ಪುಟಾಣಿಗಳೇ ನಿಮಗೆ ಫ್ಲೆಮಿಂಗೋ ಪಕ್ಷಿಯ ಬಗ್ಗೆ ಗೊತ್ತಾ?

Flemingo Painting

ಮಾರುದ್ದ ಕತ್ತು, ಕಾಲು ಮತ್ತು ದೇಹ ಪೂರ್ತಿ ಬೇಬಿ ಪಿಂಕ್ ಬಣ್ಣದ ಫ್ಲೆಮಿಂಗೋ ಪಕ್ಷಿ ನೋಡೋಕೆ ಬಲು ಚೆಂದ. ಇವು ಕೆರೇಬಿಯನ್, ಅಮೇರಿಕಾ ಮತ್ತು ಯೂರೋಪ್ನಲ್ಲಿವೆ. ಎರಡೂವರೆಯಿಂದ ಐದು ಅಡಿ ಎತ್ತರವಿರುವ ಇವು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಹಾರತ್ತೆ.

ಫ್ಲೆಮಿಂಗೋ ವರ್ಷಕ್ಕೊಂದೇ ಮೊಟ್ಟೆ ಇಡೋದು, ಅದ್ರ ಮೊಟ್ಟೆ ನಮ್ಮ ಕೋಳಿಮರಿ ಮೊಟ್ಟೆಗಿಂತ ಸ್ವಲ್ಪ ದೊಡ್ಡದಾಗಿರತ್ತೆ, ಒಂದು ತಿಂಗಳು ಮುಗಿಯೋದ್ರೊಳಗೆ ಮರಿ ಫ್ಲೆಮಿಂಗೋ ಹೊರ ಬರತ್ತೆ. ಹುಟ್ಟಿದಾಗ ಮರಿ ಫ್ಲೆಮಿಂಗೋ ಬಿಳಿ ಬಣ್ಣದಲ್ಲಿರತ್ತೆ, ಮೂರರಿಂದ ಐದು ವರ್ಷ ತುಂಬೋದ್ರೊಳಗೆ ಅದಕ್ಕೆ ಗುಲಾಬಿ ಬಣ್ಣ ಬರತ್ತೆ.

ಈ ಗುಲಾಬಿ ಬಣ್ಣ ಎಲ್ಲಿಂದ ಬರತ್ತೆ ಗೊತ್ತಾ? ಅವು ತಿನ್ನೋ ಆಹಾರದಿಂದ! ಇವು ತಿನ್ನೋದು ಸಸ್ಯ, ಲಾರ್ವ, ಹುಳು ಹುಪ್ಪಟಿಗಳನ್ನ. ಆಹಾರದಲ್ಲಿರೋ ಬೀಟಾ ಕ್ಯಾರೋಟೀನ್ ಅಂಶದ ಆಧಾರದ ಮೇಲೆ ಫ್ಲೆಮಿಂಗೋ ಪಕ್ಷಿಯ ಬಣ್ಣ ಕೆಂಪು, ಕೇಸರಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರತ್ತೆ.

ಈ ಕ್ಯಾರೋಟೀನ್ ಅಂಶ ಪಾಲಕ್ ಸೊಪ್ಪು, ಟೊಮ್ಯಾಟೋ, ಮಾವಿನಹಣ್ಣು, ಕುಂಬಳಕಾಯಿ, ಸಿಹಿಗೆಣಸು, ಕ್ಯಾರೆಟ್ ಮತ್ತು ಹಲವಾರು ಸಸ್ಯಳಲ್ಲಿವೆ. ಕ್ಯಾರೋಟೀನನ್ನು ಕ್ಯಾನ್ಡ್ ಜ್ಯೂಸ್ಗಳಲ್ಲಿ, ಕೇಕ್ ಪೇಸ್ಟರಿಗಳಲ್ಲಿ ಬಣ್ಣ ಬರಲು ಉಪಯೋಗಿಸ್ತಾರೆ ಗೊತ್ತಾ!

ಸ್ಪ್ಯಾನಿಷ್ನಲ್ಲಿ ಫ್ಹ್ಲೆಮೆಂಕೋ ಅನ್ನೋ ಡಾನ್ಸ್ ಈ ಫ್ಲೆಮಿಂಗೋ ಪಕ್ಷಿಯ ನೃತ್ಯ ಶೈಲಿಯಿಂದ ಬಂದಿದೆ ಅನ್ನೋ ಪ್ರತೀತಿ. ಇಲ್ನೋಡಿ ಫ್ಲೆಮಿಂಗೋ ಪಕ್ಷಿಯ ಟ್ಯಾಪ್ ಡಾನ್ಸ್!

ಸಂಘಜೀವಿಗಳಾದ ಇವು ಗುಂಪಿನಲ್ಲಿ ನರ್ತಿಸೋದನ್ನ ನೋಡೋಕೆ ಇನ್ನೂ ಚೆನ್ನಾಗಿರತ್ತೆ. ನೀವೂ ನೋಡಿ ಆನಂದಿಸಿ.

ಚಿತ್ರ ಕೃಪೆ: ಸ್ವಂತದ್ದು

ವೀಡಿಯೋ ಕೃಪೆ: ಯೂಟ್ಯೂಬಿನದ್ದು

ಧನ್ಯವಾದಗಳು

ಸವಿತ ಎಸ್.ಆರ್.