ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಇದ್ದ . ಅವನಿಗೆ ಆರು ಮಂದಿ ಗಂಡುಮಕ್ಕಳು, 
ಒಬ್ಬಳು ಮಗಳು . ಗಂಡುಮಕ್ಕಳು ಹೊಲಕ್ಕೆ ಉಳಲು ಹೋದರು . ತಮಗೆ ಊಟ ತಂದು 
ಕೊಡಬೇಕೆಂದು ತಂಗಿಗೆ ಹೇಳಿದರು . 

ಅವಳು ಕೇಳಿದಳು : 
“ನೀವು ಹೊಲದಲ್ಲಿ ಎಲ್ಲಿರುತ್ತೀರೋ , ನನಗೆ ಹೇಗೆ ಗೊತ್ತಾಗುವುದು ? ” 
ಅವರು ಹೇಳಿದರು : 

“ ನಾವು ಮನೆಯಿಂದ ಹಿಡಿದು ಎಲ್ಲಿ ಉಳುತ್ತೇವೋ ಅಲ್ಲಿಯವರೆಗೆ ಚಾಚಿರುವಂತೆ ಒಂದು 
ನೇಗಿಲ ಸಾಲು ಮಾಡಿರುತ್ತೇವೆ. ನೀನು ಅದನ್ನು ನೋಡಿಕೊಂಡು ಬಾ .” 

ಹಾಗೆಂದು ಅವರು ಹೊಲಕ್ಕೆ ಉಳಲು ಹೋದರು. 

ಈ ಹೊಲದ ಹತ್ತಿರ ಕಾಡಿನಲ್ಲಿ ಒಂದು ಡೇಗನ್ ವಾಸವಾಗಿತ್ತು . ಅದು ಈ ಹುಡುಗರು 
ಮಾಡಿದ್ದ ನೇಗಿಲ ಸಾಲನ್ನು ಮಣ್ಣಿನಿಂದ ಮುಚ್ಚಿ ಇನ್ನೊಂದು ಹೊಸ ಸಾಲನ್ನು ಮಾಡಿತು . 
ಆ ಸಾಲು ನೇರವಾಗಿ ಅವರ ಮನೆಗೆ ಕರೆದೊಯುತ್ತಿತ್ತು . ಹುಡುಗಿ ಅಣ್ಣಂದಿರಿಗೆ ಊಟ ತೆಗೆದು 
ಕೊಂಡು ಈ ಸಾಲು ಅನುಸರಿಸಿಕೊಂಡು ಹೋದಳು . ಅದು ಅವಳನ್ನು ಡೇಗನ್‌ನ ಮನೆಯ 
ಅಂಗಳಕ್ಕೆ ಕರೆದೊಯ್ದಿತು. ಅವಳು ಅಲ್ಲಿಗೆ ಹೋದಕೂಡಲೇ ಅವಳನ್ನು ಡೇಗನ್ ಹಿಡಿದು 
ತನ್ನ ಮನೆಯೊಳಕ್ಕೆ ಎಳೆದೊಯ್ದಿತು. 

ಹೊಲ ಉತ್ತನಂತರ ಗಂಡು ಮಕ್ಕಳು ಸಂಜೆ ಮನೆಗೆ ಬಂದು ತಾಯಿಯನ್ನು ಕೇಳಿದರು : 


143 


“ ನಾವು ಇಡೀ ದಿನ ಉತ್ತೆವು. ನೀನು ನಮಗೆ ತಿನ್ನಲು ಏನನ್ನೂ ಕಳಿಸಿಕೊಡಲೇ ಇಲ್ಲ ! ” 
ಅವರ ತಾಯಿ ಉತ್ತರಿಸುತ್ತಾಳೆ: 

“ ಏನೋ ಹೀಗಂತೀರಾ ? ಅಲ್ಲೊಂಕ ತಂದು ಕೊಡಲಿಲ್ಲವೇ ? ಅವಳೂ ನಿಮ್ಮ ಜೊತೆಯೇ 
ಮನೆಗೆ ಹಿಂದಿರುಗುತ್ತಾಳೆ ಅಂತ ನಾನು ಅಂದುಕೊಂಡಿದ್ದೆ. ದಾರಿ ತಪ್ಪಿಬಿಟ್ಟಳೊ 
ಏನೋ ? ” 
ಸೋದರರು ಹೇಳಿದರು : 
“ ಹಾಗಾದರೆ ಹೋಗಿ ಅವಳನ್ನು ಹುಡುಕಬೇಕು. ” 

ಆರು ಮಂದಿಯ ಆ ನೇಗಿಲ ಸಾಲನ್ನೇ ಅನುಸರಿಸಿ ಹೋಗಿ ಅದೇ ಡೇಗನ್‌ನ ಮನೆಯ 
ಅಂಗಳ ತಲುಪಿದರು . ಅಲ್ಲಿಗೆ ಹೋಗಿನೋಡ್ತಾರೆ - ಅವಳು ಅಲ್ಲಿದ್ದಾಳೆ. 

ಅವರನ್ನು ನೋಡಿ ಅವಳು ಹೇಳಿದಳು : 

“ಓಹ್ , ನನ್ನ ಪ್ರೀತಿಯ ಅಣ್ಣಂದಿರೇ ! ನಿಮ್ಮನ್ನೆಲ್ಲಿ ಅಡಗಿಸಿ ಇಡಲಿ ಈಗ ? ಡೇಗನ್ 
ಹೊರಗೆ ಹೋಗಿದೆ. ಬಂದು ಕಂಡರೆ ನಿಮ್ಮನ್ನೆಲ್ಲ ತಿಂದು ಹಾಕುತ್ತದೆ ! ” 

ಅವಳು ಇನ್ನೂ ಹೇಳಿ ಮುಗಿಸಿಲ್ಲ, ಆಗಲೇ ಡೇಗನ್ ಬಂದೇ ಬಂದಿತು . 

“ಓಹೋ , ಮನುಷ್ಯರ ವಾಸನೆ ಬರುತ್ತಿದೆ! ” ಎಂದದು ಫೂತ್ಕರಿಸುತ್ತದೆ. “ ಏನು , ಹುಡು 
ಗರೇ , ನನ್ನ ಜೊತೆಹೋರಾಡುವುದಕ್ಕೆ ಬಂದಿದ್ದೀರೋ , ಶಾಂತಿ ಮಾಡಿಕೊಳ್ಳಲು ಬಂದಿದ್ದೀರೋ ? ” 

ಅವರು ಕೂಗಿ ಹೇಳುತ್ತಾರೆ: 
“ಹೋರಾಡಲು ! ” 
ಆಗ ಡೇಗನ್ ಹೇಳಿತು : 
“ ಹಾಗಾದರೆ ನಡೆಯಿರಿ ಹೋಗೋಣ, ಕಬ್ಬಿಣದ ಕಣಕ್ಕೆ ! ” 

ಕಬ್ಬಿಣದ ಕಣಕ್ಕೆ ಹೋರಾಡಲು ಹೋದರು . ಹೆಚ್ಚು ಕಾಲವೇನೂ ಹೋರಾಡಬೇಕಾಗಲಿಲ್ಲ. 
ಡೇಗನ್ ಅವರಿಗೆ ಎಂಥ ಹೊಡೆತ ನೀಡಿತೆಂದರೆ ಅವರು ಒಂದೇ ಏಟಿಗೆ ಕಬ್ಬಿಣದ ಕಣದೊಳಗೆ 
ಹೂತು ಹೋದರು . ಅನಂತರ ಅದು ಅವರನ್ನು ಕಿತ್ತು ಹೊರಗೆಳೆಯಿತು. ಅವರು ಜೀವಂತ 
ವಾಗಿರುವುದಕ್ಕಿಂತ ಹೆಚ್ಚಾಗಿ ಸತ್ತಂತಿದ್ದರು . ಅವರನ್ನು ಡೇಗನ್ ಒಂದು ಆಳವಾದ ಕತ್ತಲ ಕೂಪ 
ದೊಳಕ್ಕೆ ಎಸೆಯಿತು. 

ಮನೆಯಲ್ಲಿ ಅಮ್ಮ ಅಪ್ಪ ಮಕ್ಕಳಿಗಾಗಿ ಕಾದರು . ಆದರೆ ಅವರು ಹಿಂದಿರುಗಲೇ ಇಲ್ಲ. 

ಒಂದು ದಿನ ತಾಯಿ ಬಟ್ಟೆ ಒಗೆಯಲು ನದಿಗೆ ಹೋದಳು . ನೋಡುತ್ತಾಳೆ - ದಾರಿಯಲ್ಲಿ 
ಒಂದು ಕಾಳು ಉರುಳಿಕೊಂಡು ಬರುತ್ತಿದೆ ! ಅವಳು ಅದನ್ನು ಎತ್ತಿಕೊಂಡು ತಿಂದಳು . 


145 


ಸ್ವಲ್ಪ ಕಾಲವಾದ ಮೇಲೆ ಅವಳಿಗೆ ಒಬ್ಬ ಮಗ ಹುಟ್ಟಿದ. ಅವರು ಅವನಿಗೆ “ಉರುಳು 
ಕಾಳು ” ಎಂದೇ ಹೆಸರಿಟ್ಟರು. 

ಈ ಮಗ ಬೇಗನೆಯೇ ಬೆಳೆದ. ದೊಡ್ಡದಾಗಿ ಬೆಳೆದ. ವಯಸ್ಸಿನಲ್ಲಿ ಚಿಕ್ಕವನಾದರೂ 
ಆಕಾರದಲ್ಲಿ ದೊಡ್ಡದಾಗಿ ಬೆಳೆದ. 

ಒಂದು ಸಾರಿ ತಂದೆ ಮಗನೊಂದಿಗೆ ಬಾವಿ ತೋಡಲು ಹೊರಟ . ಕೆಳಗೆ ಅವರಿಗೆ ಒಂದು 
ದೊಡ್ಡ ಬಂಡೆ ಅಡ್ಡ ಬಂತು. ಅದನ್ನು ತೆಗೆದು ಹಾಕಲು ಜನರನ್ನು ಕರೆಯೋಣ ಅಂತ ತಂದೆ 
ನೆರೆಯ ಹೊಲಕ್ಕೆ ಓಡಿದ. ಅವನು ಹಿಂದಿರುಗಿ ಬರುವುದರೊಳಗೇ ಉರುಳುಕಾಳು ಒಬ್ಬನೇ 
ಆ ಬಂಡೆಯನ್ನು ಮೇಲಕ್ಕೆ ಎತ್ತಿ ಹಾಕಿದ್ದ . ಅಕ್ಕಪಕ್ಕದವರೆಲ್ಲ ಬಂದು ನೋಡಿ ಆಶ್ಚರ್ಯಪಟ್ಟರು. 
ಆಶ್ಚರ್ಯಕ್ಕಿಂತ ಹೆಚ್ಚಾಗಿ ಅವರಿಗೆ ದಿಗಿಲಾಯಿತು. ಎಂಥ ಶಕ್ತಿ ಇವನದು ಎಂದವರು ತುಂಬ 
ಹೆದರಿ ಅವನನ್ನು ಕೊಂದು ಹಾಕಬೇಕು ಅಂತ ನಿರ್ಧರಿಸಿದರು. ಆದರೆ ಉರುಳುಕಾಳು ಆ ಬಂಡೆ 
ಯನ್ನು ಎತ್ತಿ ಒಮ್ಮೆ ಗಾಳಿಯಲ್ಲಿ ಎಸೆದು ಮತ್ತೆ ಅದನ್ನು ಕೈಗಳಲ್ಲಿ ಹಿಡಿದ. ಜನ ಅದನ್ನು 
ಕಂಡಿದ್ದೇ ಭಯದಿಂದ ಓಟ ಕಿತ್ತರು. 

ತಂದೆ ಹಾಗೂ ಮಗ ಬಾವಿಯನ್ನು ಅಗೆಯುವ ಕಾರ್ಯವನ್ನು ಮುಂದುವರಿಸಿದರು. 
ಅವರಿಗೆ ಮತ್ತೆ ಒಂದು ದೊಡ್ಡ ಕಬ್ಬಿಣದ ತುಂಡು ಅಡ್ಡ ಬಂದಿತು. ಉರುಳುಕಾಳು ಅದನ್ನು 
ತೆಗೆದು ಅಡಗಿಸಿಟ್ಟ . 

ಸ್ವಲ್ಪ ಕಾಲ ಕಳೆಯಿತು. ಒಮ್ಮೆ ಉರುಳುಕಾಳು ತನ್ನ ತಂದೆ ತಾಯಿಯರಿಗೆ ಹೇಳಿದ : 
“ ನನಗೆ ಸೋದರಿಸೋದರರು ಇದ್ದರೇ ? ” 

“ ಅಯ್ಯೋ , ಏನು ಹೇಳೀಯ, ಮಗು ? ” ಎಂದು ಅವರು ದುಃಖದಿಂದ ಉತ್ತರಿಸಿದರು. 
“ ನಿನಗೆ ಸೋದರಿಯೂ ಇದ್ದಳು, ಆರು ಮಂದಿ ಸೋದರರೂ ಇದ್ದರು . ಹೌದು, ಇದ್ದರು 
ಅಷ್ಟೆ .” 

ಹಾಗೆಂದು ಅವರು ಅವನಿಗೆ ಎಲ್ಲವನ್ನೂ ಹೇಳಿದರು . 
ಅದನ್ನು ಕೇಳಿದ ಮೇಲೆ ಉರುಳುಕಾಳು ಹೇಳಿದ : 
“ ಸರಿ. ಹಾಗಾದರೆ, ನಾನು ಹೋಗಿ ಅವರನ್ನು ಹುಡುಕುತ್ತೀನಿ.” 
ಅವನ ಅಪ್ಪ ಅಮ್ಮ ಬೆಚ್ಚಿಬಿದ್ದರು. ಒಟ್ಟಿಗೇ ಹೇಳಿದರು : 

“ಬೇಡ, ಮಗು, ಬೇಡ ! ಆರು ಮಂದಿ ಹೋದರು , ಏನೂ ಮಾಡೋಕೆ ಆಗಲಿಲ್ಲ. ಮತ್ತೆ 
ನೀನೊಬ್ಬನೇ ಹೋಗಿ ಏನು ಮಾಡಬಲ್ಲೆ ? ” 

ಆದರೆ ಉರುಳುಕಾಳು ಉತ್ತರಿಸಿದ: 


146 


“ ಇಲ್ಲ, ನಾನು ಹೋಗ ಹೋಗ್ತಿನಿ! ಅವರದು ನನ್ನದೇ ರಕ್ತಮಾಂಸ, ಅವರು ನನ್ನ 
ಒಡಹುಟ್ಟಿದವರು . ನಾನು ಅವರನ್ನು ಬಿಡಿಸದಿದ್ದರೆ ಹೇಗೆ? ” 

ಅವನು ಬಾವಿ ಅಗೆದಾಗ ಸಿಕ್ಕಿದ್ದ ಕಬ್ಬಿಣದ ತುಂಡನ್ನು ತೆಗೆದುಕೊಂಡು ಕಮಾರನ ಬಳಿಗೆ 
ಹೋದ. 

ಹೋಗಿ ಹೇಳಿದ: 

“ ಇದರಿಂದ ನನಗೆ ಒಂದು ದೊಡ್ಡ ಖಡ್ಗ ಮಾಡಿ ಕೊಡು! ಎಷ್ಟು ದೊಡ್ಡದಾದರೆ ಅಷ್ಟೂ 
ಉತ್ತಮ ! ” 

ಕಮ್ಮಾರ ಎಂಥ ದೊಡ್ಡ ಹಾಗೂ ಭಾರವಾದ ಖಡ್ಗ ಮಾಡಿದನೆಂದರೆ ಅದನ್ನು ಕಮಾರ 
ಸಾಲೆಯಿಂದ ಯಾರಿಗೂ ಹೊರಗೊಯ್ಯಲಾಗಲಿಲ್ಲ. ಆದರೆ ಉರುಳುಕಾಳು ಅದನ್ನು ಬಹು 
ಸುಲಭವಾಗಿ ಎತ್ತಿ ಹೇಗೆ ಗಾಳಿಯಲ್ಲಿ ಎತ್ತರಕ್ಕೆ ಎಸೆದ ! ಆಮೇಲೆ ಅಪ್ಪನಿಗೆ ಹೇಳಿದ : 

“ ನಾನು ನಿದ್ದೆ ಮಾಡೋಕೆಹೋಗ್ತಿನಿ. ಹನ್ನೆರಡು ದಿನ ಆದ ಮೇಲೆ ಖಡ್ಗ ಮತ್ತೆ ಹಾರಿ 
ಕೊಂಡು ಬರುತ್ತೆ . ಆಗ ನನ್ನನ್ನು ಎಬ್ಬಿಸು.” 

ಅವನು ನಿದ್ದೆ ಹೋದ. ಹದಿಮೂರನೆಯ ದಿನ ಖಡ್ಗ ಹಾರಿಕೊಂಡು ಬಂದಿತು. ತಂದೆ ಮಗ 
ನನ್ನು ಎಬ್ಬಿಸಿದ. ಉರುಳುಕಾಳು ಎದ್ದು ಕುಳಿತ. ತನ್ನ ಮುಷ್ಟಿಯನ್ನು ಮುಂದಕ್ಕೆ 
ಚಾಚಿದ . ಖಡ್ಡ ಬಂದು ಅದಕ್ಕೆ ಬಡಿಯಿತು. ಬಡಿದುದೇ ತುಂಡುತುಂಡಾಗಿ ಬಿದ್ದಿತು . ಮಗ 
ಹೇಳಿದ : 

“ ಇಂಥ ಖಡ್ಗ ತೆಗೆದುಕೊಂಡು ಸೋದರರನ್ನೂ ಸೋದರಿಯನ್ನೂ ಹುಡುಕಿಕೊಂಡು 
ಹೋಗೋದು ಹೇಗೆ ಸಾಧ್ಯ ? ಇನ್ನೊಂದನ್ನು ಮಾಡಿಸಿಕೊಳ್ಳಬೇಕು. ” 

ಹಾಗೆಂದು ಉರುಳುಕಾಳು ಮುರಿದ ಖಡ್ಗವನ್ನು ಮತ್ತೆ ಕಮಾರನ ಬಳಿಗೆ ಕೊಂಡೊಯ್ದ . 

“ ಇದರಿಂದ ನನಗೆ ಒಂದು ಹೊಸ ಖಡ್ಗ ಮಾಡಿ ಕೊಡು. ನನಗೆ ಸರಿಹೋಗುವಂಥದನ್ನು 
ಮಾಡಿ ಕೊಡು ! ” 

ಕಮ್ಮಾರ ಮೊದಲಿನದಕ್ಕಿಂತ ಹೆಚ್ಚು ದೊಡ್ಡದಾದ ಖಡ್ಗವನ್ನು ಮಾಡಿದ. ಉರುಳುಕಾಳು 
ಅದನ್ನೂ ಎತ್ತಿಕೊಂಡು ಗಾಳಿಯಲ್ಲಿ ಎತ್ತರಕ್ಕೆ ಎಸೆದು , ಮತ್ತೆ ಹನ್ನೆರಡು ದಿನ ನಿದ್ದೆ ಹೋದ. 
ಹದಿಮೂರನೆಯ ದಿನ ಈ ಖಡ್ಗ ಹಿಂದಕ್ಕೆ ಹಾರಿ ಬಂದಿತು . ಅದು ಘೀಳಿಟ್ಟುಕೊಂಡು ಬರುತ್ತಿದ್ದ 
ಶಬ್ದಕ್ಕೆ ಭೂಮಿಯೇ ನಡುಗಿತು. ಉರುಳುಕಾಳನ್ನು ಎಬ್ಬಿಸಲಾಯಿತು. ಅವನು ಎದ್ದು 
ಕುಳಿತು ತನ್ನ ಮುಷ್ಟಿಯನ್ನು ಮುಂದಕ್ಕೆ ಚಾಚಿದ. ಖಡ್ಗ ಅದಕ್ಕೆ ಜೋರಾಗಿ ಬಂದು ಬಡಿಯಿತು. 
ಅದು ಹಿಂದಿನಂತೆ ಮುರಿಯಲಿಲ್ಲ, ಆದರೆ ಸ್ವಲ್ಪವಷ್ಟೆ ಬಳುಕಿತು . 


147 


“ ಇದೀಗ ನನಗೆ ಸರಿಯಾದ ಖಡ್ಗ, ಇದರೊಂದಿಗೆ ನಾನು ನನ್ನ ಸೋದರರನ್ನೂ ಸೋದ 
ರಿಯನ್ನೂ ಹುಡುಕಲು ಹೋಗಬಹುದು. ಅಮ್ಮ , ನನಗೆ ಸ್ವಲ್ಪ ಬ್ರೆಡ್ಡು , ಸ್ವಲ್ಪ ರಸ್ಕ್ ಮಾಡಿ 
ಕೊಡು, ನಾನು ಹೊರಡುತ್ತೇನೆ.” 

ಅವನು ಆ ಖಡ್ಗವನ್ನು ತೆಗೆದುಕೊಂಡು, ತಾಯಿ ಕೊಟ್ಟ ಬುತ್ತಿಯನ್ನು ಕಟ್ಟಿಕೊಂಡು, 
ತಾಯಿತಂದೆಯರಿಗೆ ವಿದಾಯ ಹೇಳಿ ಮನೆಯಿಂದ ಹೊರಟ . 

ಅವನು ಡೇಗನ್‌ನ ಅದೇ ಹಳೆಯ ನೇಗಿಲ ಸಾಲನ್ನೇ ಅನುಸರಿಸಿ ಹೊರಟ. ಬೇಗನೆಯೇ 
ಕಾಡಿನ ಒಳ ಹೊಕ್ಕ . ಕಾಡಿನಲ್ಲೇ ಮುಂದೆ ಮುಂದಕ್ಕೆ ನಡೆದುಹೋದ. ಕೊನೆಗೆ ಅವನಿಗೆ ಸುತ್ತ 
ಬೇಲಿ ಇದ್ದ ದೊಡ್ಡ ಅಂಗಳದ ಮಧ್ಯೆ ಒಂದು ಭಾರಿ ಮನೆ ಕಾಣಬಂದಿತು. ಅವನು ಅಂಗಳದ 
ಒಳಕ್ಕೆ ಹೋಗಿ ಅನಂತರ ಮನೆಯ ಒಳಕ್ಕೂ ಹೋದ. ಆದರೆ ಪ್ರೇಗನ್ ಮನೆಯಲ್ಲಿರಲಿಲ್ಲ. 
ಸೋದರಿ ಅಲ್ಲೊಂಕಳಷ್ಟೆ ಒಬ್ಬಳೇ ಮನೆಯಲ್ಲಿದ್ದಳು . 

ಅವನು ಹೇಳಿದ: 
“ನಮಸ್ಕಾರ, ಚೆಲುವ ಹುಡುಗಿ !” 
ಅಲ್ಲೊಂಕ ಉತ್ತರಿಸಿದಳು : 

“ನಮಸ್ಕಾರ, ಸದ್ಭಾವದ ಹುಡುಗ ! ಯಾತಕ್ಕೆ ಇಲ್ಲಿಗೆ ಬಂದೆ ? ಡೇಗನ್ ಇನ್ನೇನು ಬರುತ್ತೆ , 
ನಿನ್ನನ್ನು ತಿಂದುಹಾಕುತ್ತೆ . ” 

“ ಆಗಲಿ , ತಿನ್ನಲಿ ನೋಡೋಣ! ಅದು ಸರಿ, ನೀನು ಯಾರು ? ” 

“ ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು . ಈ ಡೇಗನ್ ನನ್ನನ್ನು ಕದ್ದು ಇಲ್ಲಿ ಹಿಡಿ 
ದಿರಿಸಿದೆ. ನನ್ನ ಆರು ಮಂದಿ ಸೋದರರು ನನ್ನನ್ನು ಬಿಡಿಸಲು ಯತ್ನಿಸಿದರು. ಆದರೆ ಯಶಸ್ವಿ 
ಯಾಗಲಿಲ್ಲ. ” 

“ ಅವರೆಲ್ಲಿ ? ” 

“ಡೇಗನ್ ಅವರನ್ನು ಕತ್ತಲ ಕೂಪಕ್ಕೆ ತಳ್ಳಿತು . ಅವರು ಬದುಕಿದ್ದಾರೋ ಇಲ್ಲವೋ ನನಗೆ 
ತಿಳಿಯದು. ” 

ಉರುಳುಕಾಳು ಹೇಳಿದ : 
“ ಬಹುಶಃ ನಾನು ನಿನ್ನನ್ನು ಬಿಡಿಸಲು ಸಾಧ್ಯವಾಗಬಹುದು. ” 
ಆದರೆ ಅಲ್ಲೊಂಕ ಹೇಳಿದಳು : 

“ನಿನಗೆಲ್ಲಿ ಆಗುತ್ತಪ್ಪ ! ನನ್ನ ಆರು ಮಂದಿ ಸೋದರರ ಕೈಲೇ ಆಗಲಿಲ್ಲ. ನೀನು ಒಬ್ಬ , 
ನಿನ್ನ ಕೈಲಿ ಎಲ್ಲಿ ಆಗುತ್ತೆ ? ” 


148 


“ ಪರವಾಗಿಲ್ಲ ! ಒಬ್ಬನಾದರೇನಂತೆ ” ಉರುಳುಕಾಳು ಉತ್ತರಿಸಿದ . 
ಅವನು ಕಿಟಕಿಯ ಬಳಿ ಡೇಗನ್ ಬರುವುದಕ್ಕಾಗಿಯೇ ಕಾದು ಕುಳಿತ . 

ಸ್ವಲ್ಪ ಹೊತ್ತಿಗೆ ಡೇಗನ್ ಹಾರಿಕೊಂಡು ಬಂದಿತು . ಮನೆಯ ಒಳಹೊಕ್ಕಿತು, ಆಳವಾಗಿ 
ಉಸಿರೆಳೆದುಕೊಳ್ಳುತ್ತ ಹೇಳಿತು : 

“ ಹುಂ . ಮನುಷ್ಕರ ವಾಸನೆ ಬರುತ್ತಿದೆಯಲ್ಲ! ” 
“ ಬರದೇ ಏನಂತೆ ? ” ಉರುಳುಕಾಳು ಹೇಳಿದ. “ ನಾನು ಇಲ್ಲೇ ಇದ್ದೇನಲ್ಲ.” 
“ ಆಹ್ವಾ , ಹುಡುಗ ! ನಿನಗೇನು ಬೇಕು - ಯುದ್ದವೋ ಶಾಂತಿಯೋ ? ” 
ಉರುಳುಕಾಳು ಉತ್ತರಿಸಿದ : 
“ ಎಲ್ಲಿ ಶಾಂತಿ ಸಾಧ್ಯವಿಲ್ಲವೋ ಅಲ್ಲಿ ಯುದ್ಧ ಮಾಡಲೇ ಬೇಕು !” 
“ ಸರಿ , ನಡಿ ಹಾಗಾದರೆ , ಕಬ್ಬಿಣದ ಕಣಕ್ಕೆ ಹೋಗೋಣ.” 
“ ನಡಿ, ಹೋಗೋಣ! ” 
ಹೋದರು . ಡೇಗನ್ ಹೇಳಿತು : 
“ನೀನೇ ಮೊದಲು ಹೊಡಿ! ” 
“ ಇಲ್ಲ, ನೀನೇ ಮೊದಲು ಹೊಡಿ! ” ಉರುಳುಕಾಳು ಹೇಳಿದ. 
ಡೇಗನ್ ಎಷ್ಟು ಜೋರಾಗಿ ಪ್ರಹಾರ ನೀಡಿತೆಂದರೆ ಉರುಳುಕಾಳು ಕಾಲಿನ ಹರಡಿನವರೆಗೆ 
ಆ ಕಬ್ಬಿಣದ ಕಣದೊಳಕ್ಕೆ ಕುಸಿದ. ಆದರೆ ಅವನು ಕ್ಷಣ ಮಾತ್ರದಲ್ಲೇ ಹೊರ ಬಂದು ತನ್ನ 
ಖಡ್ಗದಿಂದ ಡೇಗನ್ ಮೇಲೆ ಎಷ್ಟು ಜೋರಾಗಿ ಹೊಡೆದನೆಂದರೆ ಡೇಗನ್ ಮೊಣಕಾಲಿನ 
ವರೆಗೆ ಕಣದೊಳಕ್ಕೆ ಕುಸಿಯಿತು. ಅದೂ ತಕ್ಷಣವೇ ಕಣದಿಂದ ಬಿಡಿಸಿಕೊಂಡು ಹೊರಬಂದು 
ಉರುಳುಕಾಳಿನ ಮೇಲೆ ಮತ್ತೊಂದು ಭಾರಿ ಪ್ರಹಾರ ನೀಡಿತು . ಈಗ ಉರುಳುಕಾಳೂ ಮೊಣ 
ಕಾಲಿನವರೆಗೆ ಹೂತುಕೊಂಡ. ಆದರೆ ಇದರಿಂದ ಅವನೇನೂ ಭಯಗೊಳ್ಳಲಿಲ್ಲ. ಡೇಗನ್ 
ಮೇಲೆ ತಾನೂ ಮತ್ತೊಂದು ಪ್ರಹಾರ ನೀಡಿದ. ಡೇಗನ್ ಈಗ ಕಣದೊಳಗೆ ಸೊಂಟದವರೆಗೂ 
ಹೂತುಕೊಂಡಿತು . ತಕ್ಷಣವೇ ಉರುಳುಕಾಳು ಮೂರನೆಯ ಪ್ರಹಾರ ನೀಡಿದ. ಡೇಗನ್ ಸತ್ತು 
ಬಿದ್ದಿತು . 

ಅನಂತರ ಉರುಳುಕಾಳು ತನ್ನ ಸೋದರರನ್ನು ಕೂಡಿಹಾಕಿದ್ದ ಕತ್ತಲ ಕೂಪಕ್ಕೆ ಹೋಗಿ 
ಅವರನ್ನು ಬಿಡಿಸಿದ. ಅವರು ಜೀವದಿಂದಿರುವುದಕ್ಕಿಂತ ಹೆಚ್ಚಾಗಿ ಸತ್ತಂತೆಯೇ ಇದ್ದರು . ಅವರನ್ನೂ 
ಸೋದರಿ ಅಲ್ಲೊಂಕಳನ್ನೂ ಕರೆದುಕೊಂಡು ಉರುಳುಕಾಳು ಡೇಗನ್‌ನ ಬಳಿ ಇದ್ದ ಚಿನ್ನ ಬೆಳ್ಳಿ 
ಯನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಮನೆಯ ಕಡೆಗೆ ಹೊರಟ . 


149 


ಆದರೆ ಉರುಳುಕಾಳು ಅವರಿಗೆ ತಾನು ಅವರ ಸೋದರ ಅನ್ನುವ ವಿಷಯ ತಿಳಿಸಲಿಲ್ಲ. 
ಅವರು ತುಂಬ ದೂರ ಹೋದರೋ ಸ್ವಲ್ಪ ದೂರ ಹೋದರೋ ತಿಳಿಯದು. ಬಳಲಿ ಒಂದು 
ಮರದ ಕೆಳಗೆ ಆಯಾಸ ಪರಿಹರಿಸಿಕೊಳ್ಳಲು ಕುಳಿತರು . ಡೇಗನ್‌ನ ಜೊತೆ ನಡೆಸಿದ ಹೋರಾ 
ಟದಿಂದ ಉರುಳುಕಾಳು ತುಂಬ ಬಳಲಿದ್ದ . ಬೇಗನೆಯೇ ಗಾಢ ನಿದ್ರೆಯಲ್ಲಿ ಮೈಮರೆತು ಮಲ 
ಗಿದ. ಆ ಆರುಮಂದಿ ಸೋದರರೂ ತಮ್ಮತಮ್ಮಲ್ಲೇ ಮಾತನಾಡಿಕೊಂಡರು : 

“ ನಾವು ಆರು ಮಂದಿಯ ಡೇಗನ್‌ಅನ್ನು ಕೊಲ್ಲಲು ಆಗಲಿಲ್ಲ, ಈ ಒಬ್ಬ ಕೊಂದ, ಅಂತ 
ತಿಳಿದರೆ ಜನ ನಮ್ಮನ್ನು ನೋಡಿ ನಗುತ್ತಾರಷ್ಟೆ . ಅಲ್ಲದೆ ಪ್ರೇಗನ್‌ನ ಸಿರಿಸಂಪತ್ತೆಲ್ಲ ಇವನದೇ 
ಆಗುತ್ತಿದೆ.” 

ಹೀಗೆಂದು ಮಾತನಾಡಿಕೊಂಡು ಅವರು ನಿರ್ಧರಿಸಿದರು : ಈಗ ಇವನು ನಿದ್ದೆ ಮಾಡ್ತಿದಾನೆ , 
ಮೈ ಮರೆತಿದಾನೆ ; ಇವನನ್ನು ಮರಕ್ಕೆ ಕಟ್ಟಿ ಹಾಕಿ, ಕಾಡು ಮೃಗಗಳು ತಿಂದು ಹಾಕೋಕೆಬಿಟ್ಟು 
ಹೋಗೋಣ. ನಿರ್ಧರಿಸಿದರೋ ಇಲ್ಲವೋ ಹಾಗೆಯೇ ಮಾಡಿದರು . ಅವನನ್ನು ಮರಕ್ಕೆ ಕಟ್ಟಿ 
ಹಾಕಿ ಹೊರಟು ಹೋದರು. 

ಉರುಳುಕಾಳು ಮಲಗಿದ್ದ. ಎಷ್ಟು ಗಾಢವಾಗಿ ಮಲಗಿದ್ದನೆಂದರೆ ಅವನಿಗೆ ಇವೆಲ್ಲ ಒಂದಿಷ್ಟೂ 
ಗೊತ್ತಾಗಲೇ ಇಲ್ಲ . ಒಂದು ದಿನ ಒಂದು ರಾತ್ರಿ ಮಲಗಿದ. ಆಮೇಲೆ ಎಚ್ಚರಗೊಂಡು ನೋಡು 
ತಾನೆ - ತನ್ನನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ. ಅವನೊಮ್ಮೆ ಮೈ ಕೊಡವಿ ಎದ್ದು ನಿಂತ – 
ಮರವೇ ಬುಡ ಸಮೇತ ಕಿತ್ತುಬಂತು. ಉರುಳುಕಾಳು ಆ ಮರವನ್ನು ಹೆಗಲ ಮೇಲೆ ಹೊತ್ತು 
ಕೊಂಡು ಮನೆಗೆ ಬಂದ. ಮನೆಯ ಒಳಹೊಕ್ಕಾಗ ಅವನಿಗೆ ಅವನ ಸೋದರರ ಮಾತು ಕೇಳಿ 
ಸಿತು . ಅವರು ತಮ್ಮ ತಾಯಿಯನ್ನು ಕೇಳುತ್ತಿದ್ದರು : 

“ ಏನಮ್ಮ , ನಾವು ಬಿಟ್ಟು ಹೋದ ಮೇಲೆ ನಿಮಗೆ ಇನ್ನೂ ಮಕ್ಕಳಾದವೆ ? ” 

“ ಹೌದು ಕಣೋ ! ಉರುಳುಕಾಳು ಹುಟ್ಟಿದ. ನಿಮ್ಮನ್ನು ಹುಡುಕಿಕೊಂಡು ಬದ್ದೀನಿ 
ಅಂತ ಹೋದ. ” 

ಆಗ ಅವರು ಹೇಳಿದರು : 
“ ಅಯೋ , ಹಾಗೇನು ? ನಾವು ಮರಕ್ಕೆ ಕಟ್ಟಿ ಹಾಕಿ ಬಂದವನು ಅವನೇ ಇರಬೇಕು ! ಅವ 
ನನ್ನು ಕೂಡಲೇ ಹೋಗಿ ಬಿಡಿಸಬೇಕು ! ” 

ಉರುಳುಕಾಳು ತನ್ನೊಂದಿಗೆ ತಂದಿದ್ದ ಮರವನ್ನು ಆ ಮನೆಯ ಚಾವಣಿಯ ಮೇಲೆ ಎಷ್ಟು 
ಜೋರಾಗಿ ಇರಿಸಿದನೆಂದರೆ ಮನೆಯೇ ಇನ್ನೇನು ಮುರಿದು ಬೀಳುವುದರಲ್ಲಿದ್ದಿತು . 

ಹೀಗೆ ಹೇಳಿದ : 


150 


“ನೀವೇನೂ ಎಲ್ಲಿಗೂ ಹೋಗಬೇಕಾಗಿಲ್ಲ . ನೀವು ಎಂಥವರು ಅನ್ನುವುದು ನನಗೀಗ ಗೊತ್ತಾ 
ಯಿತು. ನೀವು ಮನೆಯಲ್ಲೇ ಸುಖವಾಗಿರಿ. ನಾನು ಈ ವಿಶಾಲ ಜಗತ್ತಿನಲ್ಲಿ ಸುತ್ತಾಡೋಕೆ 
ಹೋಗ್ರೀನಿ. ” 

ಅವನು ಖಡ್ಗವನ್ನು ಹೆಗಲ ಮೇಲಿಟ್ಟುಕೊಂಡು ಹೊರಟು ಹೋದ. 

ಒಬ್ಬನೇ ಹೋದ, ಹೋದ. ನೋಡ್ತಾನೆ - ಅಲ್ಲಿ ಬೆಟ್ಟ , ಇಲ್ಲಿ ಬೆಟ್ಟ , ಮಧ್ಯೆ ಒಬ್ಬ ವ್ಯಕ್ತಿ . 
ಆ ವ್ಯಕ್ತಿ ತನ್ನ ಕೈಗಳಿಂದಲೂ ಕಾಲುಗಳಿಂದಲೂ ಬೆಟ್ಟಗಳನ್ನು ದೂರ ಹೋಗುವಂತೆ ತಳ್ಳುತ್ತಿ 
ದಾನೆ. 

ಉರುಳುಕಾಳು ಹೇಳಿದ: 
“ ನಮಸ್ಕಾರ, ಮಿತ್ರ ! ” 
“ ನಮಸ್ಕಾರ !” 
“ಸಜ್ಜನನೇ , ಏನು ಮಾಡ್ತಿದೀಯ ನೀನು? ” 
“ ಬೆಟ್ಟಗಳನ್ನು ಸರಿಸುತ್ತಿದೇನೆ. ಮಧ್ಯೆ ದಾರಿ ಆಗಲಿ ಅಂತ.” 

ದಾರಿ ಮಾಡಿಕೊಂಡು ಎಲ್ಲಿಗೆ ಹೋಗಬೇಕೂಂತ ? ” 
“ ಸುಖ ಹುಡುಕಿಕೊಂಡು ಹೊರಟಿದ್ದೇನೆ. ” 
“ ನಾನೂ ಹಾಗೇ ಹೊರಟಿದ್ದೇನೆ. ನಿನ್ನ ಹೆಸರೇನು ? ” 
“ ಬೆಟ್ಟಸರಿಸು ಅಂತ. ನಿನ್ನ ಹೆಸರು ? ” 
“ ಉರುಳುಕಾಳು ಅಂತ, ಒಟ್ಟಿಗೆ ಹೋಗೋಣವಾ ? ” 
“ಓಹೋ , ಹೋಗೋಣ ನಡಿ.” 

ಇಬ್ಬರೂ ಹೋದರು . ಹೋದರೂ , ಹೋದರೂ ... ಕೊನೆಗೆ ಕಾಡಿನಲ್ಲಿ ಒಬ್ಬ ಮನುಷ್ಯ 
ನನ್ನು ಕಂಡರು. ಅವನು ಬರಿಗೈಗಳಿಂದಲೇ ಮರಗಳನ್ನು ಬೇರು ಸಹಿತ ಕಿತ್ತು ಹಾಕುತ್ತಿದ್ದ. 

ಅವರು ಹೇಳಿದರು : 
“ ನಮಸ್ಕಾರ ! ” 
“ ನಮಸ್ಕಾರ ! ” 
“ ಏನು ಮಾಡ್ತಿದೀಯ ನೀನು, ಸಜ್ಜನನೇ ? ” 
“ಮರಗಳನ್ನು ಕಿತ್ತು ಹಾಕ್ತಿದೀನಿ, ದಾರಿ ಆಗಲಿ ಅಂತ ” 
“ ದಾರಿ ಮಾಡಿಕೊಂಡು ಎಲ್ಲಿಗೆ ಹೋಗಬೇಕೂಂತ ? ” 
“ ಸುಖ ಹುಡುಕಿಕೊಂಡು ಹೊರಟಿದ್ದೇನೆ. ” 


151 


“ ನಾವೂ ಹಾಗೇ ಹೊರಟಿದೇವೆ. ನಿನ್ನ ಹೆಸರೇನು ? ” 
“ ಮರಕೀಳು ಅಂತ. ನಿಮ್ಮ ಹೆಸರು ? ” 
“ ಉರುಳುಕಾಳು , ಬೆಟ್ಟಸರಿಸು ಅಂತ, ಒಟ್ಟಿಗೆ ಹೋಗೋಣವಾ ? ” 
“ಓಹೋ , ಹೋಗೋಣ. ನಡೆಯಿರಿ.” 

ಮೂವರೂ ಹೊರಟರು . ಹೋದರೂ , ಹೋದರೂ , ಕೊನೆಗೆ ನದಿಯ ದಡದ ಮೇಲೆ 
ಒಬ್ಬ ಉದ್ದ ಮಾಸೆಯ ವ್ಯಕ್ತಿಯನ್ನು ಕಂಡರು. ಅವನು ಮಿಾಸೆಯನ್ನು ತಿರುಚಿಕೊಂಡು ಅಡ್ಡ 
ಹಿಡಿದಂತೆ ನದಿಯ ಹರಿತ ನಿಂತು ಮಧ್ಯೆ ಹೋಗಲು ದಾರಿ ಆಗುತ್ತಿತ್ತು . 

ಅವರು ಅವನನ್ನು ಕಂಡು ಹೇಳಿದರು : 
“ ನಮಸ್ಕಾರ! ”. 
“ ನಮಸ್ಕಾರ!” : 
“ ಸಜ್ಜನನೇ , ಏನು ಮಾಡ್ತಿದೀಯ ನೀನು ? ” 
“ನೀರನ್ನು ನಿಲ್ಲಿಸುತ್ತಿದೀನಿ, ನದಿ ದಾಟಲು ಸುಲಭವಾಗಲಿ ಅಂತ.” 
“ ದಾಟಿ ಎಲ್ಲಿಗೆ ಹೋಗಬೇಕೂಂತ ? ” 
“ ಸುಖ ಹುಡುಕಿಕೊಂಡು ಹೊರಟಿದೀನಿ. ” 
“ ನಾವೂ ಹಾಗೇ ಹೊರಟಿದೀವಿ. ನಿನ್ನ ಹೆಸರೇನು ? ” 
“ ಮಾಸೆತಿರುಚು ಅಂತ. ನಿಮ್ಮ ಹೆಸರು ? ” 
“ ಉರುಳುಕಾಳು, ಬೆಟ್ಟಸರಿಸು, ಮರಕೀಳು, ಅಂತ, ಒಟ್ಟಿಗೆ ಹೋಗೋಣವಾ ? ” 
“ಓಹೋ , ಹೋಗೋಣ ನಡೆಯಿರಿ.” 

ಅವರು ಹೊರಟರು . ಎಷ್ಟು ಚೆನ್ನಾಗಿತ್ತು ಅವರ ಪ್ರಯಾಣ . ದಾರಿಗೆ ಬೆಟ್ಟಗುಡ್ಡಗಳೇ 
ನಾದರೂ ಅಡ್ಡ ಬಂದರೆ ಬೆಟ್ಟಸರಿಸು ಅವುಗಳನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡುತ್ತಿದ್ದ; ಕಾಡು 
ಅಡ್ಡ ಬಂದರೆ ಮರಕೀಳು ಮರಗಳನ್ನು ಕಿತ್ತು ದಾರಿ ಮಾಡುತ್ತಿದ್ದ; ನದಿ ಅಡ್ಡ ಬಂದರೆ ಮಾಸೆ 
ತಿರುಚು ನೀರಿನ ಹರಿತವನ್ನು ತನ್ನ ಮಾಸೆಗಳಿಂದ ತಡೆದು ದಾರಿ ಮಾಡುತ್ತಿದ್ದ. 

ಹೀಗೆ ಅವರು ಕೊನೆಗೆ ಒಂದು ಭಾರಿ ಕಾಡಿಗೆ ಬಂದರು. ಅಲ್ಲಿ ಅವರಿಗೊಂದು ಗುಡಿಸಿಲು 
ಕಾಣಿಸಿತು. ಒಳಗೆ ಹೋಗಿ ನೋಡಿದರು - ಯಾರೂ ಇಲ್ಲ. 

ಉರುಳುಕಾಳು ಹೇಳಿದ : 
“ ಇವತ್ತು ರಾತ್ರಿ ಇಲ್ಲಿಯೇ ಕಳೆಯೋಣ. ” 
ಅವರು ಅಂದು ರಾತ್ರಿ ಆ ಗುಡಿಸಿಲಿನಲ್ಲೇ ಕಳೆದರು . 


152 


ಬೆಳಿಗ್ಗೆ ಉರುಳುಕಾಳು ಹೇಳಿದ: 

“ ಬೆಟ್ಟಸರಿಸು , ನೀನು ಮನೆಯಲ್ಲೇ ಇದ್ದು ಊಟಕ್ಕೆ ಏರ್ಪಾಟು ಮಾಡು . ನಾವುಮೂವರೂ 
ಬೇಟೆಯಾಡಿಕೊಂಡು ಬರುತ್ತೇವೆ. ” 

ಅವರು ಹೊರಟರು . ಬೆಟ್ಟಸರಿಸು ಬೇಯಿಸಿದ, ಕಾಯಿಸಿದ, ಊಟ ಸಿದ್ಧಗೊಳಿಸಿ ವಿಶ್ರಾಂತಿ 
ತೆಗೆದುಕೊಳ್ಳಲು ಸ್ವಲ್ಪ ಮಲಗಿದ . ಆಗ ಯಾರೋ ಬಾಗಿಲು ತಟ್ಟಿದ ಶಬ್ದವಾಯಿತು. 

“ ಬಾಗಿಲು ತೆಗಿ ! ” 
ಬೆಟ್ಟಸರಿಸು ಉತ್ತರಿಸಿದ: 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ತೆಗೆದುಕೊ .” 
ಬಾಗಿಲು ತೆರೆಯಿತು. ಮತ್ತೆ ಅದೇ ಧ್ವನಿ ಕೇಳಿಸಿತು : 
“ ನನ್ನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸು ! ” 
ಆದರೆ ಬೆಟ್ಟಸರಿಸು ಹೇಳಿದ : 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ದಾಟಿಕೊಂಡು ಬಾ ” 

ಅಕೋ , ಬಂದ ಹೊಸ್ತಿಲು ದಾಟಿಕೊಂಡು ಒಬ್ಬ ಅತ್ಯಂತ ಪುಟ್ಟ ಅಜ್ಜ , ಅಷ್ಟು ಪುಟ್ಟ 
ಮನುಷ್ಯ ಹಿಂದೆಂದೂ ಇದ್ದುದೇ ಇಲ್ಲ ಅನ್ನಬಹುದು. ಅವನಿಗೊಂದು ಉದ್ದವಾದ ಗಡ್ಡವಿತ್ತು . 
ಅದು ನೆಲದ ಮೇಲೆ ಹರಡುವವರೆಗೂ ಬೆಳೆದಿತ್ತು . ಆ ಗಿಡ್ಡ ಅಜ್ಜ ಬೆಟ್ಟಸರಿಸಿನ ಮುಂಗುರುಳನ್ನು 
ಹಿಡಿದು ಮೇಲೆತ್ತಿ ಗೋಡೆಯ ಮೇಲಿದ್ದ ಒಂದು ಮೊಳೆಗೆ ಅವನನ್ನು ನೇತು ಹಾಕಿದ. ತಾನೇ 
ಅಲ್ಲಿ ಏನೇನು ಅಡಿಗೆ ಮಾಡಿ ಇರಿಸಲಾಗಿತ್ತೊ ಎಲ್ಲವನ್ನೂ ತಿಂದು , ಕುಡಿದು ಮುಗಿಸಿದ, 
ಹೊರಟು ಹೋದ. 

ಬೆಟ್ಟಸರಿಸು ಒದ್ದಾಡಿ ಹೊರಳಾಡಿ ಕೊನೆಗೂ ಮೊಳೆಯಿಂದ ತನ್ನ ಮುಂಗುರುಳನ್ನು 
ಬಿಡಿಸಿಕೊಂಡ. ಮತ್ತೆ ಹೊಸ ಅಡಿಗೆ ತಯಾರಿಸುವುದರಲ್ಲಿ ನಿರತನಾದ. ಅವನ ಸಂಗಾತಿಗಳು 
ಹಿಂದಿರುಗಿದರು . ಅವನು ಇನ್ನೂ ಬೇಯಿಸುತ್ತಲೇ ಇದ್ದಾನೆ ! 

ಅವರು ಕೇಳಿದರು : 
“ ಏನು ನೀನು ? ಅಡಿಗೆ ಇನ್ನೂ ಮಾಡುತ್ತಿದ್ದೀಯ ? ಯಾಕೆ ಇಷ್ಟು ತಡ ? ” 
ಅವನು ಉತ್ತರಿಸಿದ : 
“ಸಣ್ಣ ನಿದ್ದೆ ಮಾಡೋಣ ಅಂತ ಮಲಗಿ ಬಿಟ್ಟೆ .” 

ಎಲ್ಲರೂ ಹೊಟ್ಟೆ ತುಂಬ ತಿಂದರು , ಮಲಗಿದರು . ಮಾರನೆಯ ದಿನ ಎದ್ದು ಉರುಳು 
ಕಾಳು ಹೇಳಿದ : 


153 


“ ಮರಕೀಳು, ಇವತ್ತು ನೀನು ಮನೆಯಲ್ಲಿದ್ದು ಅಡಿಗೆ ಮಾಡು. ನಾವು ಬೇಟೆಗೆ ಹೋಗಿ 
ಬತ್ತೇವೆ. ” 

ಅವರು ಹೊರಟರು . ಮರಕೀಳು ಬೇಯಿಸಿದ, ಕಾಯಿಸಿದ, ಅಡಿಗೆ ಸಿದ್ಧಗೊಳಿಸಿ ಸ್ವಲ್ಪ 
ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದ. ಆಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಬಂದಿತು . 

“ ಬಾಗಿಲು ತೆಗಿ ! ” 
ಮರಕೀಳು ಹೇಳಿದ: 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ತೆಗೆದುಕೋ ! ” 
“ ನನ್ನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸು ! ” 
“ನೀನು ಯಾವ ಮಹಾ ದೊಡ್ಡ ಮನುಷ್ಯ ? ನೀನೇ ದಾಟಿಕೊಂಡು ಬಾ ! ” 

ಅಕೋ ಬಂದ ಹೊಸ್ತಿಲು ದಾಟಿಕೊಂಡು ಒಬ್ಬ ಅತ್ಯಂತ ಪುಟ್ಟ ಅಜ್ಜ , ಅವನ ಉದ್ದ ಗಡ್ಡ 
ನೆಲದ ಮೇಲೆ ಎಳೆದುಕೊಂಡು ಬರುತ್ತೆ . ಒಳ ಬಂದವನೇ ಅವನು ಮರಕೀಳುವಿನ ಮುಂಗುರು 
ಳನ್ನು ಹಿಡಿದು ಮೇಲೆತ್ತಿ ಗೋಡೆಯ ಮೇಲಿದ್ದ ಒಂದು ಮೊಳೆಗೆ ಅವನನ್ನು ನೇತುಹಾಕಿದ. 
ಆಮೇಲೆ ತಾನೇ ಅಲ್ಲಿ ಮಾಡಿರಿಸಿದ್ದ ಅಡಿಗೆ ಎಲ್ಲವನ್ನೂ ತಿಂದ, ಎಲ್ಲವನ್ನೂ ಕುಡಿದ, ಆಮೇಲೆ 
ಹೊರಟು ಹೋದ. 

ಮರಕೀಳು ಒದ್ದಾಡಿ ಹೊರಳಾಡಿ ಕೊನೆಗೂ ಮೊಳೆಯಿಂದ ತನ್ನ ಮುಂಗುರುಳನ್ನು ಬಿಡಿಸಿ 
ಕೊಂಡ. ಬೇಗ ಬೇಗ ಹೊಸದಾಗಿ ಅಡಿಗೆ ಮಾಡಲು ಪ್ರಾರಂಭಿಸಿದ . 

ಅವನ ಸಂಗಾತಿಗಳು ಬೇಟೆಯಿಂದ ಹಿಂದಿರುಗಿದರು . 
“ ಏನು ನೀನು ? ಅಡಿಗೆ ಇನ್ನೂ ಮಾಡುತ್ತಿದ್ದೀಯ ? ಯಾಕೆ ಇಷ್ಟು ತಡ ? ” 
ಅವನು ಉತ್ತರಿಸಿದ: 
“ಹೌದು, ಸಣ್ಣ ನಿದ್ದೆ ಮಾಡೋಣ ಅಂತ ಮಲಗಿ ಬಿಟ್ಟೆ .” 
ಏನು ಜರುಗಿದ್ದಿತು ಅನ್ನುವುದನ್ನು ಊಹಿಸಿ ತಿಳಿದ ಬೆಟ್ಟಸರಿಸು ಸುಮ್ಮನಿದ್ದ. 
ಮೂರನೆಯ ದಿನ ಮಾಸೆತಿರುಚು ಮನೆಯಲ್ಲಿ ಉಳಿದ. ಅವನಿಗೂ ಹೀಗೇ ಆಯಿತು. 
ಉರುಳುಕಾಳು ಹೇಳಿದ: 

“ನೀವುಮೂವರೂ ಅಡಿಗೆ ಮಾಡುವುದರಲ್ಲಿ ತುಂಬ ನಿಧಾನ ! ಆಗಲಿ , ನಾಳೆ ನೀವು ಬೇಟೆಗೆ 
ಹೋಗಿ, ನಾನು ಮನೆಯಲ್ಲೇ ಉಳಿಯುತ್ತೇನೆ. ” 

ಮಾರನೆಯ ದಿವಸ ಹಾಗೇ ಆಯಿತು. ಆ ಮೂವರು ಬೇಟೆಗೆ ಹೋದರು, ಉರುಳುಕಾಳು 
ಮನೆಯಲ್ಲಿ ಉಳಿದ. 


154 


ಅವನೂ ಬೇಯಿಸಿದ, ಕಾಯಿಸಿದ , ಅಡಿಗೆ ಸಿದ್ಧಗೊಳಿಸಿ ಸ್ವಲ್ಪ ವಿರಮಿಸಲು ಹೋದ. 
ಕೇಳುತ್ತಾನೆ, ಯಾರೋ ಬಾಗಿಲು ತಟ್ಟುತ್ತಿದಾರೆ . 

“ ಬಾಗಿಲು ತೆಗೆ ! ” 
ಉರುಳುಕಾಳು ಹೇಳಿದ: 
“ಸ್ವಲ್ಪ ತಾಳು , ತೆಗೀತೀನಿ. ” 

ಬಾಗಿಲು ತೆಗೆದು ನೋಡಿದ – ಒಬ್ಬ ಪುಟ್ಟ ಅಜ್ಜ ನಿಂತಿದ್ದಾನೆ. ಅವನ ಗಡ್ಡ ಉದ್ದವಾಗಿ 
ನೆಲದ ಮೇಲೆಲ್ಲ ಹರಡಿದೆ. 

ಆ ಅಜ್ಜ ಹೇಳಿದ : 
“ ನನ್ನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸು ! ” 

ಉರುಳುಕಾಳು ಅವನನ್ನು ಎತ್ತಿಕೊಂಡು ಹೊಸ್ತಿಲು ದಾಟಿಸಿ ಒಳಗೆ ಕರೆತಂದ. ನೆಲದ ಮೇಲೆ 
ಇರಿಸಿದ ಕೂಡಲೇ ಆ ಪುಟ್ಟ ಅಜ್ಜ ಕುಣಿದಾಡ ತೊಡಗಿದ, ಆಗಾಗ್ಗೆ ಉರುಳುಕಾಳಿಗೆ ಡಿಕ್ಕಿ 
ಹೊಡೆಯ ತೊಡಗಿದ . 

ಉರುಳುಕಾಳು ಕೇಳಿದ : 
“ ನಿನಗೇನು ಬೇಕು ? ” 

“ ತಾಳು , ಏನು ಅನ್ನುವುದನ್ನು ನೀನೇ ನೋಡುವಿಯಂತೆ ” ಎಂದು ಹೇಳಿ ಆ ಪುಟ್ಟ ಅಜ್ಜ 
ತನ್ನ ಕೈಯನ್ನು ಉರುಳುಕಾಳಿನ ಮುಂಗುರುಳಿನ ಕಡೆಗೆ ಚಾಚಿ ಅದನ್ನು ಹಿಡಿಯುವುದರಲ್ಲಿದ್ದ. 

ಆಗ ಉರುಳುಕಾಳು : 
“ಓಹೋ , ಇಂಥವನೋ ನೀನು ! ” 

ಹಾಗೆ ಎಂದು ತಾನೇ ಆ ಅಜ್ಜನ ಗಡ್ಡ ಹಿಡಿದ. ಆಮೇಲೆ ಒಂದು ಕೊಡಲಿಯನ್ನು ತೆಗೆದು 
ಕೊಂಡ, ಆ ಅಜ್ಜನನ್ನು ಹೊರಗೆ ಒಂದು ಓಕ್ ಮರದ ಬಳಿಗೆ ಎಳೆದುಕೊಂಡು ಹೋದ. ಮರ 
ವನ್ನು ಎರಡು ಹೋಳುಗಳಾಗಿ ಒಡೆದು ಅಜ್ಜನ ಗಡ್ಡವನ್ನು ಹೋಳುಗಳ ಮಧ್ಯೆ ಒಳಗಿನವರೆಗೂ 
ತೂರಿಸಿ ಭದ್ರವಾಗಿ ಸಿಕ್ಕಿ ಹಾಕಿಸಿದ. 

ಹೀಗೆ ಹೇಳಿದ : 

“ನೀನು ಎಂಥ ನೀಚ, ನನ್ನ ಮುಂಗುರುಳು ಹಿಡಿಯ ಬಂದಿದ್ದೆಯಲ್ಲ. ಈಗ ಕೂತಿರು ಇಲ್ಲೇ , 
ನಾನು ಹಿಂದಿರುಗಿ ಬರುವವರೆಗೂ . ” 

ಅವನು ಗುಡಿಸಿಲಿಗೆ ಹಿಂದಿರುಗಿದ. ಅವನ ಸಂಗಾತಿಗಳು ಆಗಲೇ ಬಂದಿದ್ದರು . 
ಅವರು ಕೇಳಿದರು : 


155 


“ ಅಡಿಗೆ ಆಯಿತಾ ? ” 
ಅವನು ಉತ್ತರಿಸಿದ: 
“ಓಹೋ ! ಆಗಿ ಎಷ್ಟೋ ಹೊತ್ತಾಯಿತು ! ” 
ಎಲ್ಲರೂ ಊಟ ಮಾಡಿದರು . ಆಮೇಲೆ ಉರುಳುಕಾಳು ಹೇಳಿದ: 
“ ಬನ್ನಿ ನನ್ನ ಜೊತೆ ನಾನು ನಿಮಗೆ ಒಂದು ಚಮತ್ಕಾರವನ್ನು ತೋರಿಸುತ್ತೇನೆ.” 

ಅವರು ಓಕ್ ಮರದ ಬಳಿಗೆ ಬಂದರು . ಆದರೆ ಅಲ್ಲಿ ಆ ಓಕ್ ಮರವೂ ಇಲ್ಲ, ಆ ಅಜ್ಜನ 
ಇಲ್ಲ. ಆ ಅಜ್ಜ ಓಕ್ ಮರವನ್ನು ಬೇರು ಸಹಿತ ಕಿತ್ತು ಮರವನ್ನೂ ಎಳೆದುಕೊಳ್ಳುತ್ತ ಓಡಿ 
ಹೋಗಿದ್ದ. ಆಗ ಉರುಳುಕಾಳು ತನ್ನ ಸಂಗಾತಿಗಳಿಗೆ ಅವರು ಬೇಟೆಗೆ ಹೋಗಿದ್ದಾಗ ತನಗೆ 
ಏನಾಯಿತು ಅನ್ನುವುದನ್ನೆಲ್ಲ ವಿವರಿಸಿ ತಿಳಿಸಿದ . ಅವರೂ ಹೇಗೆ ಆ ಅಜ್ಜ ತಮ್ಮನ್ನು ಮುಂಗು 
ರುಳಿನಿಂದ ಮೊಳೆಗೆ ನೇತು ಹಾಕಿದ್ದ ಅನ್ನುವುದನ್ನು ತಿಳಿಸಿದರು . 

ಆಗ ಉರುಳುಕಾಳು ಹೇಳಿದ: 
“ಹೌದಾ? ಅವನು ಅಂಥವನಾ ? ಹಾಗಾದರೆ ಬನ್ನಿ , ಹುಡುಕಿ ಅವನನ್ನು ಹಿಡಿಯೋಣ.” 

ಆ ಅಜ್ಜ ಓಕ್ ಮರವನ್ನು ಎಲ್ಲಿಗೆ ಎಳೆದುಕೊಂಡು ಹೋಗಿದ್ದನೋ ಅಲ್ಲಿಯವರೆಗೆ ನೆಲದ 
ಮೇಲೆ ಮರ ಎಳೆದ ಗುರುತಿತ್ತು . ಅವರು ಆ ಗುರುತನ್ನೇ ಅನುಸರಿಸಿಕೊಂಡು ಹೋದರು. 

ಅದು ಅವರನ್ನು ಒಂದು ಆಳವಾದ ಕುಳಿಯ ಬಳಿಗೆ ಕರೆದೊಯ್ದಿತು. ಆ ಕುಳಿ ಎಷ್ಟು 
ಆಳವಾಗಿದ್ದಿತೆಂದರೆ ಅದರ ತಳವೇ ಕಾಣುತ್ತಿರಲಿಲ್ಲ. 

ಉರುಳುಕಾಳು ಹೇಳಿದ : 
“ ಬೆಟ್ಟಸರಿಸು , ನೀನು ಕುಳಿಯ ಒಳಕ್ಕೆ ಇಳಿದು ಹೋಗಿನೋಡು!” 
ಆದರೆ ಅವನು ಉತ್ತರಿಸಿದ: 
“ ಅಯ್ಯೋ , ನನ್ನ ಕೈಯಲ್ಲಾಗೊಲ್ಲಪ್ಪ ! ” 
“ಹೋಗಲಿ, ನೀನು ಹೋಗು, ಮರಕೀಳು ! ” 
ಅವನೂ ಹೋಗಲು ಇಷ್ಟಪಡಲಿಲ್ಲ. ಮಾಸೆತಿರುಚುವೂ ಹೋಗಲು ಬಯಸಲಿಲ್ಲ . 
ಅದನ್ನು ನೋಡಿ ಉರುಳುಕಾಳು ಹೇಳಿದ : 
“ ಹಾಗಾದರೆ ನಾನೇ ಹೋಗ್ತಿನಿ. ಆದರೆ ನನಗೊಂದು ಹಗ್ಗ ಬೇಕು. ಬನ್ನಿ ಹೊಸೆಯೋಣ!” 

ಅವರು ಒಂದು ಉದ್ದವಾದ ಹಗ್ಗ ಹೊಸೆದರು . ಉರುಳುಕಾಳು ಅದರ ಒಂದು ತುದಿಯನ್ನು 
ಕೈಯಲ್ಲಿ ಹಿಡಿದು ಹೇಳಿದ : 

“ ನನ್ನನ್ನು ಕೆಳಕ್ಕೆ ಇಳಿಬಿಡಿ ! ” 


156 


ಅವರು ಇಳಿಬಿಡಲು ಶುರು ಮಾಡಿದರು . ತುಂಬ ಹೊತ್ತು ಇಳಿಬಿಡುತ್ತಲೇ ಹೋದರು , 
ಎಷ್ಟು ಹೊತ್ತಾದರೂ ತಳವೇ ಸಿಗುತ್ತಿಲ್ಲ. ಅಂತೂ ಕೊನೆಗೆ ತಳ ಸಿಕ್ಕಿತು. 

ಉರುಳುಕಾಳು ಅಲ್ಲಿ ಹುಡುಕ ಹೊರಟ .ನೋಡುತ್ತಾನೆ - ಅಲ್ಲೊಂದು ದೊಡ್ಡ ಅರಮನೆ 
ಇದೆ. ಅವನು ಅದರ ಒಳಗೆಹೋದ. ಅಲ್ಲಿ ಎಲ್ಲವೂ ಕಣ್ಣುಕೋರೈಸುವಂತೆ ಥಳಥಳಿಸುತ್ತಿದ್ದವು - 
ಅವನ್ನೆಲ್ಲ ಚಿನ್ನದಿಂದ ಮಾಡಲಾಗಿತ್ತು , ಮಧ್ಯೆಮಧ್ಯೆ ಪ್ರಶಸ್ತ ಶಿಲೆಗಳನ್ನಿರಿಸಿ ಅಲಂಕರಿಸಲಾಗಿತ್ತು . 
ಅವನು ಒಂದು ಕೋಣೆಯಿಂದ ಇನ್ನೊಂದಕ್ಕೆ ಹೋಗುತ್ತ ಹೋದ. ಕೊನೆಗೆ ನೋಡುತ್ತಾನೆ - 
ಒಬ್ಬ ರಾಜಕುಮಾರಿ ಅವನತ್ತ ಓಡಿ ಬರುತ್ತಿದ್ದಾಳೆ. ಅವಳು ಎಂಥ ಸುಂದರಿಯಾಗಿದ್ದಳೆಂದರೆ 
ಅವಳ ಸೌಂದರ್ಯವನ್ನು ಕಥೆಗಳಲ್ಲಿ ವಿವರಿಸಿ ತಿಳಿಸಲು ಸಾಧ್ಯವಿಲ್ಲ, ಲೇಖನಿಯಿಂದ ಬರೆದು 
ತಿಳಿಸಲು ಸಾಧ್ಯವಿಲ್ಲ. 

ಅವಳು ಕೇಳಿದಳು : 
“ ಅಯ್ಯೋ , ಸಜ್ಜನನೇ , ನೀನು ಇಲ್ಲಿಗೇಕೆ ಬಂದೆ ? ” 
ಉರುಳುಕಾಳು ಉತ್ತರಿಸಿದ : 
“ನಾನು ಉದ್ದ ಗಡ್ಡದ ಒಬ್ಬ ಗಿಡ್ಡ ಅಜ್ಜನನ್ನು ಹುಡುಕಿಕೊಂಡು ಬಂದಿದ್ದೇನೆ.” 
ಆ ಹುಡುಗಿ ಹೇಳಿದಳು : 

“ ಅವನ ಗಡ್ಡ ಒಂದು ಓಕ್ ಮರದ ಸೀಳಿನ ಮಧ್ಯೆ ಸಿಕ್ಕಿಕೊಂಡು ಬಿಟ್ಟಿದೆ. ಅದನ್ನು ಬಿಡಿಸಿ 
ಕೊಳ್ಳಲು ಯತ್ನಿಸುತ್ತಿದ್ದಾನೆ. ಅವನ ಬಳಿಗೆ ಹೋಗಬೇಡ. ನಿನ್ನನ್ನು ಕೊಂದು ಹಾಕಿ ಬಿಡ್ತಾನೆ ! 
ಅವನಾಗಲೇ ಎಷ್ಟೋ ಜನರನ್ನು ಕೊಂದು ಹಾಕಿದಾನೆ ! ” 

ಆದರೆ ಉರುಳುಕಾಳು ಹೇಳಿದ: 

“ ಇಲ್ಲ, ನನ್ನನ್ನು ಕೊಲ್ಲೋಕೆ ಆಗೋಲ್ಲ. ನಾನೇ ಅವನ ಗಡ್ಡವನ್ನು ಮರಕ್ಕೆ ಸಿಕ್ಕಿ ಹಾಕಿಸಿ 
ರೋದು. ನೀನೇಕೆ ಇಲ್ಲಿ ವಾಸಿಸುತ್ತಿದ್ದೀಯ ? ” 

ಅವಳು ಉತ್ತರಿಸಿದಳು : 
“ ನಾನೊಬ್ಬ ರಾಜಕುಮಾರಿ. ಈ ಮುದುಕ ನನ್ನನ್ನು ಕದ್ದು ತಂದ. ಇಲ್ಲಿ ಬಂಧನದಲ್ಲಿರಿಸಿ 
ದಾನೆ.” 

ಅದನ್ನು ಕೇಳಿ ಉರುಳುಕಾಳು ಹೇಳಿದ : 

“ ಆಗಲಿ , ನಾನು ನಿನ್ನನ್ನು ಬಿಡಿಸುತ್ತೇನೆ. ನನ್ನನ್ನು ಅವನ ಬಳಿಗೆ ಕರೆದುಕೊಂಡು 
ಹೋಗು! ” 


ಅವಳು ಅವನನ್ನು ಅಲ್ಲಿಗೆ ಕರೆದುಕೊಂಡು ಹೋದಳು . ನೋಡುತ್ತಾನೆ - ನಿಜವೇ ! ಆ 


157 


ಮುದುಕ ಅಲ್ಲಿ ಕುಳಿತಿದ್ದಾನೆ. ಗಡ್ಡವನ್ನು ಓಕ್ ಮರದಿಂದ ಆಗಲೇ ಬಿಡಿಸಿಕೊಂಡಿದ್ದಾನೆ. ಗಡ್ಡ 
ವನ್ನು ನೀವಿಕೊಳ್ಳುತ್ತಿದ್ದಾನೆ. ಉರುಳುಕಾಳನ್ನು ಕಂಡ ಕೂಡಲೇ ಕೂಗಿ ಕೇಳುತ್ತಾನೆ: 

“ ಯಾತಕ್ಕೆ ಬಂದೆ ? ಹೋರಾಡಿ , ಶಾಂತಿ ಮಾಡಿಕೊಳ್ಳಲೋ ? ” 
ಉರುಳುಕಾಳು ಹೇಳುತ್ತಾನೆ: 
“ ಶಾಂತಿ ನನಗೆ ಬೇಕಿಲ್ಲ. ನಾನು ಹೋರಾಡಲು ಬಂದಿದ್ದೇನೆ.” 

ಇಬ್ಬರೂ ಹೋರಾಡಲು ಪ್ರಾರಂಭಿಸಿದರು . ಹೋರಾಡಿದರು , ಹೋರಾಡಿದರು . ಕೊನೆಗೆ 
ಉರುಳುಕಾಳು ತನ್ನ ಖಡ್ಗದಿಂದ ಹೊಡೆದು ಅಜ್ಜನನ್ನು ಕೊಂದು ಹಾಕಿದ. ಆಮೇಲೆ ಉರುಳು 
ಕಾಳೂ ರಾಜಕುಮಾರಿಯ ಆ ಅರಮನೆಯಲ್ಲಿದ್ದ ಎಲ್ಲ ಚಿನ್ನ ಮತ್ತು ಪ್ರಶಸ್ತ ಶಿಲೆಗಳನ್ನೂ 
ಮರು ಮೂಟೆಗಳಲ್ಲಿ ಕಟ್ಟಿಕೊಂಡು , ಅವನು ಇಳಿದು ಬಂದಿದ್ದ ಆ ಕುಳಿಯ ಬಳಿಗೆ 
ಹೋದರು. 

ಉರುಳುಕಾಳು ಕೆಳಗಿನಿಂದ ಕೂಗಿ ಹೇಳಿದ : 
“ಹೇಯ್, ಸೋದರರೇ , ಇದ್ದೀರ ನೀವು ಅಲ್ಲಿ ? ” 
ಅವರು ಉತ್ತರಿಸಿದರು : 
“ ಇದೇವಿ. ” 
ಉರುಳುಕಾಳು ಒಂದು ಮೂಟೆಯನ್ನು ಹಗ್ಗಕ್ಕೆ ಕಟ್ಟಿ ಹೇಳಿದ : 
“ ಎಳೆದುಕೊಳ್ಳಿ, ಸೋದರರೇ ! ಈ ಮೂಟೆ ನಿಮಗಾಗಿ ! ” 
ಅವರು ಮೂಟೆಯನ್ನು ಮೇಲಕ್ಕೆ ಎಳೆದುಕೊಂಡು ಹಗ್ಗವನ್ನು ಮತ್ತೆ ಕೆಳಕ್ಕೆ ಇಳಿಬಿಟ್ಟರು. 
ಉರುಳುಕಾಳು ಎರಡನೆಯ ಮೂಟೆಯನ್ನು ಅದಕ್ಕೆ ಕಟ್ಟಿದ: 
“ ಎಳೆದುಕೊಳ್ಳಿ . ಈ ಮೂಟೆಯ ನಿಮ್ಮದೇ ! ” 

ಇದೇ ರೀತಿ ಅವನು ಮೂರನೆಯ ಮೂಟೆಯನ್ನೂ ಕಳಿಸಿಕೊಟ್ಟ. ಆಮೇಲೆ ರಾಜಕುಮಾರಿ 
ಯನ್ನು ಕಟ್ಟಿದ. 

“ ಎಳೆದುಕೊಳ್ಳಿ. ಈ ರಾಜಕುಮಾರಿ ನನ್ನವಳು ! ” ಕೂಗಿ ಹೇಳಿದ. 

ಅವರು ಮೂವರೂ ರಾಜಕುಮಾರಿಯನ್ನೂ ಮೇಲಕ್ಕೆ ಎಳೆದುಕೊಂಡರು. ಇನ್ನು ಉರುಳು 
ಕಾಳನ್ನಷ್ಟೆ ಎಳೆದುಕೊಳ್ಳಬೇಕು. ಅಷ್ಟರಲ್ಲೇ ಅವರು ಯೋಚಿಸಿದರು : 

“ ಅವನನ್ನೇಕೆ ಮೇಲಕ್ಕೆ ಎಳೆಯಬೇಕು? ಅವನನ್ನು ಅಲ್ಲೇ ಬಿಟ್ಟುಬಿಡುವುದೇ ಮೇಲು. 
ರಾಜಕುಮಾರಿಯ ನಮ್ಮವಳೇ ಆಗುತ್ತಾಳೆ. ಅವನನ್ನು ಮೇಲಿನವರೆಗೂ ಎಳೆದು ಆಮೇಲೆ 
ಹಗ್ಗವನ್ನು ಬಿಟ್ಟು ಬಿಡೋಣ. ಅವನು ಕೆಳಕ್ಕೆ ಬಿದ್ದು ಸಾಯುತ್ತಾನೆ. ” 


158 


ಅವರು ಏನು ಮಾಡಲಿದ್ದರೆಂಬುದನ್ನು ಉರುಳುಕಾಳು ಊಹಿಸಿ ತಿಳಿದ. ಅವನು ಹಗ್ಗ ಕ್ಕೆ 
ಒಂದು ದೊಡ್ಡ ಕಲ್ಲು ಕಟ್ಟಿ ಕೂಗಿ ಹೇಳಿದ: 

“ ಹುಂ . ನನ್ನನ್ನು ಎಳೆದುಕೊಳ್ಳಿ ! ” 

ಅವರು ಮೇಲಿನವರೆಗೂ ಎಳೆದು ಆಮೇಲೆ ಹಗ್ಗವನ್ನು ಬಿಟ್ಟು ಬಿಟ್ಟರು. ಕಲ್ಲು ದೊಪ್ಪನೆ 
ಬಿದ್ದಿತು . 

“ಎಂಥ ಸ್ನೇಹಿತರು ನೀವು! ಆಗಲಿ, ಆಗಲಿ ! ” ಅಂದುಕೊಂಡ ಉರುಳುಕಾಳು . 
ಅವನು ಆ ಕುಳಿ ತಳದ ಅಧೋಲೋಕದಲ್ಲಿ ಅಲೆಯ ತೊಡಗಿದ . 
ಹೋದ, ಹೋದ. ಆಗ ಇದಕ್ಕಿದಂತೆ ಆಕಾಶದಲ್ಲೆಲ್ಲ ಮೋಡ ಮುಸುಕಿತು . ಭಾರಿ ಆಲಿ 
ಕಲ್ಲಿನ ಮಳೆ ಬೀಳ ತೊಡಗಿತು . ಉರುಳುಕಾಳು ಒಂದು ಓಕ್ ಮರದ ಮರೆ ಮಾಡಿಕೊಂಡು 
ನಿಂತ. ಅಲ್ಲಿ ನಿಂತಿದ್ದಾಗ ಅವನಿಗೆ ಮರದ ಮೇಲಿನ ಗೂಡೊಂದರಿಂದ ಹದ್ದಿನ ಮರಿಗಳು ಚಿಲಿಪಿಲಿ 
ಗುಟ್ಟುತ್ತಿದ್ದುದು ಕೇಳಿಸಿತು . ಅವನು ಮರ ಹತ್ತಿ ಹೋಗಿ ತನ್ನ ಕೋಟನ್ನೇ ಬಿಚ್ಚಿ ಆ ಮರಿಗಳ 
ಮೇಲೆ ಹೊದಿಸಿದ. 

ಮಳೆ ನಿಂತಿತು . ಒಂದು ದೊಡ್ಡ ಹಕ್ಕಿ - ಹದ್ದು , ಆ ಮರಿಗಳ ತಂದೆ - ಹಾರಿ ಬಂದಿತು . 
ಮರಿಗಳ ಮೇಲೆಕೋಟು ಹೊದಿಸಿರುವುದನ್ನು ಕಂಡು ಕೇಳಿತು : 

“ ಯಾರು ನಿಮಗೆ ಇದನ್ನು ಹೊದಿಸಿದವರು ? ” 
ಮರಿಗಳು ಉತ್ತರಿಸಿದವು: 
“ನೀನು ತಿಂದು ಹಾಕುವುದಿಲ್ಲ ಅಂತ ಮಾತು ಕೊಟ್ಟರೆ ಹೇಳುತ್ತೇವೆ. ” 
ಅದು ಹೇಳಿತು : 
“ ಇಲ್ಲ. ತಿನ್ನುವುದಿಲ್ಲ. ಹೇಳಿ.” 
ಆಗ ಮರಿಗಳು ಎಂದವು: 
“ ಅಲ್ಲಿ ಮರದ ಕೆಳಗೆ ಕುಳಿತಿದ್ದಾನಲ್ಲ, ಆ ವ್ಯಕ್ತಿಯೇ ನಮಗೆ ಹೊದಿಸಿದುದು. ” 
ಹದ್ದು ಉರುಳುಕಾಳಿನ ಬಳಿಗೆ ಹಾರಿ ಬಂದು ಹೇಳಿತು : 

“ ನಿನಗೆ ಏನು ಬೇಕೋ ಹೇಳು. ನಾನು ಎಲ್ಲ ನಿನಗೆ ಕೊಡುತ್ತೇನೆ. ಇದೇ ಮೊದಲ ಬಾರಿಗೆ 
ನನ್ನ ಒಂದು ಮರಿಯ ಇಂಥ ಭಾರಿ ಮಳೆಯಲ್ಲಿ ಸತ್ತಿಲ್ಲ – ಅದೂ ನಾನು ಮನೆಯಲ್ಲಿಲ್ಲದಿರು 
ವಾಗ. ” 
ಉರುಳುಕಾಳು ಉತ್ತರಿಸುತ್ತಾನೆ: 
“ ನಾನು ಎಲ್ಲಿಂದ ಇಲ್ಲಿಗೆ ಬಂದೆನೋ ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು. ” 


159 


“ಓಹ್ , ನೀನು ನನಗೆ ಒಂದು ಅಸಾಧ್ಯ ಕೆಲಸವನ್ನೇ ಕೊಡುತ್ತಿದ್ದೀಯಲ್ಲ ! ಆದರೂ ಇನ್ನೇನು 
ಮಾಡುವುದು ! ಹಾರಿ ಹೋಗಲೇ ಬೇಕು . ನಮ್ಮ ಜೊತೆಗೆ ಆರು ಪೀಪಾಯಿ ತುಂಬ ಮಾಂಸ , 
ಆರು ಪೀಪಾಯಿ ತುಂಬ ನೀರು ಕೊಂಡೊಯ್ಯಬೇಕು. ಹಾರಿ ಹೋಗುವಾಗ ನಾನು ತಲೆಯನ್ನು 
ಬಲ ಗಡೆ ತಿರುಗಿಸಿದಾಗ ನೀನು ನನ್ನ ಬಾಯಿಗೆ ಒಂದು ತುಂಡು ಮಾಂಸ ಹಾಕಬೇಕು. ಎಡಗಡೆಗೆ 
ತಿರುಗಿಸಿದಾಗ ಸ್ವಲ್ಪ ನೀರು ಕೊಡಬೇಕು. ಇಲ್ಲದಿದ್ದರೆ ನಾವು ಅಲ್ಲಿಗೆ ಹೋಗಲು ಆಗುವುದೇ 
ಇಲ್ಲ. ನಾನು ಮಧ್ಯದಲ್ಲೇ ಸಾಯುತ್ತೇನೆ.” 

ಅವರು ಆರು ಪೀಪಾಯಿ ತುಂಬ ಮಾಂಸ , ಆರು ಪೀಪಾಯಿ ತುಂಬ ನೀರು ತೆಗೆದುಕೊಂಡು 
ಹೊರಟರು. ಉರುಳುಕಾಳು ಹದ್ದಿನ ಬೆನ್ನಿನ ಮೇಲೆಕುಳಿತ . ಹಾರಿ ಹೋದರು, ಹಾರಿ ಹೋದರು. 
ಹದ್ದು ತಲೆಯನ್ನು ಬಲಗಡೆಗೆ ತಿರುಗಿಸಿದಾಗಲೆಲ್ಲ ಉರುಳುಕಾಳು ಅದರ ಬಾಯಿಯೊಳಕ್ಕೆ 
ತುಂಡು ಮಾಂಸ ಹಾಕುತ್ತಿದ್ದ. ಎಡಗಡೆಗೆ ತಿರುಗಿಸಿದಾಗಲೆಲ್ಲ ನೀರು ಕೊಡುತ್ತಿದ್ದ. ಹೀಗೆ ತುಂಬ 
ಕಾಲ ಹಾರಿ ಹೋದರು . ಇನ್ನೇನು ತಾವು ತಲುಪಬೇಕಾದ ಸ್ಥಳ ತಲುಪಲಿದ್ದರು. ಆಗ ಹದ್ದು 
ತಲೆಯನ್ನು ಬಲಗಡೆಗೆ ತಿರುಗಿಸಿತು . ಆದರೆ ಪೀಪಾಯಿಯಲ್ಲಿ ಮಾಂಸವೆಲ್ಲ ಮುಗಿದುಹೋಗಿದೆ . 
ಆಗ ಉರುಳುಕಾಳು ತನ್ನ ಕಾಲಿನಿಂದಲೇ ಒಂದು ಚೂರು ಮಾಂಸ ಕಿತ್ತು ತೆಗೆದು ಹಕ್ಕಿಯ ಬಾಯಿಗೆ 
ಹಾಕಿದ. ಹದ್ದು ಮತ್ತೆ ಮೇಲಕ್ಕೆ ಹಾರಿತು . 

ಅದು ಕೇಳಿತು : 
“ನೀನು ಈಗ ನನಗೆ ಕೊಟ್ಟೆಯಲ್ಲಿ ಆ ಮಾಂಸ ಯಾವುದು ? ಎಷ್ಟು ರುಚಿಯಾಗಿತ್ತು ! ” 
ಉರುಳುಕಾಳು ತನ್ನ ಕಾಲು ತೋರಿಸಿ ಹೇಳಿದ: 
“ ಈ ಮಾಂಸ. ” 

ಆಗ ಹದ್ದು ತಾನು ತಿಂದಿದ್ದ ಮಾಂಸದ ಚೂರನ್ನು ಹೊರಕ್ಕೆ ಉಗುಳಿತು, ಹಾರಿ ಹೋಗಿ 
ಸಂಜೀವಿನಿ ನೀರು ತಂದಿತು . ಆ ಚೂರು ಮಾಂಸವನ್ನು ಉರುಳುಕಾಳಿನ ಕಾಲಿನಲ್ಲಿ ಅದರ ಸ್ಥಳ 
ದಲ್ಲಿ ಇರಿಸಿ ಅದರ ಮೇಲೆ ಈ ನೀರನ್ನು ಚಿಮುಕಿಸಿತು . ಆ ಮಾಂಸದ ಚೂರು ಮತ್ತೆ ಕಾಲಿಗೆ 
ಬೇಗ ಸೇರಿಕೊಂಡಿತು . 

ಹದ್ದು ಅನಂತರ ತನ್ನ ಮನೆಗೆ ಹಿಂದಿರುಗಿತು . ಉರುಳುಕಾಳು ತನ್ನ ಮಿತ್ರರನ್ನು ಹುಡುಕಿ 
ಕೊಂಡು ಹೊರಟ . 

ಅವರು ಆಗಲೇ ಆ ರಾಜಕುಮಾರಿಯ ತಂದೆಯ ಮನೆಗೆ ಹೋಗಿ ಅಲ್ಲಿ ವಾಸಿಸುತ್ತಿದ್ದರು . 
ಅವರಲ್ಲಿ ಒಬ್ಬೊಬ್ಬರೂ ರಾಜಕುಮಾರಿಯನ್ನು ಮದುವೆಯಾಗಲು ಇಚ್ಚಿಸಿ ತಮ್ಮತಮ್ಮಲ್ಲೇ 
ಜಗಳವಾಡುತ್ತಿದ್ದರು . 


ಆಗ ಇದಕ್ಕಿದಂತೆ ಅಲ್ಲಿ ಉರುಳುಕಾಳು ಕಾಣಿಸಿಕೊಳ್ಳುತ್ತಾನೆ. ಅವನು ತಮ್ಮನ್ನು ಕೊಲ್ಲು 
ತಾನೆಂದು ಅವರು ಹೆದರಿದರು . ಆದರೆ ಅವನು ಹೇಳಿದ: 

“ ನನ್ನ ಒಡಹುಟ್ಟಿದ ಸೋದರರೇ ನನಗೆ ಮೋಸ ಮಾಡಿದರು . ಇನ್ನು ನಿಮ್ಮ ವಿಷಯ 
ಏನು ! ನಿಮ್ಮನ್ನು ಕ್ಷಮಿಸುವುದೇ ವಾಸಿ.” 

ಅವನು ಅವರನ್ನು ಕ್ಷಮಿಸಿದ. 
ತಾನೇ ಆ ರಾಜಕುಮಾರಿಯನ್ನು ಮದುವೆಯಾಗಿ ಸುಖದಿಂದ ಜೀವನ ನಡೆಸ ತೊಡಗಿದ.