ಬಹಳ ಕಾಲದ ಹಿಂದೆ, ನಮ್ಮ ತಂದೆಯರೂ ಅಜ್ಜಂದಿರೂ ಇನ್ನೂ ಹುಟ್ಟೇ ಇರದಿದ್ದಂಥ
ಕಾಲದಲ್ಲಿ , ಒಬ್ಬ ಬಡವ ಮತ್ತು ಅವನ ಹೆಂಡತಿ ವಾಸವಾಗಿದ್ದರು . ಅವರಿಗೊಬ್ಬ ಮಗನಿದ್ದ .
ಅವನೊಬ್ಬ ಶುದ್ಧ ಸೋಮಾರಿ . ಅಂಥ ಸೋಮಾರಿ ಇನ್ನೊಬ್ಬನಿರಲಿಲ್ಲ ! ಯಾವ ಕೆಲಸವನ್ನೂ
ಮಾಡುತ್ತಿರಲಿಲ್ಲ . ಮೂರು ಹೊತ್ತೂ ಬೆಂಕಿಗೂಡಿನ ಮೇಲೆ ಕೂತಿರೋದು. ಅಮ್ಮ ಅಲ್ಲಿಗೇ
ಊಟ ತಿಂಡಿ ತಂದುಕೊಟ್ಟರೆ ತಿನ್ನುತ್ತಿದ್ದ. ಇಲ್ಲದಿದ್ದರೆ ಹಾಗೇ ಉಪವಾಸ ಕೂತಿರುತ್ತಿದ್ದ. ಅದ
ಕ್ಕಾಗಿ ಒಂದು ಬೆರಳನ್ನೂ ಆಡಿಸುತ್ತಿರಲಿಲ್ಲ . ಅಂಥ ಸೋಮಾರಿಯಾಗಿದ್ದ ಅವ !

ಅವನ ಅಮ್ಮ ಅಪ್ಪ ಹೇಳಿದರು :
“ ಏನು ಮಾಡೋದು ನಿನ್ನನ್ನು ಕಟ್ಟಿಕೊಂಡು, ಮಗನೇ ! ನೀನು ನಮ್ಮ ಪಾಲಿಗೆ ದುಃಖವೇ !
ಎಲ್ಲ ಮಕ್ಕಳೂ ತಮ್ಮ ತಂದೆಯರಿಗೆ ಸಹಾಯ ಮಾಡ್ತಾರೆ. ನೀನು ಸುಮ್ಮನೆ ತಿಂದುಕೊಂಡು
ಬಿದ್ದಿದೀಯ ! ”

ಅವರು ತುಂಬ ದುಃಖ ಪಟ್ಟರು. ತುಂಬ ಶೋಕಿಸಿದರು . ಕೊನೆಗೆ ಮುದುಕಿ ಹೇಳಿ
ದಳು :
“ ಏನು ಯೋಚನೆ ಮಾಡ್ತಿದೀಯ , ಮುದುಕ ? ಮಗ ಆಗಲೇ ಬೆಳೆದಿದ್ದಾನೆ. ಆದರೆ ಅವನಿಗೆ 
ಏನು ಕೆಲಸವೂ ಬರುತ್ತಿಲ್ಲ. ಯಾರ ಹತ್ತಿರವಾದರೂ ಕಳಿಸಿಕೊಟ್ಟು ಒಂದಿಷ್ಟು ಏನಾದರೂ 
ಕೆಲಸ ಕಲಿಯುವ ಹಾಗೆ ಮಾಡಿದರೆ ಒಳ್ಳೆಯದಲ್ಲವೆ ? ” 
- ತಂದೆ ಅವನನ್ನು ಒಬ್ಬ ಬೇಸಾಯಗಾರನ ಬಳಿಗೆ ಕಳಿಸಿಕೊಟ್ಟ. ಅವನು ಅಲ್ಲಿ ಮೂರು 
ದಿನ ಅಷ್ಟೆ ಇದ್ದ . ಆಮೇಲೆ ಮನೆಗೆ ಓಡಿ ಬಂದ. ಮತ್ತೆ ಹಿಂದಿನಂತೆಯೇ ಬೆಂಕಿಗೂಡಿನ ಮೇಲೆ 
ಸೋಮಾರಿಯಾಗಿ ಕೂತ! 
- ತಂದೆ ಅವನನ್ನು ಬಯು ಹೊಡೆದು ಒಬ್ಬ ದರ್ಜಿಯ ಬಳಿಗೆ ಕೆಲಸ ಕಲಿಯಲು ಕಳಿಸಿ 
ಕೊಟ್ಟ. ಅಲ್ಲಿಂದಲೂ ಅವನು ಅದೇ ರೀತಿ ಓಡಿ ಬಂದ. ಆಮೇಲೆ ತಂದೆ ಅವನನ್ನು ಒಬ್ಬ ಕಮ್ಮಾ 
ರನ ಬಳಿಗೆ, ಅನಂತರ ಒಬ್ಬ ಮೋಚಿಯ ಬಳಿಗೆ ಕಳಿಸಿಕೊಟ್ಟ – ಎಲ್ಲಿಗೆ ಕಳಿಸಿದರೂ ಒಂದೇ ! 
ಕೆಲವು ದಿನಗಳಷ್ಟೆ ಅಲ್ಲಿರುತ್ತಿದ್ದ. ಮತ್ತೆ ಓಡಿ ಬರುತ್ತಿದ್ದ, ಬೆಂಕಿಗೂಡಿನ ಮೇಲೆಕೂರುತ್ತಿದ್ದ ! 
ಏನು ಮಾಡೋದು? 

“ ಸರಿ, ಇವನನ್ನು ಯಾವುದಾದರೂ ಬೇರೆ ರಾಜ್ಯಕ್ಕೆ ಕರಕೊಂಡು ಹೋಗಿ ಬಿಡ್ತೀನಿ. 
ಅಲ್ಲಿಂದ ಅಷ್ಟು ಸುಲಭವಾಗಿ ಹಿಂದಿರುಗಿ ಓಡಿ ಬರೋಕೆ ಆಗೋಲ್ಲ” ಹೇಳಿದ 
ಮುದುಕ. 
- ಅವರು ಗಂಟುಮೂಟೆಕಟ್ಟಿಕೊಂಡು ಹೊರಟರು . ತುಂಬ ಕಾಲ ನಡೆದು ಹೋದರೋ 
ಸ್ವಲ್ಪ ಕಾಲವೋ ತಿಳಿಯದು. ಕೊನೆಗೆ ಒಂದು ಕತ್ತಲು ಕವಿದ ದಟ್ಟವಾದ ಕಾಡು ತಲುಪಿದರು . 
ಆ ಕತ್ತಲಿನಲ್ಲೂ ಅವರಿಗೆ ಒಂದು ಸುಟ್ಟ ಮರದ ಮೊಟುಕಾಣಿಸಿತು . ಮುದುಕ ಆ ಮೋಟಿನ 
ಮೇಲೆ ಹೋಗಿ ಕುಳಿತು ಹೇಳಿದ : 

“ಓಹ್, ನಾನು ಎಷ್ಟು ಬಳಲಿದೀನಿ ! ” 

ಹೇಳಿದ ಅಷ್ಟೆ , ತಕ್ಷಣವೇ ಎಲ್ಲಿಂದಲೋ ಒಬ್ಬ ಗಿಡ್ಡ ಮುದುಕ ಕಾಣಿಸಿಕೊಂಡ. ಅವನ ಮೈ 
ಎಲ್ಲ ಸುಕ್ಕುಗಟ್ಟಿತ್ತು . ಅವನ ಗಡ್ಡ ಹಸುರಾಗಿತ್ತು . ಅದು ಅವನ ಮೊಣಕಾಲಿನವರೆಗೂ ಇಳಿ 
ಬಿದ್ದಿತ್ತು . 

“ ಏನಪ್ಪ , ಏನು ಕರೆದೆ ? ನನ್ನಿಂದ ನಿನಗೆ ಏನು ಬೇಕು ? ” 

ಮುದುಕನಿಗೆ ಆಶ್ಚರ್ಯವಾಯಿತು. ಎಲ್ಲಿಂದ ಬಂತು ಇಂಥ ಪವಾಡ ? ಅವನು 
ಹೇಳಿದ : 

“ ನಾನೆಲ್ಲಿ ನಿನ್ನನ್ನು ಕರೆದೆ? ” 
“ಕರೀಲಿಲ್ಲವೇ ? ಆ ಮರದ ಮೋಟಿನ ಮೇಲೆ ಕುಳಿತು “ಓಹ್ !” ಅಂತ ಹೇಳ 
ಲಿಲ್ಲವೇ ? ” 

“ ಹೌದು. ನಾನು ತುಂಬ ಬಳಲಿದ್ದೆ. “ಓಹ್ ಅಂತ ಅಂದೆ . ನೀನು ಯಾರು ? ” 
“ ನಾನೇ ಆ ಓಹ್ – ಈ ಕಾಡಿನ ದೊರೆ, ನೀನು ಎಲ್ಲಿಗೆ ಹೊರಟೆ ? ” 

“ ನನ್ನ ಮಗನನ್ನು ಎಲ್ಲಾದರೂ ಕೆಲಸಕ್ಕೆ ಸೇರಿಸೋಣಇಲ್ಲವೇ ಕೆಲಸ ಕಲಿಯಲಿಕ್ಕೆ ಸೇರಿಸೋಣ 
ಅಂತ ಕರಕೊಂಡು ಹೊರಟೆ. ಅವನಿಗೆ ಏನಂದರೆ ಏನೂ ಬರದು. ಯಾರಾದರೂ ಪುಣ್ಯಾತ್ಮರು 
ಇವನ ತಲೆಗೆ ಒಂದಿಷ್ಟು ಬುದ್ದಿ ತುಂಬಬಹುದು. ಮನೆಯಲ್ಲಿದ್ದರೆ ಇವನು ಏನೂ ಕಲಿಯೋಲ್ಲ. 
ಎಲ್ಲಿ ಬಿಟ್ಟರೂ ಮತ್ತೆ ಓಡಿ ಬರಾನೆ, ಮೂರು ಹೊತ್ತೂ ಬೆಂಕಿಗೂಡಿನ ಮೇಲೆ 
ಕೂತಿರಾನೆ. ” 

“ ಅವನನ್ನು ನನ್ನ ಬಳಿ ಬಿಡು. ನಾನು ಅವನಿಗೆ ಬುದ್ದಿ ಕಲಿಸ್ತೀನಿ. ಆದರೆ ಒಂದು ಷರತ್ತಿನ 
ಮೇಲೆ ಒಂದು ವರ್ಷ ಆದ ಮೇಲೆನೀನು ನಿನ್ನ ಮಗನನ್ನು ಕರೆದುಕೊಂಡು ಹೋಗೋಕೆ ಬಾ . 
ಅವನನ್ನು ಗುರುತು ಹಿಡಿದರೆ ಕರಕೊಂಡು ಹೋಗು. ಇಲ್ಲವೇ , ಇನ್ನೊಂದು ವರ್ಷ ಅವನು 
ನನ್ನ ಸೇವೆಯಲ್ಲೇ ಉಳೀತಾನೆ. ” 

ಮುದುಕ ಹೇಳಿದ: 
“ ಹಾಗೇ ಆಗಲಿ. ” 

ಇಬ್ಬರೂ ಕೈಕುಲುಕಿ ಒಪ್ಪಂದ ಮಾಡಿಕೊಂಡರು . ಮುದುಕ ಮನೆಗೆ ಹಿಂದಿರುಗಿದ. ಮಗ 
ಓಹ್ನ ಬಳಿ ಉಳಿದ. 

ಓಹ್ ಹುಡುಗನನ್ನು ನೇರವಾಗಿ ಪಾತಾಳ ಲೋಕಕ್ಕೆ ಕರೆದುಕೊಂಡು ಹೋದ. ಅಲ್ಲಿ ತನ್ನ 
ಹಸುರು ಮನೆಗೆ ಕರೆದೊಯ್ದ . ಆ ಮನೆಯಲ್ಲಿ ಎಲ್ಲ ಹಸುರೆ –ಗೋಡೆಗಳು ಹಸುರು, ಚಾವಣಿ 
ಹಸುರು , ಓಸ್‌ನ ಹೆಂಡತಿ ಹಸುರು, ಅವನ ಮಕ್ಕಳೆಲ್ಲ ಹಸುರು . ಅವನ ಕೆಲಸಗಾರರೂ ಸಹ 
ಹಸುರೇ ! ಓಹ್ ಹುಡುಗನಿಗೆ ಕುಳಿತುಕೊಳ್ಳುವಂತೆ ಹೇಳಿದ. ಅವನಿಗೆ ಒಂದಿಷ್ಟು ತಿನ್ನಲು 
ಕೊಡುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದ. ಅವರು ಅವನಿಗೆ ಕೊಟ್ಟ ಮಾಂಸದ ಸಾರೂ ಹಸು 
ರಾಗಿತ್ತು , ಕುಡಿಯಲು ಕೊಟ್ಟ ನೀರೂ ಹಸುರಾಗಿತ್ತು . ಅವನು ಕೊಟ್ಟಿದ್ದನ್ನೆಲ್ಲ ತಿಂದ, 
ಕುಡಿದ. 

“ ಸರಿ , ಇನ್ನು ಕೆಲಸಕ್ಕೆ ಹೊರಡು . ಹೋಗಿಒಂದಿಷ್ಟು ಕಟ್ಟಿಗೆ ಕಡಿದು ಮನೆಗೆ ತಂದು ಹಾಕು ” 
ಎಂದ ಓಹ್ . 
ಹುಡುಗ ಹೋದ. ಕಟ್ಟಿಗೆ ಕಡಿದನೊ ಬಿಟ್ಟನೋ ತಿಳಿಯದು, ಆದರೆ ಹೋದ, ಮೃದು 
ವಾದ ಹುಲ್ಲಿನ ಮೇಲೆ ಮಲಗಿದ. ಓಹ್ ಬಂದು ನೋಡ್ತಾನೆ - ಹುಡುಗ ಮಲಗಿದಾನೆ ! ಓಹ್ 
ತನ್ನ ಸೇವಕರನ್ನು ಕೂಗಿ ಕರೆದ. ಕಟ್ಟಿಗೆ ರಾಶಿ ಹಾಕಿ ಅದರ ಮೇಲೆ ಆ ಹುಡುಗನನ್ನು ಮಲಗಿಸಿ 
ಬೆಂಕಿ ಹಚ್ಚಿ ಅವನನ್ನು ಸುಟ್ಟುಹಾಕಬೇಕೆಂದು ಆಜ್ಞಾಪಿಸಿದ. 

ಹುಡುಗ ಸುಟ್ಟು ಬೂದಿಯಾದ ! ಓಹ್ ಆ ಬೂದಿಯನ್ನು ಗಾಳಿಯಲ್ಲಿ ತೂರಿದ. ಆದರೆ 
ಒಂದು ಸಣ್ಣ ಕೆಂಡ ಆ ಬದಿಯಿಂದ ಬಿದ್ದಿತು. ಓಹ್ ಅದರ ಮೇಲೆ ಸಂಜೀವಿನಿ ನೀರನ್ನು 
- ಚಿಮುಕಿಸಿದ. ಹುಡುಗ ಜೀವ ತಳೆದು ಎದ್ದು ನಿಂತ – ಅವನಿಗೆ ಏನೂ ಆಗಿರಲಿಲ್ಲವೇನೋ 
ಅನ್ನುವಂತೆ ! 

ಮತ್ತೆ ಅವನನ್ನು ಕಟ್ಟಿಗೆಕಡಿದು ತರುವಂತೆ ಕಳಿಸಿಕೊಡಲಾಯಿತು. ಅವನು ಮತ್ತೆ ಮಲಗಿದ . 
ಓಹ್ ಹಿಂದೆ ಮಾಡಿದಂತೆಯೇ ಮಾಡಿದ. ಹುಡುಗನನ್ನು ಸುಟ್ಟು ಬೂದಿ ಮಾಡಿದ . ಬೂದಿಯನ್ನು 
ಗಾಳಿಯಲ್ಲಿ ತೂರಿದ. ಒಂದು ಕೆಂಡದ ಮೇಲೆ ಸಂಜೀವಿನಿ ನೀರು ಚಿಮುಕಿಸಿದ. ಹುಡುಗ ಮತ್ತೆ 
ಜೀವಂತನಾದ. ಆದರೆ ಈಗವನು ಬೇರೆಯೇ ರೀತಿಯಿದ್ದ. ಎಷ್ಟು ಮೋಹಕನಾಗಿದ್ದ, ಕಣ್ಣಿಗೆ 
ಹಬ್ಬವಾಗಿದ್ದ ! ಓಹ್ ಇದೇ ರೀತಿಮೂರನೆಯ ಬಾರಿ ಹುಡುಗನನ್ನು ಸುಟ್ಟು ಬೂದಿ ಮಾಡಿದ, 
ಕೆಂಡದ ಮೇಲೆ ಮತ್ತೆ ಸಂಜೀವಿನಿ ನೀರನ್ನು ಚಿಮುಕಿಸಿದ . ಹುಡುಗ ಮೂರನೆಯ 
ಬಾರಿಗೆ ಪುನರ್‌ಜನ್ಮ ಪಡೆದ. ಈಗಂತೂ ಅವನು ಎಂಥ ಚೆಲುವನಾಗಿದ್ದನೆಂದರೆ ಅವನ 
ಸೌಂದರ್ಯವನ್ನು ನಾಲಿಗೆಯಿಂದ ವರ್ಣಿಸುವುದು ಸಾಧ್ಯವಿಲ್ಲ. ಅದು ಊಹೆಗೂ 
ಮಾರಿದುದಾಗಿತ್ತು . ಎಂದೂ ಕಾಣದಂಥದಾಗಿದ್ದಿತು. ರಮ್ಯ ಕಥೆಗಳಲ್ಲಷ್ಟೆ ಅದು ಸಾಧ್ಯ 
ವಿದ್ದಿತು ! 

ಹುಡುಗ ಓಹ್ನ ಬಳಿಗೆ ಬಂದು ಆಗಲೇ ಒಂದು ವರ್ಷವಾಯಿತು. ತಂದೆ ಹುಡುಗನಿಗಾಗಿ 
ಬಂದ. ಅದೇ ಕತ್ತಲ ಕಾಡಿಗೆ ಬಂದು, ಅದೇ ಸುಟ್ಟ ಮರದ ಮೋಟಿನ ಮೇಲೆಕುಳಿತು “ಓಹ್ ! ” 
ಎಂದ. 

ಅಕೊ , ಓಹ್ ಹೊರಬಂದ ಮರದ ಮೊಟಿನ ಕೆಳಗಿನಿಂದ . 
“ ನಮಸ್ಕಾರ, ಅಜ್ಜ ! ” 
“ ನಮಸ್ಕಾರ, ಓಹ್ ! ನಾನು ಮಗನಿಗಾಗಿ ಬಂದೆ. ” 

“ ಸರಿ , ನಡಿ . ಗುರುತು ಹಿಡಿದರೆ - ಅವನು ನಿನ್ನವನು . ಇಲ್ಲವೇ ಅವನು ಇನ್ನೂ ಒಂದು ವರ್ಷ 
ನನ್ನ ಸೇವೆಯಲ್ಲಿರುತ್ತಾನೆ.” 
ಅವರು ಹಸುರು ಮನೆಗೆ ಹೋಗುತ್ತಾರೆ. ಓಹ್ ಒಂದು ಚೀಲ ಕಾಳು ತೆಗೆದುಕೊಂಡು 
ಅಂಗಳದಲ್ಲಿ ಎರಚಿದ . ಗುಬ್ಬಚ್ಚಿಗಳು ಬಂದವು ಮೋಡದಂತೆ ಕವಿದುಕೊಂಡು ಕಾಳು 
ತಿನ್ನಲು. 

“ ಹುಂ . ಆರಿಸಿಕೋ . ನಿನ್ನ ಮಗ ಯಾರು ? ” 

ಮುದುಕ ದಿಗ್ವಾಂತನಾದ : ಎಲ್ಲ ಗುಬ್ಬಚ್ಚಿಗಳೂ ಒಂದೇ ತರಹ ಇವೆ. ಒಂದರಂತೆ ಎಲ್ಲವೂ . 
ಅವನು ತನ್ನ ಮಗನನ್ನು ಗುರುತು ಹಿಡಿಯದೆ ಹೋದ. 

“ ಸರಿ , ಮನೆಗೆ ಹೋಗು! ” ಎಂದ ಓಹ್ , ನಿನ್ನ ಮಗನನ್ನು ಇನ್ನೂ ಒಂದು ವರ್ಷ ಇರಿಸಿ 
ಕೊಂಡಿರುತ್ತೇನೆ. ” 

ಇನ್ನೊಂದು ವರ್ಷವೂ ಆಯಿತು . ಮತ್ತೆ ಮುದುಕ ಓಹ್ನ ಬಳಿಗೆ ಬಂದ. ಮರದ 
ಮೋಟಿನ ಮೇಲೆ ಕುಳಿತು “ಓಹ್ ! ” ಎಂದು ಹೇಳಿದ. 

ಓಹ್ ಕಾಣಿಸಿಕೊಂಡ. 
“ ಸರಿ , ನಡಿ, ನಿನ್ನ ಮಗನನ್ನು ಆರಿಸಿಕೋ .” 

ಅವನು ಮುದುಕನನ್ನು ಕೊಟ್ಟಿಗೆಗೆ ಕರೆದೊಯ್ದ . ಅಲ್ಲಿ ಟಗರುಗಳು , ಒಂದರಂತೆ 
ಎಲ್ಲವೂ . 

ಮುದುಕ ನೋಡಿದ, ನೋಡಿದ - ಮಗನನ್ನು ಗುರುತು ಹಿಡಿಯದೆ ಹೋದ. 
“ ನಿನ್ನ ದಾರಿ ಹಿಡಿದು ಹೋಗು!” ಓಹ್ ಹೇಳಿದ , “ ಇನ್ನೂ ಒಂದು ವರ್ಷ ನಿನ್ನ ಮಗ 
ನನ್ನ ಬಳಿ ಇರುತ್ತಾನೆ.” 

ಮುದುಕನಿಗೆ ಅಪಾರ ದುಃಖವಾಯಿತು. ಆದರೆ ಏನು ಮಾಡುವುದು - ಒಪ್ಪಂದ ಆ ರೀತಿ 
ಇದೆ. ಬೇರೆ ಏನೂ ಮಾಡಲಾಗದು. 

ಮೂರನೆಯ ವರ್ಷವೂ ಕಳೆಯಿತು. ಮುದುಕ ಮತ್ತೆ ಮಗನನ್ನು ಕರೆದುಕೊಂಡು ಬರಲು 
ಹೋದ. ಆಲೋಚನಾಮಗ್ನನಾಗಿ ಕಾಡಿನಲ್ಲಿ ಹೋಗುತ್ತಿದ್ದ. ಆಗ ಅವನ ಬಳಿಗೆ ಒಂದು ನೊಣ 
ಝೂಂಗುಟ್ಟಿಕೊಂಡು ಬಂದಿತು. 

ಮುದುಕ ಅದನ್ನು ಅಟ್ಟುತ್ತಿದ್ದಾನೆ, ಆದರೆ ಅದು ಮತ್ತೆ ಝಂಗುಟ್ಟುತ್ತಿದೆ. 

ಅದು ಅವನ ಕಿವಿಯ ಮೇಲೆ ಬಂದು ಕುಳಿತುಕೊಂಡಿತು . ತಕ್ಷಣವೇ ಮುದುಕನಿಗೆ ಕೇಳಿ 
ಬರುತ್ತೆ : 

“ ಅಪ್ಪ , ಇದು ನಾನು, ನಿನ್ನ ಮಗ! ಓಹ್ ನನಗೆ ತುಂಬ ವಿದ್ಯೆ ಬುದ್ದಿ ಕಲಿಸಿದ್ದಾನೆ. ನಾನೀಗ 
ಅವನಿಗೆ ತಿರುಮಂತ್ರ ಕಲಿಸುತ್ತೇನೆ. ಅವನು ಮತ್ತೆ ನನ್ನನ್ನು ಆರಿಸಿಕೊ ಅಂತ ನಿನ್ನ ಮುಂದೆ 
ಅನೇಕ ಪಾರಿವಾಳಗಳನ್ನು ಬಿಡುತ್ತಾನೆ. ನೀನು ಬೇರೆ ಯಾವ ಪಾರಿವಾಳವನ್ನೂ ತೆಗೆದುಕೊಳ್ಳ 
ಬೇಡ. ಅವನು ಎರಚಿದ ಕಾಳುಗಳನ್ನು ತಿನ್ನದೆ ಪೇರು ಹಣ್ಣಿನ ಮರದ ಕೆಳಗೆ ಒಂಟಿಯಾಗಿ ಕುಳಿ 
ತಿರುವ ಪಾರಿವಾಳವನ್ನಷ್ಟೆ ತೆಗೆದುಕೋ .” 

ಮುದುಕನಿಗೆ ಮಹದಾನಂದವಾಯಿತು. ಮಗನೊಂದಿಗೆ ಇನ್ನಷ್ಟು ಮಾತನಾಡ ಬಯಸಿದ್ದ . 
ಆದರೆ ನೊಣ ಆಗಲೇ ಹಾರಿ ಹೋಗಿತ್ತು . 

ಮುದುಕ ಸುಟ್ಟ ಮರದ ಮೋಟಿನ ಬಳಿಗೆ ಬಂದು “ಓಹ್ ! ” ಎಂದು 
ಹೇಳಿದ . 

ಓಹ್ ಹೊರ ಬಂದ. ಮುದುಕನನ್ನು ತನ್ನ ಕಾಡಿನ ಭೂಮಿಯ ಕೆಳಗಿದ್ದ ರಾಜ್ಯಕ್ಕೆ ಕರೆ 
ದೊಯ್ದ . ತನ್ನ ಹಸುರು ಮನೆಗೆ ಕರೆದುಕೊಂಡು ಹೋಗಿ ಅಂಗಳದಲ್ಲಿ ಒಂದಿಷ್ಟು ಕಾಳು ಚೆಲ್ಲಿ 
ಪಾರಿವಾಳಗಳನ್ನು ಕರೆಯ ತೊಡಗಿದ. ಅವು ಎಷ್ಟು ಭಾರಿ ಸಂಖ್ಯೆಯಲ್ಲಿ ಬಂದವು, ಅಬ್ಬಾ , 
ದೇವರೇ ! ಮತ್ತೆ ಎಲ್ಲ ಒಂದೇ ತರಹ . ಒಂದರಂತೆ ಎಲ್ಲ. 

" ಸರಿಯಪ್ಪ , ಆರಿಸಿಕೊ , ನಿನ್ನ ಮಗನನ್ನು ! ” 

ಎಲ್ಲ ಪಾರಿವಾಳಗಳೂ ಕಾಳು ತಿನ್ನುತ್ತಿವೆ. ಆದರೆ ಒಂದು ಮಾತ್ರ ಕಾಳು ತಿನ್ನದೆ ಪೇರು 
ಹಣ್ಣಿನ ಮರದ ಕೆಳಗೆ ಒಂಟಿಯಾಗಿ ಕುಳಿತಿದೆ. 

“ ಇದು ನನ್ನ ಮಗ. ” 

“ ಸರಿ, ಈ ಬಾರಿ ನೀನು ಗೆದ್ದೆ , ಮುದುಕಪ್ಪ ! ನಿನ್ನ ಮಗನನ್ನು ಕರೆದುಕೊಂಡು 
ಹೋಗು. ” 
- ಓಹ್ ಆ ಪಾರಿವಾಳವನ್ನು ಹಿಡಿದುಕೊಂಡು ತನ್ನ ಎಡ ಭುಜದ ಮೂಲಕ ಅದನ್ನು ಎಸೆದ. 
ಆಹ್ , ಏನಾಶ್ಚರ್ಯ - ಮುಂದೆ ಎಂತಹ ಸ್ಪುರದ್ರೂಪಿ ಯುವಕ ನಿಂತಿದ್ದ ! ಅಂತಹವನನ್ನು 
ಈ ಪ್ರಪಂಚ ಇನ್ನೂ ಕಂಡುದೇ ಇಲ್ಲ. 

ತಂದೆಗೆ ತುಂಬ ಸಂತೋಷವಾಯಿತು. ಮಗನನ್ನು ಅಪ್ಪಿಕೊಂಡ, ಮುದ್ದಾಡಿದ. 
ಮಗನೂ ಆನಂದದಿಂದ ತಂದೆಯನ್ನು ಆಲಂಗಿಸಿಕೊಂಡ . 
“ ಸರಿ, ನಡಿ . ಮನೆಗೆ ಹೋಗೋಣ, ಮಗು ! ” 

ಇಬ್ಬರೂ ಊರ ದಾರಿ ಹಿಡಿದು ಹೋಗುತ್ತಾರೆ. ಮಗ ತಾನು ಓನ್‌ನ ಮನೆಯಲ್ಲಿ ಹೇಗೆ 
ವಾಸಿಸುತ್ತಿದ್ದ ಅನ್ನುವುದನ್ನೆಲ್ಲ ವಿವರಿಸಿ ತಿಳಿಸುತ್ತಾನೆ. 
ಅಪ್ಪ ಹೇಳುತ್ತಾನೆ: 
“ ಒಳ್ಳೆಯದು, ಮಗು! ನೀನು ಮೂರು ವರ್ಷ ಆ ಭೂತನ ಸೇವೆಯಲ್ಲಿದ್ದೆ. ಆದರೆ 
ಏನೂ ಸಂಪಾದನೆ ಮಾಡಲಿಲ್ಲ. ನಾವು ಹಿಂದಿನಂತೆಯೇ ಬಡವರಾಗಿಯೇ ಉಳಿದಿದ್ದೇವೆ. 
ಹೋಗಲಿ, ಬಿಡು. ಅದೇನೂ ಅಷ್ಟು ದುಃಖದಲ್ಲ ! ನೀನು ಜೀವಂತವಾಗಿದ್ದೀಯಲ್ಲ, ಅಷ್ಟೇ 
ಸಾಕು ! ” 

“ನೀನು ದುಃಖಪಡಬೇಡ, ಅಪ್ಪ , ಎಲ್ಲ ಬದಲಾಗುತ್ತೆ .” 

ಅವರು ಮುಂದೆ ಹೋಗುತ್ತಾರೆ. ಕೆಲವು ಬೇಟೆಗಾರರನ್ನು ಕಾಣುತ್ತಾರೆ. ನೆರೆಯ ಗ್ರಾಮದ 
ಪ್ರಭುಗಳು ನರಿಗಳ ಬೇಟೆಗೆ ಹೊರಟಿದ್ದರು . ಮಗ ತನ್ನನ್ನು ಬೇಟೆ ನಾಯಿಯನ್ನಾಗಿ ಪರಿವರ್ತಿಸಿ 
ಕೊಂಡು ತಂದೆಗೆ ಹೇಳಿದ : 

“ ಆ ಪ್ರಭುಗಳು ಬೇಟೆ ನಾಯಿಯನ್ನು ಕೊಳ್ಳಲು ನಿನ್ನ ಬಳಿಗೆ ಬರುತ್ತಾರೆ. ಮುನ್ನೂರು 
ರೂಬಲ್‌ಗಳಿಗೆ ಮಾರು . ಕೊರಳಪಟ್ಟಿಯನ್ನು ಮಾತ್ರ ಕೊಡಬೇಡ. ” 

ಮಗ ನಾಯಿಯಾಗಿ ತಾನೇ ನರಿಯನ್ನು ಅಟ್ಟಿಸಿಕೊಂಡು ಹೋದ. ಅದನ್ನು ಹಿಡಿದು ತಂದ. 
ಪ್ರಭುಗಳು ಕಾಡಿನಿಂದ ಹೊರ ಬಂದು ಈ ಮುದುಕನ ಬಳಿ ಬಂದರು . 

“ ಏನಪ್ಪ , ಆ ನಾಯಿ ನಿನ್ನದೆ ? ” 
“ ಹೌದು, ನನ್ನದು.” 
“ ಒಳ್ಳೇ ಬೇಟೆ ನಾಯಿ ! ನಮಗೆ ಮಾರುತ್ತೀಯ ? ” 
“ಕೊಂಡುಕೊಳ್ಳಿ. ” 
“ಎಷ್ಟು ಕೊಡಬೇಕು ? ” 
“ ಮುನ್ನೂರು ರೂಬಲ್ , ಆದರೆ ಕೊರಳಪಟ್ಟಿ ಇಲ್ಲದೆ. ” 

“ ನಮಗೇಕೆ ನಿನ್ನ ಕೊರಳಪಟ್ಟಿ ! ಅದಕ್ಕಿಂತ ಹೆಚ್ಚು ಉತ್ತಮವಾದುದನ್ನು ಕೊಳ್ಳುತ್ತೇವೆ. 
ತಗೋ ಹಣ, ನಾಯಿ ನಮ್ಮದು. ” 

ಅವರು ನಾಯಿಯನ್ನು ಪಡೆದುಕೊಂಡು ಮತ್ತೆ ಅದನ್ನು ಮತ್ತೊಂದು ನರಿಯನ್ನು ಹಿಡಿದು 
ತರುವಂತೆ ಕಳಿಸಿಕೊಟ್ಟರು. ನಾಯಿ ನರಿಯನ್ನೇನೂ ಅಟ್ಟಿಸಿಕೊಂಡು ಹೋಗದೆ ನೇರವಾಗಿ ಕಾಡಿ 
ನೊಳಕ್ಕೆ ಓಡಿಕೊಂಡು ಹೋಯಿತು. ಅಲ್ಲಿ ನಾಯಿಯ ರೂಪ ಬದಲಿತು . ಮಗ ಮತ್ತೆ ತನ್ನ 
ತಂದೆಯ ಬಳಿಗೆ ಬಂದ. 

ಇನ್ನಷ್ಟು ದೂರಹೋದರು . ತಂದೆ ಮತ್ತೆ ಹೇಳಿದ: 
“ಏನು, ಮಗು, ಈ ಮುನ್ನೂರು ರೂಬಲ್ ಯಾವ ಮಲೆಗೊ ನಮಗೆ ! ಕೇವಲ 
ಕೆಲವು ದನಕರು, ಉಪಕರಣಗಳನ್ನು ಕೊಳ್ಳಲು ಮತ್ತು ಮನೆ ರಿಪೇರಿ ಕೆಲಸಕ್ಕಷ್ಟೆ ಸಾಲಬಹುದು, 
ಆಮೇಲೆ ಮತ್ತೆ ನಮ್ಮ ಜೀವನಕ್ಕೆ ದುಡ್ಡ ಇರುವುದಿಲ್ಲ. ” 

“ ಆಗಲಿ, ಅಪ್ಪ , ದುಃಖಿಸಬೇಡ, ಈಗ ಇನ್ನು ಕೆಲವು ಬೇಡರು ನಮಗೆ ಸಿಕ್ತಾರೆ. ಅವರು 
ಡೇಗೆಯ ಸಹಾಯದಿಂದ ಪಕ್ಷಿಗಳನ್ನು ಹಿಡಿಯುವಂಥವರು. ನಾನು ಒಂದು ಡೇಗೆಯಾಗಿ 
ರೂಪ ಬದಲಿಸಿಕೊಳ್ಳುತ್ತೇನೆ. ನೀನು ನನ್ನನ್ನು ಮುನ್ನೂರು ರೂಬಲ್‌ಗೆ ಮಾರು . 
ಆದರೆ ಜ್ಞಾಪಕದಲ್ಲಿಟ್ಟಿರು, ನನ್ನ ತಲೆಯ ಮೇಲಿನ ತೊಗಲಿನ ಮುಸುಕನ್ನು ಮಾತ್ರ 
ಕೊಡಬೇಡ! ” 

ಅವರು ಹೊಲದಲ್ಲಿ ಒಂದಷ್ಟು ದೂರ ಹೋದರು . ಅವರಿಗೆ ಕೆಲವು ಬೇಡರು 
ಭೇಟಿಯಾದರು . ಮುದುಕನ ಬಳಿ ಒಂದು ಸೊಗಸಾದ ಡೇಗೆ ಇರುವುದನ್ನು ಅವರು 
ಕಂಡರು . 

“ ಏನಪ್ಪ , ನಿನಗೇಕೆ ಈ ಡೇಗೆ ? ನಮಗೆಕೊಟ್ಟು ಬಿಡು ! ” 
“ಕೊಂಡುಕೊಳ್ಳಿ. ” 
“ಎಷ್ಟು ಹಣ ಕೊಡಬೇಕು ? ” 

“ ಮುನ್ನೂರು ರೂಬಲ್ ಕೊಡಿ. ಡೇಗೆಯನ್ನು ಕೊಡುತ್ತೇನೆ. ಆದರೆ ಅದರ ತಲೆಯ 
ಮೇಲಿನ ಮುಸುಕನ್ನು ಮಾತ್ರ ಕೊಡುವುದಿಲ್ಲ. ” 

“ ನಮಗೇಕೆ ಆ ಮುಸುಕು ! ನಾವದಕ್ಕೆ ಇನ್ನೂ ಸೊಗಸಾದ ಮುಸುಕು ಹಾಕುತ್ತೇವೆ. ” 

ಒಪ್ಪಿಗೆಯಾಯಿತು. ಕೈ - ಕೈ ಕುಲುಕಿದರು . ಮುದುಕ ಮುನ್ನೂರುರೂಬಲ್ ಪಡೆದುಕೊಂಡ. 
ಮುಂದೆ ಹೋದ. 

ಬೇಡರು ಹೊಸದಾಗಿ ಕೊಂಡ ಡೇಗೆಯನ್ನು ಪಕ್ಷಿ ಹಿಡಿದು ತರಲೆಂದು ಬಿಟ್ಟರು. ಅದು 
ನೇರವಾಗಿ ಕಾಡಿನೊಳಕ್ಕೆ ಹಾರಿ ಹೋಯಿತು. ಭೂಮಿಗೆ ಇಳಿಯಿತು. ಮತ್ತೆ ಹುಡುಗನಾಯಿತು. 
ಹುಡುಗ ಅಪ್ಪನನ್ನು ಸೇರಿಕೊಂಡ. 

" ಈಗ ಪರವಾಗಿಲ್ಲ ! ನಾವು ತಕ್ಕ ಮಟ್ಟಿಗೆ ಜೀವನ ನಡೆಸಬಹುದು ! ” ಎಂದ 
ಮುದುಕ. 


“ ತಾಳು , ಅಪ್ಪ . ನಮಗೆ ಇನ್ನಷ್ಟು ಹಣ ಬರುತ್ತೆ ! ನಾವು ಸಂತೆಯ ಸಮಿಾಪ ಹೋದಾಗ 
ನಾನು ಒಂದು ಕುದುರೆಯಾಗಿ ರೂಪ ಬದಲಿಸಿಕೊಳ್ಳುತ್ತೇನೆ. ನೀನು ನನ್ನನ್ನು ಮಾರು .
ನಿನಗೆ ಒಂದು ಸಾವಿರ ರೂಬಲ್ ಕೊಡುತ್ತಾರೆ. ಆದರೆ ಲಗಾಮನ್ನು ಮಾತ್ರ 
ಕೊಡಬೇಡ ! ” 

ಸ್ವಲ್ಪ ಹೊತ್ತಾದ ಮೇಲೆ ಅವರು ಸಂತೆಯ ಬಳಿ ಬಂದರು . ಮಗ ಕುದುರೆಯಾಗಿ ರೂಪ 
ಬದಲಿಸಿಕೊಂಡ. ಎಂಥ ಜರ್ಬಾದ ಕುದುರೆ – ಹತ್ತಿರ ಹೋಗಲೇ ಹೆದರಿಕೆ ! ಮುದುಕ ಅದರ 
ಲಗಾಮನ್ನು ಹಿಡಿದುಕೊಂಡು ಕರೆದೊಯ್ದ . ಆದರೆ ಅದನ್ನು ಅಂಕೆಯಲ್ಲಿರಿಸುವುದು ಅವನಿಗೆ 
ಕಷ್ಟವಾಗಿತ್ತು . ಅದು ಎಡಬಿಡದೆ ಕುಪ್ಪಳಿಸುತ್ತಿತ್ತು , ಹಿಂಗಾಲುಗಳನ್ನು ಚಿಮ್ಮುತ್ತಿತ್ತು , 
ನೆಲವನ್ನು ಗೊರಸುಗಳಿಂದ ಬಗೆಯುತ್ತಿತ್ತು . ವರ್ತಕರು ಈ ಕುದುರೆಯನ್ನು ಕಂಡು 
ಆಕರ್ಷಿತರಾದರು . ಅದರ ಬಳಿಗೆ ಧಾವಿಸಿ ಬಂದರು . ವ್ಯಾಪಾರ ಚೌಕಾಶಿ ಪ್ರಾರಂಭ 
ವಾಯಿತು. 

“ಒಂದು ಸಾವಿರ ರೂಬಲ್, ಆದರೆ ಲಗಾಮಿಲ್ಲದೆ ” ಎಂದ ಮುದುಕ. “ ಅಷ್ಟಕ್ಕಾದರೆ 
ಕೊಡ್ತೀನಿ! ” 

“ ನಮಗೇಕೆ ಬೇಕು ನಿನ್ನ ಲಗಾಮು ! ನಾವು ಅದಕ್ಕೆ ಚಿನ್ನದ ಲಗಾಮು ಹಾಕೀವಿ” ಎಂದರು 
ವರ್ತಕರು . 

ಐನೂರು ರೂಬಲ್ ಕೊಡ್ತಾರೆ. ಆದರೆ ಮುದುಕ ಒಪ್ಪಲಿಲ್ಲ . ಕುದುರೆಯನ್ನು ಕೊಡಲಿಲ್ಲ. 
ಆಗ ಅವನ ಬಳಿಗೆ ಒಬ್ಬ ವಕ್ರಾಕಾರದ ಜಿಪ್ಪಿ ಬಂದ. 

“ ಏನಪ್ಪ , ಎಷ್ಟು ಕೊಡಬೇಕು , ನಿನ್ನ ಕುದುರೆಗೆ ? ” 
“ಒಂದು ಸಾವಿರ ರೂಬಲ್ . ಆದರೆ ಲಗಾಮಿಲ್ಲದೆ. ” 

“ಹೋಹೋ ! ತುಂಬ ದುಬಾರಿ ಕಣಯ್ಯ ! ಐನೂರು ತಗೋ , ಲಗಾಮನ್ನೂ 
ಕೊಡು. ” 

“ಇಲ್ಲ. ಒಪ್ಪಿಗೆ ಇಲ್ಲ ! ” ಎಂದ ಮುದುಕ. 
“ಹೋಗಲಿ , ಆರು ನೂರು ತಗೋ . ” 

ಹೀಗೆ ಆ ಜಿಪ್ಪಿ ಎಷ್ಟು ಚೌಕಾಶಿ ಮಾಡಿದರೂ ಮುದುಕ ಒಂದು ಹೆಜ್ಜೆಯ 
ಕೆಳಗಿಳಿಯಲಿಲ್ಲ . 

“ ಹುಂ , ಹೋಗಲಿ , ತಗೋ , ಸಾವಿರ ರೂಬಲ್ ! ಆದರೆ ಲಗಾಮ ಸೇರಿ. ” 
“ ಇಲ್ಲ . ಲಗಾಮು ನನ್ನದು ! ” 
“ಎಂಥ ಮನುಷ್ಯನಪ್ಪ ನೀನು. ಎಲ್ಲಾದರೂ ಉಂಟೆ, ಕುದುರೆಯನ್ನು ಯಾರಾದರೂ 
ಲಗಾಮಿಲ್ಲದೆ ಮಾರುತ್ತಾರೆಯೆ ? ಕುದುರೆಯನ್ನು ಕೈಯಿಂದ ಕೈಗೆ ಕೊಡುವುದು 
ಹೇಗೆ? ” 

“ ನಿನಗೆ ಇಷ್ಟ ಬಂದ ಹಾಗೆ ಮಾಡಿಕೋ . ಆದರೆ ಲಗಾಮು ನನ್ನದು ! ” 

“ಸರಿ, ತಗೊಪ್ಪ, ಇನ್ನೈದು ರೂಬಲ್ ಕೊಡ್ತೀನಿ. ಕುದುರೆಯನ್ನು ಲಗಾಮಿನ ಸಹಿತ 
ಕೊಟ್ಟು ಬಿಡು ! ” 

ಮುದುಕ ಯೋಚನೆ ಮಾಡಿದ. ಲಗಾಮಿಗೆ ಹೆಚ್ಚೆಂದರೆ ಮೂವತ್ತೊ ಮೂವತ್ತೈದೋ 
ಕೊಪೆಕ್ ಆಗಬಹುದು. ಮತ್ತೆ ಈ ಜಿಪ್ಪಿ ಐದು ರೂಬಲ್ ಕೊಡ್ತಿದಾನಲ್ಲ ! 

ಇಸುಕೊಂಡ , ಕೊಟ್ಟು ಬಿಟ್ಟ . 

ಇಬ್ಬರೂ ಕೈ - ಕೈ ಕುಲುಕಿದರು . ಮುದುಕ ಮನೆಯ ಕಡೆಗೆ ನಡೆದ. ಜಿಪ್ಪಿ ಕುದುರೆ ಹತ್ತಿ 
ಕುಳಿತ. ವಾಸ್ತವವಾಗಿ ಅವನು ಜಿಪ್ಪಿ ಆಗಿರಲೇ ಇಲ್ಲ . ಓಹ್ನೇ ಆ ರೂಪದಲ್ಲಿ ಬಂದಿದ್ದ. ಅವನು 
ಮುದುಕನಿಗೆ ಮೋಸ ಮಾಡಿದ್ದ. ಕುದುರೆ ಗಿಡಗಳಿಗೂ ಮೇಲೆ ಮುಗಿಲಿಗೆ ಸ್ವಲ್ಪ ಕೆಳಗೆ ಬಾಣ 
ದಂತೆ ಹಾರಿ ಹೋಯಿತು. ಅದು ನಾಲ್ಕು ಕಾಲುಗಳನ್ನೂ ರೂಡಿಸಿತು . ಓನ್‌ನನ್ನು ಕೆಳಕ್ಕೆ 
ಬೀಳಿಸಲು ತುಂಬ ಪ್ರಯತ್ನ ಪಟ್ಟಿತು. ಆದರೆ ಅದು ಆಗದಾಯಿತು ! 

ಹೀಗೆ ಅವರು ಕಾಡಿಗೆ ಬಂದರು , ಅಲ್ಲಿಂದ ಭೂಮಿ ಕೆಳಗಿನ ಅವನ ರಾಜ್ಯ ತಲುಪಿದರು . 
ಓಹ್ ಮನೆಗೆ ಹೋದ. ಕುದುರೆಯನ್ನು ಲಾಯದಲ್ಲಿ ಕಟ್ಟಿಹಾಕಿದ . 

“ ಅಂತೂ ಬಡ್ಡಿ ಮಗನನ್ನು ಹಿಡಿದು ಹಾಕಿದೆ ! ” ಎಂದು ಹೇಳಿದ ಓಹ್ ತನ್ನ ಹೆಂಡತಿಗೆ. 
“ಸಂಜೆ ಅದನ್ನು ನೀರಿಗೆ ಕರೆದುಕೊಂಡು ಹೋಗು. ” 

ಸಂಜೆಯಾಯಿತು. ಓನ್‌ನ ಹೆಂಡತಿಕುದುರೆಯನ್ನು ಹೊಳೆಗೆ ಕರೆದೊಯ್ದಳು.ಕುದುರೆ ಹೊಳೆ 
ಯಲ್ಲಿ ನಿಂತು ನೀರು ಕುಡಿಯುತ್ತ ಕೊನೆಗೆ ಹೆಚ್ಚು ಹೆಚ್ಚು ಆಳಕ್ಕೆ ಸುಳಿಗಳೊಳಕ್ಕೆ ಎಳೆದುಕೊಂಡು 
ಹೋಗ ತೊಡಗಿತು . ಆ ಹೆಂಗಸೂ ಅದರ ಹಿಂದೆಯೇ ಓಡಿದಳು , ಕೂಗಿಕೊಂಡಳು , 
ರೇಗಿದಳು . ಆದರೆ ಅದು ಇನ್ನೂ ಹೆಚ್ಚು ಹೆಚ್ಚು ಆಳಕ್ಕೆ ಹೋಗುತ್ತಿದೆ. ಕೊನೆಗೆ ಅದು ತನ್ನ 
ತಲೆಯನ್ನೊಮ್ಮೆ ಗಟ್ಟಿಯಾಗಿ ಒದರಿತು . ಅವಳು ಕೈಯಲ್ಲಿ ಹಿಡಿದಿದ್ದ ಲಗಾಮನ್ನು ಬಿಟ್ಟು 
ಕೊಟ್ಟಳು. ಕುದುರೆ ನೀರಿನಲ್ಲಿ ಮುಳುಗಿ ಪೆರ್ಚ್‌ ಮಾನಾಗಿ ಪರಿವರ್ತಿತವಾಯಿತು. ಹೆಂಗಸು 
ಗಟ್ಟಿಯಾಗಿ ಕಿರುಚಿಕೊಂಡಳು . ಓಹ್ ಓಡೋಡಿ ಬಂದ, ಒಂದು ಕ್ಷಣವೂ ಯೋಚನೆ ಮಾಡಲು 
ನಿಲ್ಲದೆ ಪೈಕ್ ಮಾನಾಗಿ ತನ್ನನ್ನು ಪರಿವರ್ತಿಸಿಕೊಂಡು ಪೆರ್ಚ್‌ ಮಾನನ್ನು ಅಟ್ಟಿಸಿಕೊಂಡು 
ಹೋದ. 
" ಪೆರ್ಚ್‌ ಮಾನೇ , ಮುದ್ದಿನ ಮಾನಿನ ಮರಿಯೇ , ನೀನೊಂದು ಒಳ್ಳೆಯ ಮಿಾನು, ಭಲೆ 
ಭೇಷ್ ! ನನ್ನ ಬಳಿಗೆ ಹಿಂದಿರುಗಿ ಬಾ . ಕೂಡಿ ಮಾತನಾಡೋಣ! ” 

ಪೆರ್ಚ್‌ ಮಿಾನು ಉತ್ತರಿಸಿತು : 
“ನೀನು ಏನಾದರೂ ವದಂತಿ ಹೇಳಲು ಬಯಸಿದ್ದರೆ ಹೇಳು. ನನಗೆ ದೂರದಲ್ಲಿದ್ದೇ ಕೇಳಿಸು 


ತದೆ. ” 


ಪೈಕ್ ಮಿಾನು ಪೆರ್ಚ್‌ ಮಾನನ್ನು ತುಂಬ ಹೊತ್ತು ಅಟ್ಟಿಸಿಕೊಂಡು ಹೋಯಿತು. ಆದರೂ 
ಅದಕ್ಕೆ ಪೆರ್ಚ್‌ ಮಾನನ್ನು ಹಿಡಿಯಲಾಗಲಿಲ್ಲ. ಈ ಹೊತ್ತಿಗೆ ಪೆರ್ಚ್‌ ಮಾನೂ ತುಂಬ 
ಬಳಲಿತ್ತು , 

ಆ ಸಮಯಕ್ಕೆ ಸರಿಯಾಗಿ ಅದಕ್ಕೆ ತೀರದ ಮೇಲೆ ಒಂದು ಸ್ನಾನಗೃಹ ಕಂಡುಬಂದಿತು. 
ರಾಜನ ಮಗಳು ಆಗಷ್ಟೆ ಸ್ನಾನಕ್ಕೆ ಅಣಿಯಾಗಿ ಹೋಗುತ್ತಿದ್ದಳು. ಪೆರ್ಚ್‌ ಮಿಾನು ತೀರದ ಮೇಲೆ 
ಹಾರಿ ತನ್ನನ್ನು ಒಂದು ವಜ್ರದ ಉಂಗುರವನ್ನಾಗಿ ಪರಿವರ್ತಿಸಿಕೊಂಡಿತು . ರಾಜಕುಮಾರಿಯ 
ಕಾಲಿನ ಬಳಿಯೇ ಕಾಣಿಸಿಕೊಂಡಿತು . ರಾಜಕುಮಾರಿ ಅದನ್ನು ಕಂಡಳು . 
- “ ಆಹ್ ! ಎಷ್ಟು ಚೆನ್ನಾಗಿದೆ ಈ ಉಂಗುರ ! ” ಎಂದುಕೊಂಡು ಅದನ್ನು ಎತ್ತಿಕೊಂಡು 
ತನ್ನ ಬೆರಳಿಗೆ ಹಾಕಿಕೊಂಡಳು. 

ಅರಮನೆಗೆ ಓಡಿ ಹೋಗಿ ರಾಜನಿಗೆ ಹೊಗಳುತ್ತ ಹೇಳಿದಳು : 
“ನೋಡಪ್ಪ . ನನಗೆ ಎಂಥ ಸುಂದರವಾದ ಉಂಗುರ ಸಿಕ್ಕಿತು! ” 
ರಾಜನೂ ಆಶ್ಚರ್ಯಪಟ್ಟ . 

ಆದರೆ ಪೆರ್ಚ್‌ ಮಿಾನು ಉಂಗುರವಾಗಿ ಪರಿವರ್ತಿತವಾದುದನ್ನು ಓಹ್ ಕಂಡಿದ್ದ . ಅವನು 
ಕೂಡಲೇ ತನ್ನನ್ನು ಒಬ್ಬ ವ್ಯಾಪಾರಿಯನ್ನಾಗಿ ಪರಿವರ್ತಿಸಿಕೊಂಡು ರಾಜನ ಬಳಿಗೆ 
ಹೋದ. 

“ ನಮಸ್ಕಾರ, ಮಹಾಪ್ರಭು, ನಮಸ್ಕಾರ ! ನಾನು ತಮ್ಮಲ್ಲಿಗೆ ಒಂದು ಕೆಲಸದ ಮೇಲೆ 
ಬಂದಿದ್ದೇನೆ. ನನ್ನ ಉಂಗುರ ನಿಮ್ಮ ಮಗಳ ಬಳಿ ಇದೆ. ದಯವಿಟ್ಟು ಅದನ್ನು ನನಗೆ ಕೊಡಲು 
ಹೇಳಿ, ನಾನು ಅದನ್ನು ನಮ್ಮ ರಾಜನಿಗೋಸ್ಕರ ಪಡೆದುಕೊಂಡಿದ್ದೆ. ನದಿಯ ಬಳಿ ಕಳೆದುಕೊಂಡು 
ಬಿಟ್ಟೆ , ಅದು ನಿಮ್ಮ ಮಗಳಿಗೆ ಸಿಕ್ಕಿದೆ. ” 

ರಾಜ ತನ್ನ ಮಗಳನ್ನು ಕರೆಸಿದ. 
“ ಮಗಳೇ , ಆ ಉಂಗುರವನ್ನು ಕೊಟ್ಟು ಬಿಡಮ್ಮ . ಅದು ಇವರದಂತೆ.” 
ರಾಜನ ಮಗಳು ಅತ್ತಳು, ನೆಲವನ್ನು ಕಾಲಿನಿಂದ ಕುಟ್ಟುತ್ತ ಹೇಳಿದಳು : 

“ ಇಲ್ಲ, ಕೊಡೊಲ್ಲ! ಈ ವ್ಯಾಪಾರಿಗೆ ಎಷ್ಟು ಹಣ ಬೇಕೋ ಅಷ್ಟು ಕೊಟ್ಟು ಕಳುಹಿಸು . 
ಉಂಗುರವಂತೂ ನನ್ನದು ! ” 

ಓಹ್ನೂ ತನ್ನ ಪಟ್ಟು ಬಿಟ್ಟು ಕೊಡಲಿಲ್ಲ. 

“ ನಾನು ನನ್ನ ದೊರೆಗೆ ಈ ಉಂಗುರವನ್ನು ಹಿಂದಿರುಗಿಸದೆ ಇದ್ದರೆ ನನ್ನನ್ನು ಈ ಜಗತ್ತಿ 
ನಲ್ಲಿ ಜೀವಿಸಿಕೊಂಡಿರಲೇ ಬಿಡುವುದಿಲ್ಲ ! ” 

ರಾಜ ಮತ್ತೆ ತನ್ನ ಮಗಳಿಗೆ ಕೇಳಿಕೊಳ್ಳುತ್ತಾನೆ: 

“ಕೊಟ್ಟು ಬಿಡು, ಮಗಳೇ ! ಇಲ್ಲದಿದ್ದರೆ ನಮ್ಮಿಂದಾಗಿ ಈ ವ್ಯಕ್ತಿಗೆ ಭಾರಿ ಆಪತ್ತು ಉಂಟಾ 
ಗುತ್ತೆ ! ” 

“ ಹಾಗಾದರೆ ಇದು ನನಗೂ ಬೇಡ, ಅವನಿಗೂ ಬೇಡ! ” ಎಂದು ರಾಜಕುಮಾರಿ ಉಂಗುರ 
ವನ್ನು ನೆಲದ ಮೇಲೆ ಬಲವಾಗಿ ಎಸೆದಳು . 

ಉಂಗುರ ಚೂರುಚೂರಾಗಿ ಒಡೆದು ಕೋಣೆಯ ತುಂಬ ರತ್ನದ ಕಾಳುಗಳಾಗಿ ಹರಡಿ 
ಕೊಂಡಿತು . ಒಂದು ಕಾಳು ರಾಜಕುಮಾರಿಯ ಹಿಮ್ಮಡಿಯ ಕೆಳಗೆ ಹೋಗಿಸೇರಿಕೊಂಡಿತು . ಓಹ್ 
ಕೂಡಲೇ ಒಂದು ಹದ್ದಾಗಿ ಪರಿವರ್ತಿತನಾಗಿ ಕಾಳುಗಳನ್ನು ತಿನ್ನ ತೊಡಗಿದ. ತಿಂದ, ತಿಂದ, 
ಎಲ್ಲ ಕಾಳುಗಳನ್ನೂ ತಿಂದು ಮುಗಿಸಿದ . ಚಲಿಸಲೂ ಆಗದಷ್ಟು ಭಾರವಾದ. ರಾಜಕುಮಾರಿಯ 
ಹಿಮ್ಮಡಿಯ ಕೆಳಗೆ ಸೇರಿಕೊಂಡಿದ್ದ ಒಂದು ಕಾಳು ಮಾತ್ರ ಅವನ ಗಮನಕ್ಕೆ ಬರಲಿಲ್ಲ. ಆ ಕಾಳು 
ಉರುಳಿಕೊಂಡು, ಉರುಳಿಕೊಂಡು ಹೋಯಿತು, ಗಿಡುಗವಾಗಿ ಪರಿವರ್ತಿತವಾಯಿತು, ಹದಿನ 
ಮೇಲೆ ಬಂದೆರಗಿತು . 

ಹದ್ದಿಗೆ ಹಾರಿ ಹೋಗಲೂ ಆಗಲಿಲ್ಲ . ಗಿಡುಗ ತನ್ನ ಚೂಪಾದ ಕೊಕ್ಕಿನಿಂದ ಹದ್ದಿನ ತಲೆಯ 
ಮೇಲೆ ಅನೇಕ ಬಾರಿ ಜೋರಾಗಿ ಕುಕ್ಕಿತು. ಹದ್ದಿನ ಪ್ರಾಣ ಹಾರಿಹೋಯಿತು. ಹೀಗೆ ಓಹ್ 
ಇನ್ನೆಷ್ಟು ಮಾತ್ರವೂ ಇಲ್ಲದಾದ. ಅನಂತರ ಗಿಡುಗ ನೆಲದ ಮೇಲೆ ಬಿದ್ದು ಚೆಲುವಾದ ಯುವಕ 
ನಾಗಿ ಪರಿವರ್ತಿತವಾಯಿತು. ಅವನು ಎಷ್ಟು ಚೆಲುವಾಗಿದ್ದನೆಂದರೆ ಅವನನ್ನು ಕಂಡ ಕೂಡಲೇ 
ರಾಜಕುಮಾರಿ ಅವನಲ್ಲಿ ಅನುರಕ್ತಳಾದಳು . ರಾಜನಿಗೆ ಹೇಳಿದಳು : 

“ನೀನು ಏನೇ ಹೇಳು, ನಾನು ಈ ಯುವಕನನ್ನಷ್ಟೆ ಮದುವೆಯಾಗುವುದು . ಬೇರೆ 
ಯಾರನ್ನೂ ಮದುವೆಯಾಗೋಲ್ಲ.” 

ಆದರೆ ಈ ಸಾಮಾನ್ಯ ಯುವಕನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವುದು ರಾಜ 
ನಿಗೆ ಇಷ್ಟವಿಲ್ಲ. ಈಗೇನು ಮಾಡುವುದು ! ಯೋಚನೆ ಮಾಡಿ ಮಾಡಿ , ಕೊನೆಗೆ ಒಪ್ಪಿಗೆ ಕೊಟ್ಟ. 
ಭಾರಿ ಔತಣ ಏರ್ಪಡಿಸಲು ಆಜ್ಞೆ ಮಾಡಿದ. ವಿವಾಹ ಸಮಾರಂಭ ಎಷ್ಟು ಅದ್ಭುತವಾಗಿ ಜರುಗಿ 
ತೆಂದರೆ ಜನ ಅದನ್ನು ಇಡೀ ವರ್ಷ ನೆನಪಿನಲ್ಲಿಟ್ಟಿದ್ದರು . 

ನಾನೂ ಆ ಸಮಾರಂಭಕ್ಕೆ ಹೋಗಿದ್ದೆ. ಜೇನು ಮದ್ಯ ಸೇವಿಸಿದೆ. ಅದು ಒಂದು ತೊಟ್ಟೂ 
ನನ್ನ ಬಾಯಿಯೊಳಕ್ಕೆ ಬೀಳಲಿಲ್ಲ. ಎಲ್ಲ ನನ್ನ ಉದ್ದ ಗಡ್ಡದ ಮೂಲಕ ಹರಿದು ಹೋಯಿತು. 
ಅದಕ್ಕೇ ನೋಡಿ ನನ್ನ ಗಡ್ಡ ಬೆಳ್ಳಗಿರುವುದು !