ಒಂದಾನೊಂದು ಕಾಲದಲ್ಲಿ ಒಂದು ಬೆಕ್ಕು ಹಾಗೂ ಒಂದು ಹುಂಜ ವಾಸಿಸುತ್ತಿದ್ದವು. 
ಅವು ಒಂದನ್ನೊಂದು ತುಂಬ ಪ್ರೀತಿಸುತ್ತಿದ್ದವು, ಸದಾ ಒಟ್ಟಿಗೆ ಒಂದೇ ಗುಡಿಸಿಲಿನಲ್ಲಿ ವಾಸಿಸು 
ತಿದ್ದವು. ಒಮ್ಮೆ ಬೆಕ್ಕು ಕಟ್ಟಿಗೆ ತರಲೋಸುಗ ಕಾಡಿಗೆ ಹೋಗುತ್ತ ಹುಂಜಕ್ಕೆ ಹೇಳಿತು : 

“ನೋಡು, ಮುದ್ದು ಹುಂಜ , ಒಲೆಗೂಡಿನ ಮೇಲೇ ಕೂತಿರು , ಅಂಬಲಿ ತಿನ್ನು . ಯಾರನ್ನೂ 
ಗುಡಿಸಿಲಿನ ಒಳಕ್ಕೆ ಬರಲು ಬಿಡಬೇಡ. ನೀನೂ ಹೊರಗೆ ಹೋಗಬೇಡ.” 

“ ಆಗಲಿ , ಆಗಲಿ ” ಎಂದು ಹೇಳಿ ಹುಂಜ ಒಳಗಿನಿಂದ ಬಾಗಿಲಿಗೆ ಭದ್ರವಾಗಿ ಅಗುಳಿ ಹಾಕಿ 
ಕೊಂಡಿತು . 

ಆ ವೇಳೆಗೆ ಸರಿಯಾಗಿ ಒಂದು ನರಿ ಅಲ್ಲಿಗೆ ಬಂದಿತು . ಅದಕ್ಕೆ ಹುಂಜದ ಮಾಂಸವೆಂದರೆ 
ಪ್ರಾಣ. ಹುಂಜವನ್ನು ಹೇಗಾದರೂ ಮಾಡಿ ಗುಡಿಸಿಲಿನಿಂದ ಹೊರ ಬರುವಂತೆ ಮಾಡಲು 
ಯತ್ನಿಸಿತು . ಅದು ಹೇಳಿತು : 

“ ಹೊರಗೆ ಬಾ , ಪ್ರೀತಿಯ ಹುಂಜ, ಹೊರಗೆ ಬಾ ! ಇದೆ ನನ್ನ ಬಳಿ ರುಚಿರುಚಿಯಾದ 
ಕಾಳು . ಇದೆ ನೀರು ಸಹ , ಕಣ್ಣೀರಿನಷ್ಟು ಶುದ್ಧ ! ಬರದಿರೆ ನೀನು ಹೊರಗೆ ನಾನೆ ಬರಬೇಕಾದೀತು 
ಕಿಟಕಿಯಿಂದ ಒಳಗೆ ! ” 

ಹುಂಜ ಅದಕ್ಕೆ ಉತ್ತರಿಸಿತು : 
“ ಕೋ - ಕೊ - ಕೋ - ಕೊ , ಕೊ - ಕೊ - ಕೋ - ಕ್ರೋ , ಬರಲಾರೆ ನಾನು ಹೊರಗೆ , ಅನುಮತಿ 
ಇಲ್ಲ ಬೆಕ್ಕಿನದು ಅದಕೆ ! ” 
ನರಿ ಕಿಟಕಿಯನ್ನು ಮುರಿದು ಒಳಗೆ ಹೋಯಿತು. ಹುಂಜವನ್ನು ತಲೆಯಿಂದ ಕಚ್ಚಿ ಹಿಡಿದು 
ತನ್ನ ಜೊತೆ ಕರೆದೊಯ್ದಿತು. ಹುಂಜ ಬೆಕ್ಕಿಗೆ ಮೊರೆ ಇಟ್ಟಿತು: 

“ ನನ್ನ ಪ್ರೀತಿಯ ತಮ್ಮ ಬೆಕ್ಕೇ , ಕಾಪಾಡು ನನ್ನನ್ನು ! ಕರೆದೊಯುತ್ತಿದೆ ನರಿಯು 
ನನ್ನನ್ನು ಕತ್ತಲು ತುಂಬಿದ ಕಾಡಿನಾಚೆಗೆ, ಹಸಿರು ಹುಲ್ಲಿನ ಕಣಿವೆಗಳಾಚೆಗೆ , ಎತ್ತರವಾಗಿ 
ನಿಂತ ಬೆಟ್ಟಗಳಾಚೆಗೆ , ಜೋರಾಗಿ ಹರಿವ ನೀರಿನಾಚೆಗೆ ಬಿಡಬೇಡ ನನ್ನನ್ನು ಕಳೆದು 
ಹೋಗಲು ! ” 

ಬೆಕ್ಕಿಗೆ ಹುಂಜದ ಮೊರೆಕೇಳಿಸಿತು . ಓಡಿ ಬಂದಿತು . ಹುಂಜವನ್ನು ನರಿಯಿಂದ ಬಿಡಿಸಿಕೊಂಡು 
ಮನೆಗೆ ಕರೆತಂದಿತು . ಮತ್ತೆ ಹುಂಜಕ್ಕೆ ಆದೇಶ ನೀಡಿತು : “ನೋಡು! ನರಿ ಬಂದು ಮತ್ತೆ ಏನಾ 
ದರೂ ಕೂಗಿ ಕರೆದರೆ ಉತ್ತರಕೊಡಬೇಡ. ಈ ಸಾರಿ ನಾನು ತುಂಬ ದೂರಹೋಗುತ್ತಿದ್ದೇನೆ. ” 

ಬೆಕ್ಕು ಹೊರಟು ಹೋದುದನ್ನು ಕಂಡ ನರಿ ಮತ್ತೆ ಓಡಿ ಬಂದಿತು . ಕಿಟಕಿಯ ಬಳಿ ಹೋಗಿ 
ಮಧುರವಾದ ಧ್ವನಿಯಲ್ಲಿ ಹೇಳಿತು : "ಹೊರಗೆ ಬಾ , ಪ್ರೀತಿಯ ಹುಂಜ , ಹೊರಗೆ ಬಾ ! ಇದೆ 
ನನ್ನ ಬಳಿ ರುಚಿರುಚಿಯಾದ ಕಾಳು ...” 

ಹುಂಜ ಉತ್ತರಿಸಿತು : 

“ ಕೊ - ಕೊ - ಕೋ - , ಕೊ - ಕೊ - ಕೋ - ಕ್ರೋ ! ಬರಲಾರೆ ನಾನು ಹೊರಗೆ, ಅನುಮತಿ 
ಇಲ್ಲ ಬೆಕ್ಕಿನದು ಅದಕೆ ! ” 

ನರಿ ಕಿಟಕಿಯ ಮೂಲಕ ಗುಡಿಸಿಲಿನೊಳಕ್ಕೆ ಹಾರಿತು , ಮಾಂಸದ ಸಾರು ಹಾಗೂ ಅಂಬಲಿ 
ಯನ್ನು ತಿಂದಿತು , ಹುಂಜವನ್ನು ತಲೆಯಿಂದ ಕಚ್ಚಿ ಹಿಡಿದು , ತನ್ನೊಂದಿಗೆ ಕರೆದೊಯ್ದಿತು. ಹುಂಜ 
ಮತ್ತೆ ಮೊರೆ ಇಟ್ಟಿತು : 
- “ಓಮ್, ನನ್ನ ಪ್ರೀತಿಯ ತಮ್ಮ ಬೆಕ್ಕೇ ! ಕಾಪಾಡು ನನ್ನನ್ನು ! ಕರೆದೊಯ್ಯುತಿದೆ 
ನರಿಯು ನನ್ನನ್ನು ಕತ್ತಲು ತುಂಬಿದ ಕಾಡಿನಾಚೆಗೆ ... ” 

ಒಂದು ಸಾರಿ ಮೊರೆ ಇಟ್ಟಿತು, ಎರಡನೆಯ ಸಾರಿ ಮೊರೆ ಇಟ್ಟಿತು - ಬೆಕ್ಕು ಓಡಿ ಬಂದಿತು . 
ಹುಂಜವನ್ನು ನರಿಯಿಂದ ಬಿಡಿಸಿಕೊಂಡಿತು, ಮತ್ತೆ ಕಟ್ಟುನಿಟ್ಟಾಗಿ ಆಜ್ಞೆ ಮಾಡಿತು : 
- “ ಮುದ್ದು ಹುಂಜ, ಒಲೆಗೂಡಿನ ಮೇಲೆ ಕುಳಿತುಕೊಂಡಿರು . ಹಸಿದಾಗ ಊಟ ಮಾಡು . 
ನರಿ ಬಂದು ಕರೆದರೆ ಉತ್ತರ ಕೊಡಬೇಡ! ನಾನು ದೂರ ಹೋಗುತ್ತಿದ್ದೇನೆ, ತುಂಬ ದೂರ. 
ನೀನು ಎಷ್ಟೇ ಕೂಗಿ ಕರೆದರೂ ನನಗೆ ಕೇಳಿಸೊಲ್ಲ! ” 

ಬೆಕ್ಕು ಹೋಯಿತೋ ಇಲ್ಲವೋ ನರಿ ಹಾಜರಾಯಿತು : "ಹೊರಗೆ ಬಾ , ಪ್ರೀತಿಯ ಹುಂಜ , 
ಹೊರಗೆ ಬಾ ! ಇದೆ ನನ್ನ ಬಳಿ ರುಚಿರುಚಿಯಾದ ಕಾಳು ... ” 
ಹುಂಜ ಮತ್ತೆ ತಕ್ಷಣವೇ ಉತ್ತರಿಸಿತು : 
“ ಕೊ - ಕೊ - 

ಕೊಕ್ಕೊ , ಕೋ - ಕೊ - ಕೋ - ಕೋ ! ಬರಲಾರೆ ನಾನು ಹೊರಗೆ , ಅನುಮತಿ 
ಇಲ್ಲ ಬೆಕ್ಕಿನದು ಅದಕೆ ! ” . 

ನರಿ ಕಿಟಕಿಯ ಮೂಲಕ ಒಳಕ್ಕೆ ಹಾರಿ ಹೋಯಿತು, ಮಾಂಸದ ಸಾರು , ಅಂಬಲಿ ತಿಂದಿತು . 
ಹುಂಜವನ್ನು ತಲೆಯಿಂದ ಹಿಡಿಯಿತು, ತನ್ನ ಜೊತೆ ಕರೆದೊಯ್ದಿತು. ಹುಂಜ ಒಮ್ಮೆ ಮೊರೆ 
ಇಟ್ಟಿತು, ಎರಡನೆಯ ಸಾರಿ, ಮೂರನೆಯ ಸಾರಿ ಮೊರೆ ಇಟ್ಟಿತು... ಆದರೆ ಬೆಕ್ಕು ತುಂಬ ತುಂಬ 
ದೂರ ಹೋಗಿದ್ದಿತು . ಅದಕ್ಕೆ ಹುಂಜದ ಮೊರೆ ಕೇಳಿಸಲೇ ಇಲ್ಲ . 

ನರಿ ಹುಂಜವನ್ನು ತನ್ನ ಮನೆಗೆ ಕೊಂಡೊಯ್ದಿತು. 
ಕೊನೆಗೆ ಬೆಕ್ಕು ಕಾಡಿನಿಂದ ಮನೆಗೆ ಬಂದು ನೋಡುತ್ತೆ - ಹುಂಜ ಇಲ್ಲವೇ ಇಲ್ಲ ! ಅದು 
ನಿಟ್ಟುಸಿರು ಬಿಟ್ಟಿತು. ಯೋಚನೆ ಮಾಡಿತು. ಬಂದೂರ ವಾದ್ಯವನ್ನೂ ಬಣ್ಣಬಣ್ಣ ಚಿತ್ತಾರದ 
ಒಂದು ಚೀಲವನ್ನೂ ಎತ್ತಿಕೊಂಡು ನರಿಯ ಗುಡಿಸಿಲಿನತ್ತ ನಡೆಯಿತು. 

ನರಿ ಮನೆಯಲ್ಲಿರಲಿಲ್ಲ . ಒಳಗೆ ಅದರ ನಾಲ್ಕು ಹೆಣ್ಣು ಮರಿಗಳೂ ಫಿಲಿಪ್ಪೋಕ್ ಎಂಬ 
ಒಂದು ಗಂಡು ಮರಿಯೂ ಇದ್ದವು. 

ಬೆಕ್ಕು ಕಿಟಕಿಯ ಬಳಿ ಹೋಯಿತು. ಬಂದೂರ ವಾದ್ಯ ನುಡಿಸುತ್ತ ಹಾಡಿತು : 
“ ಎಷ್ಟು ದೊಡ್ಡದು, ಎಷ್ಟು ಸುಂದರ ನರಿಯಕ್ಕನ ಈ ಹೊಸ ಅರಮನೆ! ಎಂಥ 
ಚೆಲುವೆಯರವಳ ನಾಲ್ಕು ಕುವರಿಯರು ! ಅವಳ ಕುವರ ಫಿಲಿಪ್ಪೋಕ್‌ನೂ ಬಲು ಸುಂದರ ! 
ಬನ್ನಿರಿ, ಮಕ್ಕಳೇ , ಹೊರಗೆ , ನೋಡ ಬನ್ನಿ , ನುಡಿಸುತಿರುವೆನು ನಾನು ಸೊಗಸಾದ ಗಾಯನ, 
ಬನ್ನಿ ನರ್ತಿಸಿ ಗಾನಕನುಗುಣವಾಗಿ ! ” 

ನರಿಯ ಹಿರಿಯ ಮಗಳು ಕಿರಿಯರಿಗೆ ಹೇಳಿದಳು : 

“ನೀವೆಲ್ಲ ಇಲ್ಲೇ ಕುಳಿತಿರಿ , ನಾನು ಹೊರಗೆ ಹೋಗಿ ಯಾರು ವಾದ್ಯ ನುಡಿಸುತ್ತಿರುವುದು 
ಅನ್ನುವುದನ್ನು ನೋಡಿಕೊಂಡು ಬರುತ್ತೇನೆ. ” 

ಅವಳು ಹೊರಗೆ ಬಂದಳೋ ಇಲ್ಲವೋ ಬೆಕ್ಕು ಅವಳನ್ನು ಹಿಡಿದು ತನ್ನ ಚೀಲದಲ್ಲಿ ತುಂಬಿ 
ಕೊಂಡಿತು . ಮತ್ತೆ ಹಾಡ ತೊಡಗಿತು : 

“ಎಷ್ಟು ದೊಡ್ಡದು, ಎಷ್ಟು ಸುಂದರ ನರಿಯಕ್ಕನ ಈ ಹೊಸ ಅರಮನೆ ! ಎಂಥ 
ಚೆಲುವೆಯರವಳ ನಾಲ್ಕು ಕುವರಿಯರು !...” 

ನರಿಯ ಎರಡನೆಯ ಹೆಣ್ಣು ಮಗಳೂ ಗುಡಿಸಿಲಿನಿಂದ ಹೊರಬಂದಳು . ಬೆಕ್ಕು ಅವಳನ್ನೂ 
ಚೀಲದಲ್ಲಿ ತುಂಬಿಕೊಂಡಿತು . ಮತ್ತೆ ಹಿಂದಿನಂತೆ ಬಂದೂರ ವಾದ್ಯ ನುಡಿಸುತ್ತ ಹಾಡಿತು : 
“ಎಷ್ಟು ದೊಡ್ಡದು, ಎಷ್ಟು ಸುಂದರ ನರಿಯಕ್ಕನ ಈ ಹೊಸ ಅರಮನೆ! ಎಂಥ 
ಚೆಲುವೆಯರವಳ ನಾಲ್ಕು ಕುವರಿಯರು !... ” 

ಮೂರನೆಯ ಹೆಣ್ಣು ಮಗಳೂ ಹೊರಬಂದಳು. ಅವಳನ್ನೂ ಬೆಕ್ಕು ಚೀಲದೊಳಕ್ಕೆ ತುಂಬಿ 
ಕೊಂಡಿತು . ನಾಲ್ಕನೆಯವಳ ಗತಿಯ ಹಾಗೆಯೇ ಆಯಿತು. ಕೊನೆಗೆ ಮಗ ಫಿಲಿಪ್ಪೋಕ್‌ನೂ 
ಹೊರಬಂದ - ಬೆಕ್ಕಿನ ಚೀಲ ಹೊಕ್ಕ ! ನರಿಯ ಐವರು ಮಕ್ಕಳೂ ಬೆಕ್ಕಿನ ಬಣ್ಣಬಣ್ಣದ ಚೀಲ 
ದೊಳಗೆ ಸೇರಿಕೊಂಡು ವಿಲವಿಲನೆ ಒದ್ದಾಡುತ್ತಿದ್ದವು. 

ಬೆಕ್ಕು ಚೀಲದ ಬಾಯಿಯನ್ನು ಕಟ್ಟಿ ಎತ್ತಿಕೊಂಡು ನರಿಯ ಗುಡಿಸಿಲಿನ ಒಳಕ್ಕೆ ಹೋಯಿತು. 
ಹೋಗಿನೋಡುತ್ತೆ - ಹುಂಜ ಜೀವದಿಂದ ಇದೆಯೋ ಇಲ್ಲವೋ ಅನ್ನುವಂತೆ ಬೆಂಚಿನ ಮೇಲೆ 
ಬಿದ್ದುಕೊಂಡಿದೆ ! 

ಬೆಕ್ಕು ಹುಂಜವನ್ನು ಬಾಲದಿಂದ ಹಿಡಿದೆತ್ತಿ ಹೇಳಿತು : 
“ ಮುದ್ದು ಹುಂಜ , ತಮ್ಮ ಹುಂಜ , ಕಣ್ಣು ಬಿಡು, ಏಳು ! ” 

ಹುಂಜ ಎಚ್ಚರಗೊಂಡಿತು . ನಿಲ್ಲಲು ನೋಡುತ್ತೆ - ಸುತ್ತಿಕೊಂಡು ಬೀಳುತ್ತೆ . ಒಂದು 
ಕಾಲು ಇಲ್ಲವೇ ಇಲ್ಲ ! ಆಗ ಬೆಕ್ಕು ಕತ್ತರಿಸಿ ಬಿದ್ದಿದ್ದ ಕಾಲನ್ನು ಅದರ ಹಳೆಯ ಸ್ಥಳದಲ್ಲೇ ಅಂಟು 
ಹಾಕಿತು . 

ಆಮೇಲೆ ಅವೆರಡೂ ನರಿಯ ಗುಡಿಸಿಲಿನಲ್ಲಿ ಇದ್ದುದೆಲ್ಲವನ್ನೂ ತಿಂದವು. ಪಾತ್ರೆ ಪರಟೆ 
ಗಳನ್ನೆಲ್ಲ ಒಡೆದು ಹಾಕಿದವು. ಚೀಲದಲ್ಲಿ ತುಂಬಿಕೊಂಡಿದ್ದ ನರಿಯ ಮಕ್ಕಳನ್ನೆಲ್ಲ ಹೊರಕ್ಕೆ ಸುರಿದು, 
ತಾವೇ ತಮ್ಮ ಮನೆಗೆ ಹಿಂದಿರುಗಿದವು. 

ಅವು ಅನಂತರ ತಮ್ಮಷ್ಟಕ್ಕೆ ತಾವು ಶಾಂತಿಯಿಂದ ಬಾಳ ತೊಡಗಿದವು. ಹುಂಜ ಈಗ ಬೆಕ್ಕು 
ಏನು ಹೇಳಿದರೂ ಅದನ್ನು ತಪ್ಪದೆ ಪಾಲಿಸುತ್ತೆ .