ಇದೊಂದು ಜನಪದ ಶಿಶುಗೀತೆ. ನನ್ನ ಪಾಟಿ (ಅಮ್ಮನ ಅಮ್ಮ) ನನ್ನ ಚಿಕ್ಕ ಸೋದರಮವನಿಗೆ ಹೇಳುತ್ತಿದ್ದರಂತೆ. ಮಕ್ಕಳಿಗೆ ಕನ್ನಡ ಪದಗಳನ್ನು, ಪದಗಳ ನಡುವೆ ಸಂಬಂಧ ಹೇಳಿಕೊಡಲು ಸುಲಭವಾದ ಪದ್ಯ. ನಾನಿದನ್ನು ಬೇರೆ ಎಲ್ಲೂ ಓದಿಲ್ಲ. ಅಮ್ಮ ಹೇಳಿದ್ದು ಹಾಗೇ ಬರೆದಿದ್ದೇನೆ.
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನಡೆದಳು ಸೀತೆ
ಸೀತೆ ಕಾಲೋಳಗೆ ಪದ್ಮರೇಖೆ ನೋಡೆ
ಪದ್ಮರೇಖೆಯಿಂದ ಕೊಳದತ್ತ ನೋಡೆ
ಕೊಳದ ನೀರು ಕುಡ್ಯಕ್ ಬಂದ ಆನೆ ನೋಡೆ
ಆನೆ ಮೇಲೆ ಅಂಬಾರಿ ನೋಡೆ
ಅಂಬಾರಿಯೊಳಗೆ ಅರಸನ್ ಮಕ್ಕಳ್ನ್ ನೋಡೆ
ಅರಸನ ಮಕ್ಕಳ ಕೈಯಲ್ಲಿ ಜೋಡ್ ಜೋಡ್ ಕಡೆಗೋಲು
ಜೋಡ್ ಜೋಡ್ ಕಡೆಗೋಲ್ಗೆ ಮಾರ್ ಮಾರ್ ಹಗ್ಗ
ಮಾರ್ ಮಾರ್ ಹಗ್ಗಕ್ಕೆ ಗಡಿಗೆ ಗಡಿಗೆ ಮೊಸರು
ಗಡಿಗೆ ಗಡಿಗೆ ಮೊಸ್ರಿಗೆ ಹೆಂಟೆ ಹೆಂಟೆ ಬೆಣ್ಣೆ
ಹೆಂಟೆ ಹೆಂಟೆ ಬೆಣ್ಣೆನಾ,
ತಿನ್ನಕ್ ಬಾರೋ ಬಸವಣ್ಣ
ಉಣ್ಣಕ್ ಬಾರೋ ಬಸವಣ್ಣ
ಸಂಗ್ರಹ: ಶ್ರೀನಿಧಿ ಎನ್(ಬೆಂಗಳೂರು)