ಒಂದಾನೊಂದು ಕಾಲದಲ್ಲಿ ಒಂದು ನರಿ ಕಾಡಿನಲ್ಲಿ ಮನೆ ಮಾಡಿಕೊಂಡು ಸಂತೋಷದಿಂದ 
ವಾಸವಾಗಿತ್ತು . ಚಳಿಗಾಲ ಬಂತು . ಮನೆ ಎಲ್ಲ ತಣ್ಣಗೆ ಕೊರೆಯೋಕೆ ಶುರುವಾಯಿತು. ಒಲೆ 
ಹತ್ತಿಸಿ ಬೆಚ್ಚಗೆ ಮಾಡಿಕೊಳ್ಳೋಣ ಅಂತ ನರಿ ಬೆಂಕಿ ತರಲು ಹಳ್ಳಿಗೆ ಹೋಯಿತು. ಅಲ್ಲಿ ಅದಕ್ಕೆ 
ಒಂದು ಮುದುಕಿಯ ಮನೆ ಕಂಡಿತು . ಅಲ್ಲಿಗೆ ಹೋಗಿ ನರಿ ಕೇಳಿತು : 

“ನಮಸ್ಕಾರ, ಅಜ್ಜಿ ! ಹಬ್ಬದ ಶುಭಾಶಯಗಳು ! ನನಗೊಂದಿಷ್ಟು ಬೆಂಕಿ ಕೊಡ್ತೀಯ ? 
ನಿನಗೂ ನಾನು ಯಾವತ್ತಾದರೂ ಸಹಾಯ ಮಾಡಿ ನಿನ್ನ ಸಾಲ ತೀರಿಸ್ತೀನಿ! ” 

“ಸರಿ, ಹಾಗೇ ಆಗಲಿ, ನರಿಯಕ್ಕ ” ಅಂದಳು ಮುದುಕಿ. “ಕೂತುಕೋ ಸ್ವಲ್ಪ ಹೊತ್ತು . 
ಮೈ ಬೆಚ್ಚಗೆ ಮಾಡಿಕೋ . ಒಲೆಯ ಮೇಲೆ ಇಟ್ಟಿರೋ ಸೀರೊಟ್ಟಿ ಬೇಯಲಿ. ಅದನ್ನು ತೆಗೆದು 
ಆಮೇಲೆ ನಿನಗೆ ಬೆಂಕಿ ಕೊಡ್ತೀನಿ.” 

ಮುದುಕಿ ಗಸಗಸೆ, ದ್ರಾಕ್ಷಿ ಎಲ್ಲ ಹಾಕಿದ ಸೀರೊಟ್ಟಿ ಬೇಯಿಸುತ್ತಿದ್ದಳು . ಘಮಘಮ ಅಂತ 
ವಾಸನೆ ಬರುತ್ತಿತ್ತು . ಸೀರೊಟ್ಟಿಯನ್ನು ತೆಗೆದು ಆರಲಿ ಅಂತ ಮೇಜಿನ ಮೇಲೆ ಇಟ್ಟಳು. ನರಿ 
ನೋಡಿತು . ಅದರ ಬಾಯಲ್ಲಿ ನೀರೂರಿತು . ಅದು ಮೆತ್ತಗೆ ಒಂದು ಎಲ್ಲಕ್ಕಿಂತ ದೊಡ್ಡದಾದ 
ಸವಿಯಾದ ಸೀರೊಟ್ಟಿ ತಗೊಂಡು ಓಟ ಕಿತ್ತಿತು. ಅದು ಸೀರೊಟ್ಟಿ ಒಳಗಿದ್ದ ಹೂರಣವನ್ನೆಲ್ಲ 
ತಿಂದು , ಅದರೊಳಕ್ಕೆ ಹುಲ್ಲು ತುಂಬಿ , ಮೇಲೆ ಗಟ್ಟಿ ಪದರದಿಂದ ಮುಚ್ಚಿ , ಮತ್ತೆ ಓಡಿಕೊಂಡು 
ಹೋಯಿತು. 

ಓಡುತ್ತ ಓಡುತ್ತ ಅದು ಇಬ್ಬರು ದನ ಕಾಯುವ ಹುಡುಗರನ್ನು ಕಂಡಿತು . ಅವರು ದನಗಳ 
ಒಂದು ಮಂದೆಯನ್ನು ನೀರಿಗೆ ಹೊಡೆದುಕೊಂಡು ಹೋಗುತ್ತಿದರು . 


“ ನಮಸ್ಕಾರ, ಹುಡುಗರೇ , ನಮಸ್ಕಾರ !” 
“ ನಮಸ್ಕಾರ, ನರಿಯಕ್ಕ ! ಚೆನ್ನಾಗಿದೀಯ ? ಏನು ಸಮಾಚಾರ ? ” 

“ ಏನಿಲ್ಲ. ನನ್ನ ಬಳಿ ಒಂದು ಸೀರೊಟ್ಟಿ ಇದೆ. ಅದನ್ನು ತಗೊಂಡು ನನಗೆ ಒಂದು ಕರು 
ಕೊಡ್ತೀರ? ” 

“ ಆಗಲಿ, ಅದಕ್ಕೇನಂತೆ. ತಗೋ .” 

“ ಆದರೆ ಒಂದು ವಿಷಯ . ನಾನು ಹಳ್ಳಿಯಿಂದ ಹೊರಗೆ ಹೋಗುವವರೆಗೂ ನೀವು 
ಸೀರೊಟ್ಟಿ ತಿನ್ನಬಾರದು .” 

ನರಿ ಹುಡುಗರಿಗೆ ಸೀರೊಟ್ಟಿ ಕೊಟ್ಟು ಬದಲಿಗೆ ಒಂದು ಬೆಳೆದ ಕರುವನ್ನು ತೆಗೆದುಕೊಂಡಿತು . 
ಕರುವನ್ನು ಹೊಡೆದುಕೊಂಡು ಕಾಡಿಗೆ ಹೋಯಿತು. ನರಿಹೋದಮೇಲೆ ಹುಡುಗರು ಸೀರೊಟ್ಟಿ 
ತಿನ್ನ ತೊಡಗಿದರು . ನೋಡುತ್ತಾರೆ - ಅದರೊಳಗೇನಿದೆ - ಬರೀ ಹುಲ್ಲು ! 

ನರಿಯಕ್ಕ ಮನೆಗೆ ಹಿಂದಿರುಗಿತು . ಒಂದು ಮರ ಕಡಿದು ಅದರಿಂದ ಒಂದು ಜಾರುಬಂಡಿ 
ಮಾಡಿಕೊಂಡಿತು . ಕರುವನ್ನು ಜಾರುಬಂಡಿಗೆ ಕಟ್ಟಿ ಸವಾರಿ ಮಾಡಿಕೊಂಡು ಹೊರಟಿತು .ಹೊಗ್ರಾ 
ಇದ್ದಾಗ ಅದಕ್ಕೆ ಯಾರು ಕಂಡುಬಂದರು ಅಂತೀರ – ತೋಳಣ್ಣ ! 

“ ನಮಸ್ಕಾರ, ನರಿಯಕ್ಕ , ಹೇಗಿದೀಯ ? ” 
“ ನಮಸ್ಕಾರ, ತೋಳಣ್ಣ , ಚೆನ್ನಾಗಿದೀನಿ. ನೀನು ಹೇಗಿದೀಯ ? ” 
“ ಚೆನ್ನಾಗೇ ಇದೀನಿ. ಅದು ಸರಿ, ಎಲ್ಲಿ ಸಿಕ್ಕಿತು ನಿನಗೆ ಈ ಜಾರುಬಂಡಿ, ಈ ಕರು ? ” 
“ ನಾನೇ ಮಾಡಿಕೊಂಡೆ. ” 
“ ನಾನೂ ಇದರಲ್ಲಿ ಸ್ವಲ್ಪ ದೂರ ಬರಲಾ, ನರಿಯಕ್ಕ ? ” 
“ ಬೇಡಪ್ಪ ಬೇಡ, ಜಾರುಬಂಡಿ ಮುರಿದುಹೋಗುತ್ತೆ .” 
“ ಏನಿಲ್ಲ . ನಾನು ಬರೀ ಒಂದು ಕಾಲಷ್ಟೆ ಇಡ್ತೀನಿ. ” 
“ ಸರಿ , ಬಾ , ಹಾಗಾದರೆ . ” 
ನರಿಯ ತೋಳವೂ ಸ್ವಲ್ಪ ದೂರ ಸವಾರಿ ಮಾಡಿಕೊಂಡು ಹೋದವು. ಆಗ ತೋಳ 
ಹೇಳಿತು : 


“ಒಂದು ಕಾಲೇ ಇಟ್ಟು ನೋಯುತ್ತೆ . ಎರಡು ಕಾಲೂ ಇಟ್ಟರೆ ಹೇಗೆ, ನರಿಯಕ್ಕ ? ” 
“ಬೇಡಪ್ಪ ಬೇಡ, ಜಾರುಬಂಡಿ ಮುರಿದುಹೋಗುತ್ತೆ . ” 
“ ಇಲ್ಲ, ನರಿಯಕ್ಕ , ಮುರಿಯಲ್ಲ.” 
“ ಸರಿ , ಹಾಗಾದರೆ, ಇಡು ! ” 


ತೋಳಇನ್ನೊಂದು ಕಾಲನ್ನೂ ಜಾರುಬಂಡಿಯೊಳಗೆ ಇರಿಸಿತು . ನರಿ ಬಂಡಿಯನ್ನು ಹೊಡೆದು 
ಕೊಂಡು ಹೋಯಿತು. ಸ್ವಲ್ಪ ದೂರ ಹೋದಾಗ ಏನೋ ಸೀಳಿದ ಶಬ್ದ ಕೇಳಿಬಂತು . 

“ಹೇಯ್, ನೋಡಿದೆಯಾ ? ನನ್ನ ಜಾರುಬಂಡಿ ಮುರೀತಾ ಇದೆ ! ” 
“ ಇಲ್ಲ, ಇಲ್ಲ, ನರಿಯಕ್ಕ , ನಾನು ಒಂದು ಬಿತ್ಯ ಜಗಿದೆ. ಅದರದು ಆ ಶಬ್ದ . ” 
“ಓಹ್, ಹಾಗೋ . ಸರಿ , ಹಾಗಾದರೆ.” 

ಎರಡೂ ಇನ್ನಷ್ಟು ದೂರ ಸವಾರಿ ಮಾಡಿಕೊಂಡು ಹೋದವು. ಆಗ ತೋಳ ಮತ್ತೆ 
ಹೇಳಿತು : 

“ ಇಷ್ಟು ದೂರ ಬಂದಾಯಿತು. ಈಗ ನನ್ನ ಮೂರನೇ ಕಾಲನ್ನೂ ಇಡಲಾ, ನರಿಯಕ್ಕ ? ” 

“ಬೇಡಪ್ಪ ಬೇಡ, ಜಾರುಬಂಡಿ ಮುರಿದುಹೋಗುತ್ತೆ . ಆಮೇಲೆ ಕಟ್ಟಿಗೆಯನ್ನು ಯಾತರಲ್ಲಿ 
ನಾನು ಒಯ್ಯೋದು? ” 

“ ಇಲ್ಲ, ಮುರಿಯಲ್ಲ. ನೀನೇನೂ ಹೆದರಬೇಡ! ” 
“ ಸರಿ , ಹಾಗಾದರೆ, ಇಡು ! ” 
ತೋಳಮೂರನೆಯ ಕಾಲನ್ನೂ ಇರಿಸಿತು. ಆಗ ಮತ್ತೆ ಏನೋ ಮುರಿದ ಶಬ್ದ ಕೇಳಿಬಂತು . 

“ ಅಯ್ಯೋ , ಇದೇನು ಶಬ್ದ ! ನೋಡಿದೆಯಾ ? ನೀನು ಇಳಿಯಪ್ಪ ತೋಳಣ್ಣ . ಇಲ್ಲದಿ 
ದ್ದರೆ ನನ್ನ ಜಾರುಬಂಡಿ ಮುರಿದುಹೋಗುತ್ತೆ ! ” 

“ ಇಲ್ಲ , ನರಿಯಕ್ಕ , ನಾನು ಬಿತ್ಯ ಜಗಿದು ತಿಂದೆ. ಅದರದು ಆ ಶಬ್ದ " 
“ ಹಾಗಾದರೆ ನನಗೂ ಒಂದು ಬಿತ್ಯ ಕೊಡು.” 
“ ಇನ್ನಿಲ್ಲ ನನ್ನ ಹತ್ತಿರ, ಕೊನೇದನ್ನೂ ತಿಂದು ಬಿಟ್ಟೆ .” 
ಅವು ಇನ್ನಷ್ಟು ದೂರ ಹೋದವು. ಆಗ ತೋಳ ಹೇಳಿತು : 
“ ನರಿಯಕ್ಕ , ನರಿಯಕ್ಕ , ನಾನು ಪೂರ್ತಿ ಜಾರುಬಂಡಿಯೊಳಗೆ ಕುಳಿತರೆ ಹೇಗೆ ? ” 
“ ಬೇಡಪ್ಪ ಬೇಡ! ಜಾರುಬಂಡಿ ಮುರಿದುಹೋಗುತ್ತೆ .” 
“ ಇಲ್ಲ. ನಾನು ಹುಷಾರಾಗಿದ್ದೀನಿ.” 
“ ಸರಿ , ಹಾಗಾದರೆ , ಕೂತುಕೋ ! ” 
ತೋಳ ಹತ್ತಿ ಕುಳಿತಿತು . ಅದರ ಭಾರಕ್ಕೆ ಜಾರುಬಂಡಿ ಚೂರುಚೂರಾಗಿ ಮುರಿಯಿತು ! 

ನರಿಗೆ ತುಂಬ ಕೋಪ ಬಂತು . ತೋಳನನ್ನು ಕಂಡಾಪಟ್ಟೆ ಬಯ್ಯತು, ಶಪಿಸಿತು . ಆಮೇಲೆ 
ಹೇಳಿತು : 

“ ಹೋಗು ಹಾಳಾದವನೆ. ಹೋಗಿ ಒಂದು ಮರ ಕಡಿದು ತುಂಡುತುಂಡು ಮಾಡಿಕೊಂಡು ಬಾ . 


ನನ್ನ ಮನೆ ಬೆಚ್ಚಗೆ ಇರಿಸೋಕೂ ಆಗಬೇಕು, ಇನ್ನೊಂದು ಜಾರುಬಂಡಿ ಮಾಡೋಕೂ 
ಆಗಬೇಕು, ಹೋಗು, ತಗೊಂಡು ಬಾ . ” 

“ ಹ್ಯಾಗೆ ಮಾಡೋದು, ನನಗೆ ಗೊತ್ತಿಲ್ಲ, ನರಿಯಕ್ಕ , ನಿನಗೆ ಯಾವ ತರಹ ಮರ ಬೇಕೊ 
ಅದೂ ಗೊತ್ತಿಲ್ಲ.” 

“ ಥ , ಕೆಲಸಕ್ಕೆ ಬಾರದವನೆ ! ನನ್ನ ಜಾರುಬಂಡಿ ಮುರಿಯೋಕೆ ಮಾತ್ರ ಆಯಿತು, ಈಗ 
ಮರ ಕಡಿಯೋಕೆ ಆಗೋಲ್ಲ ಅಂತೀಯಲ್ಲ! ಎಂಥ ನಟನೆ ಮಾಡ್ತೀಯ ! ” 

ಹೀಗೆ ನರಿ ತೋಳನನ್ನು ಚೆನ್ನಾಗಿ ಬಲ್ಕಿತು. ಆಮೇಲೆ ಹೇಳಿತು : 

“ ಕಾಡಿಗೆ ಹೋಗಿ ಹೇಳು: ನೇರವಾದ ಹಾಗೂ ಡೊಂಕಾದ ಮರವೇ , ಮುರಿದು ಬೀಳು ! 
ನೇರವಾದ ಹಾಗೂ ಡೊಂಕಾದ ಮರವೇ , ಮುರಿದು ಬೀಳು !” ” 
ತೋಳಹೋಯಿತು. ಕಾಡಿಗೆ ಹೋಗಿ ಹೇಳಿತು : 

“ ಡೊಂಕಾದ ಹಾಗೂ ಡೊಂಕಾದ ಮರವೇ , ಮುರಿದು ಬೀಳು ! ಡೊಂಕಾದ ಹಾಗೂ 
ಡೊಂಕಾದ ಮರವೇ , ಮುರಿದು ಬೀಳು ! ” 

ಮರ ಮುರಿದು ಬಿದ್ದಿತು . ಆದರೆ ತೋಲೆಗಳು ಎಷ್ಟು ಡೊಂಕುಡೊಂಕಾಗಿ ಗಂಟುಗಂಟಾಗಿ 
ಇದ್ದವೆಂದರೆ, ಅವುಗಳಿಂದ ಜಾರುಬಂಡಿ ಹೋಗಲಿ ಒಂದು ಬೆತ್ತವನ್ನೂ ಮಾಡಲಾಗುತ್ತಿರಲಿಲ್ಲ. 

ತೋಳ ಅವುಗಳನ್ನೇ ನರಿಗೆ ತೆಗೆದುಕೊಂಡು ಹೋಗಿಕೊಟ್ಟಿತು. ನರಿ ನೋಡಿತು. ಇನ್ನೂ 
ಹೆಚ್ಚು ಗಟ್ಟಿಯಾಗಿ ತೋಳನನ್ನು ಬಯ್ಯ ತೊಡಗಿತು : 

“ ಥ , ಶನಿ ಮುಂಡೇದೆ, ಎಂಥ ಮರ ತಂದಿದೀಯಲ್ಲ! ತಪ್ಪು ಹೇಳಿದೆ ಅಂತ ಕಾಣುತ್ತೆ ! ” 

“ ಇಲ್ಲ, ಇಲ್ಲ, ನರಿಯಕ್ಕ ! ನೀನು ಹೇಳಿಕೊಟ್ಟ ಹಾಗೆ ಹೇಳಿದೆ . ಡೊಂಕಾದ ಹಾಗೂ 
ಡೊಂಕಾದ ಮರವೇ , ಮುರಿದು ಬೀಳು ! ಅಂತಲೇ ಹೇಳಿದೆ . ” 

“ ನನಗೆ ಗೊತ್ತಿತ್ತು ! ಎಂಥ ದಡ್ಡ ನೀನು ! ಕೂತಿರು ಇಲ್ಲಿ . ನಾನೇ ಹೋಗಿ ಒಂದು ಮರ 
ಕಡಿದು ತರುತ್ತೀನಿ. ” 

ನರಿ ಹೋಯಿತು. 
ತೋಳ ಕಾಯುತ್ತ ಕೂತುಕೊಂಡಿತು . ಅದಕ್ಕೆ ಹಸಿವಾಗ ತೊಡಗಿತು . ನರಿಯ ಮನೆಯಲ್ಲಿ 
ಏನಾದರೂ ತಿನ್ನುವುದಕ್ಕೆ ಸಿಗುತ್ತೋ ಅಂತ ಹುಡುಕಾಡಿತು . ತುಂಬ ಹೊತ್ತು ಯೋಚನೆ 
ಮಾಡಿ ಕೊನೆಗೆ ಹೇಳಿಕೊಂಡಿತು : 
“ ನಾನೇಕೆ ಈ ಕರುವನ್ನು ತಿಂದು ಓಡಿ ಹೋಗಿ ಬಿಡಬಾರದು ? ” 
ಅದು ಕರುವಿನ ನಡುವಿನಲ್ಲಿ ಒಂದು ತೂತು ಕೊರೆದು ಒಳಗಿನ ಮಾಂಸ ಕರುಳುಗಳನ್ನೆಲ್ಲ 
ತಿಂದು ಹಾಕಿ ಖಾಲಿಯಾದ ಸ್ಥಳದಲ್ಲಿ ಗುಬ್ಬಚ್ಚಿಗಳನ್ನು ತುಂಬಿ ತೂತನ್ನು ಹುಲ್ಲಿನಿಂದ ಮುಚ್ಚಿ 
ಓಡಿ ಹೋಯಿತು. 
- ಸ್ವಲ್ಪ ಹೊತ್ತಾದ ಮೇಲೆ ನರಿ ಮನೆಗೆ ಹಿಂದಿರುಗಿತು . ಅದು ತಾನು ಕಡಿದು ತಂದಿದ್ದ ಮರ 
ದಿಂದ ಒಂದು ಸೊಗಸಾದ ಹೊಸ ಜಾರುಬಂಡಿ ಮಾಡಿಕೊಂಡಿತು . ಅದರಲ್ಲಿ ಹತ್ತಿ ಕುಳಿತು 
ಕರುವಿನ ಕಡೆಗೆ ತಿರುಗಿ ಹೇಳಿತು : 

“ಹೇಯ್, ಕರುವೇ ! ಬಾ , ಬಂಡಿಯನ್ನು ಎಳೀ ಬಾ !” 
ಕರು ನಿಂತ ಸ್ಥಳದಲ್ಲೇ ನಿಂತಿತ್ತು . ಒಂದಿಷ್ಟೂ ಕದಲಲಿಲ್ಲ. 

ನರಿಗೆ ಕೋಪ ಬಂತು . ಒಂದು ಬೆತ್ತ ತಗೊಂಡು ಕರುವಿಗೆ ಬಲವಾಗಿ ಪೆಟ್ಟು ಕೊಟ್ಟಿತು. 
ಕರುವಿನ ಪಕ್ಕದಲ್ಲಿ ತುರುಕಿದ್ದ ಹುಲ್ಲು ಕೆಳಕ್ಕೆ ಬಿದ್ದಿತು . ಕರುವಿನ ಒಡಲಿನಿಂದ ಗುಬ್ಬಚ್ಚಿಗಳು 
ಸುಂಯನೆ ಹೊರಕ್ಕೆ ಹಾರಿ ಬಂದವು. 

“ ಓಹ್ , ಎಂಥ ಮೋಸಗಾರ ತೋಳ, ಎಂಥ ನೀಚ ತೋಳ! ತಾಳು , ನಿನಗೆ ತಕ್ಕ ಶಾಸ್ತಿ 
ಮಾಡ್ತೀನಿ” ಎಂದು ನರಿ ಗೋಳಾಡಿತು . 

ಅದು ಹೊರಕ್ಕೆ ಹೋಗಿ ರಸ್ತೆಯ ಮಧ್ಯದಲ್ಲಿ ಮೈ ಚಾಚಿ ಸದ್ದಿಲ್ಲದೆ ಬಿದ್ದುಕೊಂಡಿತು . 

ಸ್ವಲ್ಪ ಹೊತ್ತಿಗೆ ಅಲ್ಲಿಗೆ ರೈತರು ಕೆಲವರು ಬಂದರು. ಅವರು ಬಂಡಿಗಳಲ್ಲಿ ಮಾನು ತುಂಬಿ 
ಕೊಂಡು ಹೊರಟಿದ್ದರು . ನರಿ ಅಲ್ಲೇ ನಿಶ್ಚಲವಾಗಿ ಮಲಗಿದ್ದಿತು, ಸತ್ತಿದ್ದಿತೋ ಅನ್ನುವಂತೆ ಸೋಗು 
ಹಾಕಿಕೊಂಡು, 

ರೈತರು ಅದನ್ನು ನೋಡಿ ತುಂಬ ಆಶ್ಚರ್ಯಗೊಂಡರು . 

“ ಬನ್ನಿರೋ , ಈ ನರಿಯನ್ನೂ ತಗೊಂಡು ಹೋಗಿ ಮಾರಿ ದುಡ್ಡು ಮಾಡಿಕೊಳ್ಳೋಣ. 
ಆಮೇಲೆ ಬೇಕಾದಷ್ಟು ಸಾರಾಯಿ ಕುಡಿಯಬಹುದು ! ” 

ಅವರು ನರಿಯನ್ನು ಎತ್ತಿ ಕೊನೆಯ ಬಂಡಿಯ ಮೇಲೆ ಹಾಕಿ ಮುಂದೆ ಹೊರಟರು . ಅವರು 
ಒಮ್ಮೆಯ ಹಿಂದಿರುಗಿ ನೋಡುತ್ತಿರಲಿಲ್ಲವೆಂಬುದನ್ನು ನರಿ ಕಂಡುಕೊಂಡಿತು . ಅದು ಮಿಾನು 
ಗಳನ್ನು ಒಂದೊಂದಾಗಿ ಎತ್ತಿ ರಸ್ತೆಯ ಬದಿಗೆ ಎಸೆಯ ತೊಡಗಿತು . ಆಮೇಲೆ ಅರ್ಧ ಬಂಡಿ 
ಖಾಲಿಯಾದಾಗ ಅದು ತಾನೇ ಬಂಡಿಯಿಂದ ಕೆಳಕ್ಕೆ ಇಳಿಯಿತು. 

ಇದಾವುದನ್ನೂ ನೋಡದೆ ಇದ್ದ ಜನ ಬಂಡಿಗಳನ್ನು ಮುಂದಕ್ಕೆ ಹೊಡೆದುಕೊಂಡೇ 
ಹೋದರು . ನರಿ ಮಿಾನುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ತಿನ್ನ ತೊಡಗಿತು . 

ಅಷ್ಟು ಹೊತ್ತಿಗೆ ತೋಳ ಅಲ್ಲಿಗೆ ಬಂದಿತು. 
“ ನಮಸ್ಕಾರ, ನರಿಯಕ್ಕ !” ಅದು ಕೂಗಿ ಹೇಳಿತು . 
“ ನಮಸ್ಕಾರ, ತೋಳಣ್ಣ ! ” 
“ ಏನು ಮಾಡ್ತಿದೀಯ , ನರಿಯಕ್ಕ ? ”
“ ಮಿಾನು ತಿನ್ನಾ ಇದೀನಿ. ”
“ನಂಗೂ ಸ್ವಲ್ಪ ಕೊಡ್ತೀಯ ? ”
“ನೀನೇ ಹೋಗಿ ಹಿಡಿ.”
“ ನಂಗೆ ಗೊತ್ತಿಲ್ಲ ಹ್ಯಾಗೆ ಹಿಡಿಯೋದೂಂತ. ”
“ ನಾನೇನು ಮಾಡಲಿ ಅದಕ್ಕೆ ! ನಾನಂತೂ ಒಂದು ಮಳೆಚೂರನ್ನೂ ನಿನಗೆಕೊಡೊಲ್ಲ ! ”
“ಹೋಗಲಿ , ಹ್ಯಾಗೆ ವಿಾನು ಹಿಡಿಯೋದು ಅನ್ನೋದನ್ನಾದರೂ ಹೇಳೀಯ ? ”

ನರಿ ತನ್ನಲ್ಲೇ ಹೇಳಿಕೊಂಡಿತು : “ ಆಗಲಿ , ತಾಳು, ತಮ್ಮ ! ನೀನು ನನ್ನ ಕರು ತಿಂದು ಹಾಕಿದೆ
ಯಲ್ಲ. ಅದಕ್ಕೆ ಈಗ ನಿನಗೆ ತಕ್ಕ ಶಾಸ್ತಿ ಮಾಡ್ತೀನಿ!”

ಆಮೇಲೆ ಅದು ತೋಳನ ಕಡೆಗೆ ತಿರುಗಿ ಹೇಳಿತು :
“ ನದಿಗೆ ಹೋಗು. ನೀರ್ಗಲ್ಲುಗಳ ಮಧ್ಯೆ ತೂತಿನಲ್ಲಿ ನಿನ್ನ ಬಾಲ ಇಳಿಬಿಡು. ಹಿಂದಕ್ಕೂ
ಮುಂದಕ್ಕೂ ಅದನ್ನು ನಿಧಾನವಾಗಿ ಆಡಿಸುತ್ತ ಹೇಳು: ಬನ್ನಿ ಮಿಾನುಗಳೇ , ಪುಟ್ಟ ಮಿಾನು
ಗಳೇ , ದೊಡ್ಡ ಮಾನುಗಳೇ , ನನ್ನ ಬಾಲಕ್ಕೆ ಬಂದು ಸಿಕ್ಕಿಕೊಳ್ಳಿ !” ಹೀಗೆ ನೀನು ಬೇಕಾದಷ್ಟು
ಮಿಾನು ಹಿಡಿಯಬಹುದು.”

“ ಹೌದಾ ? ಹೇಳಿಕೊಟ್ಟದಕ್ಕೆ ತುಂಬ ವಂದನೆಗಳು .”
ತೋಳ ನದಿಗೆ ಓಡಿ ಹೋಯಿತು. ನೀರ್ಗಲ್ಲುಗಳ ಮಧ್ಯೆ ಇದ್ದ ತೂತಿನಲ್ಲಿ ತನ್ನ ಬಾಲವನ್ನು
ಇಳಿಬಿಟ್ಟು ನಿಧಾನವಾಗಿ ಆಡಿಸುತ್ತ ಹೇಳಿತು :

“ ಬನ್ನಿ , ಮಿಾನುಗಳೇ , ಪುಟ್ಟ ಮಿಾನುಗಳೇ , ದೊಡ್ಡ ಮಿಾನುಗಳೇ , ನನ್ನ ಬಾಲಕ್ಕೆ ಬಂದು
ಸಿಕ್ಕಿಕೊಳ್ಳಿ ! ”

ನರಿ ದಡದ ಮೇಲೆ ಜೊಂಡುಗಳ ಮಧ್ಯದಿಂದ ತೋಳವನ್ನೇ ನೋಡುತ್ತ ಹೇಳಿತು :
“ನೀರ್ಗಲ್ಲಾಗು, ನೀರ್ಗಲ್ಲಾಗು, ತೋಳದ ಬಾಲವೇ ! ”

ಆಗ ಉಗ್ರ ಹಿಮಶೈತ್ಯ ಉಂಟಾಯಿತು. ತೋಳ ಮಾತ್ರ ಬಾಲ ಆಡಿಸುತ್ತ ಹೇಳುತ್ತಲೇ
ಇತ್ತು :

“ ಬನ್ನಿ , ಮಿಾನುಗಳೇ , ಪುಟ್ಟ ಮಿಾನುಗಳೇ , ದೊಡ್ಡ ಮಿಾನುಗಳೇ , ನನ್ನ ಬಾಲಕ್ಕೆ ಬಂದು
ಸಿಕ್ಕಿಕೊಳ್ಳಿ !”

ನರಿಯ ಹೇಳುತ್ತಲೇ ಇತ್ತು :


“ನೀರ್ಗಲ್ಲಾಗು, ನೀರ್ಗಲ್ಲಾಗು, ತೋಳದ ಬಾಲವೇ !”

ಹೀಗೆತೋಳ ಮಿಾನು ಹಿಡಿಯಲೆಂದು ಕುಳಿತೇ ಇತ್ತು . ಈ ಮಧ್ಯೆ ಅದರ ಬಾಲ ಗಡ್ಡೆ ಕಟ್ಟಿ
ನೀರ್ಗಲ್ಲಿಗೆ ಗಟ್ಟಿಯಾಗಿ ಸೇರಿಕೊಂಡು ಬಿಟ್ಟಿತು. ಅದನ್ನು ಕಂಡ ಕೂಡಲೇ ನರಿ ಹಳ್ಳಿಗೆ ಓಡಿ
ಹೋಗಿ ಜನರಿಗೆ ಹೇಳಿತು :

“ ಬನ್ನಿ , ಸಜ್ಜನರೇ , ಬನ್ನಿ ! ಇಲ್ಲೊಂದು ತೋಳ ಇದೆ. ಅದನ್ನು ಹೊಡೆದು ಹಾಕಿ , ಬನ್ನಿ !”

ಹಳ್ಳಿಗರು ಓಡೋಡಿ ಬಂದರು , ಈಟಿ, ಸನಿಕೆ, ಗುದ್ದಲಿಗಳನ್ನು ಹಿಡಿದುಕೊಂಡು ಬಂದರು .
ಅವರು ಆ ಬಡಪಾಯಿ ತೋಳನ ಮೇಲೆ ಬಿದ್ದು ಅದನ್ನು ಬಡಿದು ಕೊಂದರು .

ನರಿಯಾದರೋ ಇನ್ನೂ ಇದ್ದುಕೊಂಡೇ ಇದೆ. ತನ್ನ ಮನೆಯಲ್ಲಿ ಸುಖಸಂತೋಷಗಳಿಂದ
ಜೀವಿಸುತ್ತ ಇದೆ.