ಬಹಳ ಕಾಲದ ಹಿಂದೆ , ನೆನಪಿಗೂ ಸಿಗದಂತಹ ಕಾಲದಲ್ಲಿ, ಬಾನಾಡಿ ರಾಜನಾಗಿತ್ತು , ಇಲಿ 
ರಾಣಿಯಾಗಿತ್ತು . ಅವುಗಳಿಗೆ ತಮ್ಮದೇ ಹೊಲವಿತ್ತು . ಈ ಹೊಲದಲ್ಲಿ ಅವುಗೋಧಿ ಬೆಳೆದವು. 
ಕಟಾವು ಮಾಡಿ ತೆನೆಯಿಂದ ಕಾಳುಗಳನ್ನು ಬೇರ್ಪಡಿಸಿದ ಮೇಲೆ ಅವು ಕಾಳುಗಳನ್ನು ತಮ್ಮ 
ಮಧ್ಯೆ ಸಮನಾಗಿ ಹಂಚಿಕೊಂಡವು. ಆದರೆ ಕೊನೆಯಲ್ಲಿ ಒಂದು ಗೋಧಿಕಾಳು ಉಳಿದು ಬಿಟ್ಟಿತು. 
ಇಲಿ ಹೇಳಿತು : 

“ ಈ ಕೊನೆಯ ಕಾಳು ನನ್ನದು. ” 
ಬಾನಾಡಿ ಹೇಳಿತು : 
“ ಇಲ್ಲ, ನನ್ನದು !” 
“ ಹಾಗಾದರೆ ನಾನು ಇದನ್ನೂ ಅರ್ಧ ಭಾಗ ಮಾಡ್ತೀನಿ.” 

ಬಾನಾಡಿ ಅದಕ್ಕೆ ಒಪ್ಪಿಕೊಂಡಿತು . ಇಲಿ ಗೋಧಿ ಕಾಳನ್ನು ತನ್ನ ಹಲ್ಲುಗಳ ಮಧ್ಯೆ ಕಚ್ಚಿ 
ಹಿಡಿದು ತಕ್ಷಣವೇ ಓಡಿ ಹೋಗಿ ತನ್ನ ಬಿಲದೊಳಗೆ ಸೇರಿಕೊಂಡಿತು . ರಾಜ ಬಾನಾಡಿ ಹುಯಿಲೆ 
ಬ್ಬಿಸಿತು , ಅದು ರಾಣಿ ಇಲಿಯ ಮೇಲೆ ದಾಳಿ ಮಾಡಲೆಂದು ಕಾಡಿನ ಹಕ್ಕಿಗಳನ್ನೆಲ್ಲ ಅಣಿನೆರೆಯಿಸಿತು . 
ರಾಣಿ ಇಲಿಯ ಕಾಡಿನಲ್ಲಿದ್ದ ಮೃಗಗಳನ್ನೆಲ್ಲ ಒಂದುಗೂಡಿಸಿತು . ಪ್ರಾರಂಭವಾಯಿತು ಯುದ್ದ . 

ಇಡೀ ದಿನ ಹೋರಾಡಿದವು. ಸಂಜೆ ಎಲ್ಲವೂ ವಿಶ್ರಾಂತಿಗಾಗಿ ಹೋದವು. ರಾಣಿ ಇಲಿ ತನ್ನ
ಸೈನ್ಯ ಬಲವನ್ನೆಲ್ಲ ಪರಿಶೀಲಿಸಿತು . ಅಲ್ಲಿ ಇರುವೆಗಳು ಇಲ್ಲದಿರುವುದನ್ನು ಕಂಡಿತು . ಎಲ್ಲ ಇರುವೆ 
ಗಳೂ ಕೂಡಲೇ ಯುದ್ಧದಲ್ಲಿ ಭಾಗಿಗಳಾಗಬೇಕೆಂದು ಆಜ್ಞಾಪಿಸಿತು. ಇರುವೆಗಳು ಓಡೋಡಿ 
ಬಂದವು. ರಾತ್ರಿ ಕತ್ತಲಿನಲ್ಲಿ ಮರ ಹತ್ತಿ ಹೋಗಿ ಅಲ್ಲಿ ವಿರಮಿಸಿದ್ದ ಎಲ್ಲ ಹಕ್ಕಿಗಳ ರೆಕ್ಕೆಗಳ ಬಳಿ 
ಪುಕ್ಕಗಳನ್ನು ಕಚ್ಚಿ ಹಾಕಬೇಕೆಂದು ಅದು ಇರುವೆಗಳಿಗೆ ಆಜ್ಞೆ ನೀಡಿತು. 

ಮಾರನೆಯ ದಿನ ಬೆಳಗಾಗುತ್ತಲೇ , ರಾಣಿ ಇಲಿ ಕೂಗಿ ಹೇಳಿತು : 
“ ಏಳಿ, ಎದ್ದೇಳಿ ಎಲ್ಲ. ಯುದ್ಧಕ್ಕೆ ಹೊರಡಿ !” 

ಹಕ್ಕಿಗಳು ಎದ್ದು ಹಾರಲು ನೋಡುತ್ತವೆ – ಆಗುತ್ತಲೇ ಇಲ್ಲ. ಏನೋ ಆಗಿ ಬಿಟ್ಟಿದೆ! 
ಅವು ಹಾರ ಹೊರಟಂತೆ ಎಲ್ಲ ನೆಲದ ಮೇಲೆ ಬೀಳುತ್ತಿದ್ದವು. ಮೃಗಗಳು ಅವುಗಳ ಮೇಲೆ ಬಿದ್ದು 
ಕೊಂದುಹಾಕಿದವು. ಹೀಗೆ ರಾಣಿ ಇಲಿ ರಾಜನ ಮೇಲೆ ವಿಜಯ ಸಾಧಿಸಿತು. 

ಆದರೆ ಒಂದು ಹದ್ದು ಮಾತ್ರ ಹಾರುವುದು ಅಪಾಯಕರ ಎಂದು ಕಂಡುಕೊಂಡಿತು. 
ಮರದ ಮೇಲೆಯೇ ಉಳಿಯಿತು. ಅಷ್ಟು ಹೊತ್ತಿಗೆ ಆ ಕಡೆಗೆ ಒಬ್ಬ ಬೇಟೆಗಾರ ಬಂದ. ಮರದ 
ಮೇಲೆ ಹದ್ದು ಕುಳಿತಿರುವುದನ್ನು ಕಂಡ. ಅದನ್ನು ಹೊಡೆಯಲು ಗುರಿ ಇಟ್ಟ , ಆಗ ಹದ್ದು ಮೊರೆ 
ಇಟ್ಟಿತು : 

“ ಯುವ ಬೇಟೆಗಾರ, ನನ್ನನ್ನು ಕೊಲ್ಲಬೇಡ, ನಾನು ನಿನಗೆ ಕಷ್ಟದಲ್ಲಿ ನೆರವಾಗುತ್ತೇನೆ!” 
ಬೇಟೆಗಾರ ಎರಡನೆಯ ಬಾರಿ ಗುರಿ ಇಟ್ಟ . ಹದ್ದು ಮತ್ತೆ ಅವನನ್ನು ಕೇಳಿಕೊಂಡಿತು : 

“ ನನ್ನನ್ನು ಕೊಲ್ಲುವ ಬದಲು ನಿನ್ನ ಜೊತೆ ಕರೆದೊಯ್ಯ , ನಾನು ನಿನಗೆ ಕಷ್ಟದಲ್ಲಿ ಹೇಗೆ 
ನೆರವಾಗುತ್ತೇನೆ ಅನ್ನುವುದನ್ನು ನೀನೇ ಕಾಣುವೆ! ” 

ಬೇಟೆಗಾರ ಮೂರನೆಯ ಬಾರಿ ಗುರಿ ಇಟ್ಟ . ಹದ್ದು ಮತ್ತೆ ಅವನನ್ನು ಕೇಳಿಕೊಳ್ಳ ತೊಡಗಿತು : 

“ ಅಯ್ಯೋ , ನನ್ನನ್ನು ಕೊಲ್ಲಬೇಡ. ನಿನ್ನ ಜೊತೆ ಕರೆದೊಯ್ಯ , ನಾನು ನಿನಗೆ ಕಷ್ಟದಲ್ಲಿ 
ನೆರವಾಗುತ್ತೇನೆ! ” 
- ಬೇಟೆಗಾರ ಅದರ ಮಾತನ್ನು ನಂಬಿದ, ಮರ ಹತ್ತಿ ಅದನ್ನು ತೆಗೆದುಕೊಂಡು ಮನೆಗೆ 
ಹೋದ. ಹದ್ದು ಅವನಿಗೆ ಹೇಳಿತು : 

- “ ನನ್ನ ರೆಕ್ಕೆಗಳು ಮತ್ತೆ ಚೆನ್ನಾಗಿ ಬೆಳೆದು ನನ್ನನ್ನು ಎಲ್ಲಿಗಂದರೆ ಅಲ್ಲಿಗೆ ಒಯ್ಯುವಂತಾಗುವ 
ವರೆಗೂ ನನಗೆ ಚೆನ್ನಾಗಿ ಮಾಂಸ ಕೊಟ್ಟು ಪೋಷಣೆ ಮಾಡು.” 

ಆ ಬೇಟೆಗಾರನ ಬಳಿ ಎರಡು ಮೇಕೆಗಳು ಒಂದು ಕುರಿ ಇದ್ದವು. ಅವನು ಒಂದು ಮೇಕೆ 
ಯನ್ನು ಕೊಂದ. ಹದ್ದು ಆ ಮೇಕೆಯ ಮಾಂಸವನ್ನು ಒಂದು ವರ್ಷ ತಿಂದಿತು . ಮತ್ತೆ ಬೇಟೆ | 
ಗಾರನಿಗೆ ಹೇಳಿತು : 
“ನನ್ನನ್ನು ಸ್ವಲ್ಪ ಹಾರಿ ಬಿಡು, ನನ್ನ ರೆಕ್ಕೆಗಳು ಸಾಕಷ್ಟು ಬೆಳೆದಿವೆಯೋ ಇಲ್ಲವೋ ನೋಡು 
ತೇನೆ. ” 

ಬೇಟೆಗಾರ ಅದನ್ನು ತನ್ನ ಗುಡಿಸಿಲಿನಿಂದ ಹೊರಕ್ಕೆ ಹಾರಿ ಬಿಟ್ಟ , ಹದ್ದು ಹಾರಿತು, ಹಾರಿತು . 
ಮಧ್ಯಾಹ್ನ ಹಿಂದಿರುಗಿ ಹೇಳಿತು : 

“ನನಗೆ ಶಕ್ತಿ ಇನ್ನೂ ಸಾಲದು! ಎರಡನೆಯ ಮೇಕೆಯನ್ನೂ ಕೊಂದು ಮಾಂಸ ಹಾಕು !” 

ಬೇಟೆಗಾರ ಅದರ ಮಾತನ್ನು ಕೇಳಿಕೊಂಡು ಎರಡನೆಯ ಮೇಕೆಯನ್ನೂ ಕೊಂದ. ಹದ್ದು 
ಅದನ್ನು ಇನ್ನೊಂದು ವರ್ಷದವರೆಗೆ ತಿಂದಿತು. ಈ ಮೇಕೆಯನ್ನೂ ತಿಂದು ಮುಗಿಸಿದ ಮೇಲೆ 
ಅದು ಮತ್ತೆ ಹಾರಿತು ... ಇಡೀ ದಿನಕ್ಕೆ ಸ್ವಲ್ಪ ಕಮ್ಮಿ ಕಾಲ ಹಾರಿತು . ಸಂಜೆ ಹಿಂದಿರುಗಿ ಹೇಳಿತು : 

“ಈಗ ಕುರಿಯನ್ನೂ ಕೊಂದು ನನಗೆ ಆಹಾರವಾಗಿ ನೀಡು ! ” 

ಬೇಟೆಗಾರ ಯೋಚಿಸಿದ: “ಏನು ಮಾಡುವುದು ? ಕೊಲ್ಲುವುದೋ , ಬೇಡವೋ ? ” 
ಆಮೇಲೆ ಹೇಳಿದ: 

“ ನಿನಗೆ ಎಷ್ಟೊಂದು ಕೊಟ್ಟಿದ್ದಾಯಿತು. ಸರಿ , ಇದನ್ನೂ ತೆಗೆದುಕೋ ! ” 

ಕುರಿಯನ್ನೂ ಕೊಂದ. ಹದ್ದು ಅದರ ಮಾಂಸವನ್ನು ಇನ್ನೊಂದು ವರ್ಷದವರೆಗೆ ತಿಂದಿತು. 
ಆಮೇಲೆ ಹಾರಿತು - ಎಷ್ಟು ಎತ್ತರ, ಎಷ್ಟು ಎತ್ತರ, ಮೋಡಗಳವರೆಗೂ ಹಾರಿತು ! ಹಿಂದಕ್ಕೆ 
ಹಾರಿ ಬಂದು ಅದು ಬೇಟೆಗಾರನಿಗೆ ಹೇಳಿತು : 

“ ನಿನಗೆ ತುಂಬ ವಂದನೆಗಳು . ನೀನೊಬ್ಬ ಒಳ್ಳೆಯ ಮನುಷ್ಯ . ನನ್ನನ್ನು ಚೆನ್ನಾಗಿ ಪೋಷಿಸಿ 
ಬೆಳೆಸಿದೆ. ಈಗ ನನ್ನ ಮೇಲೆಕೂತುಕೋ ! ” 

ಬೇಟೆಗಾರ ಕೇಳಿದ: 
“ ಯಾಕೆ ? ” 
ಹದ್ದು ಹೇಳಿತು : 
“ಕೂತುಕೊ ಅಂತ ಹೇಳುತ್ತಿಲ್ಲವೇ ! ” 
ಸರಿ, ಅವನು ಅದರ ಮೇಲೆ ಕುಳಿತ . 

ಹದ್ದು ಅವನನ್ನು ನೀಲಿ ಮೋಡಗಳವರೆಗೂ ಎತ್ತಿಕೊಂಡು ಹೋಗಿ ಅಲ್ಲಿಂದ ಅವನನ್ನು 
ಕೆಳಕ್ಕೆ ಬಿಟ್ಟಿತು. ಬೇಟೆಗಾರ ಕೆಳಕ್ಕೆ ಬೀಳತೊಡಗಿದ. ಅಷ್ಟರಲ್ಲೇ ಹದ್ದು ಮತ್ತೆ ಅವನನ್ನು ಗಾಳಿ 
ಯಲ್ಲಿದ್ದಂತೆಯೇ ಹಿಡಿದು ಹೇಳಿತು : 

“ ಹುಂ . ಏನಂತಿ ? ಹೇಗೆ ಅನ್ನಿಸಿತು ನಿನಗೆ ? ” 
ಅವನು ಹೇಳಿದ : 
“ ನಾನು ಸತ್ತೇ ಹೋದೆನೇನೋ ಅನ್ನಿಸಿತು !” 
ಹದ್ದು ಹೇಳಿತು : 

“ ನನಗೂ ಹಾಗೇ ಅನ್ನಿಸಿತು - ನೀನು ನನ್ನ ಗುರಿ ಇಟ್ಟಾಗ.” ಆಮೇಲೆ ಹೇಳಿತು : 
“ಕೂತುಕೋ ಮತ್ತೆ .” 

ಬೇಟೆಗಾರ ಸಹಜವಾಗಿಯೇ ಕೂರಲು ಇಷ್ಟಪಡಲಿಲ್ಲ. ಆದರೆ ಹಾಗೆ ಮಾಡದೆ ಇರಲೂ 
ಸಾಧ್ಯವಿರಲಿಲ್ಲ. ಮತ್ತೆ ಹತ್ತಿ ಕೂತ. 

ಹದ್ದು ಮತ್ತೆ ಅವನನ್ನು ನೀಲಿ ಮೋಡಗಳವರೆಗೂ ಕರೆದೊಯ್ದಿತು, ಮತ್ತೆ ಅವನನ್ನು 
ಕೆಳಕ್ಕೆ ಬಿಟ್ಟಿತು. ಅವನು ಇನ್ನೇನು ಭೂಮಿಗೆ ತೀರ ಸಮಿಾಪ ಬಂದಿದ್ದ ಅನ್ನುವಾಗ ಅವನನ್ನು 
ಹಿಡಿದು ಕೇಳಿತು : 

“ ಹುಂ , ಏನಂತಿ ? ಹೇಗೆ ಅನ್ನಿಸಿತು ನಿನಗೆ ? ” 
ಅವನು ಅದಕ್ಕೆ ಹೇಳಿದ : 
“ ನನ್ನ ಮೂಳೆಗಳೆಲ್ಲ ಪುಡಿಪುಡಿಯಾದವೇನೋ ಅನ್ನಿಸಿತು.” 
ಆಗ ಹದ್ದು ಅವನಿಗೆ ಹೇಳಿತು : 

“ ಹಾಗೇ ಅನ್ನಿಸಿತು ನನಗೂ - ನೀನು ಎರಡನೆಯ ಬಾರಿ ನನ್ನ ಮೇಲೆ ಗುರಿ ಇಟ್ಟಾಗ. 
ಸರಿ , ಕೂತುಕೊ ಮತ್ತೆ . ” 

ಅವನು ಕೂತ. 

ಹದ್ದು ಅವನನ್ನು ನೀಲಿ ಮೋಡಗಳವರೆಗೂ ಕರೆದೊಯ್ದಿತು. ಅಲ್ಲಿಂದ ಅವನನ್ನು 
ಕೆಳಕ್ಕೆ ಬಿಟ್ಟಿತು. ಅವನು ಇನ್ನೇನು ಭೂಮಿಯ ಮೇಲೆ ಬೀಳಲಿದ್ದ ಅನ್ನುವಾಗ ಅದು ಅವನನ್ನು 
ಹಿಡಿದು ಕೇಳಿತು : 

“ ಹುಂ , ಏನಂತಿ ? ಹೇಗೆ ಅನ್ನಿಸಿತು ನಿನಗೆ ? ” 
“ ನಾನು ಈ ಪ್ರಪಂಚದಲ್ಲಿ ಇನ್ನೇನು ಇಲ್ಲವೇ ಇಲ್ಲವೇನೋ ಅನ್ನಿಸಿತು ನನಗೆ. ” 
ಆಗ ಹದ್ದು ಅವನಿಗೆ ಹೇಳಿತು : 

“ನೀನು ಮೂರನೆಯ ಬಾರಿ ನನ್ನ ಮೇಲೆ ಗುರಿ ಇಟ್ಟಾಗ ನನಗೂ ಹಾಗೇ ಅನ್ನಿಸಿತು.” 
ಆಮೇಲೆ ಮತ್ತೆ ಹೇಳಿತು : “ ಈಗ ನಾನೂ ನೀನೂ ಸರಿಸಮ . ನಮ್ಮ ಜಗಳ ಪರಿಹಾರವಾಯಿತು. 
ನನ್ನ ಮೇಲೆ ಕುಳಿತುಕೋ . ನನ್ನ ರಾಜ್ಯಕ್ಕೆ , ನನ್ನ ಮನೆಗೆ ಹಾರಿ ಹೋಗೋಣ.” 

ಅವರು ತುಂಬ ದೂರ ಹಾರಿ ಹೋದರು . ಕೊನೆಗೆ ಹದ್ದಿನ ಚಿಕ್ಕಪ್ಪನ ಮನೆಯ ಸಮೀಪ 
ಬಂದರು . ಹದ್ದು ಹೇಳಿತು : 
“ ಗುಡಿಸಿಲಿನ ಒಳಕ್ಕೆ ಹೋಗು. ನೀನು ನನ್ನನ್ನು ಕಂಡೆಯಾ ಎಂದು ಅವರು ಕೇಳಿದಾಗ 
ಹೇಳು: ನನಗೆ ಮಾಂತ್ರಿಕ ಮೊಟ್ಟೆ ಕೊಡಿ, ತಕ್ಷಣವೇ ಅವನನ್ನು ಕರೆದುಕೊಂಡು ಬರುತ್ತೇನೆ. 

ಬೇಟೆಗಾರ ಗುಡಿಸಿಲಿನ ಒಳಗೆ ಹೋದ. ಅಲ್ಲಿ ಅವರು ಅವನನ್ನು ಕೇಳಿದರು : 
“ನೀನು ನಿನ್ನ ಸ್ವಂತ ಇಚ್ಛೆಯಿಂದ ಇಲ್ಲಿಗೆ ಬಂದೆಯೋ ಅಥವಾ ಸ್ವಂತ ಇಚ್ಛೆ ಇಲ್ಲದೆಯೋ ? ” 
ಅವನು ಅವರಿಗೆ ಉತ್ತರಿಸಿದ: 
“ನಿಜವಾದ ಕೊಸ್ಟಾಕ್ ಯಾವತ್ತೂ ಎಲ್ಲಿಗೂ ಸ್ವಂತ ಇಚ್ಛೆಯಿಂದಲೇ ಹೋಗುವುದು. ” 
ಅವರು ಅವನನ್ನು ಮತ್ತೆ ಕೇಳಿದರು : 
“ ನಮ್ಮ ಸೋದರಳಿಯನನ್ನು ಎಲ್ಲಾದರೂ ಕಂಡೆಯಾ ? ಯುದ್ಧಕ್ಕೆ ಹೋಗಿ ಮೂರು 
ವರ್ಷ ಆಯಿತು. ಪತ್ತೆಯೇ ಇಲ್ಲ. ” 

ಅವನು ಅವರಿಗೆ ಹೇಳಿದ: 
“ ಮಾಂತ್ರಿಕ ಮೊಟ್ಟೆ ಕೊಡಿ – ತಕ್ಷಣವೇ ಅವನನ್ನು ಕರೆದುಕೊಂಡು ಬರುತ್ತೇನೆ.” 
ಅವರು ಹೇಳಿದರು : 

ನಿನಗೆ ಮಾಂತ್ರಿಕ ಮೊಟ್ಟೆ ಕೊಡುವುದಕ್ಕಿಂತ ಅವನನ್ನು ಎಂದೂ ನೋಡದೇ ಇರುವುದೇ 
ಮೇಲು. ” 

ಆಗ ಅವನು ಗುಡಿಸಿಲಿನಿಂದ ಹೊರ ಬಂದು ಹದ್ದಿಗೆ ಹೇಳಿದ: 

* ` ಮಾಂತ್ರಿಕ ಮೊಟ್ಟೆಕೊಡುವುದಕ್ಕಿಂತ ಅವನನ್ನು ಎಂದೂ ನೋಡದೇ ಇರುವುದೇ ಮೇಲು 
ಅಂತ ಅವರು ಹೇಳಿದರು .” 

ಹದ್ದು ಅವನಿಗೆ ಹೇಳಿತು : 
“ ಮುಂದಕ್ಕೆ ಹಾರಿ ಹೋಗೋಣ.” 

ಅವರು ಹಾರಿಕೊಂಡು ಹಾರಿಕೊಂಡು ಹೋದರು . ಕೊನೆಗೆ ಹದ್ದಿನ ಸೋದರನ ಮನೆಗೆ 
ಹೋದರು. ಅಲ್ಲೂ ಚಿಕ್ಕಪ್ಪನ ಮನೆಯಲ್ಲಿ ಆದ ಹಾಗೆಯೇ ಆಯಿತು – ಬೇಟೆಗಾರನಿಗೆ ಮಾಂತ್ರಿಕ 
ಮೊಟ್ಟೆ ಸಿಗಲಿಲ್ಲ. ಅವರು ಹದ್ದಿನ ತಂದೆಯ ಮನೆಗೆ ಹಾರಿ ಹೋದರು . ಹದ್ದು ಬೇಟೆಗಾರನಿಗೆ 
ಹೇಳಿತು : 

“ ಗುಡಿಸಿಲಿನೊಳಕ್ಕೆ ಹೋಗು. ನನ್ನ ವಿಷಯ ಕೇಳಿದ ಕೂಡಲೇ ಹೇಳು : ಮಾಂತ್ರಿಕ ಮೊಟ್ಟೆ 
ಕೊಡಿ – ತಕ್ಷಣವೇ ಕರೆದುಕೊಂಡು ಬರುತ್ತೇನೆ. 

ಬೇಟೆಗಾರ ಗುಡಿಸಿಲಿನೊಳಕ್ಕೆ ಹೋದ. ಅವರು ಕೇಳಿದರು : 
“ನೀನು ಸ್ವಂತ ಇಚ್ಛೆಯಿಂದ ಬಂದೆಯೋ ಅಥವಾ ಸ್ವಂತ ಇಚ್ಛೆ ಇಲ್ಲದೆಯೋ ? ” 
ಅವನು ಅವರಿಗೆ ಉತ್ತರಿಸಿದ: 
“ನಿಜವಾದ ಕೊಸ್ಟಾಕ್ ಯಾವತ್ತೂ ಎಲ್ಲಿಗೂ ಸ್ವಂತ ಇಚ್ಛೆಯಿಂದಲೇ ಹೋಗುವುದು .” 
ಅವರು ಅವನನ್ನು ಮತ್ತೆ ಕೇಳಿದರು : 

“ನಮ್ಮ ಮಗನನ್ನು ಎಲ್ಲಾದರೂ ಕಂಡೆಯಾ ? ಯುದ್ಧಕ್ಕೆ ಹೋಗಿ ನಾಲ್ಕನೆಯ ವರ್ಷ 
ಮುಗಿಯುತ್ತಿದೆ. ಅವನು ಅಲ್ಲೇ ಏನಾದರೂ ಸತ್ತುಹೋದನೋ ಏನೋ ? ” 

ಅವನು ಅವರಿಗೆ ಹೇಳಿದ : 
“ ಮಾಂತ್ರಿಕ ಮೊಟ್ಟೆ ಕೊಡಿ – ತಕ್ಷಣವೇ ನಾನು ಅವನನ್ನು ಕರೆದುಕೊಂಡು ಬರುತ್ತೇನೆ.” 
ಹದ್ದಿನ ಅಪ್ಪ ಹೇಳಿತು : 
“ಮೊಟ್ಟೆ ಯಾಕೆ ನಿನಗೆ ? ಬೇಕಾದರೆ ನಿನಗೆ ಬೇಕಾದಷ್ಟು ಹಣ ಕೊಡುತ್ತೇನೆ. ” 
ಅವನು ಹೇಳಿದ : 
“ ನನಗೆ ಹಣ ಬೇಕಿಲ್ಲ. ಮಾಂತ್ರಿಕ ಮೊಟ್ಟೆ ಕೊಡಿ! ” 

“ಸರಿ , ನಿನಗೆ ಮಾಂತ್ರಿಕ ಮೊಟ್ಟೆ ಕೊಡುತ್ತೇನೆ. ಆದರೆ ಬೇಗ ಮಗನನ್ನು ಕರೆದುಕೊಂಡು 
ಬಾ ! ” 

ಬೇಟೆಗಾರ ಹದ್ದನ್ನು ಗುಡಿಸಿಲಿನೊಳಕ್ಕೆ ಕರೆದೊಯ್ದು, ಎಲ್ಲರಿಗೂ ಎಷ್ಟೊಂದು ಆನಂದ 
ವಾಯಿತು ! ಅವರು ಬೇಟೆಗಾರನಿಗೆ ಮಾಂತ್ರಿಕ ಮೊಟ್ಟೆ ಕೊಟ್ಟು ಹೇಳಿದರು : 

“ ದಾರಿಯಲ್ಲಿ ಎಲ್ಲಾದರೂ ಒಡೆದು ಹಾಕಿ ಬಿಡಬೇಡ, ಮನೆಗೆ ಹೋಗು, ಒಂದು ದೊಡ್ಡ 
ಬೇಲಿ ನಿರ್ಮಿಸು. ಅನಂತರವಷ್ಟೆ ಮೊಟ್ಟೆಯನ್ನು ಒಡೆಯಬಹುದು.” 

ಬೇಟೆಗಾರ ಮನೆಯ ಕಡೆಗೆ ಹೊರಟ . ಹೋದ, ಹೋದ. ಅವನಿಗೆ ಬಾಯಾರಿಕೆ ಆಯಿತು. 
ಒಂದು ಬಾವಿಯನ್ನು ಕಂಡ. ನೀರು ಕುಡಿಯ ತೊಡಗಿದನೋ ಇಲ್ಲವೋ ಮಾಂತ್ರಿಕ ಮೊಟ್ಟೆ 
ಬಕೆಟ್ಟಿನ ಅಂಚಿಗೆ ತಗುಲಿ ಒಡೆದು ಹೋಯಿತು. ಆ ಮೊಟ್ಟೆಯೊಳಗಿನಿಂದ ದನಕರುಗಳ ಒಂದು 
ದೊಡ್ಡ ಹಿಂಡೇ ಹೊರ ಬರ ತೊಡಗಿತು ! ಅವು ಒಂದೇ ಸಮನಾಗಿ ಹೊರಕ್ಕೆ ಬರುತ್ತಲೇ ಇವೆ. 
ಅವನ್ನು ಹೇಗೆ ತಡೆಯುವುದು ಅನ್ನುವುದು ಬೇಟೆಗಾರನಿಗೆ ತಿಳಿಯಲಿಲ್ಲ. ಒಂದು ಕಡೆಯಿಂದ 
ಅಟ್ಟಿಸಿಕೊಂಡು ಬಂದರೆ ಅವು ಇನ್ನೊಂದು ಕಡೆಯಿಂದ ಹೊರ ಓಡುತ್ತಿದ್ದವು. ಅವನು 
ನಿಸ್ಸಹಾಯಕನಾಗಿ ಕೂಗಾಡಿದ. ಅವನ ಕೈಲಿ ಏನು ಮಾಡಲೂ ಆಗಲಿಲ್ಲ. ನೋಡಿದ – ಹತ್ತಿರ 
ದಲ್ಲೇ ಒಂದು ಹಾವು ಹರಿದು ಹೋಗುತ್ತಿತ್ತು . 

“ ನಾನು ಈ ದನಕರುಗಳನ್ನೆಲ್ಲ ಮತ್ತೆ ಮೊಟ್ಟೆಯೊಳಕ್ಕೆ ಹೋಗುವಂತೆ ಮಾಡಿದರೆ ನೀನು 
ನನಗೇನು ಕೊಡುತ್ತೀಯ ? ” 
ಅವನು ಕೇಳಿದ : 
“ ನಿನಗೇನು ಬೇಕು ? ” 
ಅದು ಹೇಳಿತು : 

“ನೀನು ನಿನ್ನ ಮನೆಯಲ್ಲಿ ಇಲ್ಲದಿದ್ದಾಗ ಅಲ್ಲಿ ಏನು ಕಾಣಿಸಿಕೊಂಡಿತೋ ಅದನ್ನು 
ಕೊಡುತ್ತೀಯ ? ” 

ಅವನು ಹೇಳಿದ: 
“ಕೊಡುತ್ತೇನೆ.” 

ಹಾವು ದನಕರುಗಳನ್ನೆಲ್ಲ ಮೊಟ್ಟೆಯೊಳಕ್ಕೆ ಸೇರಿಸಿ ಒಡೆದ ಚಿಪ್ಪನ್ನು ಗಟ್ಟಿಯಾಗಿ ಮುಚ್ಚಿ 
ಅಂಟು ಹಾಕಿ , ಅದನ್ನು ಬೇಟೆಗಾರನ ಕೈಗೆ ಕೊಟ್ಟಿತು. 

ಅವನು ಮನೆಗೆ ಹೋದ. ಅವನಿಲ್ಲದಿದ್ದಾಗ ಮನೆಯಲ್ಲಿ ಒಂದು ಮಗು ಹುಟ್ಟಿದೆ. ಬೇಟೆ 
ಗಾರ ತಲೆಯ ಮೇಲೆ ಕೈ ಹೊತ್ತು ಕೂತ. 

“ ಅಯ್ಯೋ , ನಿನ್ನನ್ನು ನಾನು ಹಾವಿಗೆ ಕೊಡುತ್ತೇನೆ ಅಂತ ಮಾತು ಕೊಟ್ಟುಬಿಟ್ಟೆನಲ್ಲ ! ” 
ಎಂದವನು ಗೋಳಾಡಿದ. 

ಅವನೂ ಅವನ ಹೆಂಡತಿಯ ಸ್ವಲ್ಪ ಹೊತ್ತು ಅತ್ತರು. ಆಮೇಲೆ ಹೇಳಿದರು : 

“ ಏನು ಮಾಡೋದು! ಕಣ್ಣೀರು ಸುರಿಸುವುದರಿಂದ ಪ್ರಯೋಜನವಿಲ್ಲ . ಹೇಗಾದರೂ 
ಜೀವಿಸಿಕೊಂಡು ಹೋಗಬೇಕಲ್ಲ. ” 

ಅವನು ಒಂದು ದೊಡ್ಡ ಬೇಲಿ ನಿರ್ಮಿಸಿದ . ಅದರ ಮಧ್ಯದಲ್ಲಿ ಮಾಂತ್ರಿಕ ಮೊಟ್ಟೆಯ 
ನ್ನಿಟ್ಟು ಒಡೆದ. ಅದರೊಳಗಿನಿಂದ ದನಕರುಗಳನ್ನು ಹೊರ ಬಿಟ್ಟ . ಭಾರಿ ಶ್ರೀಮಂತನಾದ. 

ಹೀಗೆಯೇ ಜೀವಿಸುತ್ತ ಜೀವಿಸುತ್ತ ಹೋದರು ... ಅವರ ಮಗ ಬೆಳೆದು ದೊಡ್ಡವನಾದ. 
ಅವನು ಹೇಳಿದ: 

“ ಅಪ್ಪ , ನೀನು ನನ್ನನ್ನು ಹಾವಿಗೆ ಕೊಡುತ್ತೇನೆ ಅಂತ ಮಾತು ಕೊಟ್ಟಿರುವೆಯಂತೆ. ನಾನು 
ಅದರ ಬಳಿಗೆ ಹೋಗುತ್ತೇನೆ. ಆದದ್ದಾಗಲಿ ! ” 

ಅವನು ಹಾವಿನ ಬಳಿಗೆ ಹೋದ. ಅದು ಅವನಿಗೆ ಹೇಳಿತು : 
“ ನಾನು ನಿನಗೆ ಮೂರು ಕೆಲಸ ಕೊಡುತ್ತೇನೆ. ಮಾಡಿದರೆ ಮನೆಗೆ ಹೋಗಬಹುದು. ಮಾಡ 
ದಿದ್ದರೆ, ನಾನು ನಿನ್ನನ್ನು ತಿಂದು ಹಾಕುತ್ತೇನೆ! ” 

ಹಾವಿನ ಮನೆಯ ಸುತ್ತ ಒಂದು ಭಾರಿ ಕಾಡು ಹರಡಿತ್ತು . ಅದು ನೋಟ ನಿಲುಕುವ 
ವರೆಗೂ ಹರಡಿತ್ತು . 
ಹಾವು ಅವನಿಗೆ ಹೇಳಿತು : 

“ ಈ ಕಾಡು ಕಾಣುತ್ತಿಲ್ಲ. ನೀನು ಇದರಲ್ಲಿನ ಮರಗಳನ್ನೆಲ್ಲ ಕಡಿದು ಹಾಕಿ, ಉತ್ತು ,ಗೋಧಿ 
ಬಿತ್ತಿ , ಕಟಾವು ಮಾಡಿ , ರಾಶಿ ಹಾಕಬೇಕು . ಎಲ್ಲವನ್ನೂ ಒಂದೇ ರಾತ್ರಿಯೊಳಗೆ ಮಾಡಿ ಮುಗಿಸ 
ಬೇಕು. ಆಮೇಲೆ ಇದೇ ಗೋಧಿಯಿಂದ ಬೆಡ್ ಮಾಡಿ ನಾಳೆ ಬೆಳಿಗ್ಗೆ ನಾನು ಏಳುವ ಹೊತ್ತಿಗೆ 
ನನ್ನ ಉಪಾಹಾರದ ಮೇಜಿನ ಮೇಲಿರಿಸಬೇಕು ! ” 

ಬೇಟೆಗಾರನ ಮಗ ದುಃಖದಿಂದ ತಲೆ ತಗ್ಗಿಸಿಕೊಂಡು ನಡೆದು ಹೋದ. ಅಲ್ಲೇ ಹತ್ತಿರದಲ್ಲಿ 
ಒಂದು ಕಲ್ಲಿನ ಸ್ತಂಭ ನಿಂತಿತ್ತು . ಆ ಸ್ತಂಭದಲ್ಲಿ ಹಾವಿನ ಹೆಣ್ಣು ಮರಿ ಕಲ್ಲಾಗಿ ನಿಂತಿತ್ತು . ಅವನು 
ಈ ಸ್ತಂಭದ ಬಳಿ ಹೋಗಿ ಅದಕ್ಕೆ ಒರಗಿ ಕುಳಿತು ಅಳ ತೊಡಗಿದ. ಹಾವಿನ ಹೆಣ್ಣುಮರಿ ಅವನನ್ನು 
ಕೇಳಿತು : 

“ ಯಾತಕ್ಕೆ ಅಳುತ್ತಿದ್ದೀಯ ? ” 
ಅವನು ಹೇಳಿದ: 

“ ಅಳದೆ ಏನು ಮಾಡಲಿ ! ಹಾವು ನನಗೆ ಎಂಥ ಕೆಲಸ ಕೊಟ್ಟಿದೆ ಎಂದರೆ ನಾನು ಅದನ್ನು 
ನನ್ನ ಜೀವಮಾನದಲ್ಲೇ ಮಾಡಲಾರೆ . ಮತ್ತೆ ಒಂದು ರಾತ್ರಿಯಲ್ಲೇ ಮಾಡಬೇಕು ಅಂದರೆ ಹೇಗಾ 
ಗುತ್ತೆ ? ” 

ಅದು ಮತ್ತೆ ಅವನನ್ನು ಕೇಳಿತು : 
“ ಯಾವ ಕೆಲಸವನ್ನು ಅದು ನಿನಗೆಕೊಟ್ಟಿರೋದು? ” 
ಅವನು ಅದಕ್ಕೆ ಎಲ್ಲವನ್ನೂ ಹೇಳಿದ . ಆಗ ಅದು ಹೇಳಿತು : 
“ನನ್ನನ್ನು ಮದುವೆ ಆಗ್ತಿಯ ? ನಾನು ಎಲ್ಲವನ್ನೂ ಸಕಾಲದಲ್ಲಿ ಮಾಡಿ ಮುಗಿಸುತ್ತೇನೆ!” 
ಅವನು ಹೇಳಿದ : 
“ ಆಗಲಿ ” 

ಅದು ಹೇಳಿತು : “ಸರಿ, ಈಗ ಹೋಗಿ ಮಲಗು. ಬೆಳಿಗ್ಗೆ ಬೇಗ ಎದ್ದು ಬಾ . ಹಾವಿಗೆ ಬ್ರೆಡ್ 
ತೆಗೆದುಕೊಂಡು ಹೋಗಿಕೊಡುವಿಯಂತೆ . ” 

ಬೇಟೆಗಾರನ ಮಗ ಮಲಗಲು ಮನೆಗೆ ಹೋದ. ಹಾವಿನ ಹೆಣ್ಣುಮರಿ ಕಾಡಿಗೆ ಹೋಗಿ 
ಶಿಳ್ಳೆ ಹಾಕಿತು -ಕೂಡಲೇ ಕಾಡಿನ ಮರಗಳು ಚಟಚಟನೆ ಮುರಿದು ಬಿದ್ದವು, ಹೊಲ ನಿರ್ಮಿತ 
ವಾಯಿತು, ಗೋಧಿ ಬೆಳೆ ಬೆಳೆಯಿತು. ಅರುಣೋದಯವಿನ್ನೂ ಆಗಿರಲಿಲ್ಲ ಆಗಲೇ ಬ್ರೆಡ್ 
ಸಿದ್ಧವಾಗಿತ್ತು . ಬೇಟೆಗಾರನ ಮಗ ಅದನ್ನು ಹಾವಿನ ಗುಡಿಸಿಲಿಗೆ ಕೊಂಡೊಯು ಅದರ ಬೆಳ 
ಗಿನ ಉಪಾಹಾರದ ಮೇಜಿನ ಮೇಲಿರಿಸಿದ. 
ಹಾವು ಎಚ್ಚರಗೊಂಡಿತು , ಅಂಗಳಕ್ಕೆ ಬಂದಿತು. ನೋಡಿತು – ಕಾಡಿದ್ದ ಸ್ಥಳದಲ್ಲಿ ವಿಶಾಲ 
ವಾದ ಹೊಲವಿತ್ತು . ಅದರಲ್ಲಿ ಕಟಾವಾದನಂತರದಗೋಧಿಪೈರಿನ ಮೋಟುಗಳಿದ್ದವು. ಇನ್ನೊಂದು 
ಕಡೆ ಗೋಧಿ ರಾಶಿ ಹಾಕಲಾಗಿತ್ತು . ಆಗ ಅದು ಹೇಳಿತು : 

“ಸರಿ, ನಾನು ಹೇಳಿದ ಹಾಗೆಯೇ ಮಾಡಿದ್ದೀಯ . ಆದರೆ ನೋಡು ಇನ್ನೊಂದು ಕೆಲಸ 
ವನ್ನೂ ಮಾಡಬೇಕು. ಈ ಬೆಟ್ಟದಲ್ಲಿ ನೀನೊಂದು ಸುರಂಗ ತೋಡಬೇಕು. ಆ ಸುರಂಗದಮೂಲಕ 
ದ್ವೀಪರ್ ನದಿ ಹರಿಯುವಂತಾಗಬೇಕು. ನದಿಯ ಬಳಿ ಗೋಧಿ ಕಣಜಗಳನ್ನು ಕಟ್ಟಬೇಕು. 
ನದಿಯ ಮೂಲಕ ಹಡಗುಗಳು ಇಲ್ಲಿಗೆ ಬರುವಂತಾಗಬೇಕು. ನೀನು ಈ ಗೋಧಿಯನ್ನೆಲ್ಲ ಆ 
ಹಡಗುಗಳಿಗೆ ಮಾರಬೇಕು. ನಾನು ಬೆಳಿಗ್ಗೆ ಏಳುವುದರೊಳಗೆ ಇದೆಲ್ಲ ಆಗಿರಬೇಕು ! ” 

ಅವನು ಮತ್ತೆ ಆ ಕಲ್ಲಿನ ಸ್ತಂಭದ ಬಳಿಗೆ ಹೋಗಿ ಗಟ್ಟಿಯಾಗಿ ಅಳುತ್ತ ನಿಂತ. ಹಾವಿನ 
ಹೆಣ್ಣು ಮರಿ ಮತ್ತೆ ಕೇಳಿತು : 

“ ಯಾಕೆ ಅಳುತ್ತಿದ್ದೀಯ ? ” 

ಹಾವು ಅವನಿಗೆ ಏನೇನು ಮಾಡಬೇಕೆಂದು ಹೇಳಿದ್ದಿತೋ ಅದೆಲ್ಲವನ್ನೂ ಅವನು ಅದಕ್ಕೆ 
ಹೇಳಿದ. 

ಅದು ಅವನಿಗೆ ಹೇಳಿತು : 
“ನೀನು ಮಲಗಲು ಹೋಗು. ಎಲ್ಲವೂ ಹೇಳಿದ ಹಾಗೆ ಮಾಡಲ್ಪಟ್ಟಿರುತ್ತೆ . ” 

ಅದು ಹಿಂದಿನಂತೆಯೇ ಶಿಳ್ಳೆ ಹಾಕಿತು . ಬೆಟ್ಟದಲ್ಲಿ ಸುರಂಗವಾಯಿತು . ದ್ವೀಪರ್ ನದಿ ಅದರ 
ಮೂಲಕ ಹರಿಯ ತೊಡಗಿತು . ಅದರ ದಡಗಳ ಮೇಲೆ ಗೋಧಿಯ ಕಣಜಗಳು ನಿರ್ಮಿತ 
ವಾದವು. ಆಗ ಅದು ಅವನನ್ನು ಎಚ್ಚರಿಸಲು ಹೋಯಿತು - ಅವನು ಹಡಗುಗಳಲ್ಲಿ ಬಂದ ವರ್ತ 
ಕರಿಗೆ ಗೋಧಿ ಮಾರಲೆಂದು. 

ಹಾವು ಬೆಳಿಗ್ಗೆ ಎದ್ದಿತು . ಎಲ್ಲವೂ ತಾನು ಹೇಳಿದ್ದಂತೆ ಮಾಡಲ್ಪಟ್ಟಿರುವುದನ್ನು ಕಂಡು 
ಆಶ್ಚರ್ಯಪಟ್ಟಿತು. 

ಆಗ ಅದು ಅವನಿಗೆ ಮೂರನೆಯ ಕೆಲಸವನ್ನು ನೀಡಿತು : 
- “ ಈ ರಾತ್ರಿ ನೀನು ಚಿನ್ನದ ಮೊಲವನ್ನು ಹಿಡಿದು ಹೊತ್ತು ಮೂಡುತ್ತಿದ್ದಂತೆಯೇ 
ನನ್ನ ಗುಡಿಸಿಲಿಗೆ ತಂದುಕೊಡಬೇಕು !” 

ಅವನು ಮತ್ತೆ ಆ ಕಲ್ಲಿನ ಸ್ತಂಭದ ಬಳಿಗೆ ಹೋಗಿ ಅಳ ತೊಡಗಿದ. ಹಾವಿನ ಹೆಣ್ಣುಮರಿ 
ಅವನನ್ನು ಕೇಳಿತು : 

“ ಏನು ಆಜ್ಞೆ ಕೊಟ್ಟಿದೆ ? ” 
ಅವನು ಹೇಳಿದ : “ ಚಿನ್ನದ ಮೊಲವನ್ನು ಹಿಡಿದು ತಾ ಅಂತ ಆಜ್ಞಾಪಿಸಿದೆ. ” 

ಆಗ ಅದು ಹೇಳಿತು : “ಓಹ್, ಇದು ತುಂಬ ಕಷ್ಟದ ಕಾರ್ಯಭಾರ . ಯಾರು ಅದನ್ನು 
ತಿಳಿದಿದ್ದಾರೆ, ಯಾರು ಅದನ್ನು ಹಿಡಿಯಬಲ್ಲರು ! ಆದರೆ ವಿಧಿಯಿಲ್ಲ, ಮಾಡಲೇ ಬೇಕು. ಬಾ , ಆ 
ಬಂಡೆಯ ಬಳಿಗೆ ಹೋಗೋಣ.” 

ಅವರು ಅಲ್ಲಿಗೆ ಹೋದರು. ಅದು ಹೇಳಿತು: 

“ನೀನು ಆ ಬಿಲದ ಬಳಿ ನಿಂತಿರು . ನಾನು ಅದನ್ನು ಹೊರಕ್ಕೆ ಓಡಿಸುತ್ತೇನೆ. ನೀನು ಅದನ್ನು 
ಹಿಡಿಯಬೇಕು. ನೋಡು, ಆ ಬಿಲದಿಂದ ಹೊರಕ್ಕೆ ಏನು ಬಂದರೂ ಸರಿ ನೀನು ಅದನ್ನು 
ಹಿಡಿಯಬೇಕು. ಅದೇ ಚಿನ್ನದ ಮೋಲವಾಗಿರುತ್ತೆ ! ” 

ಅದು ಹೋಗಿ ಮೊಲವನ್ನು ಬಿಲದಿಂದ ಹೊರಕ್ಕೆ ಓಡಿಸಿತು . ಆಗ ಬಿಲದಿಂದ ಒಂದು 
ವಿಷಸರ್ಪ ಬುಸುಗುಟ್ಟಿಕೊಂಡು ಹೊರಬಂದಿತು . ಅವನು ಅದನ್ನು ಬಿಟ್ಟುಬಿಟ್ಟ , ಹಾವಿನ ಹೆಣ್ಣು 
ಮರಿ ಬಿಲದಿಂದ ಹೊರಬಂದು ಅವನನ್ನು ಕೇಳಿತು : 

“ ಬಿಲದಿಂದ ಯಾರೂ ಹೊರಬರಲಿಲ್ಲವೇ ? ” 
“ ಬಂದಿತು . ಒಂದು ವಿಷಸರ್ಪ ಹೊರಬಂದಿತು . ನಾನು ಭಯಪಟ್ಟು ಅದನ್ನು ಬಿಟ್ಟುಬಿಟ್ಟೆ . ” 
ಅದು ಅವನಿಗೆ ಹೇಳಿತು : 

“ನೀನು ಎಂಥವನು ! ಅದೇ ಚಿನ್ನದ ಮೊಲ. ಹೋಗಲಿ, ನೋಡು. ನಾನು ಮತ್ತೆ ಹೋಗ್ತಿನಿ. 
ಯಾರಾದರೂ ಬಿಲದಿಂದ ಹೊರಬಂದು ಅಲ್ಲಿ ಚಿನ್ನದ ಮೊಲ ಇಲ್ಲ ಅಂತ ಹೇಳಿದರೆ ನೀನು 
ನಂಬಬೇಡ, ಅದನ್ನೇ ಹಿಡಿದು ಇರಿಸಿಕೋ .” 

ಅದು ಬಿಲದೊಳಗೆ ಹೋಗಿ ಮತ್ತೆ ಚಿನ್ನದ ಮೊಲವನ್ನು ಹೊರಕ್ಕೆ ಅಟ್ಟಿತು. ಬಿಲದಿಂದ | 
ಎಂತಹ ಹಣ್ಣು ಹಣ್ಣು ಮುದುಕಿ ಹೊರಬಂದಳೋ ಹೇಳುವುದು ಕಷ್ಟ . ಅವಳು ಹುಡು 
ಗನನ್ನು ಕೇಳಿದಳು: 

“ ಇಲ್ಲಿ ನೀನು ಯಾರಿಗಾಗಿ ಕಾಯುತ್ತಿದ್ದೀಯ, ಮಗು ? ” 
ಅವನು ಅವಳಿಗೆ ಹೇಳಿದ: “ ಚಿನ್ನದ ಮೊಲಕ್ಕೆ . ” 

ಅವಳು ಅವನಿಗೆ ಹೇಳಿದಳು : “ ಅದು ಇಲ್ಲಿ ಯಾಕೆ ಇರುತ್ತೆ ? ನೀನು ವ್ಯರ್ಥವಾಗಿ 
ಕಾಯುತ್ತಿದ್ದೀಯ .” 

ಹಾಗೆಂದು ಅವಳು ಅವನಿಂದ ದೂರ ಹೊರಟು ಹೋದಳು. ಹಾವಿನ ಹೆಣ್ಣುಮರಿ ಬಿಲ 
ದಿಂದ ಹೊರಬಂದು ಹುಡುಗನನ್ನು ಕೇಳಿತು : 

“ ಏನು ಮೊಲವನ್ನು ಹಿಡಿಯಲಿಲ್ಲವೇ ? ಯಾರೂ ಬಿಲದಿಂದ ಹೊರಬರಲಿಲ್ಲವೇ ? ”
ಅವನು ಹೇಳಿದ : “ ಒಬ್ಬ ಹಣ್ಣು ಹಣ್ಣು ಮುದುಕಿ ಹೊರಬಂದಳು . ನಾನು ಯಾರಿಗಾಗಿ 
ಕಾಯುತ್ತಿದ್ದೇನೆ ಅಂತಕೇಳಿದಳು . ಚಿನ್ನದ ಮೊಲಕ್ಕೆ ಅಂತ ನಾನು ಹೇಳಿದೆ . ಅದು ಇಲ್ಲಿ ಇಲ್ಲ ಎಂದು 
ಅವಳು ಹೇಳಿದಳು . ನಾನು ಅವಳನ್ನು ಬಿಟ್ಟುಬಿಟ್ಟೆ .” 

ಆಗ ಅದು ಹೇಳಿತು : 
“ ಏನು ಮಾಡಿಬಿಟ್ಟೆ ನೀನು ! ಆ ಮುದುಕಿಯೇ ಚಿನ್ನದ ಮೊಲ, ಇನ್ನು ನೀನು ಅದನ್ನು 
ಎಲ್ಲೂ ಕಂಡುಹಿಡಿಯಲಾರೆ. ಈಗ ಹೀಗೆ ಮಾಡೋಣ. ನಾನೇ ಚಿನ್ನದ ಮೊಲದ ರೂಪ ತಾಳು 
ತೇನೆ. ನೀನು ನನ್ನನ್ನು ಹಾವಿನ ಮೇಜಿನ ಮೇಲೆ ಇರಿಸು , ಹಾವಿನ ಕೈಗೆ ಮಾತ್ರ ಕೊಡಬೇಡ. 
ಹಾಗೆ ಮಾಡಿದರೆ ಅದು ತಿಳಿದುಬಿಟ್ಟು ನಿನ್ನನ್ನೂ ನನ್ನನ್ನೂ ಕೊಂದು ಹಾಕುತ್ತೆ . ” 

ಅದು ಹಾಗೆಯೇ ಮಾಡಿತು - ಚಿನ್ನದ ಮೊಲದ ರೂಪ ತಾಳಿತು . ಅವನು ಅದನ್ನು ಎತ್ತಿ 
ಕೊಂಡು ಹೋಗಿ ಹಾವಿನ ಮುಂದೆ ಮೇಜಿನ ಮೇಲೆ ಇರಿಸಿ ಹೇಳಿದ: 

“ ಇಲ್ಲಿದೆ ನೋಡು, ಚಿನ್ನದ ಮೊಲ. ನಾನಿನ್ನು ಹೊರಡುತ್ತೇನೆ. ” 
“ ಹುಂ . ಹೋಗು” ಅದು ಹೇಳಿತು . 
ಅವನು ಹೊರಟು ಹೋದ. 

ಹಾವು ಗುಡಿಸಿಲಿನಿಂದ ಹೊರಕ್ಕೆ ಹೋದುದೇ ತಡ ಮೊಲ ಸುಂದರ ಯುವತಿಯ ರೂಪ 
ತಳೆಯಿತು. ಅವಳು ಹೊರಕ್ಕೆ ಓಡಿ ಹೋಗಿ ಯುವಕನ ಜೊತೆಕೂಡಿಕೊಂಡಳು . ಅವರಿಬ್ಬರೂ 
ಜೊತೆಯಾಗಿ ಓಡ ತೊಡಗಿದರು . ಈ ಮಧ್ಯೆ ಹಾವು ತನ್ನ ಗುಡಿಸಿಲಿಗೆ ಹಿಂದಿರುಗಿತು .ನೋಡಿತು - 
ಮೊಲ ಇಲ್ಲವೇ ಇಲ್ಲ . ತಾನು ಮೋಸಮಾಡಲ್ಪಟ್ಟಿದಿತೆಂದು ಅದಕ್ಕೆ ಅರಿವಾಯಿತು. ಕೂಡಲೇ 
ಅವರನ್ನು ಹಿಡಿದು ತರುವಂತೆ ತನ್ನ ಗಂಡನನ್ನು ಕಳುಹಿಸಿಕೊಟ್ಟಿತು. ಅದರ ಓಟದ ಆರ್ಭಟಕ್ಕೆ 
ಭೂಮಿ ನಡುಗಿತು, ಗುಡುಗುಟ್ಟಿತು... ಆಗ ಹಾವಿನ ಹೆಣ್ಣುಮರಿ ಹೇಳಿತು : 
- “ಓಹ್ , ಅವನು ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದ್ದಾನೆ ! ನಾನು ನನ್ನನ್ನು ಒಂದು 
ಗೋಧಿಹೊಲವನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ನಿನ್ನನ್ನು ಒಬ್ಬ ಮುದುಕನನ್ನಾಗಿ ಪರಿವರ್ತಿಸು 
ತೇನೆ. ಅವನು ಬಂದು ಒಬ್ಬ ಹುಡುಗ, ಒಬ್ಬ ಹುಡುಗಿ ಓಡಿ ಬಂದುದನ್ನು ನೋಡಿದೆಯಾ ? ” 
ಎಂದು ಕೇಳಿದಲ್ಲಿ ನೀನು , ಹೌದು, ನೋಡಿದೆ. ಅದು ತುಂಬ ಹಿಂದೆ, ಈ ಗೋಧಿ ಬೆಳೆಗೆ ಬೀಜ 
ಬಿತ್ತುತ್ತಿದಾಗ ಅಂತ ಹೇಳು. ” 

ಹಾವಿನ ಗಂಡ ಅಟ್ಟಿಸಿಕೊಂಡು ಬಂದು ಅಲ್ಲಿದ ಮುದುಕನನ್ನು ಕೇಳಿತು : “ನೀನುನೋಡಲಿ 
ಲ್ಲವೇ , ಮುದುಕಪ್ಪ , ಈ ಕಡೆ ಒಬ್ಬ ಹುಡುಗಿ, ಒಬ್ಬ ಹುಡುಗ ಓಡಿ ಹೋದುದನ್ನು ? ” 

ಅವನು ಹೇಳಿದ : “ ಹೌದು, ಓಡಿ ಹೋದರು .” 
ಅದು ಕೇಳಿತು : “ ತುಂಬ ಹಿಂದೆಯೇ ? ” 
ಅವನು ಹೇಳಿದ: “ಹೌದು. ಈ ಗೋಧಿ ಬೆಳೆಯ ಬೀಜ ಬಿತ್ತುತ್ತಿದ್ದಾಗ.” 

ಹಾವಿನ ಗಂಡ ಹೇಳಿತು : “ ಅಯೊ , ಈ ಗೋಧಿ ಆಗಲೇ ಮಾಗಿ ಕಟಾವಿಗೆ ಬಂದಿದೆ. 
ಆದರೆ ಅವರು ನಿನ್ನೆಯಷ್ಟೆ ಓಡಿ ಹೋದುದು ! ” 

ಹಾವಿನ ಗಂಡ ಹಿಂದಿರುಗಿತು . ಹಾವಿನ ಹೆಣ್ಣುಮರಿ ಮತ್ತೆ ತನ್ನನ್ನು ಹುಡುಗಿಯನ್ನಾಗಿ 
ಪರಿವರ್ತಿಸಿಕೊಂಡಿತು . ಮುದುಕನನ್ನು ಹುಡುಗನನ್ನಾಗಿ ಮಾಡಿತು. ಇಬ್ಬರೂ ಓಡ ತೊಡ 
ಗಿದರು . 

ಹಾವಿನ ಗಂಡ ಮನೆಗೆ ಹಿಂದಿರುಗಿತು . ಅದರ ಹೆಂಡತಿ ಕೇಳಿತು : 
“ ಏನು ಸಿಗಲಿಲ್ಲವೇ ? ದಾರಿಯಲ್ಲಿ ಯಾರನ್ನೂ ನೀನು ಸಂಧಿಸಲಿಲ್ಲವೇ ? ” 

ಅದು ಹೇಳಿತು : “ ಹೌದು ಸಂಧಿಸಿದೆ, ಒಬ್ಬ ಮುದುಕಪ್ಪನನ್ನು . ಅವನು ಗೋಧಿ ಹೊಲ 
ಕಾಯುತ್ತಿದ್ದ. ಹುಡುಗ, ಹುಡುಗಿ ಓಡಿ ಹೋದುದನ್ನು ಕಂಡೆಯಾ ಅಂತ ಕೇಳಿದೆ. ಕಂಡೆ, ಆದರೆ 
ಈ ಗೋಧಿಬೀಜ ಬಿತ್ತನೆ ಮಾಡುತ್ತಿದ್ದಾಗ ಅಂತ ಹೇಳಿದ. ಗೋಧಿ ಆಗಲೇ ಮಾಗಿ ಕಟಾವಿಗೆ 
ನಿಂತಿತ್ತು . ಅದಕ್ಕೇ ನಾನು ಹಿಂದಿರುಗಿ ಬಂದೆ. ” 
* ಹಾವಿನ ಹೆಂಡತಿ ಹೇಳಿತು : “ ಅಯ್ಯೋ , ನೀನು ಏನು ಮಾಡಿಬಿಟ್ಟೆ ! ಅವರೇ ಅವರಾಗಿದ್ದರು ! 
ಬೇಗ ಓಡು ಮತ್ತೆ ಅವರ ಹಿಂದೆ ! ” 

ಹಾವಿನ ಗಂಡ ಹಾರಿ ಹೋಗುತ್ತೆ . ಅದರ ಓಟದ ಆರ್ಭಟಕ್ಕೆ ಭೂಮಿ ನಡುಗುತ್ತೆ , 
ಗುಡುಗುತ್ತೆ . ಹಾವಿನ ಹೆಣ್ಣುಮರಿ ಬೇಟೆಗಾರನ ಮಗನಿಗೆ ಹೇಳಿತು : 

“ ನಾನು ನನ್ನನ್ನು ಒಂದು ಹಳೆಯ ಕೋಟೆಯನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ನಿನ್ನನ್ನು 
ಒಬ್ಬ ಸೈನಿಕನನ್ನಾಗಿ ಪರಿವರ್ತಿಸುತ್ತೇನೆ. ಹಾವಿನ ಗಂಡ ಬಂದು “ ಅಂಥವರನ್ನು ಕಂಡೆಯಾ? 
ಅಂತ ಕೇಳಿದರೆ, ಕಂಡೆ , ಆದರೆ ಈ ಕೋಟೆಯನ್ನು ಕಟ್ಟುತ್ತಿದ್ದಾಗ ಅಂತ ಹೇಳು. ” 

ಹಾವಿನ ಗಂಡ ಹಾರಿ ಬಂದಿತು . ಈ ಸೈನಿಕನನ್ನು ಕೇಳಿತು : 
“ ಒಬ್ಬ ಹುಡುಗಿ, ಒಬ್ಬ ಹುಡುಗ ಈ ಕಡೆ ಓಡಿ ಬಂದುದನ್ನು ನೀನೇನಾದರೂ ಕಂಡೆಯಾ, 


ಸೈನಿಕ ? ” 


ಸೈನಿಕ ಹೇಳಿದ: “ಕಂಡೆ. ಆದರೆ ಈ ಕೋಟೆ ಕಟ್ಟುತ್ತಿದ್ದಾಗ . ” 

ಹಾವಿನ ಗಂಡ ಹೇಳಿತು : “ ಹೌದೆ ? ಅವರು ನಿನ್ನೆಯಷ್ಟೆ ಓಡಿ ಹೋದದ್ದು . ಈ ಕೋಟೆ 
ಯನ್ನು ಕಟ್ಟಿ ಬಹಳ ಕಾಲವೇ ಆಗಿರಬೇಕು. ” 

ಹಾಗೆ ಹೇಳಿ ಅದು ಮನೆಗೆ ಹಿಂದಿರುಗಿತು . 
ಮನೆಗೆ ಹಿಂದಿರುಗಿದ್ದೇ ಅದು ತನ್ನ ಹೆಂಡತಿಗೆ ವರದಿ ಮಾಡಿತು : 

“ಒಬ್ಬ ಸೈನಿಕನನ್ನು ಕಂಡೆ, ಒಂದು ಹಳೆಯ ಕೋಟೆಯ ಬಳಿ, ನಾನು ಅವನನ್ನು ಕೇಳಿದೆ. 
ಅವನು ಹೇಳಿದ , ಆ ಕೋಟೆ ಕಟ್ಟುತ್ತಿದ್ದಾಗ ಕಂಡ ಅಂತ . ಕೋಟೆ ತುಂಬ ಹಳೆಯದಾಗಿತ್ತು . 
ಯಾವಾಗ ಕಟ್ಟಿದ್ರೋ . ಅವರು ನಿನ್ನೆಯಷ್ಟೆ ಓಡಿ ಹೋದದ್ದು . ” 

ಆಗ ಹಾವಿನ ಹೆಂಡತಿ ಹೇಳಿತು : 
“ನೀನು ಯಾಕೆ ಆ ಸೈನಿಕನನ್ನು ಕೊಲ್ಲಲಿಲ್ಲ ? ಆ ಕೋಟೆಯನ್ನು ಯಾಕೆ ಪುಡಿಪುಡಿ ಮಾಡ 
ಲಿಲ್ಲ ? ಅದು ಅವರೇ ! ಈಗ ನಾನೇ ಹೋಗಿ ಹಿಡಿಯಬೇಕು ಅಂತ ಕಾಣುತ್ತೆ ! ” 

ಹಾಗೆಂದು ಅದು ಓಡಿತು . 
ಓಡಿತು , ಓಡಿತು ... ಭೂಮಿ ನಡುಗುತ್ತೆ , ಗುಡುಗುತ್ತೆ . ಹಾವು ಕೆಂಪಗೆ ಕಾಯುತ್ತೆ . ಹಾವಿನ 
ಹೆಣ್ಣು ಮರಿ ಹೇಳುತ್ತೆ : 

“ ಅಯ್ಯೋ , ಇನ್ನು ನಾವು ಸಿಕ್ಕಿಬಿದ್ದೆವು ಅಂತಲೇ ! ಹಾವೇ ಹಾರಿ ಬರುತ್ತಿದೆ ! ನಾನು ನಿನ್ನನ್ನು 
ಒಂದು ನದಿಯನ್ನಾಗಿ ಪರಿವರ್ತಿಸುತ್ತೇನೆ. ನಾನು ಪೆರ್ಚ್‌ ಮಿಾನು ಆಗುತ್ತೇನೆ.” 

ಅದು ಹಾಗೇ ಮಾಡಿತು . 
ಹಾವು ಹಾರಿ ಬಂದಿತು . ನದಿಯನ್ನು ಕಂಡು ಕೇಳಿತು : 
“ ಏನು ? ತಪ್ಪಿಸಿಕೊಂಡೆವು ಅಂದುಕೊಂಡು ಬಿಟ್ಟಿರಾ ? ” 

ಅದು ಪೈಕ್ ಮಾನಾಗಿ ಪೆರ್ಚ್‌ ಮಾನನ್ನು ಅಟ್ಟಿಸಿಕೊಂಡು ಹೋಯಿತು. ಇನ್ನೇನು ಹಿಡಿ 
ಯಿತು ಅನ್ನುವಾಗಲೆಲ್ಲ ಪೆರ್ಚ್‌ ಮಾನು ತನ್ನ ಚೂಪು ತುದಿಯ ಈಜುರೆಕ್ಕೆಗಳನ್ನು ಅದರ 
ಕಡೆಗೆ ತಿರುಗಿಸುತ್ತಿತ್ತು . ಹಾಗಾಗಿ ಅದು ಪೆರ್ಚ್‌ ಮಾನನ್ನು ಹಿಡಿಯಲು ಆಗುತ್ತಿರಲಿಲ್ಲ. ಅಟ್ಟಿಸಿ 
ಕೊಂಡು ಹೋಯಿತು, ಅಟ್ಟಿಸಿಕೊಂಡು ಹೋಯಿತು. ಆದರೂ ಹಿಡಿಯಲು ಆಗಲಿಲ್ಲ. ನದಿಯ 
ನೀರನ್ನು ಕುಡಿದು ಬಿಡೋಣ ಅಂತ ಯೋಚಿಸಿತು . ಕುಡಿಯಿತು, ಕುಡಿಯಿತು. ಅದರ ಹೊಟ್ಟೆ 
ಊದಿಕೊಂಡು ಸಿಡಿಯಿತು. ಅದು ಸತ್ತು ಬಿದ್ದಿತು. 

ಆಗ ವಿಾನಾಗಿದ್ದ ಹುಡುಗಿ ನದಿಯಾಗಿದ್ದ ಹುಡುಗನಿಗೆ ಹೇಳಿದಳು : 

“ ಇನ್ನು ನಾವು ಹೆದರಬೇಕಾಗಿಲ್ಲ . ನಿನ್ನ ತಂದೆ ತಾಯಿಯ ಬಳಿಗೆ ಹೋಗೋಣ. ಆದರೆ 
ಒಂದು ವಿಷಯ ಮಾತ್ರ ನೆನಪಿನಲ್ಲಿಟ್ಟಿರು : ಮನೆಯ ಒಳಗೆ ಹೋದಾಗ ಎಲ್ಲರಿಗೂ ಮುತ್ತು 
ಕೊಡು, ಆದರೆ ನಿನ್ನ ಚಿಕ್ಕಪ್ಪನ ಮಗುವನ್ನು ಮಾತ್ರ ಚುಂಬಿಸಬೇಡ. ಏಕೆಂದರೆ ನೀನು ಅದನ್ನು 
ಚುಂಬಿಸಿದರೆ ನನ್ನನ್ನು ಸಂಪೂರ್ಣವಾಗಿ ಮರೆತು ಬಿಡುತ್ತೀಯ . ನಾನು ಬೇರೆ ಯಾರ ಬಳಿಯಾ 
ದರೂ ಕೆಲಸಕ್ಕೆ ಇರಬೇಕಾಗುತ್ತೆ .” 
ಅವನು ಮನೆಯ ಒಳ ಹೋದ. ಎಲ್ಲರನ್ನೂ ಚುಂಬಿಸಿ ನಮಸ್ಕರಿಸಿದ. ಆಮೇಲೆ ತನ್ನಲ್ಲೇ 
ಹೇಳಿಕೊಂಡ : “ ಚಿಕ್ಕಪ್ಪನ ಮಗುವನ್ನು ಚುಂಬಿಸದೆ ಇದ್ದರೆ ಹೇಗೆ? ಅವರು ನನ್ನ ಬಗೆಗೆ ತಪ್ಪು 
ತಿಳಿಯಬಹುದು . ಹಾಗೆಂದುಕೊಂಡು ಅವನು ಚಿಕ್ಕಪ್ಪನ ಮಗುವಿನ ಬಳಿಗೂ ಹೋಗಿ ಚುಂಬಿಸಿದ. 
ಅವನು ಚುಂಬಿಸಿದನೋ ಇಲ್ಲವೋ ಹುಡುಗಿಯ ವಿಷಯವನ್ನು ಸಂಪೂರ್ಣವಾಗಿ ಮರೆತ. 

ತುಂಬ ಸಮಯವೋ , ಸ್ವಲ್ಪ ಸಮಯವೋ , ಅಂತೂ ಕಳೆಯಿತು. ಹುಡುಗ ಮದುವೆಯಾಗ 
ಬೇಕು ಅಂತ ಯೋಚಿಸಿದ. ಅವನಿಗಾಗಿ ಒಬ್ಬ ಸುಂದರ ಕನೈಯನ್ನು ಕರೆತಂದರು . ಹಾವಿನ ಹಿಡಿತ 
ದಿಂದ ಸಂರಕ್ಷಿಸಿದ ಯುವತಿಯ ವಿಷಯವನ್ನು ಸಂಪೂರ್ಣವಾಗಿ ಮರೆತು ಅವನು ಈ ಯುವತಿ 
ಯನ್ನು ಪ್ರೀತಿಸ ತೊಡಗಿದ. 

ಮದುವೆಯ ಸಮಾರಂಭಕ್ಕೆ ಮುನ್ನ ಒಂದು ದಿನ ಸಂಜೆ ಆ ಗ್ರಾಮದ ಯುವತಿಯರನ್ನೆಲ್ಲ 
ಔತಣಕ್ಕೆ ಆಹ್ವಾನಿಸಲಾಯಿತು. ಅವನು ಹಾವಿನಿಂದ ತಪ್ಪಿಸಿಕೊಂಡು ಯಾವ ಯುವತಿಯ ಜೊತೆ 
ಓಡಿ ಬಂದನೋ ಆ ಯುವತಿಯನ್ನೂ ಆಹ್ವಾನಿಸಲಾಯಿತು. ಆದರೆ ಅವಳು ಯಾರು, ಎಲ್ಲಿಂದ 
ಬಂದಳು ಅನ್ನುವುದು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಸಂತೋಷದಿಂದ ಹಾಡಿದರು , ಆಟ 
ಆಡಿದರು . ಒಟ್ಟಿನಿಂದ ತರಹೇವಾರಿ ಬೊಂಬೆಗಳನ್ನು ಮಾಡಿದರು . ಹಾವಿನ ಮಗಳು ಹಿಟ್ಟಿನಿಂದ 
ಒಂದು ಹೆಣ್ಣು ಒಂದು ಗಂಡು ಪಾರಿವಾಳಗಳನ್ನು ಮಾಡಿ ಅವುಗಳನ್ನು ಮೇಲಕ್ಕೆ ಎಸೆದಳು. 
ಅವು ಜೀವ ತಳೆದು ಹಾರಾಡ ತೊಡಗಿದವು. ಹೆಣ್ಣು ಪಾರಿವಾಳ ಗಂಡುಪಾರಿವಾಳಕ್ಕೆ ಹೇಳಿತು : 

“ ಏನು ನೀನು ಮರೆತು ಬಿಟ್ಟೆಯಾ, ಹೇಗೆ ನಾನು ನಿನಗಾಗಿ ಒಂದು ಇಡೀ ಕಾಡನ್ನು 
ಕಡಿದು ಹಾಕಿ , ಅಲ್ಲಿ ಗೋಧಿ ಬೆಳೆದು , ಅದರಿಂದ ಬ್ರೆಡ್ ಮಾಡಿ, ಅದನ್ನು ನೀನು ಹಾವಿಗೆ 
ತೆಗೆದುಕೊಂಡು ಹೋಗಿಕೊಡುವುದಕ್ಕೆ ನೆರವಾದೆ, ಅನ್ನುವುದನ್ನು ? ” 

ಗಂಡುಪಾರಿವಾಳ ಹೇಳಿತು : 
“ ಇಲ್ಲ, ಇಲ್ಲ ! ನನಗೆ ಯಾವುದೂ ಜ್ಞಾಪಕವಿಲ್ಲ ! ” 
ಹೆಣ್ಣು ಪಾರಿವಾಳ ಮತ್ತೆ ಕೇಳಿತು : 

“ ಮತ್ತೆ ನೀನು ಮರೆತು ಬಿಟ್ಟೆಯಾ ನಾನು ಹೇಗೆ ನಿನಗಾಗಿ ಬೆಟ್ಟದಲ್ಲಿ ಸುರಂಗ ಮಾಡಿದೆ, 
ಅದರಲ್ಲಿ ದ್ವೀಪರ್ ನದಿ ಹರಿಯುವಂತೆ ಮಾಡಿದೆ, ಆ ನದಿಯಲ್ಲಿ ಹಡಗುಗಳು ಬಂದವು, ನೀನು 
ಅವುಗಳಿಗೆ ಗೋಧಿ ಮಾರಿದೆ, ಅನ್ನುವುದನ್ನು ? ” 

ಗಂಡುಪಾರಿವಾಳ ಹೇಳಿತು : 
“ ಇಲ್ಲ, ಇಲ್ಲ ! ನನಗೆ ಯಾವುದೂ ಜ್ಞಾಪಕವಿಲ್ಲ ! ” 
ಹೆಣ್ಣು ಪಾರಿವಾಳ ಮತ್ತೆ ಕೇಳಿತು : 
“ ನಾವಿಬ್ಬರೂ ಒಟ್ಟಿಗೆ ಹೇಗೆ ಚಿನ್ನದ ಮೊಲಕ್ಕಾಗಿ ಹುಡುಕಾಡಿದೆವು ಅನ್ನುವುದನ್ನು ಮರೆತು 
ಬಿಟ್ಟೆಯಾ? ನೀನು ನನ್ನನ್ನು ಸಂಪೂರ್ಣವಾಗಿ ಮರೆತು ಬಿಟ್ಟೆಯಾ? ” 

ಗಂಡುಪಾರಿವಾಳ ಉತ್ತರಿಸಿತು : 
“ ಇಲ್ಲ, ಇಲ್ಲ ! ನನಗೆ ಯಾವುದೂ ಜ್ಞಾಪಕವಿಲ್ಲ ! ” 

ಇವುಗಳ ಸಂಭಾಷಣೆಯನ್ನು ಕೇಳಿದಾಗ ಬೇಟೆಗಾರನ ಮಗನಿಗೆ ಹಿಂದಿನದೆಲ್ಲ ನೆನಪಿಗೆ 
ಬಂದಿತು . ಅವನು ಆ ಯುವತಿಯ ಗುರುತನ್ನೂ ಹಿಡಿದ. ಅವಳನ್ನೇ ಮದುವೆಯಾದ . ಈಗಲೂ 
ಅವರು ಹಾಯಾಗಿ ಸುಖ ಜೀವನ ನಡೆಸುತ್ತಿದ್ದಾರೆ .