ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ, ಒಬ್ಬ ಮುದುಕಿ ವಾಸವಾಗಿದ್ದರು. ಅವರಿ 
ಗೊಬ್ಬ ಮಗಳಿದ್ದಳು. ಮುದುಕಿ ತುಂಬ ಕಾಲ ಜೀವಿಸಿದಳೊ ಅಲ್ಪ ಕಾಲ ಜೀವಿಸಿದ್ದಳೋ 
ತಿಳಿಯದು, ಅಂತೂ ಅವಳ ಸಾವಿನ ಸಮಯ ಸಮಿಾಪಿಸಿತು . ಸಾಯುವ ಮುನ್ನ ಅವಳು ಮುದುಕ 
ನಿಗೆ ಹೇಳಿದಳು : 

" ಮುದುಕ, ನೀನು ಮತ್ತೆ ಮದುವೆಯಾಗಬೇಕೂಂತ ಅಂದುಕೊಂಡರೆ , ನೋಡು, ಪಕ್ಕದ 
ಮನೆಯಲ್ಲಿ ಮಗಳ ಜೊತೆ ವಾಸ ಮಾಡ್ತಿದಾಳಲ್ಲ ಆ ವಿಧವೆಯನ್ನೆಂದೂ ಮದುವೆಯಾಗಬೇಡ. 
ಅವಳು ನಿನಗೇನೋ ಒಳ್ಳೆಯ ಹೆಂಡತಿಯಾಗಬಹುದು, ಆದರೆ ನಮ್ಮ ಮಗಳಿಗೆ ಒಳ್ಳೆಯ ತಾಯಿ 
ಯಾಗೋಲ್ಲ! ” 

“ ಆಗಲಿ , ನಾನು ಅವಳನ್ನೂ ಮದುವೆಯಾಗೊಲ್ಲ, ಯಾರನ್ನೂ ಮದುವೆಯಾಗೊಲ್ಲ” 
ಎಂದ ಮುದುಕ. 

ಮುದುಕಿ ಸತ್ತಳು . ಮುದುಕ ಅವಳ ಶವಸಂಸ್ಕಾರ ನಡೆಸಿದ . ಒಬ್ಬನೇ ಮಗಳೊಂದಿಗೆ ವಾಸ 
ಮಾಡ ತೊಡಗಿದ. ಸ್ವಲ್ಪ ಕಾಲ ಕಳೆಯಿತು . ಒಂದು ದಿನ ಯಾವುದೋ ಕೆಲಸದ ಮೇಲೆ, ಮುದುಕಿ 
ಹೇಳಿದಳಲ್ಲ ಆ ವಿಧವೆಯ ಮನೆಗೆ ಹೋದ. ತಾನು ಯಾರನ್ನೂ ಮದುವೆಯಾಗುವುದಿಲ್ಲ ಅಂತ 
ಮುದುಕಿಗೆ ಹೇಳಿದ್ದ ಮಾತನ್ನು ಮರೆತ . ವಿಧವೆಯ ಮನೆಯಲ್ಲಿ ಕುಳಿತು ಅದೂ ಇದೂ ಮಾತನಾ 
ಡುತ್ತ ಕೊನೆಗೆ ಮದುವೆಯ ವಿಷಯವನ್ನು ಎತ್ತಿದ. ವಿಧವೆಗೆ ಪರಮಾನಂದವಾಯಿತು. 
“ ನಾನು ಬಹಳ ಕಾಲದಿಂದ ಇದಕ್ಕಾಗಿಯೇ ಕಾಯುತ್ತಿದ್ದೆ ” ಎಂದಳು ಅವಳು . 
ಅವನು ಅಂದಿದ್ದೇ ತಡ ಅವಳು ತನ್ನೆಲ್ಲ ವಸ್ತುಗಳನ್ನೂ ಗಂಟುಮೂಟೆಕಟ್ಟಿಕೊಂಡು ತನ್ನ 
ಮಗಳೊಂದಿಗೆ ಮುದುಕನ ಮನೆಗೆ ಅವನ ಜೊತೆಯಲ್ಲಿ ವಾಸಿಸಲು ಹೋದಳು . 
- ಅವರು ಒಟ್ಟಿಗೆ ವಾಸಿಸುತ್ತಾರೆ - ಮುದುಕನ ಮಗಳು ಹಾಗೂ ಮುದುಕಿಯ ಮಗಳು. 
ದುಷ್ಟ ಮುದುಕಿಗೆ ಮುದುಕನ ಮಗಳನ್ನು ಕಂಡರಾಗದು . ಮೂರು ಹೊತ್ತೂ ಆ ಬಡಪಾಯಿ 
ಹುಡುಗಿಯನ್ನು ಬಯ್ಯುತ್ತಿದ್ದಳು . ಅಲ್ಲದೆ ಮುದುಕನ ಮಗಳು ಮುದುಕಿಯ ಮಗಳು ಇಬ್ಬರೂ 
ತಮ್ಮತಮ್ಮಲ್ಲೇ ತುಂಬ ಆಗಾಗ್ಗೆ ಜಗಳ ಆಡುತ್ತಿದ್ದರು. 

ಅವರು ಆಗಾಗ್ಗೆ ಹಳ್ಳಿ ಕೂಟಗಳಿಗೆ ಹೋಗುತ್ತಿದ್ದರು. ಆಗ ಮುದುಕನ ಮಗಳು ಹೆಚ್ಚಾಗಿ 
ರಾಟೆಯಿಂದ ನೂಲು ತೆಗೆಯುತ್ತ ಹೆಣೆಯುತ್ತ ಕುಳಿತಿರುತ್ತಿದ್ದಳು. ಮುದುಕಿಯ ಮಗಳಾದರೋ 
ಇಡೀ ರಾತ್ರಿ ಹಳ್ಳಿಯ ಹೈದರೊಂದಿಗೆ ಸರಸ ವಿನೋದಗಳಲ್ಲಿ ಕಳೆಯುತ್ತಿದ್ದಳು. ಸರಸದಲ್ಲಿ ಮೈ 
ಮರೆತು ಅವಳು ಹೆಣಿಗೆಯನ್ನೆಲ್ಲ ಗೋಜು ಮಾಡಿ ಬಿಟ್ಟು , ಎಳೆಗಳನ್ನು ಹರಿಯುತ್ತಿದ್ದಳು. 
ಮುಂಜಾನೆ ಮನೆಗೆ ಹಿಂದಿರುಗುತ್ತಿದ್ದರು. ಬೇಲಿಯವರೆಗೂ ಬರುತ್ತಿದ್ದರು. ಈಗ ಬೇಲಿ ದಾಟ 
ಬೇಕು. ಆಗ ಮುದುಕಿಯ ಮಗಳು ಹೇಳುತ್ತಿದ್ದಳು: 

“ನಿನಗೆ ಈ ಹೆಣಿಗೆಯನ್ನೆಲ್ಲ ಹಿಡಿದುಕೊಂಡು ದಾಟುವುದು ಕಷ್ಟವಾಗುತ್ತೆ . ನನಗೆ ಕೊಡು. 
ನೀನು ದಾಟುವಾಗ ನಾನು ಹಿಡಿದುಕೊಂಡಿದ್ದೇನೆ. ” 

“ ಆಗಲಿ ” ಅನ್ನುತ್ತಿದ್ದಳು ಮುದುಕನ ಮಗಳು . “ ಹುಂ , ತಗೋ , ಹಿಡಿದುಕೊಂಡಿರು . ” 

ಮುದುಕನ ಮಗಳು ಬೇಲಿ ದಾಟುವ ಸಮಯದಲ್ಲಿ ಮುದುಕಿಯ ಮಗಳು ಹೆಣಿಗೆಯನ್ನೆಲ್ಲ 
ತೆಗೆದುಕೊಂಡು ತಾಯಿಯ ಬಳಿಗೆ ಓಡುತ್ತಿದ್ದಳು , ಇಲ್ಲಸಲ್ಲದ ಸುಳ್ಳುಗಳನ್ನು ಪೋಣಿಸಿ ಕಥೆ 
ನೇಯು ಹೇಳುತ್ತಿದ್ದಳು - ಮಲಸೋದರಿ ಇಡೀ ರಾತ್ರಿ ಹುಡುಗರೊಂದಿಗೆ ಚಕ್ಕಂದವಾಡಿದಳು , 
ಎಳೆ ಹರಿದು ಬಿಟ್ಟಳು, ಗೋಜು ಮಾಡಿ ಬಿಟ್ಟಳು ಎಂದೆಲ್ಲ ಹೇಳುತ್ತಿದ್ದಳು . 

“ ನಾನಾದರೋ ನೆಟ್ಟಗೆ ಕೂತು ನೇಯ್ದೆ , ನೇರವಾಗಿ ಮನೆಗೆ ಬಂದೆ. ನೋಡು, ಅವಳು 
ಎಷ್ಟು ಸೋಮಾರಿ ! ಎಷ್ಟು ನಿರ್ಲಕ್ಷ ಅವಳದು ! ” 

ಮುದುಕನ ಮಗಳು ಮನೆಗೆ ಬಂದಾಗ ಮಲತಾಯಿ ಅವಳನ್ನು ಚೆನ್ನಾಗಿ ಬಯ್ಯುತ್ತಿದ್ದಳು, 
ಹೊಡೆಯುತ್ತಿದ್ದಳು. ಮುದುಕನಿಗೆ ದೂರುತ್ತಿದ್ದಳು : 

“ ನಿನ್ನ ಮಗಳಂಥವಳನ್ನು ಎಲ್ಲೂ ಕಂಡಿಲ್ಲ. ಇವಳಿಗೆ ಕೆಲಸ ಮಾಡಲೇ ಇಷ್ಟವಿಲ್ಲವಲ್ಲ ! 
ನೀನೂ ಅವಳಿಗೆ ಏನೂ ಹೇಳಿಕೊಡುವುದೂ ಇಲ್ಲ ! ” 

ಮಲತಾಯಿ ಎಷ್ಟೇ ಬೈದರೂ ಹೊಡೆದರೂ , ಮಲಸೋದರಿ ಎಷ್ಟೇ ಕುಚೇಷ್ಟೆ ಮಾಡಿ
ದರೂ ಮುದುಕನ ಮಗಳಂತೂ ತನ್ನ ತಂದೆಗೆ ಒಂದಿಷ್ಟೂ ಚಾಡಿ ಹೇಳುತ್ತಿರಲಿಲ್ಲ. ಎಲ್ಲವನ್ನೂ 
ಸಹಿಸಿಕೊಂಡು ತನ್ನಷ್ಟಕ್ಕೆ ತಾನು ಮೌನದಿಂದ ಕೆಲಸ ಮಾಡುತ್ತಲೇ ಹೋಗುತ್ತಿದ್ದಳು . ಮುದುಕ 
ಅವಳನ್ನು ಪ್ರೀತಿಸುತ್ತಿದ್ದುದನ್ನು ಕಂಡು ಮಲತಾಯಿಯ ಮಲಸೋದರಿಯ ಇನ್ನಷ್ಟು 
ಕೆರಳುತ್ತಿದ್ದರು . ಅವಳನ್ನು ಈ ಜಗತ್ತಿನಲ್ಲೇ ಇಲ್ಲದಂತೆ ಮಾಡಲು ಏನು ಮಾಡಬೇಕು ಎಂದು 
ಯೋಚಿಸ ತೊಡಗಿದರು . 

ಮುದುಕಿ ಮುದುಕನನ್ನು ಛೇಡಿಸ ತೊಡಗಿದಳು . ಪದೇಪದೇ ಹೇಳ ತೊಡಗಿದಳು : 

“ ನಿನ್ನ ಮಗಳು ಶುದ್ಧ ಸೋಮಾರಿ. ಅವಳಿಗೆ ಏನು ಮಾಡಲೂ ಇಷ್ಟವಿಲ್ಲ . ಸುಮ್ಮನೆ 
ಬೀದಿ ಅಲೀತಾಳೆ, ಮನೆಗೆ ಬಾಳೆ, ತಿಂತಾಳೆ, ಮಲಗುತ್ತಾಳೆ. ಇಷ್ಟಾದರೂ ನೀನು ಅವಳಿಗೆ 
ದಂಡಿಸೊಲ್ಲ, ಒಂದು ಮಾತೂ ಹೇಳೊಲ್ಲ! ಅವಳನ್ನು ಯಾರಿಗಾದರೂ ಕೆಲಸದ ತೊತ್ತನ್ನಾಗಿ 
ಕೊಟ್ಟುಬಿಡೋದು ವಾಸಿ. ” 

“ ಆದರೆ ಯಾರು ತಗೋತಾರೆ ? ” ಮುದುಕ ಕೇಳಿದ. 

“ ಎಲ್ಲಿಗಾದರೂ ಸರಿ ಕರಕೊಂಡು ಹೋಗಿ ಬಿಟ್ಟು ಬಿಡು ! ಸದ್ಯಕ್ಕೆ ಅವಳು ನಮ್ಮ ಮನೆಯ 
ಲ್ಲಿಲ್ಲದಿದ್ದರೆ ಸಾಕು ! ” 

ಮುದುಕಿ ಮುದುಕನನ್ನು ತುಂಬ ಪೀಡಿಸ ತೊಡಗಿದಳು , ದಿನದಿನವೂ ಅದೇ ಹಾಡು - 
“ ಮಗಳನ್ನು ಎಲ್ಲಾದರೂ ಕರೆದುಕೊಂಡು ಹೋಗಿ ಬಿಟ್ಟು ಬಿಡು ! ” ಮುದುಕ ಬೇಸತ್ಯ . 
ಮಗಳ ಬಗೆಗೆ ಎಷ್ಟೇ ಪ್ರೀತಿ ಕರುಣೆ ಇದ್ದರೂ , ಅವನು ಏನೂ ಮಾಡದಾದ. 

ಅವರು ಗಂಟುಮೂಟೆ ಕಟ್ಟಿಕೊಂಡು ಹೊರಟರು . ದಟ್ಟವಾದ ಕಾಡಿನ ಬಳಿ ಬಂದರು . 
ಮಗಳು ತಂದೆಗೆ ಹೇಳಿದಳು : 

“ನೀನು ಮನೆಗೆ ಹೋಗಪ್ಪ . ನಾನು ಮುಂದೆ ಒಬ್ಬಳೇ ಹೋಗುತ್ತೇನೆ. ಎಲ್ಲಾದರೂ ಕೆಲಸ 
ಕಂಡುಕೊಳ್ಳುತ್ತೇನೆ. ” 

" ಹಾಗೇ ಆಗಲಿ , ಮಗಳೇ ! ” ಎಂದ ಮುದುಕ . 

ಮಗಳಿಗೆ ವಿದಾಯ ಹೇಳಿದ. ಅವನು ಒಂದು ದಾರಿ ಹಿಡಿದ, ಮಗಳು ಇನ್ನೊಂದು ದಾರಿ 
ಹಿಡಿದಳು . 

ಹುಡುಗಿ ಆ ದಟ್ಟವಾದ ಕಾಡಿನಲ್ಲಿ ಹೊರಟಳು . ನೋಡುತ್ತಾಳೆ - ಅಲ್ಲೊಂದು ಸೇಬಿನ 
ಗಿಡ ಇದೆ. ಅದರ ಸುತ್ತಮುತ್ತ ಎಷ್ಟು ಕಳೆ ಬೆಳೆದಿದೆ ಎಂದರೆ ಸೇಬಿನ ಗಿಡವೇ ಕಾಣುತ್ತಿಲ್ಲ, 
ಅಷ್ಟು ! 


“ಪ್ರೀತಿಯ ಹುಡುಗಿ ! ನನ್ನ ಸುತ್ತಮುತ್ತ ಬೆಳೆದಿರೋ ಈ ಕಳೆಯನ್ನೆಲ್ಲ ಕಿತ್ತು ಹಾಕಿ ನನ್ನನ್ನು 
ಸ್ವಲ್ಪ ಶುದ್ಧಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ” ಎಂದು 
ಹೇಳಿತು ಸೇಬಿನ ಗಿಡ. 

ಮುದುಕನ ಮಗಳು ಅಂಗಿಯ ತೋಳು ಹಿಂದಕ್ಕೆ ಸರಿಸಿಕೊಂಡು ಕೆಲಸದಲ್ಲಿ ತೊಡಗಿದಳು. 
ಕಳೆಯನ್ನೆಲ್ಲ ಕಿತ್ತಳು, ಹೆಚ್ಚಿನ ರೆಂಬೆಗಳನ್ನೆಲ್ಲ ಕತ್ತರಿಸಿ ಹಾಕಿ ಗಿಡವನ್ನು ಸವರಿದಳು , ಬುಡದ 
ಸುತ್ತ ಹೊಸ ಮಣ್ಣು ಮರಳು ಹರಡಿದಳು . ಸೇಬಿನ ಗಿಡ ಅವಳಿಗೆ ತುಂಬ ವಂದನೆ ಸಲ್ಲಿಸಿತು . 
ಹುಡುಗಿ ಮುಂದುವರಿದಳು. 
* ಹೋಗುತ್ತಾಳೆ, ಹೋಗುತ್ತಾಳೆ, ಅವಳಿಗೆ ಬಾಯಾರುತ್ತೆ . ಒಂದು ಬಾವಿಯ ಬಳಿಗೆ ಹೋಗು 
ತಾಳೆ, ಬಾವಿ ಹೇಳುತ್ತೆ : 
- “ಪ್ರೀತಿಯ ಹುಡುಗಿ !. ನನ್ನನ್ನು ಸ್ವಲ್ಪ ಶುದ್ಧಗೊಳಿಸುತ್ತೀಯ ? ಸ್ವಲ್ಪ ಅಂದಗೊಳಿಸು 
ತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯಮಾಡ್ತೀನಿ. ” 

ಹುಡುಗಿ ಬಾವಿಯನ್ನು ಶುದ್ಧಗೊಳಿಸಿದಳು, ಸುತ್ತ ಬೆಣಚುಕಲ್ಲು ಮರಳು ಹರಡಿ ಅಂದ 
ಗೊಳಿಸಿದಳು . ಬಾವಿ ಅವಳಿಗೆ ತುಂಬ ವಂದನೆ ಸಲ್ಲಿಸಿತು. ಹುಡುಗಿ ಮುಂದೆ ಹೊರಟಳು. 

ಒಂದು ನಾಯಿ ಅವಳ ಕಡೆಗೇ ಓಡಿ ಬಂದಿತು . ಅದು ತುಂಬ ಕೊಳಕಾಗಿತ್ತು . ಮೈಗೆಲ್ಲ 
ಹುಲ್ಲು ಮಣ್ಣು ಮೆತ್ತಿಕೊಂಡಿತ್ತು . 

“ಪ್ರೀತಿಯ ಹುಡುಗಿ! ನನ್ನನ್ನು ಸ್ವಲ್ಪ ಶುಭ್ರಗೊಳಿಸುತ್ತೀಯ ? ಪುನಃ ಚೆನ್ನಾಗಿ ಕಾಣುವಂತೆ 
ಮಾಡುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ” ಎಂದದು ಹೇಳಿತು . 

ಹುಡುಗಿ ನಾಯಿಯ ಮೈಯನ್ನು ತಿಕ್ಕಿ ಶುಭ್ರಗೊಳಿಸಿದಳು , ಅದರ ಬಾಲಕ್ಕೆ ಅಂಟಿಕೊಂಡಿದ್ದ 
ಮುಳ್ಳುಗಳನ್ನು ಕಿತ್ತು ಹಾಕಿದಳು. 

“ ತುಂಬ ವಂದನೆಗಳು ನಿನಗೆ, ಪ್ರೀತಿಯ ಹುಡುಗಿ ! ” ಎಂದದು ಹೇಳಿತು . 
“ಓಹ್ , ಪರವಾಗಿಲ್ಲ . ಇದೇನು ಮಹಾ ! ” ಎಂದು ಹೇಳಿ ಹುಡುಗಿ ಮುಂದೆ ಹೊರಟಳು . 
ನೋಡುತ್ತಾಳೆ - ಅಲ್ಲೊಂದು ಒಲೆ ಇದೆ. ಅದರ ಗಾರೆ ಎಲ್ಲ ಕಿತ್ತು ಬಂದಿದೆ. ಅದರ ಒಡ 
ಲೆಲ್ಲ ಸುಟ್ಟು ಕಪ್ಪಗಾಗಿದೆ. ಅದರ ಪಕ್ಕದಲ್ಲಿ ಜೇಡಿಮಣ್ಣಿನ ರಾಶಿ ಇದೆ. ಒಲೆ ಹೇಳಿತು: 
- “ಪ್ರೀತಿಯ ಹುಡುಗಿ ! ನನ್ನನ್ನು ತಿಕ್ಕಿ ಸ್ವಲ್ಪ ಸ್ವಚ್ಛಗೊಳಿಸುತ್ತೀಯ ? ಆ ಜೇಡಿಮಣ್ಣು 
ಮೆತ್ತಿ ಸ್ವಲ್ಪ ಅಂದಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ !” 

ಸರಿ, ಹುಡುಗಿ ಒಲೆಯನ್ನು ತಿಕ್ಕಿ ಸ್ವಚ್ಛಗೊಳಿಸಿದಳು, ಕಪ್ಪು ಗಾರೆಯನ್ನು ಕಿತ್ತು ಹಾಕಿದಳು , 
ಅದರ ಜಾಗದಲ್ಲಿ ಹೊಸ ಜೇಡಿಮಣ್ಣು ಮೆತ್ತಿದಳು , ಸುತ್ತ ಹೂಗಳನ್ನೂ ಎಲೆಗಳನ್ನೂ ಇರಿಸಿ 
ಅಂದಗೊಳಿಸಿದಳು . ಒಲೆ ಹುಡುಗಿಗೆ ತುಂಬ ವಂದನೆ ಸಲ್ಲಿಸಿತು . ಹುಡುಗಿ ಮುಂದೆ ಹೊರಟಳು . 
ಹೋಗುತ್ತಾಳೆ, ಹೋಗುತ್ತಾಳೆ, ಅವಳಿಗೊಬ್ಬ ಹೆಂಗಸು ಭೇಟಿಯಾಗುತ್ತಾಳೆ. 
“ನಮಸ್ಕಾರ, ಹುಡುಗಿ ! ” ಅವಳು ಹೇಳುತ್ತಾಳೆ. 
“ನಮಸ್ಕಾರ, ಕುಶಲವೇ ? ” ಹುಡುಗಿ ಕೇಳುತ್ತಾಳೆ, 
“ ಎಲ್ಲಿಗೆ ಹೊರಟೆ ನೀನು ? ” 
“ ಎಲ್ಲಾದರೂ ಕೆಲಸ ಸಿಕ್ಕುತ್ತೆ ಅಂತ ಹುಡುಕಿಕೊಂಡು ಹೊರಟಿದೀನಿ. ” 
“ ಹಾಗಾದರೆ ನನ್ನ ಬಳಿಯೇ ಕೆಲಸಕ್ಕೆ ಬಾ ! ” 
“ ಆಗಲಿ, ಸಂತೋಷವೇ . ಬರೀನಿ! ” ಉತ್ತರಿಸುತ್ತಾಳೆ ಹುಡುಗಿ. 

“ ನಾನು ಹೇಗೆ ತೋರಿಸಿಕೊಡುತ್ತೇನೋ ಹಾಗೆ ಮಾಡಿದರೆ ನನ್ನ ಮನೆಯಲ್ಲಿ ಕೆಲಸವೇನೂ 
ನಿನಗೆ ಕಷ್ಟವಾಗದು. ಆಗುತ್ತ ? ” 

“ ಯಾಕೆ ಆಗೋಲ್ಲ? ಒಂದು ಸಾರಿ ತೋರಿಸಿಕೊಡಿ. ಆಮೇಲೆ ನಾನೇ ಎಲ್ಲ 
ತಿಳಿಕೊತೀನಿ. ” 

ಅವರು ಗುಡಿಸಿಲಿಗೆಹೋದರು . ಹೆಂಗಸು ಹೇಳಿದಳು : 

“ನೋಡು, ಹುಡುಗಿ, ಇಲೊಡು. ಇಲ್ಲಿ ಕೆಲವು ಮಡಕೆಗಳಿವೆ . ಬೆಳಿಗ್ಗೆ ಹಾಗೂ ಸಾಯಂಕಾಲ 
ನೀನು ಈ ಮಡಕೆಗಳಲ್ಲಿ ನೀರು ಕಾಯಿಸಬೇಕು, ಆ ನೀರನ್ನು ಒಂದು ಉದ್ದನೆಯ ಬಾನೆಗೆ 
ಹಾಕಬೇಕು. ಅದಕ್ಕೆ ಸ್ವಲ್ಪ ಹಿಟ್ಟು ಬೆರಸಿ ಕಣಕ ತಯಾರಿಸಬೇಕು. ಆದರೆ ನೋಡು, ಅದು ತುಂಬ 
ಬಿಸಿಯಾಗಿರಬಾರದು ! ಆಮೇಲೆ ಬಾಗಿಲ ಬಳಿ ನಿಂತು ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ 
ಹಾಕಬೇಕು. ಆಗ ನಿನ್ನ ಬಳಿಗೆ ನಾನಾ ರೀತಿಯ ಮೃಗಗಳು ಬರುತ್ತವೆ. ಅವಕ್ಕೆ ನೀನು ಚೆನ್ನಾಗಿ, 
ಹೊಟ್ಟೆ ತುಂಬ, ತಿನ್ನಿಸಬೇಕು. ಆಮೇಲೆ ಅವು ತಮಗೆ ಬೇಕಾದ ಸ್ಥಳಗಳಿಗೆ ಹೊರಟು ಹೋಗು 
ತವೆ. ನೀನೇನೂ ಅವಕ್ಕೆ ಹೆದರಬೇಕಾಗಿಲ್ಲ. ಅವು ನಿನಗೆ ಏನೂ ಹಾನಿ ಮಾಡವು.” 

“ ಹಾಗೇ ಆಗಲಿ, ನೀವು ಹೇಗೆ ಹೇಳಿದಿರೋ ಹಾಗೇ ಎಲ್ಲವನ್ನೂ ಮಾಡುತ್ತೇನೆ” ಎಂದಳು 
ಹುಡುಗಿ, 


ಅವರು ಸಂಜೆ ಊಟ ಮಾಡಿದರು . ಹುಡುಗಿ ಒಲೆ ಹೊತ್ತಿಸಿದಳು , ನೀರು ಕಾಯಿಸಿದಳು , 
ಅದನ್ನು ಬಾನೆಗೆ ಸುರಿದಳು , ಅದಕ್ಕೆ ಹಿಟ್ಟು ಬೆರೆಸಿ ಮಿದ್ದು ಕಣಕ ಮಾಡಿದಳು . ಆಮೇಲೆ ಬಾಗಿಲ 
ಬಳಿ ಹೋಗಿ ನಿಂತು ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ ಹಾಕಿದಳು - ಹೇಗೆ ಓಡಿ ಬಂದವು 
ತರಹೇವಾರಿ ಕಾಡು ಮೃಗಗಳು ಅವಳ ಬಳಿಗೆ ! ಅವು ಹೊಟ್ಟೆ ತುಂಬ ತಿಂದವು, ಒಂದೊಂದೂ 
ಒಂದೊಂದು ದಿಕ್ಕಿನಲ್ಲಿ ಚೆದುರಿ ಹೋದವು. 

ಹೀಗೆ ಮುದುಕನ ಮಗಳು ಇಡೀ ಒಂದು ವರ್ಷ ಅವಳ ಒಡತಿ ಹೇಗೆ ಹೇಳಿದಳೊ ಹಾಗೇ 
ಎಲ್ಲವನ್ನೂ ಮಾಡುತ್ತ ಸೇವೆ ಸಲ್ಲಿಸಿದಳು . ಒಂದು ವರ್ಷ ಮುಗಿದ ಮೇಲೆ ಯಜಮಾನಿ ಮುದು 
ಕನ ಮಗಳಿಗೆ ಹೇಳಿದಳು : 

“ ಇಲ್ಲಿ ಕೇಳಮ್ಮ , ಹುಡುಗಿ ! ನೀನು ನನ್ನ ಮನೆಗೆ ಕೆಲಸಕ್ಕೆ ಬಂದು ಇವತ್ತಿಗೆ ಸರಿಯಾಗಿ 
ಒಂದು ವರ್ಷವಾಗುತ್ತೆ . ನಿನಗೆ ಇಷ್ಟವಾದರೆ ಇನ್ನಷ್ಟು ಕಾಲ ಇಲ್ಲೇ ಉಳಿ, ಬೇಡವಾದರೆ, ನಿನ 
ಗಿಷ್ಟ ಬಂದಂತೆ ಮಾಡು . ನೀನು ನನಗಾಗಿ ತುಂಬ ಚೆನ್ನಾಗಿ ಕೆಲಸ ಮಾಡಿದೆ. ಅದಕ್ಕಾಗಿ ನಿನಗೆ 
ತುಂಬ ವಂದನೆಗಳು . ” 

ತನಗೆ ಊಟ ವಸತಿ ಕೊಟ್ಟುದಕ್ಕಾಗಿ ಮತ್ತು ಎಲ್ಲ ರೀತಿಯಲ್ಲೂ ಚೆನ್ನಾಗಿನೋಡಿಕೊಂಡು 
ದಕ್ಕಾಗಿ ಹುಡುಗಿ ಆ ಹೆಂಗಸಿಗೆ ಕೃತಜ್ಞತೆಸೂಚಿಸಿ ಹೀಗೆ ಹೇಳಿದಳು : 

“ ನನಗೆ ಮನೆಗೆ ಹೋಗೋಣ ಅನ್ನಿಸಿದೆ. ಇದುವರೆವಿಗೂ ಇಟ್ಟುಕೊಂಡುದಕ್ಕಾಗಿ ನಿಮಗೆ 
ತುಂಬ ವಂದನೆಗಳು , ಒಡತಿ ! ” 

ಹೆಂಗಸು ಅವಳಿಗೆ ಹೇಳಿದಳು : 

“ ಸರಿ , ಹಾಗೇ ಮಾಡು. ನಿನಗಿಷ್ಟವಾದ ಕುದುರೆಯನ್ನೂ ಗಾಡಿಯನ್ನೂ ಆಯ್ತು 
ಕೋ . ” 

ಆ ಹೆಂಗಸು ಒಂದು ದೊಡ್ಡ ಪೆಟ್ಟಿಗೆಯ ತುಂಬ ನಾನಾ ರೀತಿಯ ಸೊಗಸಾದ ವಸ್ತು 
ಗಳನ್ನು ತುಂಬಿ ಹುಡುಗಿಗೆ ಕೊಟ್ಟಳು. ತಾನೇ ಕಾಡಿನ ಅಂಚಿನವರೆಗೂ ಹೋಗಿ ಅವಳನ್ನು 
ಬೀಳ್ಕೊಟ್ಟಳು. ಇಬ್ಬರೂ ಪರಸ್ಪರರಿಗೆ ವಿದಾಯ ಹೇಳಿದರು . ಒಡತಿ ತನ್ನ ಮನೆಗೆ ಹಿಂದಿರುಗಿದಳು . 
ಮುದುಕನ ಮಗಳು ತನ್ನ ಮನೆಯ ಕಡೆಗೆ ಹೊರಟಳು. ಎಲ್ಲ ಇಷ್ಟು ಚೆನ್ನಾಗಿ ಕೊನೆಗಂಡದ್ದು 
ಅವಳಿಗೆ ಅಮಿತಾನಂದ ತಂದಿತ್ತು . 
- ದಾರಿಯಲ್ಲಿ ಅವಳು ಹಿಂದೆ ತಾನು ಚೊಕ್ಕಟಗೊಳಿಸಿದ್ದ ಆ ಒಲೆಯ ಸವಿಾಪ ಬಂದಳು. 
ಅದರ ತುಂಬ ಆಗಷ್ಟೆ ಬೇಯಿಸಿದ ಹಸನಾದ ಸೀರೊಟ್ಟಿಗಳಿದ್ದವು. ಅದು ಹೇಳಿತು : 

“ಪ್ರೀತಿಯ ಹುಡುಗಿ ! ನೀನು ನನ್ನನ್ನು ಶುಭ್ರಗೊಳಿಸಿ ಬಲಪಡಿಸಿದೆ. ಅದಕ್ಕಾಗಿ ತಗೋ , 
ಇಲ್ಲಿರುವ ಸೀರೊಟ್ಟಿಗಳೆಲ್ಲ ನಿನ್ನವೇ .” 

ಹುಡುಗಿ ವಂದನೆ ತಿಳಿಸಿ ಒಲೆಯ ಬಳಿ ಹೋದಳೋ ಇಲ್ಲವೋ ಸೀರೊಟ್ಟಿಗಳೆಲ್ಲ ತಾವೇ 
ಹಾರಿ ಬಂದು ಹುಡುಗಿಯ ಗಾಡಿಯೊಳಗೆ ತುಂಬಿಕೊಂಡವು. ಅವಳು ಒಲೆಗೆ ವಂದನೆ ಹೇಳಿ 
ಮುಂದೆ ಪ್ರಯಾಣ ಬೆಳೆಸಿದಳು . 

ಬರುತ್ತಾಳೆ, ಬರುತ್ತಾಳೆ, ನೋಡುತ್ತಾಳೆ - ಅವಳು ಹಿಂದೆ ಸಹಾಯಮಾಡಿದ ಆ ನಾಯಿ 
ಅವಳ ಬಳಿಗೆ ಓಡಿ ಬರುತ್ತಿದೆ. ಅದು ತನ್ನ ಹಲ್ಲುಗಳ ಮಧ್ಯೆ ಒಂದು ಸರವನ್ನು ಕಚ್ಚಿ ಹಿಡಿದಿದೆ.
ಹಾಗೆ 


ಎಂತಹ ಸುಂದರವಾದ, ಥಳಥಳಿಸುವ, ಉದ್ದನೆಯ ಸರ ! ನಾಯಿ ಗಾಡಿಯ ಬಳಿಗೆ ಓಡಿ ಬಂದು 
ಹೇಳುತ್ತೆ : 

“ ಇದು ನಿನಗೆ , ಪ್ರೀತಿಯ ಹುಡುಗಿ ! ನೀನು ನನ್ನ ಮೈ ಉಜ್ಜಿ ಶುಭ್ರಗೊಳಿಸಿದುದಕ್ಕಾಗಿ, 
ನನ್ನ ಬಾಲಕ್ಕೆ ಅಂಟಿಕೊಂಡಿದ್ದ ಮುಳ್ಳುಗಳನ್ನು ಕಿತ್ತು ಹಾಕಿದುದಕ್ಕಾಗಿ ! ” 

ಹುಡುಗಿ ಆ ಸರವನ್ನು ಸ್ವೀಕರಿಸಿ, ನಾಯಿಗೆ ವಂದನೆ ಸಲ್ಲಿಸಿ, ಸಂತಸದಿಂದ ಮುಂದಕ್ಕೆ 
ಪ್ರಯಾಣ ಮಾಡಿದಳು , 

ಬರುತ್ತಾಳೆ, ಅವಳಿಗೆ ಬಾಯಾರಿಕೆಯಾಗುತ್ತೆ . ಸಹಿಸೋಕೇ ಆಗೋಲ್ಲ, ಅಷ್ಟು ಬಾಯಾರಿಕೆ ! 
ತನ್ನಲ್ಲೇ ಹೇಳಿಕೊಳ್ಳುತ್ತಾಳೆ: 

“ ನಾನು ಹಿಂದೆ ಶುದ್ಧಗೊಳಿಸಿದೆನಲ್ಲ ಆ ಬಾವಿಗೆ ಹೋಗಿ ಒಂದಿಷ್ಟು ನೀರು ಕುಡಿಯೋಣ. ” 

ಅವಳು ಬಾವಿಯ ಬಳಿಗೆ ಹೋದಳು. ಅದರಲ್ಲಿ ಅಂಚಿನವರೆಗೂ ಅತ್ಯಂತ ಸ್ವಚ್ಛವಾದ 
ನಿರ್ಮಲವಾದ ನೀರು ತುಂಬಿತ್ತು . ಬಾವಿಯ ಪಕ್ಕದಲ್ಲಿ ಒಂದು ಚಿನ್ನದ ಪೀಪಾಯಿ ಹಾಗೂ 
ಒಂದು ಚಿನ್ನದ ಸೌಟು ಇದ್ದವು. 

ಬಾವಿ ಹೇಳಿತು : 
“ ಬಾ , ಪ್ರೀತಿಯ ಹುಡುಗಿ, ಬಾ ! ನೀರು ಕುಡಿ. ಈ ಚಿನ್ನದ ಪೀಪಾಯಿಯ ಚಿನ್ನದ ಸೌಟೂ 
ನಿನ್ನವೇ , ತಗೋ ! ” 

ಹುಡುಗಿ ಕುಡಿಯುತ್ತಾಳೆ. ಅದು ಕೇವಲ ನೀರಾಗಿರಲಿಲ್ಲ , ದ್ರಾಕ್ಷಾರಸವಾಗಿತ್ತು . ಅಂಥ 
ರುಚಿಕರವಾದ ದ್ರಾಕ್ಷಾರಸವನ್ನು ಅವಳು ಹಿಂದೆಂದೂ ಕುಡಿದಿರಲಿಲ್ಲ. ಅವಳು ಪೀಪಾಯಿಯ 
ತುಂಬ ಆ ದ್ರಾಕ್ಷಾರಸವನ್ನು ತುಂಬಿಕೊಂಡು, ಸೌಟನ್ನೂ ತೆಗೆದುಕೊಂಡು, ಬಾವಿಗೆ ವಂದನೆ 
ಸಲ್ಲಿಸಿ ಪ್ರಯಾಣ ಮುಂದುವರಿಸಿದಳು . 

ಸ್ವಲ್ಪ ದೂರ ಹೋದ ಮೇಲೆ ನೋಡುತ್ತಾಳೆ – ಎಂಥ ಸುಂದರವಾದ ಸೇಬಿನ ಗಿಡ ! 
ಅವಳು ಹಿಂದೆ ಸಹಾಯಮಾಡಿದ್ದಳಲ್ಲ ಅದೇ ಗಿಡ . ಈಗ ಎಷ್ಟು ಫಲಭರಿತವಾಗಿ ದಟ್ಟವಾಗಿ 
ಬೆಳೆದು ನಿಂತಿದೆ ! ಅದರ ಸೌಂದರ್ಯ ವರ್ಣನಾತೀತ ! ಅದರಲ್ಲಿನ ಸೇಬಿನ ಹಣ್ಣುಗಳೆಲ್ಲ 
ಚಿನ್ನ ಬೆಳ್ಳಿಯವು. ಗಿಡದ ಕೊಂಬೆಗಳು ಹಣ್ಣುಗಳ ಭಾರಕ್ಕೆ ಜಗ್ಗುತ್ತಿವೆ. ಅದು 
ಹೇಳಿತು : 

“ಪ್ರೀತಿಯ ಹುಡುಗಿ ! ಈ ಹಣ್ಣುಗಳೆಲ್ಲ ನಿನ್ನವು. ನೀನು ನನ್ನನ್ನು ಸ್ವಚ್ಛಗೊಳಿಸಿ 
ಸುಂದರಗೊಳಿಸಿದುದಕ್ಕಾಗಿ.” 

ಹುಡುಗಿ ಹೇಳಿದಳು : " ವಂದನೆಗಳು ! ” 
ಗಿಡದ ಕೆಳಗೆ ಹೋದಳು , ಹಣ್ಣುಗಳೆಲ್ಲ ತುಪತುಪನೆ ತಾವೇ ಉದುರಿ ಹುಡುಗಿಯ ಗಾಡಿ 
ಯಲ್ಲಿ ತುಂಬಿಕೊಂಡವು. 

ಎಲ್ಲವನ್ನೂ ತೆಗೆದುಕೊಂಡು ಮುದುಕನ ಮಗಳು ಮನೆಯ ಬಳಿ ಬಂದು ಕೂಗಿ ಹೇಳಿದಳು : 
“ ಅಪ್ಪ ! ನೋಡು ಬಾ , ಅಪ್ಪ , ನಾನು ನಿನಗಾಗಿ ಏನೇನು ತಂದಿದೀನಿ ಅಂತ ! ” 

ತಂದೆ ಗುಡಿಸಿಲಿನಿಂದ ಹೊರಬಂದು ನೋಡುತ್ತಾನೆ - ಮಗಳು ಬಂದಿದಾಳೆ. ಅವನಿಗೆ 
ತುಂಬ ಸಂತೋಷವಾಯಿತು. ಅವಳನ್ನು ಅಪ್ಪಿ ಮುದ್ದಾಡಿದ . ಕೇಳಿದ : 

“ಎಲ್ಲಿಗೆ ಹೋಗಿದ್ದೆ, ಮಗಳೇ ? ಏನು ಮಾಡಿದೆ ? ” 
“ ಕೆಲಸ ಮಾಡಿದೆ, ಅಪ್ಪ ” ಅವಳೆಂದಳು . “ ಇವೆಲ್ಲವನ್ನೂ ಒಳಕ್ಕೆ ಕೊಂಡೊಯ್ದಿರಿ! ” 

ಓಹ್ , ಅವೂ ಎಷ್ಟೊಂದು ! ಎಂಥೆಂಥ ಸೊಗಸಾದ ವಸ್ತುಗಳು ! ಇಡೀ ಗಾಡಿ ತುಂಬ ! 
ಅಷ್ಟೇ ಸಾಲದೆನ್ನುವಂತೆ ಅತ್ಯಂತ ಹೆಚ್ಚಿನ ಬೆಲೆಯ ಸೊಗಸಾದ ಸರ ಬೇರೆ! 

ಸಾಮಾನುಗಳನ್ನೆಲ್ಲ ಒಳಕ್ಕೆ ಒಯ್ಯ ತೊಡಗಿದರು . ಒಂದು ಚೆನ್ನಾಗಿದ್ದರೆ ಇನ್ನೊಂದು ಅದ 
ಕ್ಕಿಂತ ಚೆನ್ನ , ಮುದುಕನ ಮಗಳು ಇಷ್ಟೊಂದು ಸೊಗಸಾದ ವಸ್ತುಗಳನ್ನು ತಂದುದನ್ನು ಕಂಡು 
ಮುದುಕಿ ಮುದುಕನನ್ನು ಪೀಡಿಸ ತೊಡಗಿದಳು : 

“ಹೋಗು, ನಿನ್ನ ಮಗಳನ್ನು ಎಲ್ಲಿಗೆ ಕರಕೊಂಡು ಹೋಗಿದ್ದೆಯೋ ಅಲ್ಲಿಗೇ ನನ್ನ ಮಗಳನ್ನೂ 
ಕರೆದುಕೊಂಡು ಹೋಗು! ” 

ಅವಳು ಅವನನ್ನು ಎಷ್ಟು ಬಲಾತ್ಕರಿಸಿದಳೆಂದರೆ ಅವನು ಹೇಳಿದ: 
“ಸರಿ, ಹೇಳು ಅವಳಿಗೆ, ಪ್ರಯಾಣಕ್ಕೆ ಸಿದ್ದವಾಗು ಅಂತ.” 

ವಿದಾಯ ಹೇಳಿ ಮುದುಕನೂ ಮುದುಕಿಯ ಮಗಳೂ ಹೊರಟರು. ಕಾಡಿನ ಬಳಿ ಬಂದರು . 
ಮುದುಕ ಹೇಳಿದ: 

“ ಇನ್ನು ಮುಂದೆ ನೀನೇ ಹೋಗು, ಮಗಳೇ ! ನಾನು ಮನೆಗೆ ಹಿಂದಿರುಗುತ್ತೇನೆ. ” 
“ ಆಗಲಿ ” ಅವಳೆಂದಳು . 
ಅವರು ಅಗಲಿದರು . ಹುಡುಗಿ ಕಾಡಿನಲ್ಲಿ ಹೊರಟಳು. ಮುದುಕ ಮನೆಗೆ ಹಿಂದಿರುಗಿದ. 

ಮುದುಕಿಯ ಮಗಳು ಕಾಡಿನಲ್ಲಿ ಹೋಗುತ್ತಾಳೆ, ನೋಡುತ್ತಾಳೆ - ಅಲ್ಲೊಂದು ಸೇಬಿನ 
ಗಿಡವಿದೆ. ಅದರ ಸುತ್ತಮುತ್ತ ಕಳೆ ಎಷ್ಟು ತುಂಬಿದೆಯೆಂದರೆ ಸೇಬಿನ ಗಿಡವೇ ಕಾಣುತ್ತಿಲ್ಲ, ಅಷ್ಟು ! 

“ಪ್ರೀತಿಯ ಹುಡುಗಿ ! ನನ್ನ ಸುತ್ತಮುತ್ತ ಬೆಳೆದಿರೋ ಈ ಕಳೆಯನ್ನೆಲ್ಲ ಕಿತ್ತು ಹಾಕಿ ನನ್ನನ್ನು 
ಸ್ವಲ್ಪ ಶುದ್ಧಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” ಎಂದು 
ಹೇಳಿತು ಸೇಬಿನ ಗಿಡ. 
ಹುಡುಗಿ ಉತ್ತರಿಸಿದಳು : " ನನ್ನ ಕೈಯನ್ನು ಕೊಲೆ ಮಾಡಿಕೊಳ್ಳುವುದೆ ? ಅದೆಂದೂ ಆಗದು ! ” 
ಹಾಗೆಂದು ಅವಳು ಮುಂದೆ ಹೊರಟಳು . 

ನೋಡುತ್ತಾಳೆ - ಅಲ್ಲೊಂದು ಬಾವಿ ಇದೆ. ಅದರಲ್ಲಿ ಎಷ್ಟೊಂದು ಕೊಳೆ ತುಂಬಿದೆ ಅಂದರೆ, 
ನೀರೇ ಕಾಣುತ್ತಿಲ್ಲ, ಅಷ್ಟು . 

ಅದು ಹುಡುಗಿಗೆ ಹೇಳುತ್ತೆ : “ಪ್ರೀತಿಯ ಹುಡುಗಿ, ನನ್ನನ್ನು ಸ್ವಲ್ಪ ಶುದ್ಧಗೊಳಿಸುತ್ತೀಯ ? 
ಸ್ವಲ್ಪ ಅಂದಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” 
- “ಹೋಗಿ, ಹೋಗಿ, ಯಾಕೆ ನೀವು ನನಗೆ ಇಷ್ಟು ಕಾಟ ಕೊಡ್ತೀರ? ಅದೆಂದೂ ಆಗದು ! 
ನಾನು ಮುಂದೆ ಹೋಗಬೇಕು ! ” 

ಹೀಗೆ ಹೇಳಿ ಮುದುಕಿಯ ಮಗಳು ಮುಂದುವರಿದಳು . 
ಹೋಗುತ್ತ ಹೋಗುತ್ತ ಅವಳು ಒಂದು ಒಲೆಯ ಬಳಿಗೆ ಬರುತ್ತಾಳೆ. ಆ ಒಲೆ ಅವಳಿಗೆ 
ಹೇಳುತ್ತೆ : 

“ಪ್ರೀತಿಯ ಹುಡುಗಿ ! ನನ್ನನ್ನು ತಿಕ್ಕಿ ಸ್ವಲ್ಪ ಸ್ವಚ್ಛಗೊಳಿಸುತ್ತೀಯ ? ನನ್ನನ್ನು ಅಂದ 
ಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” 

“ ನಾನೇನು ಅಂಥ ಮೂರ್ಖಳೇ ! ನಾನು ನಿನ್ನ ಗೋಡೆ ತಿಕ್ಕಬೇಕೆ ? ಅದೆಂದೂ ಆಗದು ! ” 
ಹಾಗೆಂದು ಅವಳು ಮುಂದೆ ಹೊರಟಳು . 

ನೋಡುತ್ತಾಳೆ - ಒಂದು ನಾಯಿ ಅವಳ ಕಡೆಗೇ ಓಡಿ ಬರುತ್ತಿದೆ. ಅದು ತುಂಬ ಕೊಳ 
ಕಾಗಿದೆ. ಮೈಗೆಲ್ಲ ಮಣ್ಣು ಮೆತ್ತಿಕೊಂಡಿದೆ . 

“ಪ್ರೀತಿಯ ಹುಡುಗಿ ! ನನ್ನನ್ನು ಸ್ವಲ್ಪ ಶುಭ್ರಗೊಳಿಸುತ್ತೀಯ ? ಸ್ವಲ್ಪ ಅಂದಗೊಳಿಸು 
ತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” 

ಹುಡುಗಿ ಮುಖ ಸೊಟ್ಟಗೆ ಮಾಡಿಕೊಂಡು ಹೇಳಿದಳು : 

“ ಅಬ್ಬಾ , ಎಂಥ ಮಾತು ನಿನ್ನದು ! ಇಷ್ಟು ಕೊಳಕಾಗಿದೀಯ , ಮತ್ತೆ ನಾನು ನಿನ್ನನ್ನು 
ಶುದ್ದಗೊಳಿಸಬೇಕೆ? ಅದೆಲ್ಲ ಆಗದು !” 

ಹಾಗೆಂದು ಅವಳು ಮುಂದೆ ಹೋದಳು . 
ಅಲ್ಲಿ ಮುದುಕನ ಮಗಳನ್ನು ಸಂಧಿಸಿದ ಹೆಂಗಸೇ ಇವಳನ್ನೂ ಸಂಧಿಸಿದಳು . 
“ ನಮಸ್ಕಾರ, ಹುಡುಗಿ ! ” ಅವಳು ಹೇಳಿದಳು . 
“ ನಮಸ್ಕಾರ . ನಿಮಗೆ ಆರೋಗ್ಯವಿರಲಿ, ಚಿಕ್ಕಮ್ಮ ! ” 
“ ಎಲ್ಲಿಗೆ ಹೊರಟೆ ? ” 
“ ಎಲ್ಲಾದರೂ ಕೆಲಸ ಸಿಕ್ಕುತ್ತೆ ಅಂತ ಹುಡುಕಿಕೊಂಡು ಹೊರಟೆ, ಚಿಕ್ಕಮ್ಮ ” 
“ ನನ್ನ ಬಳಿಗೇ ಬಾ ! ” 
“ ಆಗಲಿ , ಚಿಕ್ಕಮ್ಮ , ಎಂಥ ಕೆಲಸ ನಿಮ್ಮ ಬಳಿ ? ” 

“ ಅಷ್ಟೇನೂ ಕಷ್ಟವಿಲ್ಲ, ಮಗಳೇ ! ನಾನು ಹೇಳಿದ ಹಾಗೆ ಮಾಡಿದರೆ ಎಲ್ಲ ಸುಲಭವಾಗಿ 
ಆಗುತ್ತೆ . ” 

“ ಯಾಕಾಗೊಲ್ಲ? ಒಂದು ಸಾರಿ ಹೇಳಿಕೊಡಿ, ಎರಡನೆ ಸಾರಿ ನಾನೇ ಮಾಡ್ತೀನಿ.” 

“ಕೆಲಸ ಹೀಗಿದೆ, ಹುಡುಗಿ ” ಎಂದು ಹೇಳಿದಳು ಆ ಹೆಂಗಸು. “ ಅಲ್ಲಿ ನೋಡು, ಮಡಕೆ 
ಗಳು ಕಾಣುತ್ತವ? ಬೆಳಿಗ್ಗೆ ಹಾಗೂ ಸಾಯಂಕಾಲ ನೀನು ಈ ಮಡಕೆಗಳಲ್ಲಿ ನೀರು ಕಾಯಿಸಬೇಕು. 
ಆ ನೀರನ್ನು ಒಂದು ಉದ್ದನೆಯ ಬಾನೆಗೆ ಹಾಕಬೇಕು. ಅದಕ್ಕೆ ಸ್ವಲ್ಪ ಹಿಟ್ಟು ಬೆರಸಿ ಕಣಕ ತಯಾರಿಸ 
ಬೇಕು . ಆದರೆ ನೋಡು, ಅದು ತುಂಬ ಬಿಸಿಯಾಗಿರಬಾರದು ! ಆಮೇಲೆ ಬಾಗಿಲ ಬಳಿ ನಿಂತು 
ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ ಹಾಕಬೇಕು. ಆಗ ನಿನ್ನ ಬಳಿಗೆ ನಾನಾ ರೀತಿಯ ಮೃಗಗಳು 
ಬರುತ್ತವೆ. ಅವಕ್ಕೆ ನೀನು ಚೆನ್ನಾಗಿ, ಹೊಟ್ಟೆ ತುಂಬ , ತಿನ್ನಿಸಬೇಕು. ಆಮೇಲೆ ಅವು ತಮಗೆ ಬೇಕಾದ 
ಸ್ಥಳಗಳಿಗೆ ಹೊರಟು ಹೋಗುತ್ತವೆ. ಅಂದ ಹಾಗೇ , ನೀನೇನೂ ಅವುಗಳಿಗೆ ಹೆದರಬೇಕಾದ್ದಿಲ್ಲ . 
ಅವು ನಿನಗೇನೂ ಹಾನಿ ಮಾಡವು. ಈ ಕೆಲಸ ಮಾಡಬಲ್ಲೆಯಾ? ” 

“ ಮಾಡಬಲ್ಲೆ ! ” ಎಂದಳು ಮುದುಕಿಯ ಮಗಳು . 

ಹೀಗೆ ಅವರು ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದರು . ಸಂಜೆಯಾಯಿತು. ಮುದುಕಿಯ 
ಮಗಳು ಒಲೆ ಹೊತ್ತಿಸಿದಳು , ನೀರು ತುಂಬಿದ ಮಡಕೆಗಳನ್ನು ಅದರ ಮೇಲಿರಿಸಿದಳು . ನೀರು 
ಕುದಿಯ ತೊಡಗಿದಾಗ ಅದನ್ನು ಒಂದು ದೊಡ್ಡ ಬಾನೆಗೆ ಸುರಿದಳು . ಆಮೇಲೆ ಅದಕ್ಕೆ ಅಲ್ಲಿದ್ದ 
ಇಡೀ ಹಿಟ್ಟನ್ನು ಹಾಕಿದಳು . ಅದು ಮೆತ್ತಗಿನ ಕಣಕವಾಗುವ ಬದಲು ಒಂದು ಗಟ್ಟಿ ಮುದ್ದೆ 
ಯಾಯಿತು. ಬಾಗಿಲ ಬಳಿ ನಿಂತು ಒಂದು, ಎರಡು, ಮೂರು ಬಾರಿ ಶಿಳ್ಳೆ ಹಾಕಿದಳು... ನಾನಾ 
ರೀತಿಯ ಮೃಗಗಳು ಬಂದು ನೆರೆಯ ತೊಡಗಿದವು. ಅವು ನಾ ಮುಂದು ತಾ ಮುಂದು ಅನ್ನುತ್ತ 
ಆಹಾರ ತಿನ್ನಲು ಬಾನೆಯ ಕಡೆಗೆ ಧಾವಿಸಿದವು. ಬಾಯಿ ಹಾಕಿದವು, ತಕ್ಷಣವೇ ನೆಲದ ಮೇಲೆ 
ಪಂಜಗಳನ್ನು ಮೇಲೆ ಮಾಡಿಕೊಂಡು ಬಿದ್ದವು. ಎಲ್ಲವೂ ಹಾಗೆಯೇ ಬಿದ್ದವು- ಸುಟ್ಟು ಸತ್ತು 
ಬಿದ್ದವು. 

ಎಲ್ಲ ಪ್ರಾಣಿಗಳೂ ತಿಂದು ಮಲಗಿ ಮತ್ತೆ ಏಳದೇ ಇದ್ದುದನ್ನು ಕಂಡು ಮುದುಕಿಯ ಮಗಳು 
ಒಡತಿಯ ಬಳಿಗೆ ಹೋಗಿ ಹೇಳಿದಳು : 

“ ಏನು, ಒಡತಿ , ನಿಮ್ಮ ಪ್ರಾಣಿಗಳೆಲ್ಲ ವಿಚಿತ್ರವಾದವು. ಎಲ್ಲವೂ ತಿಂದವು, ಮಲಗಿದವು, 
ಮತ್ತೆ ಏಳುತ್ತಲೇ ಇಲ್ಲವಲ್ಲ !” 

“ ಯಾಕೆ ಏಳುತ್ತಿಲ್ಲ ? ” ಎಂದು ಒಡತಿ ಕೂಗಿ ಹೇಳಿ ಬಾನೆಯ ಕಡೆಗೆ ಓಡಿದಳು . 
ನೋಡುತ್ತಾಳೆ – ಎಲ್ಲವೂ ನಿರ್ಜಿವವಾಗಿ ಬಿದ್ದಿವೆ. ಅವಳು ಕೈ ಮೇಲೆ ತಲೆ ಹೊತ್ತುಕೊಂಡು 
ಅರಚಿದಳು : 

“ ಅಯ್ಯೋ , ದೇವರೇ ! ಅಯ್ಯೋ , ಭಗವಂತ ! ಏನಮ್ಮ , ನೀನು ಏನು ಮಾಡಿಬಿಟ್ಟೆ ! ಅವ 
ನ್ನೆಲ್ಲ ಸಾಯಿಸಿ ಬಿಟ್ಟೆಯಲ್ಲ !” 

ಅವಳು ಗೋಳಾಡಿದಳು , ಅತ್ತಳು. ಆದರೆ ಅದು ಏನೂ ಸಹಾಯವಾಗಲಿಲ್ಲ. ಸತ್ತ ಪ್ರಾಣಿ 
ಗಳನ್ನೆಲ್ಲ ಒಂದು ಪೆಟ್ಟಿಗೆಯಲ್ಲಿ ತುಂಬಿ ಬೀಗ ಹಾಕಿ ಇರಿಸಿದಳು . 

ಮುದುಕಿಯ ಮಗಳ ಒಂದು ವರ್ಷದ ಅವಧಿ ಮುಗಿಯಿತು. ಒಡತಿ ಅವಳಿಗೆ ಒಂದು 
ಬಡಕಲು ಕುದುರೆಯನ್ನೂ ಒಂದು ಮುರುಕಲು ಬಂಡಿಯನ್ನೂ ಕೊಟ್ಟಳು. ಆ ಬಂಡಿಯೊಳಗೆ 
ಸತ್ಯ ಪ್ರಾಣಿಗಳ ಪೆಟ್ಟಿಗೆಯನ್ನಿರಿಸಿ ಹುಡುಗಿಯನ್ನು ಕಾಡಿಗೆ ಕಳಿಸಿಕೊಟ್ಟಳು. 

ಮುದುಕಿಯ ಮಗಳು ಹಿಂದೆ ತಾನು ಸಂಧಿಸಿದ್ದ ಆ ಒಲೆಯ ಬಳಿಗೆ ಬಂದಳು . ಅವಳಿಗೆ 
ತುಂಬ ಹಸಿವಾಯಿತು. ಒಲೆಯಲ್ಲಿ ತಟ್ಟೆಗಳಲ್ಲಿ ತುಂಬ ಸೀರೊಟ್ಟಿಗಳಿದ್ದವು – ಚೆನ್ನಾಗಿದ್ದವು, 
ಘಮಘಮಿಸುತ್ತಿದ್ದವು. ಮುದುಕಿಯ ಮಗಳು ಅವುಗಳಲ್ಲಿ ಒಂದನ್ನು ಎತ್ತಿಕೊಂಡಿ 
ಇಲ್ಲವೋ ಅದು ಪುಟನೆಗೆದುಕೊಂಡು ಮತ್ತೆ ಒಲೆಯೊಳಕ್ಕೆ ಹೋಗಿ ಬಿದ್ದಿತು. ಒಲೆಯ 
ಬಾಗಿಲು ಮುಚ್ಚಿಕೊಂಡಿತು . ಒಲೆ ಹೇಳಿತು : 

“ಏಯ್ , ಹುಡುಗಿ, ನೀನು ನನ್ನನ್ನು ಶುದ್ಧಗೊಳಿಸಲಿಲ್ಲ. ನಾನು ನಿನಗೇಕೆ ಸೀರೊಟ್ಟಿ 
ಕೊಡಬೇಕು ? ” 

ಹುಡುಗಿ ಅತ್ತಳು, ಮುಂದೆ ಹೊರಟಳು. 

ಬಾವಿಯ ಬಳಿಗೆ ಬಂದಳು . ತುಂಬ ಬಾಯಾರಿಕೆ ಆಯಿತು .ನೋಡುತ್ತಾಳೆ – ಬಾವಿಯ ತುಂಬ , 
ಅಂಚಿನವರೆಗೂ , ಸೀನೀರು ತುಂಬಿದೆ. ಅವಳು ಬೇಗ ಅದರ ಬಳಿಗೆ ಓಡಿದಳು . ಆದರೆ ಅವಳು 
ಹತ್ತಿರ ಹೋದಳೋ ಇಲ್ಲವೋ ಬಾವಿ ಇದ್ದಕ್ಕಿದ್ದಂತೆ ಒಣಗಿತು . ಸಣ್ಣ ಪಿಸುಧ್ವನಿಯಲ್ಲಿ 
ಹೇಳಿತು : 


“ಏಯ್, ಹುಡುಗಿ ! ನೀನು ನನ್ನನ್ನು ಶುದ್ಧಗೊಳಿಸಿ ಅಂದಗೊಳಿಸಲು ಇಷ್ಟಪಡಲಿಲ್ಲ. 
ಈಗ ನಿನಗೆ ನೀರೂ ಇಲ್ಲ ! ” 

ಹುಡುಗಿ ಅತ್ತಳು, ಮುಂದೆ ಹೋದಳು. 
ಅವಳು ಸೇಬಿನ ಗಿಡದ ಬಳಿಗೆ ಬಂದಳು . ಗಿಡದ ತುಂಬ ಹಣ್ಣುಗಳು ತೂಗಿ ಬಿದ್ದಿವೆ . ಎಲ್ಲವೂ 
ಚೆನ್ನಾದ ಹಣ್ಣುಗಳು – ಬೆಳ್ಳಿಯ ಹಣ್ಣುಗಳು , ಚಿನ್ನದ ಹಣ್ಣುಗಳು ! ಅವನ್ನು ನೋಡಿ ಹುಡುಗಿ 
ಅಂದುಕೊಂಡಳು : 

“ ಈ ಕೆಲವು ಸೇಬಿನ ಹಣ್ಣುಗಳನ್ನು ಅಮ್ಮನಿಗೆ ಬಳುವಳಿಯಾಗಿ ಕೊಟ್ಟರೆ ಚೆನ್ನಾಗಿರುತ್ತೆ .” 

ಹಾಗೆಂದುಕೊಂಡು ಅವಳು ಸೇಬಿನ ಗಿಡದ ಬಳಿಗೆ ಹೋದಳಷ್ಟೆ ತಕ್ಷಣವೇ ಸೇಬಿನ ಗಿಡ 
ತನ್ನ ಕೊಂಬೆಗಳನ್ನೆಲ್ಲ ಮೇಲಕ್ಕೆ ಮಾಡಿಕೊಂಡು ಬಿಟ್ಟಿತು. ಅದು ಹೇಳಿತು : 

“ಏಯ್ , ಹುಡುಗಿ ! ನನ್ನ ಸುತ್ತ ಬೆಳೆದಿದ್ದ ಕಳೆ ತೆಗೆದು ಹಾಕಿ ಸ್ವಚ್ಛಗೊಳಿಸಲು ನೀನು ಇಷ್ಟ 
ಪಡಲಿಲ್ಲ. ಈಗ ಸೇಬಿನ ಹಣ್ಣುಗಳೂ ನಿನಗಿಲ್ಲ ! ” 

ಮುದುಕಿಯ ಮಗಳು ಅತ್ತಳು. ಮುಂದಕ್ಕೆ ಹೋದಳು . 
ನೋಡುತ್ತಾಳೆ - ನಾಯಿಯೊಂದು ತನ್ನ ಬಳಿಗೇ ಓಡಿ ಬರುತ್ತಿದೆ. ಅದರ ಕತ್ತಿನ ಸುತ್ತ ಒಂದು 
ಸೊಗಸಾದ ಸರವಿದೆ – ಎಷ್ಟು ಸುಂದರವಾಗಿದೆ , ಹೇಗೆ ಥಳಥಳ ಅಂತ ಹೊಳೆಯುತ್ತಿದೆ, 
ಎಷ್ಟು ಉದ್ದವಾಗಿದೆ ! ಹುಡುಗಿ ಗಾಡಿಯಿಂದ ಇಳಿದು ಆ ನಾಯಿಯನ್ನು ಹಿಡಿದುಕೊಳ್ಳಲು 
ಓಡಿದಳು. ಅದರ ಸರವನ್ನು ತೆಗೆದುಕೊಳ್ಳಲು ಅವಳು ಇಚ್ಚಿಸಿದ್ದಳು. ನಾಯಿ ಅವಳಿಗೆ ಹೇಳಿತು : 

“ಏಯ್, ಹುಡುಗಿ , ನನ್ನ ಮೈ ಶುಭ್ರಗೊಳಿಸಿ ಅಂದಗೊಳಿಸಲು ನೀನು ಇಚ್ಚಿಸಲಿಲ್ಲ . ಈ 
ಸರವೂ ನಿನಗೆ ಸೇರೋಲ್ಲ! ” 

ಹಾಗೆಂದು ಅದು ಓಡಿ ಹೋಯಿತು. ಮುದುಕಿಯ ಮಗಳು ಅಳುತ್ತ ಮನೆಯ ಕಡೆಗೆ 
ನಡೆದಳು . 

ಮನೆ ತಲುಪಿದಳು . ಹೊರಗಿನಿಂದಲೇ ಮುದುಕಿಯನ್ನೂ ಮುದುಕನನ್ನೂ ಕೂಗಿ ಕರೆದು 
ಹೇಳುತ್ತಾಳೆ: 
“ ಬನ್ನಿ , ನಾನು ತಂದಿರುವ ಸಂಪತ್ತನ್ನೆಲ್ಲ ನೋಡಿ, ಬನ್ನಿ ! ” 

ಮುದುಕನೂ ಮುದುಕಿಯ ಗುಡಿಸಿಲಿನಿಂದ ಹೊರ ಬಂದರು . ನೋಡುತ್ತಾರೆ - ಮಗಳು 
ಬಂದಿದಾಳೆ ! ಅವರಿಗೆ ತುಂಬ ಸಂತೋಷವಾಯಿತು. ಅವಳನ್ನು ಗುಡಿಸಿಲಿನೊಳಕ್ಕೆ ಕರೆದುಕೊಂಡು 
ಹೋದರು. ಪೆಟ್ಟಿಗೆಯನ್ನೂ ಒಳಕ್ಕೆ ಹೊತ್ತು ತಂದರು. ಪೆಟ್ಟಿಗೆ ತೆರೆದು ನೋಡುತ್ತಾರೆ - 
ಅದರ ತುಂಬ ಸತ್ಯ ಹಾವುಗಳು , ಹಲ್ಲಿಗಳು ಹಾಗೂ ಕಪ್ಪೆಗಳು ! ಮುದುಕಿ ಹೇಗೆ ಚೀರಿದಳು : 

" ಮಗಳೇ , ಏನಿದು ನೀನು ತಂದಿರೋದು? ” 

ಆಗ ಮುದುಕಿಯ ಮಗಳು ತನಗೆ ಆದ ಅನುಭವವನ್ನೆಲ್ಲ ವಿವರಿಸಿ ತಿಳಿಸಿದಳು . ಮುದುಕಿ 
ಹೇಳಿದಳು : 

“ಹೋಗಲಿ ಬಿಡು . ನೀನು ಮನೆಯಲ್ಲೇ ಕುಳಿತಿರೋದು ಒಳ್ಳೆಯದು. ಏನು ಮಾಡೋಕೆ
ಆಗುತ್ತೆ - ನಿನ್ನ ಅದೃಷ್ಟವೇ ಅಂಥದು ! ಅವಳು ಎಷ್ಟೊಂದು ಸಂಪತ್ತು ತಂದಳು , ಆದರೆ ನೀನು 
ಈ ಸತ್ಯ ಹಾವು ಕಪ್ಪೆಗಳನ್ನಷ್ಟೆ ತಂದಿದೀಯ ! ಸದ್ಯಕ್ಕೆ ನೀನು ಜೀವದಿಂದ ವಾಪಸಾದೆಯಲ್ಲ, 
ಅಷ್ಟೇ ಸಾಕು !” 
- ಹೀಗೆ ಅವರು ವಾಸಿಸುತ್ತಿದ್ದಾರೆ. ಬ್ರೆಡ್ಡು ಉಪ್ಪು ತಿಂದುಕೊಂಡು ಜೀವಿಸುತ್ತಿದ್ದಾರೆ. ನಾನೂ 
ಅಲ್ಲಿಗೆ ಹೋಗಿದ್ದೆ. ಜೇನು ಮದ್ಯ ಕುಡಿದೆ. ಅದು ಬಾಯಿಯ ಪಕ್ಕದಲ್ಲೇ ಹರಿದು ಹೋಯಿತು. 
ಬಾಯಿಯೊಳಕ್ಕೆ ಒಂದು ತೊಟ್ಟೂ ಬೀಳಲಿಲ್ಲ. ಮುದುಕನ ಮಗಳು ಮದುವೆಯಾದಳು . ಆದರೆ 
ಮುದುಕಿಯ ಮಗಳು ಇದುವರೆವಿಗೂ ಒಂಟಿಯಾಗಿಯೇ ಉಳಿದಿದಾಳೆ.