಿ ಒಂದಿಷ್ಟು ದನಕರು,ಕೋಳಿ
ಕೊಡು ಅಂತ ಕೇಳಿದರೆ ಹೇಗೆ? ಅದು ಕೊಟ್ಟರೆ ಸಾಕು . ಆಮೇಲೆ ನಮಗೆ ಹೆಚ್ಚಿಗೆ ಏನೂ ಬೇಕಾ
ಗೊಲ್ಲ” ಎಂದಳು ಮುದುಕಿ.
ಮುದುಕ ಲಿಂಡನ್ ಮರದ ಬಳಿಗೆ ಹೋಗಿ, ದನಕರು ಬೇಕು ಅಂತ ಕೇಳಿದ.
“ ಆಗಲಿ, ಮನೆಗೆ ಹೋಗು” ಎಂದಿತು ಲಿಂಡನ್ ಮರ.
ಮುದುಕ ಹಿಂದಿರುಗಿದ. ಅವನಿಗೆ ಅಮಿತಾನಂದವಾಯಿತು - ಅಂಗಳದಲ್ಲೆಲ್ಲ ದನಕರು
ಗಳು , ಕೋಳಿಗಳು ನಿಂತಿವೆ.
“ ಸರಿ. ಇನ್ನು ನಮಗೆ ಹೆಚ್ಚಿಗೆ ಏನೂ ಬೇಡ” ಎಂದ ಮುದುಕ .
“ ಇಲ್ಲ, ಮುದುಕ. ಮತ್ತೆ ಹೋಗಿ, ಸ್ವಲ್ಪ ಹಣ ಬೇಕು ಅಂತ ಕೇಳು.”
ಮುದುಕ ಲಿಂಡನ್ ಮರದ ಬಳಿಗೆ ಹೋಗಿ ಹಣ ಬೇಕು ಅಂತ ಕೇಳಿದ.
“ ಆಗಲಿ , ಮನೆಗೆ ಹೋಗು” ಎಂದಿತು ಅದು.
ಮುದುಕ ಮನೆಗೆ ಹಿಂದಿರುಗಿದ. ನೋಡ್ತಾನೆ - ಮುದುಕಿ ಹಣ ಎಣಿಸ್ತಿದಾಳೆ, ಚೀಲಗಳಲ್ಲಿ
ತುಂಬಿ ಮೇಜಿನ ಮೇಲೆ ಪೇರಿಸ್ತಿದಾಳೆ !
“ ಈಗನೋಡಿದೆಯಾ, ಮುದುಕ, ನಾವೆಷ್ಟು ಶ್ರೀಮಂತರು ! ” ಎಂದಳು ಮುದುಕಿ, “ ಆದರೆ
ಇದೂ ಸ್ವಲ್ಪವೇ . ನಮಗೆ ಇನ್ನೂ ಬೇಕು. ಎಲ್ಲ ಜನರೂ ನಮ್ಮನ್ನು ಕಂಡರೆ ಭಯಪಡೋ ಹಾಗೆ
ಆಗಬೇಕು. ಆಗಷ್ಟೆ ನಾವು ನಿಜಕ್ಕೂ ಶ್ರೀಮಂತರಾಗೀವಿ! ಹೋಗು, ಮುದುಕ,
ಲಿಂಡನ್ ಮರದ ಬಳಿಗೆ ಹೋಗಿ, ನಮ್ಮನ್ನು ಕಂಡರೆ ಎಲ್ಲರೂ ಭಯಪಡೋ ಹಾಗೆ ಏನಾ
ದರೂ ಮಾಡು, ಅಂತ ಕೇಳು. ”
ಮುದುಕ ಲಿಂಡನ್ ಮರದ ಬಳಿಗೆ ಹೋದ. ಹಾಗೆ ಮಾಡುವಂತೆ ಲಿಂಡನ್ ಮರವನ್ನು
ಕೇಳಿಕೊಂಡ.
“ ಹಾಗೇ ಆಗಲಿ, ಮನೆಗೆ ಹೋಗು” ಎಂದಿತು ಲಿಂಡನ್ ಮರ.
ಮುದುಕ ಮನೆಗೆ ಹಿಂದಿರುಗಿದ.ನೋಡ್ತಾನೆ - ಮನೆಯ ಸುತ್ತ ತುಂಬ ಮಂದಿ ಭಟರಿದ್ದಾರೆ ,
ಎಲ್ಲರೂ ಮನೆಯನ್ನು ಕಾಯುತ್ತಿದ್ದಾರೆ. ಆದರೆ ಮುದುಕಿಗೆ ಇನ್ನೂ ಸಾಲದು.
“ ಏನು , ಮುದುಕ ” ಎಂದವಳು ಹೇಳಿದಳು . “ ಈಗ ಏನು ಆಗಬೇಕೂಂದರೆ, ಹಳ್ಳಿಯ ಸಮ
ಸ್ವರೂ ನಮಗಾಗಿ ದುಡಿಯುವಂತೆ ಮಾಡಬೇಕು. ಅದು ಬಿಟ್ಟರೆ ನಮಗೆ ಬೇಕಾದುದು ಬೇರೇನೂ
ಇಲ್ಲ . ಈಗ ನಮ್ಮ ಬಳಿ ಎಲ್ಲ ಇದೆ.”
ಮುದುಕ ಲಿಂಡನ್ ಮರದ ಬಳಿಗೆ ಹೋಗಿತನ್ನ ಹೆಂಡತಿ ಹೇಳಿದಂತೆ ಮಾಡುವ ಹಾಗೆ ಕೇಳಿ
ಕೊಂಡ, ಲಿಂಡನ್ ಮರ ತುಂಬ ಹೊತ್ತು ಮೌನದಿಂದಿತ್ತು . ಆಮೇಲೆ ಹೇಳಿತು : “ ಸರಿ, ಮನೆಗೆ
ಹೋಗು. ಇದೇ ಕೊನೆಯ ಬಾರಿಗೆ ನಾನು ನಿಮ್ಮ ಅಪೇಕ್ಷೆಯನ್ನು ಪೂರೈಸುವುದು . ”
ಮುದುಕ ಮನೆಗೆ ಹಿಂದಿರುಗುತ್ತಾನೆ. ನೋಡುತ್ತಾನೆ - ಅಲ್ಲಿ ಏನೂ ಇಲ್ಲ. ಅದೇ ಹಳೆಯ
ಮನೆಯಷ್ಟೆ ಇದೆ. ಅದರಲ್ಲಿ ಅವನ ಮುದುಕಿ ಹೆಂಡತಿ ಕುಳಿತಿದ್ದಾಳೆ. ಎಲ್ಲ ಜನರೂ ತಮಗೆ
ಸೇವೆ ಸಲ್ಲಿಸಬೇಕು ಅಂತ ಬಯಸಿದ ಆ ದುರಾಶೆಯ ಮುದುಕಿಗೆ ಲಿಂಡನ್ ಮರ ಹೀಗೆ ಶಿಕ್ಷೆ
ನೀಡಿತ್ತು .
Related