ಈಗ ಚಳಿಗಾಲ ಅಲ್ವಾ? ನಮಗೆ ಚಳಿ ಆದಾಗ ನಾವು ಬೆಚ್ಚಗಿರಲು ಸ್ವೆಟರ್‍ ಹಾಕಿಕೊಳ್ಳುತ್ತೇವೆ. ಆದರೆ ನಮಗೇಕೆ ಚಳಿ ಆಗುತ್ತದೆ? ಸ್ವೆಟರ್‍ ಧರಿಸಿದಾಗ ಏಕೆ ಚಳಿ ಕಡಿಮೆಯಾಗುತ್ತದೆ? ಈ ಬಗ್ಗೆ ಸ್ವಲ್ಪ ಯೋಚನೆ ಮಾಡೋಣವೇ?

ಅದಕ್ಕೂ ಮೊದಲು ಒಂದು ಸಣ್ಣ ವಿಷಯವನ್ನು ತಿಳಿದುಕೊಳ್ಳೋಣ, ಉಷ್ಣವು (heat) ಯಾವಾಗಲೂ ಹೆಚ್ಚು ಉಷ್ಣಾಂಶ ಅಥವಾ ತಾಪಮಾನದ (temperature) ಪ್ರದೇಶದಿಂದ ಕಡಿಮೆ ಉಷ್ಣಾಂಶದ ಕಡೆಗೆ ಹರಿಯುತ್ತದೆ. ಉದಾಹರಣೆಗೆ ಬಿಸಿ ನೀರಿಗೆ ತಣ್ಣೀರನ್ನು ಸೇರಿಸಿದಾಗ ಬಿಸಿನೀರಿನಲ್ಲಿರುವ ಉಷ್ಣವು ತಣ್ಣೀರಿಗೆ ವರ್ಗಾವಣೆಯಾಗುತ್ತದೆ. ಹಾಗಾಗಿ ಬಿಸಿನೀರು ಸ್ವಲ್ಪ ತಣ್ಣಗಾಗುತ್ತದೆ. ನಮಗೆ ಚಳಿ ಆಗುವಾಗಲೂ ಇದೇ ನಿಯಮ ಅನ್ವಯಿಸುತ್ತದೆ. ವಾತಾವರಣದಲ್ಲಿ ತಾಪಮಾನವು (temperature) ನಮ್ಮ ದೇಹದ ತಾಪಮಾನಕ್ಕಿಂತ ಕಡಿಮೆಯಾದಾಗ, ನಮ್ಮ ದೇಹದಿಂದ ಉಷ್ಣವು (heat) ವಾತಾವರಣಕ್ಕೆ ಹರಿಯುತ್ತದೆ. ಆಗ ನಮ್ಮ ದೇಹವು ಉಷ್ಣವನ್ನು ಕಳೆದುಕೊಳ್ಳುವುದರಿಂದ ನಮಗೆ ಚಳಿಯ ಅನುಭವವಾಗುತ್ತದೆ.

ಈಗ ಸ್ವೆಟರ್‍ ಹಾಕಿಕೊಂಡಾಗ ನಮಗೆ ಏಕೆ ಬೆಚ್ಚನೆ ಅನುಭವವಾಗುತ್ತದೆ ಎಂದು ನೋಡೋಣ. ಸ್ವೆಟರ್‌ನಲ್ಲಿ ಬಳಸುವ ಉಣ್ಣೆ (wool) ಇದೆಯಲ್ಲ, ಅದು ಉಷ್ಣದ ಅವಾಹಕ (bad conductor of heat). ಹಾಗಾಗಿ ಅದು ದೇಹದಿಂದ ಉಷ್ಣವು ಹೊರಗೆ ಹೋಗದಂತೆ ತಡೆಯುತ್ತದೆ. ಅದರಿಂದ ನಮಗೆ ಬೆಚ್ಚನೆಯ ಅನುಭವವಾಗುತ್ತದೆ. ಅದೂ ಅಲ್ಲದೆ ನಾವು ಬ್ಲಾಂಕೆಟ್‌ಗಳನ್ನು ಧರಿಸಿದಾಗ, ನಮ್ಮ ದೇಹ ಮತ್ತು ಬ್ಲಾಂಕೆಟ್‌ನ ನಡುವೆ ಗಾಳಿ ಇರುತ್ತದೆಯಲ್ಲ, ಅದೂ ಕೂಡ ಉಷ್ಣದ ಅವಾಹಕ. ಆ ಗಾಳಿಯೂ ಕೂಡ ಉಷ್ಣವು ನಮ್ಮ ದೇಹದಿಂದ ಹೊರಗೆ ಹೋಗದಂತೆ ತಡೆಯುತ್ತದೆ. ಇದೆಲ್ಲಾ ಕಾರಣಗಳಿಂದ ಚಳಿಗಾಲದಲ್ಲಿಸ್ವೆಟರ್‍ ಧರಿಸಿದಾಗ ನಮಗೆ ಬೆಚ್ಚನೆಯ ಅನುಭವವಾಗುತ್ತದೆ.

ಇದೇ ತತ್ವವು ಬೇರೆ ಕಡೆಯೂ ಅನ್ವಯವಾಗುತ್ತದೆ. ಉದಾಹರಣೆಗೆ ನಾವು ಐಸ್‌ ಕ್ರೀಂ ತಿಂದಾಗ ನಮ್ಮ ನಾಲಿಗೆಯಿಂದ ಐಸ್‌ ಕ್ರೀಂಗೆ ಉಷ್ಣವು ಹರಿಯುತ್ತದೆ. ನಮ್ಮ ನಾಲಿಗೆಯು ಉಷ್ಣವನ್ನು ಕಳೆದುಕೊಂಡಾಗ ತಣ್ಣನೆಯ ಅನುಭವವಾಗುತ್ತದೆ.

ಲೇಖಕರು -ಪ್ರಸನ್ನ.ಎಸ್.ಪಿ