ಸತ್ಯ ಹಾಗೂ ಅಸತ್ಯ

ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಧನಿಕ. ಇನ್ನೊಬ್ಬ ಬಡವ . ಒಂದು ಸಾರಿ 
ಅವರು ಸಂಧಿಸಿದರು , ವಾಗ್ವಾದದಲ್ಲಿ ತೊಡಗಿದರು . ಬಡವ ಸೋದರ ಹೇಳಿದ : “ ಈ 
ಪ್ರಪಂಚದಲ್ಲಿ ಎಷ್ಟು ಕಷ್ಟ ಕಾರ್ಪಣ್ಯಗಳಿವೆ . ಆದರೂ ಸತ್ಯದಲ್ಲಿ ಜೀವನ ನಡೆಸುವುದೇ ಲೇಸು ! ” 
- ಧನಿಕ ಹೇಳಿದ : “ ಈ ಕಾಲದಲ್ಲಿ ನೀನು ಎಲ್ಲಿ ಸತ್ಯವನ್ನು ಕಾಯ? ಇಲ್ಲಪ್ಪ, ಈ ಪ್ರಪಂಚ 
ದಲ್ಲಿ ಸತ್ಯ ಅನ್ನೋದೇ ಇಲ್ಲ. ಈಗ ಎಲ್ಲೆಲ್ಲೂ ಕಾಣುವುದು ಒಂದೇ – ಅಸತ್ಯ , ಅಸತ್ಯದಲ್ಲಿ ಬಾಳು 
ವುದೇ ಲೇಸು ! ” 

ಬಡವ ತನ್ನ ವಾದವನ್ನೇ ಸಮರ್ಥಿಸಿದ : “ ಇಲ್ಲ, ಅಣ್ಣ , ಸತ್ಯದಲ್ಲಿ ಬಾಳುವುದೇ ಲೇಸು ! ” 

ಆಗ ಧನಿಕ ಹೇಳಿದ : “ ಆಗಲಿ , ಪಣ ಕಟೋಣ. ಜನರ ಬಳಿಗೆ ಹೋಗಿಕೇಳೋಣ. ಯಾರು 
ಸಿಕ್ಕಿದರೆ ಅವರನ್ನು ಕೇಳೊಣ. ಹೀಗೆಮೂರು ಮಂದಿಯನ್ನು ಕೇಳೋಣ. ಅವರು ನಿನ್ನ ಪರವಾಗಿ 
ಹೇಳಿದರೆ ನನ್ನ ಆಸ್ತಿ ಎಲ್ಲ ನಿನ್ನದು. ಅವರು ನನ್ನ ಪರವಾಗಿ ಹೇಳಿದರೆ ಆಗ ನಿನ್ನ ಆಸ್ತಿಯನ್ನೆಲ್ಲ 
ನಾನು ತೆಗೆದುಕೊಳ್ಳುತ್ತೇನೆ. ಆಗಬಹುದಾ ? ” 

ಬಡವ ಹೇಳಿದ : “ ಆಗಲಿ ! ” 

ಇಬ್ಬರೂ ಮಾರ್ಗದಲ್ಲಿ ಹೊರಟರು . ಹೋಗ್ತಾರೆ, ಹೋಗ್ತಾರೆ. ಅವರಿಗೆ ಒಬ್ಬ ವ್ಯಕ್ತಿ 
ಸಿಕ್ಕಿದ. ಅವನು ಕೆಲಸದಿಂದ ಹಿಂದಿರುಗುತ್ತಿದ್ದ. ಅವರು ಅವನನ್ನು ನಿಲ್ಲಿಸಿದರು : “ ನಮಸ್ಕಾರ, 
ಸಜ್ಜನನೇ ! ” 

“ನಮಸ್ಕಾರ ! ” 

“ ನಾವು ನಿನ್ನನ್ನು ಒಂದು ಪ್ರಶ್ನೆ ಕೇಳಬೇಕೂಂತ ... ” “ಕೇಳಿ ! ಕೇಳಿ ! ” “ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದಲೋ ಅಥವಾ ಅಸತ್ಯದಲೋ ? ” “ ಅಯ್ಯೋ , ಪುಣ್ಯಾತ್ಮರಾ !” ಎಂದು ಹೇಳಿದ ಆ ವ್ಯಕ್ತಿ . ನೀವು ಈ ಕಾಲದಲ್ಲಿ ಸತ್ಯವನ್ನು ಎಲ್ಲಿ ಕಾಣೀರ? ನೋಡಿ, ನಾನು ಎಷ್ಟು ದುಡಿದರೂ ಎಲ್ಲ ನಿಷ್ಪಲ. ಸಿಗೋ ಅಲ್ಪ ಜೀತದಲ್ಲೂ ಒಡೆಯ ಬೇರೆ ಒಂದಷ್ಟು ಕಡೀತಾನೆ. ಹೀಗಿರುವಾಗ ಸತ್ಯದಲ್ಲಿ ಎಲ್ಲಿ ಬಾಳೊದು! ಸತ್ಯದಲ್ಲಿ ಬಾಳೋದಕ್ಕಿಂತ ಅಸತ್ಯದಲ್ಲಿ ಬಾಳೋದೇ ಉತ್ತಮ ! ” “ನೋಡಿದೆಯಾ, ತಮ್ಮ ” ಅಂದ ಧನಿಕಸೋದರ, “ ನನ್ನ ಮಾತು ನಿಜ ಅನ್ನೋದಕ್ಕೆ ನಿನಗೆ ಮೊದಲ ಪುರಾವೆ.” ಬಡವನ ಮುಖ ಸಪ್ಪಗಾಯಿತು. ಅವರು ಮುಂದೆ ಹೋದರು . ಅವರಿಗೆ ಒಬ್ಬ ವರ್ತಕ ಸಿಕ್ಕಿದ. “ ನಮಸ್ಕಾರ, ವರ್ತಕ ಶ್ರೇಷ್ಟ !” “ ನಮಸ್ಕಾರ !” “ ನಾವು ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕೂಂತ ...” “ಕೇಳಿ, ಕೇಳಿ ! ” “ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದ ಅಥವಾ ಅಸತ್ಯದಲ್ಲೂ ? ” “ ಅಯ್ಯೋ , ಪುಣ್ಯಾತ್ಮರಾ ! ಈ ಕಾಲದಲ್ಲಿ ಸತ್ಯದಿಂದ ಬಾಳೊದು ಎಲ್ಲಿ ಸಾಧ್ಯ ? ಮಾರಾಟ ಮಾಡಬೇಕಾದರೆ ನೂರು ಬಾರಿ ಸುಳ್ಳು ಹೇಳಬೇಕಾಗುತ್ತೆ , ನೂರು ಬಾರಿ ವಂಚನೆ ಮಾಡ ಬೇಕಾಗುತ್ತೆ . ಇಲ್ಲದಿದ್ದರೆ ಮಾರಾಟವನ್ನೇ ಮಾಡೋಕಾಗೊಲ್ಲ.” ಹಾಗೆಂದು ಅವನು ಮುಂದೆ ಹೊರಟ. “ನೋಡಿದೆಯಾ, ತಮ್ಮ , ಎರಡನೆಯ ಪುರಾವೆ ನನ್ನ ಮಾತಿಗೆ ” ಎಂದ ಧನಿಕ. ಬಡವನ ಮನಸ್ಸು ಇನ್ನಷ್ಟು ಕುಂದಿತು . ಅವರು ಮುಂದೆ ಹೋದರು . ಹೋಗುತ್ತಾರೆ, ಹೋಗುತ್ತಾರೆ, ಕೊನೆಗೆ ಒಬ್ಬ ಸಾಹುಕಾರನನ್ನು ಸಂಧಿಸುತ್ತಾರೆ. “ನಮಸ್ಕಾರ , ಸ್ವಾಮಿ ! ” “ನಮಸ್ಕಾರ! ” “ ನಾವು ನಿಮ್ಮನ್ನು ಒಂದು ಮಾತು ಕೇಳಬೇಕೂಂತ ...” “ಕೇಳಿ, ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದ ಅಥವಾ ಅಸತ್ಯದಲ್ಲೋ ? ” 

“ ಅಯ್ಯೋ , ಪುಣ್ಯಾತ್ಮರಾ ! ಈ ಪ್ರಪಂಚದಲ್ಲಿ ಸತ್ಯ ಅನ್ನೋದಾದರೂ ಎಲ್ಲಿದೆ? ಸತ್ಯದಲ್ಲಿ 
ಬಾಳೊಕೆ ಎಂದಿಗೂ ಆಗದು . ನಾನೇನಾದರೂ ಸತ್ಯದಲ್ಲಿ ಬಾಳಿದ್ದರೆ, ಹೀಗೆ...” 

ಅವನು ತನ್ನ ಮಾತು ಮುಗಿಸಲೇ ಇಲ್ಲ, ಮುಂದೆ ಹೋದ. 

“ನೋಡಿದೆಯಾ, ತಮ್ಮ ! ನಡಿ, ಮನೆಗೆ ಹೋಗೋಣ” ಎಂದ ಧನಿಕ. “ ನಿನ್ನ ಆಸ್ತಿಯ 
ನ್ನೆಲ್ಲ ನನಗೆ ಕೊಡು! ” 

ಬಡವ ಮನೆಗೆ ಹೋದ. ಅವನು ದುಃಖಾಕ್ರಾಂತನಾದ. ಧನಿಕ ಅಣ್ಣ ಬಂದ. ತನ್ನ ಬಡ 
ತಮ್ಮನ ಖಾಲಿ ಮನೆಯೊಂದನ್ನು ಬಿಟ್ಟು ಅವನಲ್ಲಿದ್ದ ಎಲ್ಲ ಆಸ್ತಿಯನ್ನೂ ಕೊಂಡೊಯ್ದ . 

“ನೀನು ಸ್ವಲ್ಪ ಕಾಲ ಬೇಕಾದರೆ ಇಲ್ಲೇ ವಾಸವಾಗಿರು . ಮನೆ ಸದ್ಯಕ್ಕೆ ನನಗೆ ಬೇಡ. ಆಮೇಲೆ 
ಎಲ್ಲಾದರೂ ಬೇರೆ ಕಡೆಗೆ ಹೋಗುವಿಯಂತೆ ” ಎಂದ ಆ ಧನಿಕ ಸೋದರ . 

ಹೀಗೆ ದುಃಖಭರಿತನಾಗಿ ತಲೆ ತಗ್ಗಿಸಿ ತನ್ನ ಕುಟುಂಬದೊಂದಿಗೆ ಬಡವ ಸೋದರ ಮನೆಯಲ್ಲಿ 
ಕುಳಿತ . ಮನೆಯಲ್ಲಿ ತಿನ್ನಲು ಒಂದು ಚೂರುರೊಟ್ಟಿಯೂ ಇಲ್ಲ. ಕೆಲಸಕ್ಕೂ ಎಲ್ಲಿಗೂ ಹೋಗುವ 
ಹಾಗಿಲ್ಲ – ಆ ವರ್ಷ ಸುಗ್ಗಿ ಬೇರೆ ಏನೇನೂ ಚೆನ್ನಾಗಿರಲಿಲ್ಲ. ಬಡತನದ ಬವಣೆ ಸಹಿಸಲಸಾಧ್ಯ 
ವಾಗಿತ್ತು ... ಮಕ್ಕಳು ಅಳುತ್ತಿದ್ದರು ... ಅವನು ಒಂದು ಅಳತೆಪಾತ್ರೆ ತೆಗೆದುಕೊಂಡು ತನ್ನ ಧನಿಕ 
ಅಣ್ಣನ ಮನೆಗೆ ಹೋದ. 

“ ಅಣ್ಣ ! ಈ ಅಳತೆಪಾತ್ರೆಯಲ್ಲಿ ಒಂದಿಷ್ಟು ಏನಾದರೂ ಹಿಟ್ಟು ಕೊಡು. ನಮಗೆ ತಿನ್ನೋಕೆ 
ಏನೂ ಇಲ್ಲ. ಮಕ್ಕಳು ಹಸಿವಿನಿಂದ ಅಳುತ್ತಿದಾರೆ !” 

ಅವನು ಹೇಳಿದ : “ನಿನ್ನ ಒಂದು ಕಣ್ಣು ಕೊಡು. ನಿನಗೆ ಒಂದು ಅಳತೆ ಹಿಟ್ಟು ಕೊಡುತ್ತೇನೆ. ” 
ಬಡವ ಯೋಚಿಸಿದ, ಯೋಚಿಸಿದ. ವಿಧಿಯಿಲ್ಲದೆ ಒಪ್ಪಿಕೊಂಡ. 

“ ಹುಂ . ತಗೋ ನನ್ನ ಒಂದು ಕಣ್ಣು . ಏನನ್ನಾದರೂ ಒಂದಿಷ್ಟು ತಿನ್ನಲುಕೊಡು. ದೇವರಿಗೆ 
ಪ್ರೀತಿಯಾಗಲಿ ! ” 

ಧನಿಕ ಬಡವನ ಒಂದು ಕಣ್ಣು ಕಳಚಿಕೊಂಡು ಅವನಿಗೆ ಒಂದು ಅಳತೆ ಹುಳು ಹತ್ತಿದ 
ಹಿಟ್ಟು ಕೊಟ್ಟ . ಅದನ್ನು ತೆಗೆದುಕೊಂಡು ಬಡವ ತನ್ನ ಮನೆಗೆ ಹೋದ. ಹೆಂಡತಿ ಅವನನ್ನು 
ನೋಡಿದ್ದೇ ಕೂಗಿಕೊಂಡಳು : 

“ ಏನು ಮಾಡಿಬಿಟ್ಟೆ ನೀನು ? ಎಲ್ಲಿ ನಿನ್ನ ಕಣ್ಣು ? ” 
“ಓಹ್ , ಏನು ಮಾಡೋದು? ಅಣ್ಣ ತೆಗೆದುಕೊಂಡ !” 
ಹಾಗೆಂದು ಅವನು ಅವಳಿಗೆ ಎಲ್ಲವನ್ನೂ ವಿವರಿಸಿದ. ಎಲ್ಲರೂ ಕೂತು ಅತ್ತರು. ಆಮೇಲೆ 
ಜೀವನ ನಡೆಸಿಕೊಂಡು ಹೋದರು . ಅವನು ತಂದ ಹಿಟ್ಟನ್ನೇ ತಿಂದುಕೊಂಡು ಜೀವಿಸುತ್ತಿದ್ದರು . 

ಒಂದು ವಾರವೋ ಏನೋ ಕಳೆಯಿತು. ಒಂದು ಅಳತೆ ಒಟ್ಟು ಎಷ್ಟು ದಿವಸ ಬರುತ್ತೆ ? ಬರಿ 
ದಾಯಿತು. ಬಡವ ಮತ್ತೆ ಅಳತೆಪಾತ್ರೆ ಹಿಡಿದುಕೊಂಡು ಸೋದರನ ಬಳಿಗೆ ಹೋದ. 

“ಪ್ರೀತಿಯ ಅಣ್ಣ , ಒಂದಿಷ್ಟು ಹಿಟ್ಟು ಕೊಡು! ನೀನು ಕೊಟ್ಟಿದ್ದೆಲ್ಲ ಮುಗಿದು ಹೋಯಿತು. ” 
“ ನಿನ್ನ ಇನ್ನೊಂದು ಕಣ್ಣನ್ನೂ ಕಳಚಿಕೊಡು. ಇನ್ನೊಂದು ಅಳತೆ ಹಿಟ್ಟು ತಗೊಂಡುಹೋಗು! ” 

“ ಅದು ಹೇಗೆ ಸಾಧ್ಯ , ಅಣ್ಣ ? ಕಣ್ಣಿಲ್ಲದೆ ಈ ಪ್ರಪಂಚದಲ್ಲಿ ವಾಸಮಾಡೋದು ಹೇಗೆ ? 
ಒಂದನ್ನಾಗಲೇ ತೆಗೆದುಕೊಂಡಿದೀಯಲ್ಲ. ದಯವಿಟ್ಟು ಇನ್ನೂ ಒಂದು ಅಳತೆ ಹಿಟ್ಟು ಸುಮ್ಮನೆ 
ಕೊಡು! ” 

“ ಇಲ್ಲ. ಸುಮ್ಮನೆ ನಾನು ಕೊಡೋದಿಲ್ಲ. ಕಣ್ಣು ಕಳಚಿಕೊಡು. ಆಗಷ್ಟೆ ಇನ್ನೊಂದು ಅಳತೆ 
ಹಿಟ್ಟು ನಿನಗೆ ಕೊಡುತ್ತೇನೆ.” 

ಬಡವನಿಗೆ ತುಂಬ ದುಃಖವಾಯಿತು. ಆದರೆ ಮಾಡುವುದೇನು ? “ಸರಿ ” ಅವನೆಂದ. 
“ಕಳಚಿಕೊ , ಇನ್ನೊಂದು ಕಣ್ಣನ್ನೂ , ದೇವರಿಗೆ ಪ್ರೀತಿಯಾಗಲಿ ! ” 

ಧನಿಕ ಸೋದರ ಅವನ ಇನ್ನೊಂದು ಕಣ್ಣನ್ನೂ ಕಳಚಿಕೊಂಡು ಇನ್ನೊಂದು ಅಳತೆ ಹಿಟ್ಟು 
ಕೊಟ್ಟ. ಕುರುಡ ಅದನ್ನು ತೆಗೆದುಕೊಂಡು ಮನೆಯ ಕಡೆಗೆ ತಿರುಗಿದ. ಬೇಲಿಯ ಕಟಕಟೆಯನ್ನೇ 
ಹಿಡಿದುಕೊಂಡು ತಡವರಿಸಿಕೊಂಡು ಹೇಗೋ ಮನೆಯವರೆಗೂ ಬಂದ . ಹಿಟ್ಟನ್ನೂ ಹೊತ್ತು 
ತಂದ. ಹೆಂಡತಿ ಅವನನ್ನು ಕಂಡವಳೇ ಸಿಡಿಲು ಬಡಿದವಳಂತಾದಳು . 

“ ಏನು ನೀನು ? ಎಂಥ ದುಃಖ ತಂದುಕೊಂಡೆಯಲ್ಲ! ಕಣ್ಣಿಲ್ಲದೆ ಜೀವಿಸುವುದು ಹೇಗೆ ? 
ನಾವು ಹಿಟ್ಟಿಲ್ಲದೆಯೇ ಹೇಗೋ ಇದ್ದುಕೊಂಡಿರಬಹುದಿತ್ತು . ಆದರೆ ಈಗ...” 

ಅಳುತ್ತಾಳೆ, ಗೋಳಾಡುತ್ತಾಳೆ. ಅವಳ ಆಕ್ರಂದನವನ್ನು ಮಾತುಗಳಲ್ಲಿ ವರ್ಣಿಸಿ ತಿಳಿಸು 
ವುದು ಸಾಧ್ಯವಿಲ್ಲ. 

ಕುರುಡ ಹೇಳಿದ: “ ಅಳಬೇಡಕಣೇ ! ಏನು ಈ ಪ್ರಪಂಚದಲ್ಲಿ ನಾನೊಬ್ಬನೇಯೇ ಕಣ್ಣಿಲ್ಲದೆ 
ಇರುವವನು ! ಎಷ್ಟೋ ಮಂದಿ ಕುರುಡರಿದ್ದಾರೆ. ಅವರೆಲ್ಲ ದೃಷ್ಟಿ ಇಲ್ಲದೆ ಜೀವಿಸುತ್ತಿಲ್ಲವೇ ? ” 

ಸರಿ, ಅವರು ಹೀಗೇ ಸ್ವಲ್ಪ ಕಾಲ ತಳ್ಳಿದರು . ಅವನು ತಂದಿದ್ದ ಆ ಹಿಟ್ಟೂ ಮುಗಿಯಿತು. 
ಒಂದು ಅಳತೆ ಹಿಟ್ಟು ಇಡೀ ಕುಟುಂಬಕ್ಕೆ ಎಷ್ಟು ಕಾಲ ಬರುತ್ತೆ ! 

“ ಈಗ ಏನು ಮಾಡೋದು? ” ಕುರುಡ ಹೆಂಡತಿಗೆ ಹೇಳಿದ. “ ಇನ್ನು ಅಣ್ಣನ ಬಳಿಗೆ 
ನಾನು ಹೋಗಲಾರೆ. ಈಗ ಹೀಗೆ ಮಾಡು . ಹಳ್ಳಿಯ ಬೀದಿಯ ಪಕ್ಕದಲ್ಲಿ ಒಂದು ದೊಡ್ಡ 
ಪೊಪ್ಪಾರ್ ಮರ ಇದೆಯಲ್ಲ, ಅದರ ಕೆಳಗೆ ನನ್ನನ್ನು ಕರೆದುಕೊಂಡು ಹೋಗಿಕೂರಿಸು , ಅಲ್ಲೇ 
ನನ್ನನ್ನು ಇಡೀ ದಿನ ಬಿಟ್ಟಿರು . ಸಾಯಂಕಾಲ ಬಂದು ಮನೆಗೆ ಕರೆದುಕೊಂಡು ಹೋಗು. ದಾರಿ 
ಯಲ್ಲಿ ಹೋಗುವವರೂ ಬರುವವರೂ ಯಾರಾದರೂ ಬಹುಶಃ ಒಂದೊಂದು ಚೂರು ರೊಟ್ಟಿ 
ಭಿಕ್ಷೆಯಾಗಿ ಕೊಡಬಹುದು.” ಹೆಂಡತಿ ಹಾಗೆಯೇ ಮಾಡಿ ತಾನೇ ಮನೆಗೆ ಹಿಂದಿರುಗಿದಳು. 

ಈ ವ್ಯಕ್ತಿ ಅಲ್ಲಿ ಹೀಗೆ ಕುಳಿತಿದ್ದ . ಯಾರು ಯಾರೋ ಅವನಿಗೆ ಚೂರುಪಾರು ಭಿಕ್ಷೆ ನೀಡಿ 
ದರು . ಸಾಯಂಕಾಲವಾಯಿತು. ಹೆಂಡತಿ ಬರಲೇ ಇಲ್ಲ . ಅವನಿಗೆ ಕೂತುಕೂತು ಸಾಕಾಯಿತು. 
ಒಬ್ಬನೇ ಮನೆಗೆ ಹೋಗಲು ಬಯಸಿದ. ಎದ್ದು ಹೊರಟ. ಆದರೆ ತಪ್ಪು ತಿರುಗಿದ, ಹೋದ, 
ಹೋದ. ಅವನಿಗೇ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದ ಅಂತ. ಕೂಡಲೇ ಅವನಿಗೆ ಕೇಳಿಸಿತು - 
ಹತ್ತಿರದಲ್ಲೇ ಕಾಡಿನ ಮರ್ಮರ ಶಬ್ದ . ಅಯ್ಯೋ , ಹಾಗಾದರೆ ಇಡೀ ರಾತ್ರಿ ಕಾಡಿನಲ್ಲೇ ಕಳೆಯ 
ಬೇಕು ! ಅವನಿಗೆ ಕಾಡು ಪ್ರಾಣಿಗಳ ಭಯವಾಯಿತು. ಹತ್ತಿರದಲ್ಲೇ ಇದ್ದ ಓಕ್ ಮರ ಹತ್ತಿ 
ಕುಳಿತ . 

ಸುಮಾರು ಮಧ್ಯರಾತ್ರಿಯಾಗಿರಬೇಕು ಆಗ ಆ ಸ್ಥಳಕ್ಕೆ , ಅದೇ ಮರದ ಕೆಳಕ್ಕೆ , ಕೆಲವು 
ದುಷ್ಟ ಶಕ್ತಿಗಳು - ಪಿಶಾಚಿಗಳು - ತಮ್ಮ ನಾಯಕನೊಂದಿಗೆ ಬಂದವು. ನಾಯಕ- ಪಿಶಾಚಿ ಉಳಿ 
ದವುಗಳನ್ನು ಅವು ಏನೇನು ಅನಿಷ್ಟ ಕೆಲಸಗಳನ್ನು ಮಾಡಿದವು ಎಂದು ವಿಚಾರಿಸ ತೊಡಗಿತು . 
ಒಂದು ಪಿಶಾಚಿ ಹೇಳಿತು : 

“ ನಾನು ಏನು ಮಾಡಿದೆ ಅಂದರೆ - ಒಬ್ಬ ಅಣ್ಣ ಅವನ ತಮ್ಮನಿಂದ ಎರಡು ಅಳತೆ ಹಿಟ್ಟಿಗೆ 
ಬದಲು ಜೀವಂತ ಕಣ್ಣುಗಳನ್ನೇ ಕಿತ್ತುಕೊಳ್ಳೋ ಹಾಗೆ ಮಾಡಿದೆ.” 

ನಾಯಕ- ಪಿಶಾಚಿ ಹೇಳಿತು : “ ಚೆನ್ನಾದ ಕೆಲಸ ಮಾಡಿದೆ. ಆದರೂ ಅದೇನೂ ಪೂರ್ತಿ 
ಚೆನ್ನಾಗಲಿಲ್ಲ !” 

“ ಅದು ಹೇಗೆ ? ” 

“ಕಣ್ಣು ಕಳೆದುಕೊಂಡ ಆ ಕುರುಡ ತನ್ನ ಕಣ್ಣುಗಳಿಗೆ ಈ ಮರದ ಕೆಳಗೆ ಹುಲ್ಲಿನ ಮೇಲೆ 
ಹರಡಿರುವ ಇಬ್ಬನಿಯನ್ನು ಹಚ್ಚಿಕೊಂಡರೆ ಅವನಿಗೆ ಮತ್ತೆ ದೃಷ್ಟಿ ಬಂದು ಬಿಡುತ್ತೆ ! ” 

“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ” 

“ಸರಿ , ನೀನು ಏನು ಮಾಡಿದೆ ? ” ಎಂದು ನಾಯಕ- ಪಿಶಾಚಿ ಇನ್ನೊಂದು ಪಿಶಾಚಿಯನ್ನು 
ಕೇಳಿತು . 

“ ನಾನು ಒಂದು ಹಳ್ಳಿಯಲ್ಲಿದ್ದ ನೀರನ್ನೆಲ್ಲ ಒಣಗಿಸಿ ಬಿಟ್ಟೆ . ಅಲ್ಲಿ ಒಂದು ಹನಿ ನೀರನ್ನೂ 
ಬಿಡಲಿಲ್ಲ. ಅಲ್ಲಿನ ಜನ ಈಗ ನೀರನ್ನು ಮೂವತ್ತು - ನಾಲ್ವತ್ತು ವೆರ್ಸ್ಟ್ ದೂರದಿಂದ ತರಬೇಕು. 
ಅನೇಕರು ಬಾಯಾರಿಕೆಯಿಂದ ಸಾಯ್ತಿದಾರೆ .” 
“ ಚೆನ್ನಾದ ಕೆಲಸಮಾಡಿದೆ. ಆದರೂ ಅದೇನೂ ಪೂರ್ತಿ ಚೆನ್ನಾಗಲಿಲ್ಲ ! ” 
“ ಅದು ಹೇಗೆ? ” 

“ ಹಳ್ಳಿಯ ಹತ್ತಿರದಲ್ಲೇ ಇರೋ ನಗರದಲ್ಲಿ ಒಂದು ಬಂಡೆ ಇದೆ. ಅದನ್ನು ಯಾರಾ 
ದರೂ ಪಕ್ಕಕ್ಕೆ ಸರಿಸಿದರೆ, ಅದರ ಕೆಳಗಿನಿಂದ ನೀರು ಚಿಮ್ಮಿ ಬರುತ್ತೆ , ಸುತ್ತಮುತ್ತ ಎಲ್ಲ ಹರಡಿ 
ಕೊಳ್ಳುತ್ತೆ !” 

“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ” 

“ ಸರಿ, ನೀನು ಏನು ಮಾಡಿದೆ ? ” ಎಂದು ನಾಯಕ- ಪಿಶಾಚಿ ಮೂರನೆಯದನ್ನು 
ಕೇಳಿತು . 

“ ಒಂದಾನೊಂದು ರಾಜ್ಯದಲ್ಲಿ ರಾಜನಿಗೆ ಒಬ್ಬಳೇ ಒಬ್ಬ ಮಗಳಿದ್ದಾಳೆ. ನಾನು ಅವಳನ್ನು 
ಕುರುಡಳನ್ನಾಗಿ ಮಾಡಿಬಿಟ್ಟೆ . ಯಾವ ಔಷಧಿಯ ಅವಳನ್ನು ಗುಣಪಡಿಸೋಕೆ ಆಗೋಲ್ಲ. ” 

“ ಚೆನ್ನಾದ ಕೆಲಸ ಮಾಡಿದೆ. ಆದರೂ ಅದೇನೂ ಪೂರ್ತಿ ಚೆನ್ನಾಗಲಿಲ್ಲ ! ” 
“ ಅದು ಹೇಗೆ? ” 

“ ಈ ಮರದ ಕೆಳಗಿರೋ ಇಬ್ಬನಿಯನ್ನು ಅವಳ ಕಣ್ಣಿಗೆ ಹಚ್ಚಿದರೆ ಅವಳಿಗೆ ದೃಷ್ಟಿ ಮತ್ತೆ 
ಬಂದು ಬಿಡುತ್ತೆ ! ” 

“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ” 

ಮನುಷ್ಯ ಮರದ ಮೇಲೆ ಕುಳಿತು ಇವೆಲ್ಲವನ್ನೂ ಕೇಳಿಸಿಕೊಂಡ. ಆ ಪಿಶಾಚಿಗಳು ಹೊರಟು 
ಹೋದಮೇಲೆ ಅವನು ಆ ಮರದ ಕೆಳಗಿದ್ದ ಇಬ್ಬನಿಯಿಂದ ತನ್ನ ಕಣ್ಣುಗಳನ್ನು ಉಜ್ಜಿಕೊಂಡ - 
ತಕ್ಷಣವೇ ಅವನಿಗೆ ದೃಷ್ಟಿ ಬಂದಿತು . ಆಗ ಅವನು ತನ್ನಲ್ಲೇ ಹೇಳಿಕೊಂಡ: “ ಈಗ ಹೋಗಿ ಜನರಿಗೆ 
ಸಹಾಯ ಮಾಡ್ತೀನಿ. ” ಆ ಮರದ ಕೆಳಗಿದ್ದ ಒಂದಿಷ್ಟು ಇಬ್ಬನಿಯನ್ನು ತೊಗಟೆಯಲ್ಲಿ ಸಂಗ್ರ 
ಹಿಸಿಕೊಂಡು ಅವನು ಹೊರಟ . 

ಅವನು ಯಾವ ಹಳ್ಳಿಯಲ್ಲಿ ನೀರೆಲ್ಲ ಇಂಗಿ ಹೋಗಿತ್ತೋ ಆ ಹಳ್ಳಿಗೆ ಬಂದ. ನೋಡ್ತಾನೆ - 
ಅಲ್ಲೊಬ್ಬ ಮುದುಕಿ ಹೋಗಿದಾಳೆ. ಅವಳು ಒಂದು ಅಡ್ಡೆಯಲ್ಲಿ ಒಂದು ಬಕೆಟ್ ಇಟ್ಟುಕೊಂಡು 
ನೀರು ಹೊತ್ತುಕೊಂಡು ಹೋಗ್ತಿದಾಳೆ. ಅವನು ಅವಳ ಬಳಿಗೆ ಹೋಗಿಕೇಳಿದ: 

“ ಅಜ್ಜಿ , ನನಗೆ ಬಾಯಾರಿಕೆ, ಸ್ವಲ್ಪ ನೀರು ಕೊಡ್ತೀಯ ಕುಡಿಯೋಕೆ! ” 

“ ಅಯ್ಯೋ , ಮಗು, ಏನು ಹೇಳೀಯ ? ನಾನು ಈ ನೀರನ್ನು ಮೂವತ್ತು ವೆರ್ಸ್ಟ್ ದೂರದಿಂದ 
ಹೊತ್ತು ತರುತ್ತಿದೀನಿ. ಇದರಲ್ಲೂ ಅರ್ಧ ಎಲ್ಲ ಆಗಲೇ ತುಳುಕಿ ಚೆಲ್ಲಿ ಹೋಗಿದೆ. ನನ್ನ 
ಕುಟುಂಬವೋ ದೊಡ್ಡದು. ನೀರಿಲ್ಲದೆ ಸಾಯ್ತಾರೆ! ” 
“ ನಾನು ನಿಮ್ಮ ಹಳ್ಳಿಗೇ ಬರುತ್ತಿದೀನಿ, ಅಜ್ಜಿ , ಎಲ್ಲರಿಗೂ ನೀರು ಸಿಗೋ ಹಾಗೆ ಮಾಡ್ತೀನಿ.” 

ಅವಳು ಅವನಿಗೆ ಕುಡಿಯಲು ಸ್ವಲ್ಪ ನೀರು ಕೊಟ್ಟಳು. ಅವಳಿಗೆ ಎಷ್ಟು ಆನಂದವಾಯಿತು 
ಅಂದರೆ ತಕ್ಷಣವೇ ಹಳ್ಳಿಗೆ ಓಡಿ ಹೋಗಿ ಎಲ್ಲರಿಗೂ ಈ ವ್ಯಕ್ತಿಯ ವಿಷಯ ಹೇಳಿದಳು . ಕೆಲವರು 
ನಂಬಿದರು , ಕೆಲವರು ನಂಬಲಿಲ್ಲ. ಆದರೂ ಎಲ್ಲರೂ ಅವನನ್ನು ಸಂಧಿಸಲು ಓಡೋಡಿ ಬಂದರು. 
ಅವನಿಗೆ ಬಾಗಿ ನಮಸ್ಕರಿಸಿದರು : “ಸತ್ಪುರುಷನೇ , ನಮ್ಮನ್ನು ಈ ಕೂರ ಸಾವಿನಿಂದ 
ರಕ್ಷಿಸು ! ” 

“ ಆಗಲಿ ” ಅವನೆದ, “ ಆದರೆ ನೀವು ನನಗೆ ಸಹಾಯ ಮಾಡಬೇಕು. ನನ್ನನ್ನು ನಿಮ್ಮ 
ಹಳ್ಳಿಗೆ ಸಮೀಪವಿರುವ ನಗರಕ್ಕೆ ಕರೆದುಕೊಂಡು ಹೋಗಿ.” 

ಅವರು ಅವನನ್ನು ಅಲ್ಲಿಗೆ ಕರೆದೊಯ್ದರು. ಅವನು ಅಲ್ಲಿ ಹುಡುಕ ತೊಡಗಿದ – ಆ ಬಂಡೆ 
ಯನ್ನು ಕಂಡುಹಿಡಿದ. ಎಲ್ಲರೂ ಸೇರಿ ಅದನ್ನು ಪಕ್ಕಕ್ಕೆ ಸರಿಸಿದರು. ಅದರ ಕೆಳಗಿನಿಂದ ನೀರು 
ಚಿಮ್ಮಿ ಹೊರಬಂತು . ಹ್ಯಾಗೆ ಹರಿದುಕೊಂಡು ಬಂತು – ಎಲ್ಲ ಬಾವಿಗಳೂ ಎಲ್ಲ ಕೊಳಗಳೂ 
ಎಲ್ಲ ಹೊಂಡಗಳೂ ನೀರಿನಿಂದ ತುಂಬಿಕೊಂಡವು ! ಜನರಿಗೆ ಭಾರಿ ಸಂತೋಷವಾಯಿತು. ಆ ವ್ಯಕ್ತಿಗೆ 
ತಮ್ಮ ಕೃತಜ್ಞತೆ ಸಲ್ಲಿಸಿದರು. ಅವನಿಗೆ ಬೇಕಾದಷ್ಟು ಹಣ ಮತ್ತಿತರ ವಸ್ತುಗಳನ್ನು ಕೊಟ್ಟರು. 
ಅವನು ಕುದುರೆ ಏರಿ ಮುಂದೆ ಹೊರಟ . ದಾರಿಯಲ್ಲಿ ಎಲ್ಲರನ್ನೂ , ರಾಜಕುಮಾರಿ ಹಾಸಿಗೆ ಹಿಡಿದು 
ಮಲಗಿರುವ ರಾಜ್ಯ ಎಲ್ಲಿದೆ, ಎಂದು ವಿಚಾರಿಸುತ್ತ ಹೋದ. ದೀರ್ಘ ಕಾಲವೋ ಸ್ವಲ್ಪ ಕಾಲವೋ 
ಪ್ರಯಾಣ ಮಾಡಿಕೊಂಡು ಅವನು ಅಂತೂ ಆ ರಾಜ್ಯ ತಲುಪಿದ . ರಾಜನ ಅರಮನೆಗೆ ಹೋಗಿ 
ಅಲ್ಲಿದ್ದ ಭಟರನ್ನು ಕೇಳಿದ : “ನಿಮ್ಮ ರಾಜನ ಮಗಳಿಗೆ ಮೈ ಚೆನ್ನಾಗಿಲ್ಲ ಅಂತ ಕೇಳಿದೆ. ನಾನು 
ಅವಳನ್ನು ಗುಣಪಡಿಸಬಲ್ಲೆ ! ” 

“ ಅಯ್ಯೋ , ನಿನಗೆಲ್ಲಿ ಆಗುತ್ತೆ ! ಮಹಾಮಹಾ ಪಂಡಿತರಿಗೇ ಅವಳನ್ನು ಗುಣಪಡಿಸಲು 
ಆಗಲಿಲ್ಲ. ನಿನ್ನ ಕೈಲೂ ಏನೂ ಮಾಡೋಕೆ ಆಗೋಲ್ಲ.” 
“ ಆದರೂ ರಾಜನಿಗೆ ವಿಷಯ ತಿಳಿಸಿ ! ” 

ಅವರಿಗೆ ಇಷ್ಟವಿರಲಿಲ್ಲ . ಆದರೂ ಅವನು ಹಟ ಹಿಡಿದ: “ನೀವು ಹೋಗಿ ತಿಳಿಸಿ ಬಿಡಿ. 
ಅಷ್ಟೇ ಸಾಕು ! ” 

ಅವರು ಹೋಗಿ ತಿಳಿಸಿದರು . ರಾಜ ಅವನನ್ನು ಅರಮನೆಯ ಒಳಗೆ ಬರುವಂತೆ 
ಹೇಳಿದ. 

“ನೀನು ನನ್ನ ಮಗಳನ್ನು ಗುಣಪಡಿಸಬಲ್ಲೆಯಾ ? ” ರಾಜ ಕೇಳಿದ. 
“ ಬಲ್ಲೆ ” ಉತ್ತರಿಸಿದ. 
“ಸರಿ , ಪ್ರಯತ್ನ ಮಾಡು. ನಿನಗೆ ಏನು ಬೇಕೋ ಎಲ್ಲ ಕೊಡುತ್ತೇನೆ. ” 

ಅವನು ರಾಜಕುಮಾರಿ ಮಲಗಿದ್ದ ಕೋಣೆಗೆ ಹೋದ. ತಾನು ತಂದಿದ್ದ ಇಬ್ಬನಿಯನ್ನು 
ಅವಳ ಕಣ್ಣಿಗೆ ತಿಕ್ಕಿದ. ತಕ್ಷಣವೇ ಅವಳಿಗೆ ದೃಷ್ಟಿ ಬಂದಿತು . ರಾಜನಿಗೆ ಎಷ್ಟು ಮಹದಾನಂದವಾ 
ಯಿತು, ಹೇಳಿ ತಿಳಿಸುವುದು ಸಾಧ್ಯವಿಲ್ಲ ! ರಾಜ ಅವನಿಗೆ ಎಷ್ಟು ಸಂಪತ್ತನ್ನು ಬಳುವಳಿಯಾಗಿ 
ನೀಡಿದನೆಂದರೆ, ಅವನು ಅವುಗಳನ್ನು ಅನೇಕ ಬಂಡಿಗಳಲ್ಲಿ ತುಂಬಿಕೊಂಡು ಸಾಗಿಸಬೇಕಾಯಿತು. 

ಈಮಧ್ಯೆ ಅವನ ಹೆಂಡತಿ ತುಂಬ ದುಃಖಿಸಿದಳು , ಗೋಳಾಡಿದಳು . ಗಂಡ ಎಲ್ಲಿ ಅನ್ನು 
ವುದೇ ಅವಳಿಗೆ ತಿಳಿಯದು. ಅವನು ಆಗಲೇ ಈ ಪ್ರಪಂಚದಲ್ಲಿ ಇಲ್ಲ ಎಂದೇ ಭಾವಿಸಿಕೊಂಡಿದ್ದಳು . 
ಆಗ ಇದ್ದಕ್ಕಿದ್ದಂತೆ ಅವನು ಬರುತ್ತಾನೆ. ಕಿಟಕಿಯ ಬಳಿ ನಿಂತು ಕೂಗುತ್ತಾನೆ: “ ಹೆಂಡತಿ , ಬಾಗಿಲು 
ತೆರೆ ! ” 

ಅವನ ಧ್ವನಿಯಿಂದ ತನ್ನ ಪತಿ ಬಂದನೆಂದು ಅವಳು ತಿಳಿದಳು . ತುಂಬ ಸಂತೋಷಪಟ್ಟಳು. 
ಓಡಿ ಹೋಗಿ ಬಾಗಿಲು ತೆರೆದಳು . ಅವನನ್ನು ಒಳಕ್ಕೆ ಕರೆದೊಯ್ದಳು. ಅವನಿನ್ನೂ ಕುರುಡ 
ಎಂದೇ ಅವಳ ಭಾವನೆ. 
“ ದೀಪ ಹಚ್ಚು ! ” ಅವನು ಹೇಳಿದ . 

ಅವಳು ದೀಪ ಹಚ್ಚಿದಳು . ಅವನನ್ನು ನೋಡಿದ್ದೇ ಕೈ ಚಪ್ಪಾಳೆ ತಟ್ಟಿದಳು - ದೃಷ್ಟಿ ಬಂದಿದೆ ! 
“ಓಮ್, ದೇವರೇ ! ಎಷ್ಟು ಚೆನ್ನಾಗಿ ಆಗಿಬಿಟ್ಟಿದೀಯ ! ಹೇಗಾಯಿತು ಇದೆಲ್ಲ ? ಹೇಳು ! ” 

“ ತಾಳು , ಹೆಂಡತಿ, ಮೊದಲು ನಾನು ತಂದಿರುವ ಸಂಪತ್ತನ್ನೆಲ್ಲ ಒಳಕ್ಕೆ ತರೋಣ.” 

ಎಷ್ಟೊಂದು ಸಂಪತ್ತನ್ನು ಒಳ ತಂದರು . ಇದರ ಮುಂದೆ ಅವನ ಧನಿಕಸೋದರನ ಸಂಪತ್ತು 
ತೃಣ ಸಮಾನ ! 

ಅವರು ಶ್ರೀಮಂತರಾಗಿ ಜೀವನ ನಡೆಸ ತೊಡಗಿದರು . ಧನಿಕ ಸೋದರನಿಗೆ ಈ ವಿಷಯ 
ತಿಳಿಯಿತು. ಅವನು ಓಡೋಡಿ ಬಂದ : “ ಇದು ಹೇಗೆ ಹೀಗೆ, ತಮ್ಮ ? ನೀನು ಹೇಗೆ ಮತ್ತೆ 
ದೃಷ್ಟಿ ಪಡೆದೆ, ಹೇಗೆ ಇಷ್ಟು ಶ್ರೀಮಂತನಾದೆ ? ” 

ಅವನು ಎಲ್ಲವನ್ನೂ ರಹಸ್ಯವಾಗಿಡದೆ ವಿವರಿಸಿ ತಿಳಿಸಿದ. 

ಈಗ ಆ ಧನಿಕ ಅಣ್ಣನಿಗೆ ತಾನೂ ಇನ್ನಷ್ಟು ಸಂಪತ್ತು ಪಡೆಯಬೇಕೆಂದು ಆಸೆಯಾಯಿತು. 
ರಾತ್ರಿಯಾದಾಗ ಯಾರಿಗೂ ಕಾಣದಂತೆ ಅದೇ ಕಾಡಿಗೆ ಹೋಗಿ ಅದೇ ಮರದ ಮೇಲೆ ಹತ್ತಿ 
ಕುಳಿತ. ಮಧ್ಯ ರಾತ್ರಿ ಪಿಶಾಚಿಗಳು ತಮ್ಮ ನಾಯಕ- ಪಿಶಾಚಿಯೊಂದಿಗೆ ಬಂದವು. ಅವು 
ತಮ್ಮಲ್ಲೇ ಮಾತನಾಡಿಕೊಂಡವು: 

“ ಏನಿದು ? ಯಾರೂ ಕೇಳಿಸಿಕೊಂಡಿಲ್ಲ, ಯಾರಿಗೂ ತಿಳಿದಿಲ್ಲ. ಆದರೂ ಆಗಲೇ ಕುರುಡ 
ಸೋದರನಿಗೆ ದೃಷ್ಟಿ ಬಂತು . ಬಂಡೆಯ ಕೆಳಗಿನಿಂದ ನೀರು ಹರಿದು ಬರುತ್ತಿದೆ, ರಾಜಕುಮಾರಿ 
ಮತ್ತೆ ಆರೋಗ್ಯವಂತಳಾಗಿದ್ದಾಳೆ ! ಯಾರೋ ನಮ್ಮ ಮಾತನ್ನು ಕದ್ದು ಕೇಳುತ್ತಿರಬಹುದೆ ? 
ಹುಡುಕಿ ನೋಡೋಣ! ” 

ಅವು ಹುಡುಕ ತೊಡಗಿದವು. ಮರ ಹತ್ತಿದವು. ಅಲ್ಲಿ ಕುಳಿತಿದಾನೆ ಧನಿಕ ಸೋದರ ! ಅವು 
ಅವನನ್ನು ಹಿಡಿದು ತುಂಡುತುಂಡು ಮಾಡಿದವು. 

Read More

ಬುದ್ದಿವಂತ ಹುಡುಗಿ

ಒಂದಾನೊಂದು ಕಾಲದಲ್ಲಿ ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಬಡವ, ಇನ್ನೊಬ್ಬ 
ಶ್ರೀಮಂತ , ಬಡವನ ಬಳಿ ಏನೇನೂ ಇರಲಿಲ್ಲ. ಮಕ್ಕಳಿಗೆ ಹಾಲು ಕೊಡಲೂ ಅವನಿಗೆ ಶಕ್ಯವಿರ 
ಲಿಲ್ಲ. ಅವನ ದುಸ್ಥಿತಿಯನ್ನು ಕಂಡು ಶ್ರೀಮಂತ ಸೋದರ ಮರುಗಿದ. ಅವನಿಗಾಗಿ ಒಂದು ಹಸು 
ವನ್ನು ಕೊಡುತ್ತ ಹೇಳಿದ: 

“ ತಗೋ ಇದನ್ನು ಉಪಯೋಗಿಸಿಕೊ . ಇದಕ್ಕೆ ದುಡ್ಡನೂ ಕೊಡಬೇಡ. ಬದಲು ನನ್ನ 
ಬಳಿ ಸ್ವಲ್ಪ ಕಾಲ ಕೆಲಸ ಮಾಡು.” 

ಬಡವ ಸೋದರ ಶ್ರೀಮಂತ ಸೋದರನ ಬಳಿ ಕೆಲಸ ಮಾಡಿದ, ಸಾಲ ತೀರಿಸಿದ. ಆಗ 
ಶ್ರೀಮಂತ ಸೋದರನಿಗೆ ಹಸು ಹೊರಟು ಹೋಯಿತಲ್ಲ ಎಂದು ದುಃಖವಾಯಿತು. ಅವನು 
ಹೇಳಿದ : 

“ ನನ್ನ ಹಸುವನ್ನು ನನಗೆ ಕೊಟ್ಟು ಬಿಡು. ” 

ಬಡವ ಸೋದರ ಹೇಳಿದ: “ ಅಲ್ಲಪ್ಪ . ಅದಕ್ಕೆ ಬದಲು ನಾನು ನಿನ್ನ ಬಳಿ ಕೆಲಸ ಮಾಡಲಿ 
ಲ್ಲವೇ ? ” 

“ ಏನು ಮಹಾ ನೀನು ಮಾಡಿದ್ದು ಕೆಲಸ ! ಬೆಕ್ಕು ಅತ್ತ ಹಾಗೆ ! ನನ್ನ ಹಸು ನೋಡು, 
ಎಷ್ಟು ಚೆನ್ನಾಗಿದೆ ! ಕೊಟ್ಟುಬಿಡು, ಕೊಟ್ಟುಬಿಡು ! ” 

ಇಷ್ಟು ಕೆಲಸ ಮಾಡಿಯೂ ಫಲವಿಲ್ಲದೆ ಹೋಗುತ್ತದಲ್ಲ ಎಂದು ಬಡವ ಸೋದರನಿಗೆ 
ದುಃಖವಾಯಿತು. ಅವನಿಗೆ ಹಸುವನ್ನು ಹಿಂದಿರುಗಿಸುವುದು ಇಷ್ಟವಾಗಲಿಲ್ಲ. ಅವರು ವ್ಯಾಜ್ಯ 
ತೀರ್ಮಾನಕ್ಕಾಗಿ ಧಣಿಯ ಬಳಿ ಹೋದರು . ಇವರ ಜಗಳ ತೀರ್ಮಾನಿಸಲು, ಯಾರು ತಪ್ಪು 
ಯಾರು ಸರಿ ಎಂದು ಕಂಡುಹಿಡಿಯಲು, ಧಣಿ ಯಾಕೆ ತಲೆ ಕೆಡಿಸಿಕೊಳ್ಳುತ್ತಾನೆ ! 

“ ಯಾರು ನನ್ನ ಒಗಟಿಗೆ ಸರಿಯಾದ ಉತ್ತರ ಹೇಳುತ್ತಾರೋ ಅವರಿಗೆ ಹಸು ” ಅವನೆಂದ. 
“ಹೇಳಿ, ಮಹಾ ಸ್ವಾಮಿ ! ” 

“ಕೇಳಿ: ಯಾವುದು ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಯಾವುದು 
ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದು, ಯಾವುದು ಎಲ್ಲಕ್ಕಿಂತ ಹೆಚ್ಚು ಸುಖ ನೀಡುವುದು ? 
ನಾಳೆ ಬನ್ನಿ - ಉತ್ತರ ಹೇಳಿ. ” 

ಸೋದರರು ಮನೆಗಳಿಗೆ ಹಿಂದಿರುಗಿದರು . ಶ್ರೀಮಂತ ಸೋದರ ಯೋಚಿಸಿದ : “ ಅಯೋ , 
ಇದೆಂಥ ಒಗಟು ಇದು . ಇದು ಒಗಟು ಅಲ್ಲವೇ ಅಲ್ಲ ! ಹೊಟ್ಟೆ ತುಂಬಿಸೋದು ಹಂದಿ ಮಾಂಸ, 
ಜೋರಾಗಿ ಓಡೋದು ಬೇಟೆ ನಾಯಿ , ಸುಖ ಕೊಡೋದು ಹಣ ! ಹಸು ನನ್ನದಾಗುತ್ತೆ ! ” 

ಬಡವ ಸೋದರ ತನ್ನ ಮನೆಗೆ ಹೋದ. ಯೋಚನೆ ಮಾಡಿದ, ಮಾಡಿದ. ಉತ್ತರ ಹೊಳೆ 
ಯಲೇ ಇಲ್ಲ. ತಲೆ ತಗ್ಗಿಸಿ ದುಃಖಿಸುತ್ತ ಕುಳಿತ. ಅವನಿಗೊಬ್ಬ ಮಗಳಿದ್ದಳು , ಮರಸ್ಯ ಅಂತ. 
ಅವಳು ತಂದೆ ಮುಖ ಬಾಡಿದ್ದುದನ್ನು ಕಂಡು ಕೇಳಿದಳು : 

“ ಏನಪ್ಪ , ಏನಾಯಿತು ? ಯಾಕೆ ಹೀಗೆ ದುಃಖಿಸುತ್ತ ಕುಳಿತೆ ? ಧಣಿ ಏನು ಹೇಳಿದರು ? ” 
“ ಧಣಿ ನಮಗೆ ಭಾರಿ ಒಗಟನ್ನೇ ಕೊಟ್ಟಿದ್ದಾರೆ - ತಲೆ ತಿನ್ನುವಂತಹುದು. ” 
“ ಏನದು ಒಗಟು ? ” 

“ ಯಾವುದು ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಯಾವುದು ಎಲ್ಲಕ್ಕಿಂತ ಹೆಚ್ಚು 
ವೇಗವಾಗಿ ಓಡುವುದು, ಯಾವುದು ಎಲ್ಲಕ್ಕಿಂತ ಹೆಚ್ಚು ಸುಖ ನೀಡುವುದು , ಅಂತ ” 

“ ಅಯ್ಯೋ , ಅಪ್ಪ ! ಇದಕ್ಕೆ ಯಾಕೆ ಹೀಗೆ ದುಃಖಿಸುತ್ತ ಕುಳಿತೆ ? ಎಲ್ಲಕ್ಕಿಂತ ಹೆಚ್ಚು ಹೊಟ್ಟೆ 
ತುಂಬಿಸುವುದು ಭೂಮಿ ತಾಯಿ . ಅದೇ ಅಲ್ಲವೇ ನಮ್ಮನ್ನೆಲ್ಲ ಪೋಷಿಸುತ್ತಿರುವುದು , ನಮಗೆ 
ತಿನ್ನಲು ಕುಡಿಯಲು ಕೊಡುತ್ತಿರುವುದು ? ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದೆಂದರೆ 
ಮನಸ್ಸು . ಮನಸ್ಸಿನಲ್ಲಿ ಯೋಚಿಸಿಕೊಂಡು ನೀನು ಎಲ್ಲಿಗೆ ಬೇಕಾದರೂ ಕ್ಷಣ ಮಾತ್ರದಲ್ಲಿ ಹೋಗ 
ಬಹುದು. ಎಲ್ಲಕ್ಕಿಂತ ಹೆಚ್ಚು ಸುಖ ಕೊಡುವುದೆಂದರೆ ನಿದ್ರೆ , ನಿದ್ರೆಯಲ್ಲಿ ಮನುಷ್ಯನಿಗೆ ಎಂಥ 
ಸುಖ ಸಿಗುತ್ತೆ - ಅವನು ಎಲ್ಲವನ್ನೂ ತೊರೆಯುತ್ತಾನೆ, ಎಲ್ಲವನ್ನೂ ಮರೆಯುತ್ತಾನೆ. ” 

“ ಹೌದಲ್ಲವೇ ? ನೀನು ಹೇಳಿದ್ದು ಸರಿ, ಮಗಳೇ ! ನಾನು ಇದನ್ನೇ ಧಣಿಯ ಮುಂದೆ 
ಹೇಳೀನಿ. ” 


ಮಾರನೆಯ ದಿನ ಇಬ್ಬರು ಸೋದರರೂ ಧಣಿಯ ಬಳಿಗೆ ಬಂದರು . ಧಣಿ ಕೇಳಿದ: 
“ ಹುಂ , ಏನು ? ಒಗಟಿಗೆ ಉತ್ತರ ಕಂಡುಹಿಡಿದಿರಾ ? ” 
ಶ್ರೀಮಂತ ಸೋದರ ಬೇಗ ಮುಂದೆ ಬಂದ. ತಾನೇ ಮೊದಲು ಉತ್ತರ ಹೇಳಿ ಹಸುವನ್ನು 
ಗಿಟ್ಟಿಸಿಕೊಂಡು ಬಿಡಬೇಕು ಅಂತ. ಅವನು ಹೇಳಿದ : 

“ ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಧಣಿಗಳೇ , ನಿಮ್ಮ ರೊಪ್ಪದಲ್ಲಿರುವ ಹಂದಿ 
ಗಳು , ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದು ನಿಮ್ಮ ಬೇಟೆನಾಯಿಗಳು , ಎಲ್ಲಕ್ಕಿಂತ ಹೆಚ್ಚು 
ಸುಖ ನೀಡುವುದು ಹಣ. ” 

“ಉಹೂಂ, ಉಹೂಂ, ಎಲ್ಲ ತಪ್ಪು ! ” ಎಂದ ಧಣಿ, “ ನಿನ್ನ ಉತ್ತರ ಏನು ? ” 

“ ನಾನು ಹೇಳೋದು ಏನೂಂದರೆ, ಧಣಿಗಳೇ , ಭೂಮಿ ತಾಯಿಗಿಂತ ಹೆಚ್ಚು ಹೊಟ್ಟೆ 
ತುಂಬಿಸೋದು ಬೇರೆ ಯಾವುದೂ ಇಲ್ಲ. ಅದೇ ಎಲ್ಲರನ್ನೂ ಪೋಷಿಸುತ್ತಿರುವುದು , ಎಲ್ಲರಿಗೂ 
ತಿನ್ನಲು ಕುಡಿಯಲು ಕೊಡುತ್ತಿರುವುದು .” 

“ ಭೇಷ್, ಭೇಷ್ ! ಸರಿಯಾಗಿ ಹೇಳಿದೆ. ಎಲ್ಲಕ್ಕಿಂತ ವೇಗವಾಗಿ ಹೋಗೋದು ಯಾವುದು ? ” 

“ ಮನಸ್ಸು , ಮಹಾ ಸ್ವಾಮಿ , ಮನಸ್ಸಿನಲ್ಲಿ ಯೋಚಿಸಿಕೊಂಡು ನಾವು ಎಲ್ಲಿಗೆ ಬೇಕಾದರೂ 
ಕ್ಷಣಮಾತ್ರದಲ್ಲಿ ಹೋಗಬಹುದು. ” 

“ಸರಿಯಾಗಿ ಹೇಳಿದೆ ! ಎಲ್ಲಕ್ಕಿಂತ ಹೆಚ್ಚು ಸುಖ ಕೊಡೋದು ಯಾವುದು ? ” 

“ನಿದ್ರೆ , ಮಹಾ ಸ್ವಾಮಿ , ನಿದ್ರೆಯಲ್ಲಿ ಮನುಷ್ಯನಿಗೆ ಎಂಥ ಸುಖ ಸಿಗುತ್ತೆ - ಅವನು ಎಲ್ಲ 
ವನ್ನೂ ತೊರೆಯುತ್ತಾನೆ, ಎಲ್ಲವನ್ನೂ ಮರೆಯುತ್ತಾನೆ.” 

“ ಎಲ್ಲ ಸರಿಯಾಗಿ ಹೇಳಿದೆ ! ” ಎಂದ ಧಣಿ, “ ಹಸು ನಿನ್ನದು. ಆದರೆ ಹೇಳು – ಉತ್ತರ 
ಎಲ್ಲ ನೀನೇ ಕಂಡುಹಿಡಿದೆಯೋ , ಅಥವಾ ಬೇರೆ ಯಾರಾದರೂ ನಿನಗೆ ಸಹಾಯ ಮಾಡಿದರೋ ? ” 

“ ಹೌದು, ಧಣಿಗಳೇ , ನನಗೊಬ್ಬ ಮಗಳಿದಾಳೆ , ಮರಸ್ಯ ಅಂತ. ಅವಳು ನನಗೆ ಹೇಳಿ 
ಕೊಟ್ಟಳು.” 

ಧಣಿಗೆ ಕೋಪ ಬಂತು . 

“ ಹೌದಾ ? ನಾನು ಎಷ್ಟು ಬುದ್ದಿವಂತ. ಅವಳು ಒಬ್ಬ ಸಾಮಾನ್ಯ ಹುಡುಗಿ, ನನ್ನ ಒಗಟಿಗೆ 
ಉತ್ತರ ಹೇಳಿಬಿಟ್ಟಳಲ್ಲ ! ತಾಳು , ತಾಳು ! ಇಲ್ನೋಡು ಇಲ್ಲಿ ಹತ್ತು ಬೇಯಿಸಿದ ಮೊಟ್ಟೆಗಳಿವೆ. 
ಇವನ್ನು ನಿನ್ನ ಮಗಳಿಗೆ ಕೊಡು. ಅವಳು ಇವುಗಳ ಮೇಲೆ ಒಂದುಕೋಳಿಕೂರಿಸಿ ಒಂದೇ ರಾತ್ರಿ 
ಯಲ್ಲಿ ಇವುಗಳಿಂದ ಹತ್ತು ಕೋಳಿ ಮರಿಗಳು ಹೊರಬರುವಂತೆ ಮಾಡಬೇಕು, ಅವು ದೊಡ್ಡ 
ದಾಗಿ ಬೆಳೆಯಬೇಕು , ಅವಳು ಅವುಗಳಲ್ಲಿ ಮೂರನ್ನು ಬೆಂಕಿಯಲ್ಲಿ ಸುಟ್ಟು ನನ್ನ ಬೆಳಗಿನ ಉಪಾ 
ಹಾರಕ್ಕೆ ತಿನ್ನಲು ಸಿದ್ದವಾಗಿ ಇರಿಸಬೇಕು. ನಾನು ಬೆಳಿಗ್ಗೆ ಎದ್ದ ಕೂಡಲೇ ನೀನು ಅದನ್ನು ನನಗೆ 
ತಂದು ಕೊಡಬೇಕು. ನಾನು ಕಾಯುತ್ತಿರುತ್ತೀನಿ. ಇದನ್ನು ಮಾಡದೆ ಹೋದರೆ ನಿನಗೇ ಕೇಡು. ” 

ಬಡವ ಮನೆಗೆ ಹೋದ, ಅಳುತ್ತ ಕೂತ. ಮಗಳು ಬರುತ್ತಾಳೆ, ಕೇಳುತ್ತಾಳೆ: 
“ ಯಾಕಪ್ಪ ಅಳುತಿದೀಯ ? ” 

“ ಅಳದೆ ಏನು ಮಾಡಲಿ , ಮಗಳೆ ! ನೋಡು ಧಣಿ ನಿನಗೆ ಈ ಹತ್ತು ಬೇಯಿಸಿದ ಮೊಟ್ಟೆ 
ಗಳನ್ನು ಕೊಟ್ಟಿದಾರೆ. ನೀನು ಇವುಗಳ ಮೇಲೆಕೋಳಿಕೂರಿಸಿ ಒಂದೇ ರಾತ್ರಿಯಲ್ಲೇ ಈ ಮೊಟ್ಟೆ 
ಗಳೆಲ್ಲ ಒಡೆದು ಮರಿಗಳು ಹೊರಬರುವಂತೆ ಮಾಡಬೇಕಂತೆ, ಅವು ದೊಡ್ಡದಾಗಿ ಬೆಳೀಬೇಕಂತೆ, 
ಆಮೇಲೆ ನೀನು ಅವುಗಳಲ್ಲಿ ಮೂರನ್ನು ಸುಟ್ಟು ಭಕ್ಷ ತಯಾರಿಸಬೇಕಂತೆ, ನಾನು ನಾಳೆ ಬೆಳಿಗ್ಗೆ 
ಅದನ್ನು ಅವರ ಉಪಾಹಾರಕ್ಕೆ ತಗೊಂಡು ಹೋಗಿಕೊಡಬೇಕಂತೆ . ” 

ಹುಡುಗಿ ನಸುನಕ್ಕು , ಅಂಬಲಿ ತುಂಬಿದ ಮಡಕೆಯೊಂದನ್ನು ತೆಗೆದುಕೊಂಡು ಹೇಳಿದಳು : 

“ ಅಪ್ಪ , ಈ ಅಂಬಲಿಯ ಮಡಕೆಯನ್ನು ಧಣಿಗಳಿಗೆ ತೆಗೆದುಕೊಂಡು ಹೋಗಿಕೊಡು. 
ಅವರು ಒಂದು ತುಂಡು ಭೂಮಿಯನ್ನು ಉತ್ತು ಅದರಲ್ಲಿ ಈ ಅಂಬಲಿಯನ್ನು ಬಿತ್ತಿ ,ಗೋಧಿ ಬೆಳೆ 
ತೆಗೆದು , ಕಟಾವು ಮಾಡಿ, ಕಾಳು ಒಕ್ಕಿ , ಅವರು ಕಳಿಸಿಕೊಟ್ಟಿರುವ ಈ ಮೊಟ್ಟೆಗಳು ಒಡೆದು 
ಮರಿಯಾದ ಕೂಡಲೇ ಅವಕ್ಕೆ ತಿನ್ನಲು ಕೊಡಲು ಅನುವಾಗುವಂತೆ ಆ ಕಾಳುಗಳನ್ನು ನನಗೆ 
ಕಳಿಸಿಕೊಡಬೇಕು , ಅಂತ ಹೇಳು. ” 

ಬಡವ ಸೋದರ ಮಗಳು ಹೇಳಿದಂತೆಯೇ ಮಾಡಿದ. ಅಂಬಲಿಯ ಮಡಕೆಯನ್ನು ಧಣಿಗೆ 
ತಲುಪಿಸಿ ಮಗಳು ಹೇಳಿದಂತೆಯೇ ಪದ- ಪದ ಎಲ್ಲವನ್ನೂ ಹೇಳಿದ . 

ಧಣಿ ಆ ಅಂಬಲಿಯನ್ನು ನೋಡಿದ, ಮತ್ತೆ ನೋಡಿದ. ಆಮೇಲೆ ಅದನ್ನು ತನ್ನ ನಾಯಿಗಳ 
ಮುಂದೆ ಚೆಲ್ಲಿದ. ಅನಂತರ ಅವನು ಎಲ್ಲಿಂದಲೋ ಅಗಸೆ ಗಿಡದ ಒಂದು ದಿಂಡನ್ನು ತಂದು ಆ 
ಬಡವ ಸೋದರನ ಮುಂದೆ ಹಿಡಿದು ಹೇಳಿದ: 

“ ಈ ದಿಂಡನ್ನು ನಿನ್ನ ಮಗಳಿಗೆ ಕೊಡು. ಅವಳಿಗೆ ಹೇಳು, ಇದನ್ನು ನೆನಸಿ, ಒಣಗಿಸಿ , 
ಹಿಂಜಿ ನೂಲು ತೆಗೆದು ಅದರಿಂದ ನೂರು ಗಜ ಬಟ್ಟೆ ನೇಯಬೇಕು, ಅಂತ ... ಮಾಡದೆ ಇದ್ದರೆ 
ನಿನಗೆ ಕಷ್ಟ ತಪ್ಪದು.” 

ಬಡವ ಸೋದರ ಮನೆಗೆ ಹೋಗಿ ಮತ್ತೆ ಅಳುತ್ತ ಕೂತ. ಮಗಳು ಬಂದು ಕೇಳುತ್ತಾಳೆ: 
“ ಯಾಕಪ್ಪ ಅಳುತಿದೀಯ ? ” 

“ನೋಡಮ್ಮ , ಧಣಿಗಳು ನಿನಗೆ ಈ ಅಗಸೆ ಗಿಡದ ದಿಂಡು ಕಳಿಸಿಕೊಟ್ಟಿದಾರೆ. ನೀನು ಇದನ್ನು 
ನೆನಸಿ, ಒಣಗಿಸಿ, ಹಿಂಜಿ ನೂಲು ತೆಗೆದು ಅದರಿಂದ ನೂರು ಗಜ ಬಟ್ಟೆ ನೇಯಬೇಕಂತೆ .” 

ಮರಸ್ಯ ಒಂದು ಚಾಕುವನ್ನು ತೆಗೆದುಕೊಂಡು ಹೊರ ಹೋಗಿ ಒಂದು ಗಿಡದಿಂದ ಅದರ
ಅತ್ಯಂತ ತೆಳುವಾದ ರೆಂಬೆಯನ್ನು ಕಡಿದುಕೊಂಡು ಬಂದಳು. ಅದನ್ನು ಅಪ್ಪನಿಗೆ ಕೊಟ್ಟು ಹೇಳಿ 
ದಳು : 

- “ ಅಪ್ಪ , ಈ ರೆಂಬೆಯನ್ನು ಧಣಿಗಳಿಗೆ ಕೊಟ್ಟು ಇದರಿಂದ ಒಂದು ಹಿಕ್ಕಣಿಕೆ ಹಾಗೂ ಹಂಜಿ 
ಗೋಲನ್ನು ಮಾಡಿಕೊಡುವಂತೆ ಹೇಳು. ಅದರ ಸಹಾಯದಿಂದ ನಾನು ನೂಲು ನೂತು ಅವ 
ರಿಗೆ ಬಟ್ಟೆ ನೇಯು ಕೊಡುತ್ತೇನೆ.” 

ಬಡವಸೋದರ ರೆಂಬೆಯನ್ನು ಧಣಿಗೆ ಕೊಂಡೊಯ್ದು ಕೊಟ್ಟು ಮಗಳು ಏನು ಹೇಳಿದಳೋ 
ಅದೆಲ್ಲವನ್ನೂ ಹೇಳಿದ. ಧಣಿ ನೋಡಿದ, ನೋಡಿದ, ಆ ರೆಂಬೆಯನ್ನು ಪಕ್ಕಕ್ಕೆ ಎಸೆದ. ಆಮೇಲೆ 
ಯೋಚಿಸಿದ : “ಓಹೋ , ಇವಳನ್ನು ಮೋಸಗೊಳಿಸುವುದು ಸಾಧ್ಯವಿಲ್ಲ. ಇವಳು ಎಲ್ಲರಂತಲ್ಲ 
ಎಂದು ಕಾಣಿಸುತ್ತೆ ! ” ಆಮೇಲೆ ತುಂಬ ತುಂಬ ಯೋಚನೆ ಮಾಡಿ ಆ ಬಡವನಿಗೆ ಹೇಳಿದ : 

“ಹೋಗಿ ಹೇಳು ನಿನ್ನ ಮಗಳಿಗೆ : ಅವಳು ನನ್ನ ಮನೆಗೆ ಅತಿಥಿಯಾಗಿ ಬರಬೇಕು. ಹೇಗೆ 
ಅಂದರೆ, ನಡೆದುಕೊಂಡ ಬರಬಾರದು, ಸವಾರಿಮಾಡಿಕೊಂಡೂ ಬರಬಾರದು, ಬರಿಗಾಲಲ್ಲೂ 
ಇರಬಾರದು ಬೂಟನ್ನೂ ತೊಟ್ಟಿರಬಾರದು, ನನಗಾಗಿ ಕಾಣಿಕೆ ತರಲೂ ಬೇಕು ತರದೆ ಇರಲೂ 
ಬೇಕು. ಅವಳು ಇದನ್ನು ಮಾಡದೆ ಹೋದರೆ ಅವಳಿಗೆ ಕೇಡು ತಪ್ಪದು.” 

ಅಪ್ಪ ಮನೆಗೆ ಹೋಗಿ ಅಳುತ್ತ ಕುಳಿತ. ಮಗಳು ಬಂದಳು . ಅವನು ಅವಳಿಗೆ ಹೇಳಿದ : 

“ ಈಗ ಏನು ಮಾಡುತಿ, ಮಗಳೇ ? ಧಣಿ ಹೀಗೆ ಆಜ್ಞೆ ಮಾಡಿದ್ದಾರೆ. ಹಾಗೆಂದು ಅವನು 
ಅವಳಿಗೆ ಎಲ್ಲವನ್ನೂ ಹೇಳಿದ. 

ಮರಸ್ಯ ಹೇಳಿದಳು : "ನೀನೇನೂ ದುಃಖಿಸಬೇಡ, ಅಪ್ಪ , ಎಲ್ಲ ಸರಿಯಾಗಿ ಆಗುತ್ತೆ . 
ಹೋಗಿ ನನಗೆ ಒಂದು ಜೀವಂತ ಮೊಲವನ್ನು ಕೊಂಡುಕೊಂಡು ಬಾ .” 

ಅಪ್ಪ ಹೋಗಿಜೀವಂತ ಮೊಲವನ್ನು ಕೊಂಡು ತಂದ . ಮರಸ್ಯ ತಕ್ಷಣವೇ ಧಣಿಯ ಮನೆಗೆ 
ಹೊರಡಲು ಸಿದ್ದಳಾಗ ತೊಡಗಿದಳು . ಮೊದಲು ಒಂದು ಕಾಲಿಗೆ ಒಂದು ಹರಕು ಬೂಟು 
ತೊಟ್ಟಳು, ಇನ್ನೊಂದು ಕಾಲನ್ನು ಬರಿದಾಗಿಯೇ ಬಿಟ್ಟಳು. ಒಂದು ಜಾರುಬಂಡಿ 
ತಂದು ಅದಕ್ಕೆ ಒಂದು ಹೊತ ಕಟ್ಟಿದಳು. ಆಮೇಲೆ ಒಂದು ಗುಬ್ಬಚ್ಚಿಯನ್ನು ಹಿಡಿದು ಇಟ್ಟು 
ಕೊಂಡಳು . ಇಷ್ಟು ಮಾಡಿದ ಮೇಲೆ ಅವಳು ಮೊಲವನ್ನು ಕಂಕುಳಲ್ಲಿ ಇರಿಸಿಕೊಂಡಳು. ಗುಬ್ಬಚ್ಚಿ 
ಯನ್ನು ಕೈಯಲ್ಲಿ ಹಿಡಿದುಕೊಂಡಳು . ಒಂದು ಕಾಲನ್ನು ಜಾರುಬಂಡಿಯಲ್ಲಿರಿಸಿದಳು. ಇನ್ನೊಂದನ್ನು 
ನೆಲದ ಮೇಲಿರಿಸಿದಳು - ಒಂದು ಕಾಲನ್ನು ಹೋತ ಒಯ್ದರೆ ಇನ್ನೊಂದು ನಡೆದುಕೊಂಡು 
ಹೋಗುತ್ತೆ . ಈ ರೀತಿ ಅವಳು ಧಣಿಯ ಮನೆಗೆ ಬಂದಳು . ಅಂಗಳದಲ್ಲೇ ಅವಳನ್ನು ಕಂಡ ಧಣಿ 
ತಾನು ಸೋತೆನೆಂದು ತಿಳಿದ. ಅವನಿಗೆಕೋಪಬಂದಿತು . ತನ್ನ ಸೇವಕರಿಗೆ ಕೂಗಿ ಹೇಳಿದ : 
“ ನಾಯಿಗಳನ್ನು ಅವಳ ಮೇಲೆ ಛಬಿಡಿ ! ” 

ಅವರು ಅವಳನ್ನು ಬೇಟೆನಾಯಿಗಳಿಂದ ನಾಶಗೊಳಿಸಲು ಯತ್ನಿಸಿದರು . ಆದರೆ ಅವಳು 
ಮೊಲವನ್ನು ಹೊರ ಬಿಟ್ಟಳು. ಬೇಟೆನಾಯಿಗಳು ಅವಳ ಮೇಲೆಬೀಳುವ ಬದಲು ಆ ಮೊಲವನ್ನು 
ಅಟ್ಟಿಸಿಕೊಂಡು ಹೋದವು. ಆಗ ಅವಳು ಮಹಲಿನೊಳಗೆ ಧಣಿಯ ಬಳಿಗೆ ಹೋಗಿಬಾಗಿ ವಂದಿಸಿ 
ಹೇಳಿದಳು : 

“ನೋಡಿ, ಧಣಿಗಳೇ , ನಿಮ್ಮಲ್ಲಿಗೆ ಅತಿಥಿಯಾಗಿ ಬಂದಿದ್ದೇನೆ. ನಿಮಗೆ ಈ ಗುಬ್ಬಚ್ಚಿಯನ್ನು 
ಕಾಣಿಕೆಯಾಗಿ ತಂದಿದ್ದೇನೆ.” 

ಧಣಿ ಗುಬ್ಬಚ್ಚಿಯನ್ನು ತೆಗೆದುಕೊಳ್ಳ ಬಯಸಿ ಕೈ ನೀಡಿದ. ಅವಳು ಅದನ್ನು ಬಿಟ್ಟು ಬಿಟ್ಟಳು. 
ಓಹ್, ಅದು ಪುರ್ ಎಂದು ತೆರೆದ ಕಿಟಕಿಯಿಂದ ಆಚೆಗೆ ಹಾರಿ ಹೋಯಿತು. 

ಅದೇ ಸಮಯಕ್ಕೆ ಸರಿಯಾಗಿ ಇಬ್ಬರು ರೈತರು ಧಣಿಯ ಬಳಿಗೆ ತಮ್ಮ ಜಗಳದ ನ್ಯಾಯ 
ತೀರ್ಮಾನಕ್ಕಾಗಿ ಬಂದರು . ಧಣಿ ಅವರನ್ನು ಕೇಳಿದ: 

“ ಏನು ಬಂದಿರಿ, ಸಜ್ಜನರೇ ? ಏನು ಸಮಾಚಾರ ? ” 

ಅವರಲ್ಲೊಬ್ಬ ಹೇಳಿದ: “ಅದು ಹೀಗೆ, ಮಹಾ ಸ್ವಾಮಿಗಳೇ ! ನಾವಿಬ್ಬರೂ ಹೊಲದಲ್ಲೇ 
ಮಲಗಿ ರಾತ್ರಿ ಕಳೆದೆವು. ಬೆಳಿಗ್ಗೆ ಏಳುತ್ತಲೇ ನೋಡುತ್ತೇವೆ- ನನ್ನ ಕುದುರೆ ಮರಿ 
ಹಾಕಿದೆ ! ” 

ಎರಡನೆಯ ವ್ಯಕ್ತಿ ಹೇಳಿದ : “ ಅದು ಸುಳ್ಳು , ಮಹಾಪ್ರಭು ! ಮರಿ ಹಾಕಿದುದು ನನ್ನ 
ಕುದುರೆ , ನೀವೇ ತೀರ್ಮಾನ ಹೇಳಿ, ಧಣಿಗಳೇ ! ” 

ಧಣಿ ತುಂಬ ತುಂಬ ಯೋಚನೆ ಮಾಡಿದ. ಆಮೇಲೆ ಹೇಳಿದ: 

ಕುದುರೆಮರಿಯನ್ನೂ ನಿಮ್ಮ ಎರಡು ಕುದುರೆಗಳನ್ನೂ ಇಲ್ಲಿಗೆ ಕರತನ್ನಿ . ಯಾವ ಕುದುರೆಯ 
ಬಳಿಗೆ ಮರಿ ಓಡಿ ಹೋಗುತ್ತೊ ಅದೇ ಅದರ ತಾಯಿ .” 
- ಎರಡು ಕುದುರೆಗಳನ್ನೂ ತಂದು ದೂರದೂರದಲ್ಲಿ ಕಟ್ಟಿ ಹಾಕಿದರು . ಆಮೇಲೆಮರಿಯನ್ನು 
ತಂದು ಅವುಗಳ ಮಧ್ಯದಲ್ಲಿರಿಸಿದರು . ಇಬ್ಬರು ರೈತರೂ ಮರಿ ತಮ್ಮ ತಮ್ಮ ಕುದುರೆಯ 
ಬಳಿಯೇ ಹೋಗಲೆಂದು ಆ ಮರಿಯನ್ನು ಎಷ್ಟು ಪುಸಲಾಯಿಸಿದರು ! ಆದರೆ ಆ ಮರಿಗೆ ಯಾವ 
ಕಡೆಗೆ ಹೋಗಬೇಕೆಂಬುದೇ ತಿಳಿಯದಾಯಿತು. ಬೇರೆ ಯಾವುದೋ ಕಡೆಗೆ ಓಡಿ ಹೋಯಿತು. 
ಎಲ್ಲರೂ ಗೊಂದಲಕ್ಕೊಳಗಾದರು . ಈಗೇನು ಮಾಡುವುದು ? ಆ ಮರಿ ಯಾರದೆಂದು ಹೇಗೆ 
ತೀರ್ಮಾನಿಸುವುದು ? ಆಗ ಮರಸ್ಯ ಮುಂದೆ ಬಂದು ಹೇಳಿದಳು : 

“ನೀವು ಹೀಗಲ್ಲ , ಬೇರೆ ರೀತಿಯಲ್ಲಿ ಮಾಡಿ . ಕುದುರೆಮರಿಯನ್ನು ಒಂದು ಜಾಗದಲ್ಲಿ 
ಕಟ್ಟಿ ಹಾಕಿ, ಎರಡು ಕುದುರೆಗಳನ್ನೂ ಬಿಚ್ಚಿ ಬಿಟ್ಟು ಬಿಡಿ . ಯಾವ ಕುದುರೆ ಮರಿಯ ಬಳಿಗೆ 
ಓಡಿ ಹೋಗುತ್ತದೋ ಅದೇ ಅದರ ತಾಯಿ . ” 

ಹಾಗೆಯೇ ಮಾಡಲಾಯಿತು. ಕುದುರೆಗಳನ್ನು ಬಿಚ್ಚಿ ಬಿಡಲಾಯಿತು. ಕುದುರೆಮರಿಯನ್ನು 
ತಂದು ಅವುಗಳ ಮುಂದೆ ಕಟ್ಟಿ ಹಾಕಲಾಯಿತು. ಒಂದು ಕುದುರೆ ಅದರ ಬಳಿಗೆ ಓಡಿ 
ಹೋಯಿತು. ಇನ್ನೊಂದು ನಿಂತಲ್ಲೇ ನಿಂತಿದ್ದಿತು. 

- ಈಗ ಧಣಿಗೆ ತಿಳಿಯಿತು ಅವಳು ಎಂತಹ ಬುದ್ದಿವಂತೆ ಅಂತ. ಅವಳನ್ನು ಯಾವ ರೀತಿ 
ಯಲ್ಲೂ ಅವನುಸೋಲಿಸದಾಗಿದ್ದ. ಅವಳನ್ನು ಶಾಂತಿಯಿಂದ ಮನೆಗೆ ಹೋಗಲು ಬಿಟ್ಟುಕೊಟ್ಟ . 
Read More

ಸಾಕು ತಂದೆ

ಒಮ್ಮೆ ಮೂವರು ಸೋದರರು ವಾಸಿಸುತ್ತಿದ್ದರು. ಅವರು ತಮ್ಮ ತಂದೆತಾಯಿಯರನ್ನು 
ಎಳೆಯ ವಯಸ್ಸಿನಲ್ಲೇ ಕಳೆದುಕೊಂಡಿದ್ದರು. ಮನೆ ಇಲ್ಲ, ಮಠ ಇಲ್ಲ, ಹೊಲ ಇಲ್ಲ, ಬೆಳೆ ಇಲ್ಲ. 
ಅನಾಥರಾಗಿದ್ದ ಅವರು ಒಂದು ದಿನ ಕೆಲಸ ಹುಡುಕಿಕೊಂಡು ಹೊರಟರು. ಹೋಗುತ್ತ ಯೋಚಿ 
ಸುತ್ತಾರೆ: “ ಅಯೊ , ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ ! 
ಕೆಲಸ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳಬಹುದು !” ನೋಡುತ್ತಾರೆ - ಒಬ್ಬ ಮುದುಕ 
ಬರುತ್ತಿದ್ದಾನೆ. ಹಣ್ಣು ಹಣ್ಣು ಮುದುಕ . ಬಿಳಿ ಗಡ್ಡ ಮಂಡಿಯವರೆಗೂ ಇಳಿಬಿದ್ದಿದೆ. ಈ ಮುದುಕ 
ಮೂವರು ಸೋದರರನ್ನೂ ನಿಲ್ಲಿಸಿ ಕೇಳಿದ : 

“ ಎಲ್ಲಿಗೆ ಹೊರಟಿರಿ, ಮಕ್ಕಳೇ ? ” 
ಅವರು ಉತ್ತರಿಸಿದರು : 
“ಕೆಲಸ ಹುಡುಕಿಕೊಂಡು ಹೊರಟಿದ್ದೇವೆ. ” 
“ ಯಾಕೆ ನಿಮ್ಮ ಬಳಿ ಹೋಲ- ಕಾಣಿ ಏನೂ ಇಲ್ಲವೇ ? ” 

“ ಇಲ್ಲ ” ಅವರೆಂದರು . “ ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ನಾವು ಅವನಿಗೆ 
ಶ್ರದ್ದೆಯಿಂದ ಸೇವೆ ಸಲ್ಲಿಸುತ್ತೇವೆ, ಅವನನ್ನು ನಮ್ಮ ಸ್ವಂತ ತಂದೆಯೆಂದೇ ಕಂಡುಕೊಳ್ಳುತ್ತೇವೆ.” 

ಮುದುಕ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: 

“ ಹಾಗಾದರೆ, ನೀವು ನನಗೆ ಮಕ್ಕಳಾಗಿ, ನಾನು ನಿಮಗೆ ತಂದೆಯಾಗುತ್ತೇನೆ. ಆಗಬಹುದೆ ? 
ನಾನು ನಿಮ್ಮನ್ನು ದೊಡ್ಡವರನ್ನಾಗಿ ಬೆಳೆಸುತ್ತೇನೆ. ಪ್ರಾಮಾಣಿಕ ಜೀವನ ನಡೆಸುವುದನ್ನು , ಅಂತ 
ರಂಗ ಶುದ್ದಿಯಿಂದ ಬಾಳಿ ಬದುಕುವುದನ್ನು ಹೇಳಿಕೊಡುತ್ತೇನೆ. ಆದರೆ ನೀವು ನಾನು ಹೇಳಿದ 
ಹಾಗೆ ಕೇಳಬೇಕಷ್ಟೆ . ” 

ಸೋದರರು ಒಪ್ಪಿಕೊಂಡು ಆ ಮುದುಕನ ಹಿಂದೆ ಹೊರಟರು . ಅವರು ದಟ್ಟವಾದ ಕಾಡು 
ಗಳನ್ನೂ ಅಗಲವಾದ ಹೊಲಗದ್ದೆಗಳನ್ನೂ ದಾಟಿಕೊಂಡು ಹೋದರು. ಹೋಗುತ್ತಾರೆ, ಹೋಗು 
ತಾರೆ. ನೋಡುತ್ತಾರೆ - ಒಂದು ಮನೆ ಕಂಡುಬರುತ್ತೆ , ಎಂಥ ಅಚ್ಚುಕಟ್ಟಾದ, ಗಾಳಿ ಬೆಳಕಿನಿಂದ 
ಕೂಡಿದ ಮನೆ ! ಸುತ್ತ ಸುಂದರವಾದ ತೋಟ, ತೋಟದ ತುಂಬ ಘಮಘಮಿಸುವ ಬಣ್ಣ ಬಣ್ಣದ 
ಹೂಗಳು . ಪಕ್ಕದಲ್ಲೇ ಚೆರಿ ಹಣ್ಣಿನತೋಟ. ಆ ತೋಟದಲ್ಲಿ ಒಬ್ಬ ಹುಡುಗಿ - ಆ ಹೂಗಳಂತೆಯೇ 
ಸುಂದರಳಾದ, ಉಲ್ಲಾಸಯುತಳಾದ , ಕಂಗೊಳಿಸುವ ಹುಡುಗಿ. ಅವಳನ್ನು ಕಂಡೊಡನೇ ಹಿರಿಯ 
ಸೋದರ ಹೇಳಿದ: 
- “ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ಸ್ವಂತ ಹೊಲ, ಹೆಚ್ಚಿನ ಸಂಖ್ಯೆಯಲ್ಲಿ 
ಸ್ವಂತ ದನಕರು ಇದ್ದರೆ ಎಷ್ಟು ಚೆನ್ನ ! ” 

ಮುದುಕ ಅವನಿಗೆ ಹೇಳಿದ : 
“ ಅದಕ್ಕೇನಂತೆ, ಹೋಗಿ ಕೇಳೋಣ. ನಿನಗೆ ಹೆಂಡತಿ , ಹೊಲ, ದನಕರುಗಳು ಎಲ್ಲ 
ಸಿಕ್ಕಂತಾಗುತ್ತೆ . ಸಂತೋಷದಿಂದ ಜೀವಿಸಿಕೊಂಡಿರುವಂತೆ. ಆದರೆ ಜೀವನದಲ್ಲಿ ಋಜು 
ಮಾರ್ಗವನ್ನು ಮಾತ್ರ ಮರೆಯಬೇಡ. ” 

ಅವರು ಹೋದರು . ಕೇಳಿದರು , ಒಪ್ಪಿಗೆಯಾಯಿತು. ಸಂಭ್ರಮದ ಮದುವೆಯ ನಡೆ 
ಯಿತು. ಹಿರಿಯ ಸೋದರ ಒಡೆಯನಾಗಿ ತನ್ನ ಎಳೆಯ ಹೆಂಡತಿಯೊಂದಿಗೆ ಆ ಮನೆಯಲ್ಲೇ 
ಉಳಿದ. 

ಮುದುಕನೂ ಇನ್ನಿಬ್ಬರು ಸೋದರರೂ ಮುಂದೆ ನಡೆದರು . ದಟ್ಟವಾದ ಕಾಡುಗಳನ್ನೂ 
ಅಗಲವಾದ ಹೊಲಗಳನ್ನೂ ದಾಟಿಕೊಂಡು ಹೋದರು. ಹೋಗುತ್ತಾರೆ, ಹೋಗುತ್ತಾರೆ. 
ನೋಡುತ್ತಾರೆ - ಒಂದು ಮನೆ ಕಂಡುಬರುತ್ತೆ . ಚೆನ್ನಾದ, ಬೆಳಕಿನಿಂದಕೂಡಿದ ಮನೆ. ಮನೆಯ 
ಪಕ್ಕದಲ್ಲಿ ಒಂದು ಕೊಳ, ಕೊಳದ ಬಳಿಯೇ ಒಂದು ಮಿಲ್ , ಮನೆಯ ಸಾಪದಲ್ಲಿ ಚೆಲುವೆ 
ಯಾದ ಒಬ್ಬ ಹುಡುಗಿ ಏನೋ ಕೆಲಸ ಮಾಡುತ್ತಿದ್ದಾಳೆ. ಮಧ್ಯಮ ಸೋದರ ಅವಳನ್ನು ಕಂಡೊ 
ಡನೆಯೇ ಹೇಳಿದ : 
- “ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ಜೊತೆಗೆ ನನಗೆ ಸ್ವಂತ ಮಿಲ್ಲು, ಕೊಳ 
ಇರುವುದೂ ಒಳ್ಳೆಯದು. ನಾನು ಮಿಲ್ಲಿನಲ್ಲಿ ಕುಳಿತು ಗೋಧಿ ಹಿಟ್ಟು ಮಾಡುತ್ತೇನೆ. ಸುಖದ 
ತೃಪ್ತಿಯ ಬಾಳು ನಡೆಸಬಹುದು ! ” 
ಮುದುಕ ಹೇಳಿದ : 
“ ಅದಕ್ಕೇನಂತೆ , ಮಗು. ನಿನಗಿಷ್ಟವಾದರೆ ಅದು ಹಾಗೇ ಆಗುತ್ತೆ ! ” 

ಅವರು ಮನೆಯ ಒಳ ಹೋದರು . ಹುಡುಗಿಯೊಂದಿಗೆ ಮಾತುಕತೆ ನಡೆಸಿದರು . ಸಂಭ್ರ 
ಮದ ಮದುವೆಯ ಆಯಿತು. ಈಗ ಮಧ್ಯಮ ಸೋದರ ತನ್ನ ಎಳೆಯ ಹೆಂಡತಿಯೊಂದಿಗೆ 
ಆ ಮನೆಯಲ್ಲೇ ಉಳಿದ. ಮುದುಕ ಅವನಿಗೆ ಹೇಳಿದ : 

“ ಸರಿ , ಮಗು, ಸುಖದಿಂದ ಬಾಳು . ಆದರೆ ಋಜು ಮಾರ್ಗವನ್ನು ಮಾತ್ರ ಮರೆಯಬೇಡ. ” 

ಅವರು - ಕಿರಿಯ ಸೋದರ ಮತ್ತು ಅವನ ಸಾಕು ತಂದೆ – ಮುಂದೆ ನಡೆದರು .ಹೋದರು , 
ಹೋದರು , ನೋಡುತ್ತಾರೆ - ಒಂದು ಬಡ ಗುಡಿಸಿಲು ಕಾಣುತ್ತೆ . ಅದರಿಂದ ಒಬ್ಬ ಹುಡುಗಿ 
ಹೊರಬರುತ್ತಾಳೆ. ಉಷಸ್ಸಿನಂತೆ ಸೊಬಗಿನಿಂದ ಕೂಡಿದ್ದಾಳೆ. ಆದರೆ ಬಡವಿ , ಚಿಂದಿ ಬಟ್ಟೆ ತೊಟ್ಟಿ 
ದಾಳೆ. ಅವಳನ್ನು ಕಂಡ ಕಿರಿಯ ಸೋದರ ಹೇಳುತ್ತಾನೆ: 

“ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ನಾವು ಒಟ್ಟಿಗೆ ದುಡಿದು ಏನು ಸಂಪಾ 
ದಿಸುತ್ತೇವೋ ಅದನ್ನು ನನಗಿಂತ ಬಡವರಾದವರೊಂದಿಗೆ ಹಂಚಿಕೊಂಡು ಬಾಳಬಹುದು. ” 

ಮುದುಕ ಹೇಳಿದ: 

“ ಅದು ನಿನ್ನಿಚ್ಛೆಯಾದರೆ, ಹಾಗೆಯೇ ಆಗಲಿ , ಮಗು ! ಆದರೆ ಋಜು ಮಾರ್ಗವನ್ನು 
ಮಾತ್ರ ಮರೆಯಬೇಡ.” 

ಅವನು ಮೂರನೆಯ ಸೋದರನ ವಿವಾಹವನ್ನೂ ನೆರವೇರಿಸಿ ತನ್ನ ದಾರಿ ಹಿಡಿದುಹೋದ. 

ಹೀಗೆಮೂವರು ಸೋದರರೂ ಜೀವನ ನಡೆಸಿಕೊಂಡು ಹೋದರು . ಹಿರಿಯ ಮಗ ತುಂಬ 
ಶ್ರೀಮಂತನಾದ, ತನಗಾಗಿ ಹೊಸ ಮನೆ ಕಟ್ಟಿಕೊಂಡ. ಬೇಕಾದಷ್ಟು ಚಿನ್ನ ಗುಡ್ಡೆ ಹಾಕಿದ. ಅವನ 
ಯೋಚನೆಯಲ್ಲಿ ಇನ್ನಷ್ಟು ಮತ್ತಷ್ಟು ಚಿನ್ನ ಗುಡ್ಡೆ ಹಾಕಬೇಕು ಅನ್ನುವುದಷ್ಟೆ ಆಗಿತ್ತು . ಬಡವರಿಗೆ 
ಸಹಾಯ ಮಾಡುವ ಮಾತಿನ ಸೊಲ್ಲೇ ಇಲ್ಲ. ಅವರನ್ನು ಕಂಡರೆ ಬೈದು ಅಟ್ಟುತ್ತಿದ್ದ ! 

ಮಧ್ಯಮ ಸೋದರನ ಏಳಿಗೆ ಪಡೆದ. ತನ್ನ ಮಿಲ್ಲಿನಲ್ಲಿ ಕೆಲಸ ಮಾಡಲು ಅನೇಕ ಕೆಲಸ 
ಗಾರರನ್ನು ನೇಮಿಸಿಕೊಂಡ . ತಾನೇ ಸ್ವಲ್ಪವೂ ಕೆಲಸ ಮಾಡುತ್ತಿರಲಿಲ್ಲ . ಸದಾ ಮಲಗಿರುವುದು , 
ತಿನ್ನುವುದು, ಕುಡಿಯುವುದು, ಆಜ್ಞಾಪಿಸುವುದು ಅಷ್ಟೆ . 
- ಕಿರಿಯ ಸೋದರ ಸರಳ ಸಾಮಾನ್ಯ ಬಾಳುವೆ ನಡೆಸುತ್ತಿದ್ದ. ಮನೆಯಲ್ಲಿ ಏನಾದರೂ ಇದ್ದರೆ 
ಇತರರೊಂದಿಗೆ ಹಂಚಿಕೊಂಡು ಅನುಭೋಗಿಸುವುದು . ಏನೂ ಇಲ್ಲದಿದ್ದರೆ , ಪರವಾಗಿಲ್ಲ ಬೇಡ 
ಅಂದುಕೊಳ್ಳುತ್ತಿದ್ದ. ಸ್ವಲ್ಪವೂ ಅಸೂಯೆ ಪಡುತ್ತಿರಲಿಲ್ಲ. 

ಬಿಳಿ ಗಡ್ಡದ ಮುದುಕ, ಆ ಸಾಕು ತಂದೆ, ಜಗತ್ತಿನಲ್ಲಿ ಸುತ್ತುತ್ತ ಹೋದ. ಕೊನೆಗೊಮ್ಮೆ
ತನ್ನ ಸಾಕು ಮಕ್ಕಳು ಹೇಗೆ ಬಾಳುತ್ತಿದ್ದಾರೆ. ಖಜು ಮಾರ್ಗ ಬಿಟ್ಟು ಹೋಗಿಲ್ಲ ತಾನೆ, ಎಂದು 
ನೋಡ ಬಯಸಿದ. ಅವನು ಮುದುಕ ಭಿಕ್ಷುಕನ ಹಾಗೆ ವೇಷ ಮರೆಸಿಕೊಂಡು ಚಿಂದಿ ಬಟ್ಟೆ 
ಉಟ್ಟು ಹಿರಿಯ ಮಗನ ಬಳಿಗೆ ಹೋದ. ಅಂಗಳಕ್ಕೆ ಹೋಗಿತಗ್ಗಿದ ನಡುಗುವ ಧ್ವನಿಯಲ್ಲಿಕೇಳಿದ: 

“ ಈ ಮುದುಕ ಭಿಕ್ಷುಕನಿಗೆ ಒಂದಿಷ್ಟು ಏನಾದರೂ ಭಿಕ್ಷೆ ಕೊಡುವಿರಾ ? ” 
ಮಗ ಹೇಳಿದ: 
“ನೀನೇನೂ ಅಷ್ಟು ಮುದುಕನಲ್ಲ. ಭಿಕ್ಷೆ ಬೇಡೋಕೆ ನಾಚಿಕೆಯಾಗೊಲ್ವೆ ! ಬೇಕಾದರೆ ಕೆಲಸ 
ಮಾಡು ! ನಾನೇ ಈಚೆಗಷ್ಟೇ ನನ್ನ ಕಾಲ ಮೇಲೆ ನಿಲ್ಲುವಂತಾಗಿದ್ದೇನೆ. ಹೋಗು, ಹೋಗಾಚೆ !” 

ಆದರೆ ಅವನ ಬಳಿ ಸಂಪತ್ತು ಪೆಟ್ಟಿಗೆಗಳಲ್ಲಿ ತುಂಬಿ ತುಳುಕುತ್ತಿತ್ತು . ಹೊಸ ಮನೆಗಳನ್ನು 
ಕಟ್ಟಿಕೊಂಡಿದ್ದ , ಉಗ್ರಾಣದ ತುಂಬ ಸಾಮಾನುಗಳಿದ್ದವು, ತಿನ್ನಲು ಬೇಕಾದಷ್ಟು ಆಹಾರವಿತ್ತು . 
ದುಡ್ಡಂತೂ ಎಣಿಸಲಾಗದಷ್ಟಿತ್ತು . ಆದರೂ ಬಡವರಿಗೆ ಕಿಂಚಿತ್ತೂ ಸಹಾಯ ಮಾಡುತ್ತಿರಲಿಲ್ಲ ! 

ಮುದುಕ ಅವನಿಂದ ಹೊರಟ . ಒಂದು ವೆರ್ಸ್ಟ್ ದೂರಹೋಗಿ ತನ್ನ ಸಾಕು ಮಗನ ಮನೆ 
ಹಾಗೂ ಹೊಲದ ಕಡೆಗೊಮ್ಮೆ ತಿರುಗಿ ನೋಡಿದ.ಕೂಡಲೇ ಅವೆಲ್ಲ ಸುಟ್ಟು ಬೂದಿಯಾದವು! 

ಮುದುಕ ಮಧ್ಯಮ ಸೋದರನ ಬಳಿಗೆ ಹೋದ. ಹೋಗಿನೋಡುತ್ತಾನೆ - ಅವನ ಮನೆ, 
ಮಿಲ್ಲು, ಕೊಳ, ಹೊಲ, ಎಲ್ಲ ಚೆನ್ನಾಗಿವೆ. ಅವನು ಮಿಲ್‌ನಲ್ಲಿ ಕುಳಿತಿದ್ದ. ಮುದುಕ ಬಾಗಿ ನಡು 
ಗುವ ಧ್ವನಿಯಲ್ಲಿ ಕೇಳಿದ : 

“ ಪುಣ್ಯವಂತರೇ , ನನಗೆ ಒಂದು ಹಿಡಿ ಹಿಟ್ಟು ಕೊಡ್ತೀರ? ನಾನೊಬ್ಬ ಮುದಿ ಭಿಕ್ಷುಕ. 
ತಿನ್ನಲು ಏನೂ ಇಲ್ಲ.” 
- “ ನನಗೇ ಸಾಕಷ್ಟಿಲ್ಲ, ನಿನಗೆಂಥದು ಕೊಡಲಿ ! ನಿನ್ನಂಥ ಅಲೆಮಾರಿಗಳು ಎಷ್ಟು ಮಂದಿಯೋ ! 
ನಿಮಗೆಲ್ಲ ಕೊಟ್ಟು ಪೂರೈಸುವುದು ಎಲ್ಲಿ ಸಾಧ್ಯ ? ” ಅವನೆಂದ. 

ಮುದುಕ ಅವನಿಂದಲೂ ಹೊರಟ . ಸ್ವಲ್ಪ ದೂರ ಹೋಗಿ ಹಿಂದಿರುಗಿ ನೋಡಿದ - ಅಲ್ಲಿದ್ದ 
ಮನೆ ಮಿಲ್ಲು ಎಲ್ಲ ಹೇಗೆ ಹೊತ್ತಿಕೊಂಡು ಉರಿದು ಬೂದಿಯಾದವು! 

ಇನ್ನೂ ಭಿಕ್ಷುಕನ ವೇಷದಲ್ಲಿದ್ದಂತೆಯೇ ಮುದುಕ ಕಿರಿಯ ಮಗನ ಬಳಿಗೆ ಹೋದ. ಅಲ್ಲಿ 
ಕಿರಿಯ ಮಗ ಬಡತನದಲ್ಲಿ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ. ಚಿಕ್ಕದಾಗಿದ್ದರೂ ಮನೆ ಚೊಕ್ಕಟ 
ವಾಗಿತ್ತು . 

“ ಸಜ್ಜನರೇ , ಈ ಮುದುಕ ಭಿಕ್ಷುಕನಿಗೆ ಒಂದು ತುಂಡು ರೊಟ್ಟಿ ಕೊಡುತ್ತೀರ? ” 
ಕಿರಿಯ ಸೋದರ ಅವನಿಗೆ ಹೇಳುತ್ತಾನೆ: 
“ ಮನೆಯ ಒಳಗೆ ಹೋಗು, ಅಜ್ಜ , ಅಲ್ಲಿ ನಿನಗೆ ಊಟ ಹಾಕ್ತಾರೆ. ದಾರಿಗೆ ಬುತ್ತಿಯನ್ನೂ 
ಕಟ್ಟಿ ಕೊಡ್ತಾರೆ.” 

ಮುದುಕ ಮನೆಯ ಒಳಗೆ ಹೋದ. ಮನೆಯೊಡತಿ ಅವನನ್ನು ನೋಡಿದಳು - ಅವನ 
ಬಟ್ಟೆ ಎಲ್ಲ ಎಷ್ಟು ಚಿಂದಿಚಿಂದಿಯಾಗಿದೆ ! ತಕ್ಷಣವೇ ಒಳಗಿನಿಂದ ಹೊಸ ಬಟ್ಟೆ ತಂದುಕೊಟ್ಟಳು. 
ಅವನು ಅದನ್ನು ಉಟ್ಟುಕೊಂಡ. ಅವನು ಈ ಬಟ್ಟೆ ತೊಡುತ್ತಿದ್ದಾಗ ಅವನ ಎದೆಯ ಮೇಲೆ 
ಒಂದು ದೊಡ್ಡ ಗಾಯ ಇದ್ದುದನ್ನು ಮನೆಯೊಡತಿಯ ಅವಳ ಪತಿಯ ಕಂಡರು . ಕೂಡಲೇ 
ಮುದುಕನನ್ನು ಕುರ್ಚಿಯ ಮೇಲೆಕೂರಿಸಿದರು . ಅವನಿಗೆ ಹೊಟ್ಟೆ ತುಂಬ ತಿನ್ನಲು ಕುಡಿಯಲು 
ಕೊಟ್ಟರು. ಅನಂತರ ಅವನನ್ನು ಕೇಳಿದರು : 

"ಹೇಳು, ಅಜ್ಜ , ನಿನ್ನ ಎದೆಯ ಮೇಲೆ ತುಂಬ ದೊಡ್ಡ ಗಾಯ ಇರುವಂತಿದೆಯಲ್ಲ. 
ಅದು ಹೇಗಾಯಿತು ? ” 

“ ಹೌದು, ನನ್ನ ಎದೆಯ ಮೇಲೆದೊಡ್ಡ ಗಾಯ ಇದೆ. ಅದರಿಂದ ನಾನು ಬೇಗನೆಯೇ ಸಾಯ 
ಲಿದ್ದೇನೆ. ಇನ್ನು ನನಗೆ ಜೀವದಿಂದಿರಲು ಒಂದೇ ಒಂದು ದಿನ ಅಷ್ಟೆ ಉಳಿದಿರೋದು. ” 

“ ಅಯ್ಯೋ , ಪಾಪ !” ಎಂದಳು ಹೆಂಡತಿ, “ ಈ ಗಾಯಕ್ಕೆ ಯಾವ ಮದ್ದೂ ಇಲ್ಲವೇ ? ” 

“ಇದೆ ” ಎಂದ ಅವನು . “ ಒಂದು ಮದ್ದು ಇದೆ. ಅದನ್ನು ಯಾರು ಬೇಕಾದರೂ ಕೊಡ 
ಬಹುದು. ಆದರೆ ಯಾರೂ ಕೊಡುತ್ತಿಲ್ಲ, ಅಷ್ಟೆ . ” 

ಗಂಡ ಕೇಳಿದ: 
“ ಯಾಕೆ ಕೊಡುತ್ತಿಲ್ಲ? ಹೇಳು, ಏನದು ಮದ್ದು ? ” 

“ ಅದು ಬಹಳ ಕಷ್ಟದ್ದು ! ಯಾವುದೇ ಮನೆಯ ಮಾಲೀಕ ತನ್ನ ಮನೆಯನ್ನೂ ಅದರಲ್ಲಿ 
ರುವ ಎಲ್ಲ ವಸ್ತುಗಳನ್ನೂ ಸುಟ್ಟು ಹಾಕಿ ಅದರಿಂದ ಬರುವ ಬೂದಿಯನ್ನು ನನ್ನ ಗಾಯಕ್ಕೆ ಹಚ್ಚಿ 
ದರೆ ಆಗ ಗಾಯ ವಾಸಿಯಾಗುತ್ತೆ , ನಾನು ಇನ್ನಷ್ಟು ಕಾಲ ಬಾಳಬಹುದು. ” 

ಕಿರಿಯ ಸೋದರ ಯೋಚನೆ ಮಾಡಿದ. ತುಂಬ ಹೊತ್ತು ಯೋಚನೆ ಮಾಡಿದ. ಆಮೇಲೆ 
ಹೆಂಡತಿಯನ್ನು ಕೇಳಿದ: “ ಏನಂತೀಯ , ನೀನು ? ” 

“ ನನಗೇನು ಅನಿಸುತ್ತೆಂದರೆ, ಮನೆಯನ್ನಾದರೆ ನಾವು ಇನ್ನೊಂದು ಕಟ್ಟಿಕೊಳ್ಳಬಹುದು . 
ಮನುಷ್ಯ ಸತ್ತ ಮೇಲೆ ಮತ್ತೆ ಬದುಕಲಾರ ” ಎಂದಳು ಅವಳು. 
“ಸರಿ, ಹಾಗೇ ಆಗಲಿ ” ಎಂದ ಅವಳ ಗಂಡ “ ಮಕ್ಕಳನ್ನೆಲ್ಲ ಹೊರಗೆ ಒಯ್ಯ . ” 

ಅವರು ಮಕ್ಕಳನ್ನು ಹೊರಗೆ ಕಳುಹಿಸಿದರು . ತಾವೇ ಹೊರ ಬಂದರು . ತನ್ನ ಮನೆಯನ್ನೂ 
ಸಂಪತ್ತನ್ನೂ ಸುಟ್ಟು ಹಾಕುವುದು ಕಿರಿಯ ಸೋದರನಿಗೆ ದುಃಖಕರವೇ ಆಗಿತ್ತು . ಆದರೆ ಆ ಭಿಕ್ಷು 
ಕನ ಸ್ಥಿತಿ ಇನ್ನೂ ಹೆಚ್ಚು ದುಃಖಕರವಾಗಿತ್ತು . ಅವನು ಕೊಳ್ಳಿ ತೆಗೆದುಕೊಂಡು ಮನೆಗೆ ಬೆಂಕಿ 

ಹಚ್ಚಿದ. ಮನೆ ಎಲ್ಲ ಸುಟ್ಟು ಬೂದಿಯಾಗಿ ಕೆಳಕ್ಕೆ ಬಿದ್ದಿತು. ಆದರೆ ನೋಡುತ್ತಾರೆ - ಅದರ 
ಸ್ಥಳದಲ್ಲಿ ಒಂದು ಹೊಸ, ಬೆಳಕಿನಿಂದ ಕೂಡಿದ, ಎತ್ತರವಾದ ಮನೆ ನಿಂತಿದೆ ! 

ಅಜ್ಜ ನಿಂತು ತನ್ನ ಗಡ್ಡದೊಳಗೇ ಮುಸಿಮುಸಿ ನಗುತ್ತಿದ್ದ. 

“ನೋಡು, ಮಗು, ನೀವುಮೂವರು ಸೋದರರಲ್ಲಿ ನೀನೊಬ್ಬನೇ ಋಜು ಮಾರ್ಗ ಬಿಟ್ಟು 
ಅಡ್ಡ ಸರಿದಿಲ್ಲ, ಅನ್ನುವುದನ್ನು ನಾನೀಗ ಕಂಡೆ. ನೀನು ಯಾವತ್ತೂ ಸುಖ ಸಂತೋಷಗಳಿಂದ 
ಬಾಳು ! ” 

ಆಗ ಕಿರಿಯ ಸೋದರನಿಗೆ ತಿಳಿಯಿತು ಆ ಭಿಕ್ಷುಕ ತನ್ನ ಸಾಕು ತಂದೆ ಅಂತ. ಅವನನ್ನು 
ಅಪ್ಪಿಕೊಳ್ಳಲು ಧಾವಿಸಿದ . ಆದರೆ ಆ ಮುದುಕ ಆಗಲೇ ಅಂತರ್ಧಾನನಾಗಿದ್ದ. 
Read More

ಮುದುಕನ ಮಗಳು ಹಾಗೂ ಮುದುಕಿಯ ಮಗಳು

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ, ಒಬ್ಬ ಮುದುಕಿ ವಾಸವಾಗಿದ್ದರು. ಅವರಿ 
ಗೊಬ್ಬ ಮಗಳಿದ್ದಳು. ಮುದುಕಿ ತುಂಬ ಕಾಲ ಜೀವಿಸಿದಳೊ ಅಲ್ಪ ಕಾಲ ಜೀವಿಸಿದ್ದಳೋ 
ತಿಳಿಯದು, ಅಂತೂ ಅವಳ ಸಾವಿನ ಸಮಯ ಸಮಿಾಪಿಸಿತು . ಸಾಯುವ ಮುನ್ನ ಅವಳು ಮುದುಕ 
ನಿಗೆ ಹೇಳಿದಳು : 

" ಮುದುಕ, ನೀನು ಮತ್ತೆ ಮದುವೆಯಾಗಬೇಕೂಂತ ಅಂದುಕೊಂಡರೆ , ನೋಡು, ಪಕ್ಕದ 
ಮನೆಯಲ್ಲಿ ಮಗಳ ಜೊತೆ ವಾಸ ಮಾಡ್ತಿದಾಳಲ್ಲ ಆ ವಿಧವೆಯನ್ನೆಂದೂ ಮದುವೆಯಾಗಬೇಡ. 
ಅವಳು ನಿನಗೇನೋ ಒಳ್ಳೆಯ ಹೆಂಡತಿಯಾಗಬಹುದು, ಆದರೆ ನಮ್ಮ ಮಗಳಿಗೆ ಒಳ್ಳೆಯ ತಾಯಿ 
ಯಾಗೋಲ್ಲ! ” 

“ ಆಗಲಿ , ನಾನು ಅವಳನ್ನೂ ಮದುವೆಯಾಗೊಲ್ಲ, ಯಾರನ್ನೂ ಮದುವೆಯಾಗೊಲ್ಲ” 
ಎಂದ ಮುದುಕ. 

ಮುದುಕಿ ಸತ್ತಳು . ಮುದುಕ ಅವಳ ಶವಸಂಸ್ಕಾರ ನಡೆಸಿದ . ಒಬ್ಬನೇ ಮಗಳೊಂದಿಗೆ ವಾಸ 
ಮಾಡ ತೊಡಗಿದ. ಸ್ವಲ್ಪ ಕಾಲ ಕಳೆಯಿತು . ಒಂದು ದಿನ ಯಾವುದೋ ಕೆಲಸದ ಮೇಲೆ, ಮುದುಕಿ 
ಹೇಳಿದಳಲ್ಲ ಆ ವಿಧವೆಯ ಮನೆಗೆ ಹೋದ. ತಾನು ಯಾರನ್ನೂ ಮದುವೆಯಾಗುವುದಿಲ್ಲ ಅಂತ 
ಮುದುಕಿಗೆ ಹೇಳಿದ್ದ ಮಾತನ್ನು ಮರೆತ . ವಿಧವೆಯ ಮನೆಯಲ್ಲಿ ಕುಳಿತು ಅದೂ ಇದೂ ಮಾತನಾ 
ಡುತ್ತ ಕೊನೆಗೆ ಮದುವೆಯ ವಿಷಯವನ್ನು ಎತ್ತಿದ. ವಿಧವೆಗೆ ಪರಮಾನಂದವಾಯಿತು. 
“ ನಾನು ಬಹಳ ಕಾಲದಿಂದ ಇದಕ್ಕಾಗಿಯೇ ಕಾಯುತ್ತಿದ್ದೆ ” ಎಂದಳು ಅವಳು . 
ಅವನು ಅಂದಿದ್ದೇ ತಡ ಅವಳು ತನ್ನೆಲ್ಲ ವಸ್ತುಗಳನ್ನೂ ಗಂಟುಮೂಟೆಕಟ್ಟಿಕೊಂಡು ತನ್ನ 
ಮಗಳೊಂದಿಗೆ ಮುದುಕನ ಮನೆಗೆ ಅವನ ಜೊತೆಯಲ್ಲಿ ವಾಸಿಸಲು ಹೋದಳು . 
- ಅವರು ಒಟ್ಟಿಗೆ ವಾಸಿಸುತ್ತಾರೆ - ಮುದುಕನ ಮಗಳು ಹಾಗೂ ಮುದುಕಿಯ ಮಗಳು. 
ದುಷ್ಟ ಮುದುಕಿಗೆ ಮುದುಕನ ಮಗಳನ್ನು ಕಂಡರಾಗದು . ಮೂರು ಹೊತ್ತೂ ಆ ಬಡಪಾಯಿ 
ಹುಡುಗಿಯನ್ನು ಬಯ್ಯುತ್ತಿದ್ದಳು . ಅಲ್ಲದೆ ಮುದುಕನ ಮಗಳು ಮುದುಕಿಯ ಮಗಳು ಇಬ್ಬರೂ 
ತಮ್ಮತಮ್ಮಲ್ಲೇ ತುಂಬ ಆಗಾಗ್ಗೆ ಜಗಳ ಆಡುತ್ತಿದ್ದರು. 

ಅವರು ಆಗಾಗ್ಗೆ ಹಳ್ಳಿ ಕೂಟಗಳಿಗೆ ಹೋಗುತ್ತಿದ್ದರು. ಆಗ ಮುದುಕನ ಮಗಳು ಹೆಚ್ಚಾಗಿ 
ರಾಟೆಯಿಂದ ನೂಲು ತೆಗೆಯುತ್ತ ಹೆಣೆಯುತ್ತ ಕುಳಿತಿರುತ್ತಿದ್ದಳು. ಮುದುಕಿಯ ಮಗಳಾದರೋ 
ಇಡೀ ರಾತ್ರಿ ಹಳ್ಳಿಯ ಹೈದರೊಂದಿಗೆ ಸರಸ ವಿನೋದಗಳಲ್ಲಿ ಕಳೆಯುತ್ತಿದ್ದಳು. ಸರಸದಲ್ಲಿ ಮೈ 
ಮರೆತು ಅವಳು ಹೆಣಿಗೆಯನ್ನೆಲ್ಲ ಗೋಜು ಮಾಡಿ ಬಿಟ್ಟು , ಎಳೆಗಳನ್ನು ಹರಿಯುತ್ತಿದ್ದಳು. 
ಮುಂಜಾನೆ ಮನೆಗೆ ಹಿಂದಿರುಗುತ್ತಿದ್ದರು. ಬೇಲಿಯವರೆಗೂ ಬರುತ್ತಿದ್ದರು. ಈಗ ಬೇಲಿ ದಾಟ 
ಬೇಕು. ಆಗ ಮುದುಕಿಯ ಮಗಳು ಹೇಳುತ್ತಿದ್ದಳು: 

“ನಿನಗೆ ಈ ಹೆಣಿಗೆಯನ್ನೆಲ್ಲ ಹಿಡಿದುಕೊಂಡು ದಾಟುವುದು ಕಷ್ಟವಾಗುತ್ತೆ . ನನಗೆ ಕೊಡು. 
ನೀನು ದಾಟುವಾಗ ನಾನು ಹಿಡಿದುಕೊಂಡಿದ್ದೇನೆ. ” 

“ ಆಗಲಿ ” ಅನ್ನುತ್ತಿದ್ದಳು ಮುದುಕನ ಮಗಳು . “ ಹುಂ , ತಗೋ , ಹಿಡಿದುಕೊಂಡಿರು . ” 

ಮುದುಕನ ಮಗಳು ಬೇಲಿ ದಾಟುವ ಸಮಯದಲ್ಲಿ ಮುದುಕಿಯ ಮಗಳು ಹೆಣಿಗೆಯನ್ನೆಲ್ಲ 
ತೆಗೆದುಕೊಂಡು ತಾಯಿಯ ಬಳಿಗೆ ಓಡುತ್ತಿದ್ದಳು , ಇಲ್ಲಸಲ್ಲದ ಸುಳ್ಳುಗಳನ್ನು ಪೋಣಿಸಿ ಕಥೆ 
ನೇಯು ಹೇಳುತ್ತಿದ್ದಳು - ಮಲಸೋದರಿ ಇಡೀ ರಾತ್ರಿ ಹುಡುಗರೊಂದಿಗೆ ಚಕ್ಕಂದವಾಡಿದಳು , 
ಎಳೆ ಹರಿದು ಬಿಟ್ಟಳು, ಗೋಜು ಮಾಡಿ ಬಿಟ್ಟಳು ಎಂದೆಲ್ಲ ಹೇಳುತ್ತಿದ್ದಳು . 

“ ನಾನಾದರೋ ನೆಟ್ಟಗೆ ಕೂತು ನೇಯ್ದೆ , ನೇರವಾಗಿ ಮನೆಗೆ ಬಂದೆ. ನೋಡು, ಅವಳು 
ಎಷ್ಟು ಸೋಮಾರಿ ! ಎಷ್ಟು ನಿರ್ಲಕ್ಷ ಅವಳದು ! ” 

ಮುದುಕನ ಮಗಳು ಮನೆಗೆ ಬಂದಾಗ ಮಲತಾಯಿ ಅವಳನ್ನು ಚೆನ್ನಾಗಿ ಬಯ್ಯುತ್ತಿದ್ದಳು, 
ಹೊಡೆಯುತ್ತಿದ್ದಳು. ಮುದುಕನಿಗೆ ದೂರುತ್ತಿದ್ದಳು : 

“ ನಿನ್ನ ಮಗಳಂಥವಳನ್ನು ಎಲ್ಲೂ ಕಂಡಿಲ್ಲ. ಇವಳಿಗೆ ಕೆಲಸ ಮಾಡಲೇ ಇಷ್ಟವಿಲ್ಲವಲ್ಲ ! 
ನೀನೂ ಅವಳಿಗೆ ಏನೂ ಹೇಳಿಕೊಡುವುದೂ ಇಲ್ಲ ! ” 

ಮಲತಾಯಿ ಎಷ್ಟೇ ಬೈದರೂ ಹೊಡೆದರೂ , ಮಲಸೋದರಿ ಎಷ್ಟೇ ಕುಚೇಷ್ಟೆ ಮಾಡಿ
ದರೂ ಮುದುಕನ ಮಗಳಂತೂ ತನ್ನ ತಂದೆಗೆ ಒಂದಿಷ್ಟೂ ಚಾಡಿ ಹೇಳುತ್ತಿರಲಿಲ್ಲ. ಎಲ್ಲವನ್ನೂ 
ಸಹಿಸಿಕೊಂಡು ತನ್ನಷ್ಟಕ್ಕೆ ತಾನು ಮೌನದಿಂದ ಕೆಲಸ ಮಾಡುತ್ತಲೇ ಹೋಗುತ್ತಿದ್ದಳು . ಮುದುಕ 
ಅವಳನ್ನು ಪ್ರೀತಿಸುತ್ತಿದ್ದುದನ್ನು ಕಂಡು ಮಲತಾಯಿಯ ಮಲಸೋದರಿಯ ಇನ್ನಷ್ಟು 
ಕೆರಳುತ್ತಿದ್ದರು . ಅವಳನ್ನು ಈ ಜಗತ್ತಿನಲ್ಲೇ ಇಲ್ಲದಂತೆ ಮಾಡಲು ಏನು ಮಾಡಬೇಕು ಎಂದು 
ಯೋಚಿಸ ತೊಡಗಿದರು . 

ಮುದುಕಿ ಮುದುಕನನ್ನು ಛೇಡಿಸ ತೊಡಗಿದಳು . ಪದೇಪದೇ ಹೇಳ ತೊಡಗಿದಳು : 

“ ನಿನ್ನ ಮಗಳು ಶುದ್ಧ ಸೋಮಾರಿ. ಅವಳಿಗೆ ಏನು ಮಾಡಲೂ ಇಷ್ಟವಿಲ್ಲ . ಸುಮ್ಮನೆ 
ಬೀದಿ ಅಲೀತಾಳೆ, ಮನೆಗೆ ಬಾಳೆ, ತಿಂತಾಳೆ, ಮಲಗುತ್ತಾಳೆ. ಇಷ್ಟಾದರೂ ನೀನು ಅವಳಿಗೆ 
ದಂಡಿಸೊಲ್ಲ, ಒಂದು ಮಾತೂ ಹೇಳೊಲ್ಲ! ಅವಳನ್ನು ಯಾರಿಗಾದರೂ ಕೆಲಸದ ತೊತ್ತನ್ನಾಗಿ 
ಕೊಟ್ಟುಬಿಡೋದು ವಾಸಿ. ” 

“ ಆದರೆ ಯಾರು ತಗೋತಾರೆ ? ” ಮುದುಕ ಕೇಳಿದ. 

“ ಎಲ್ಲಿಗಾದರೂ ಸರಿ ಕರಕೊಂಡು ಹೋಗಿ ಬಿಟ್ಟು ಬಿಡು ! ಸದ್ಯಕ್ಕೆ ಅವಳು ನಮ್ಮ ಮನೆಯ 
ಲ್ಲಿಲ್ಲದಿದ್ದರೆ ಸಾಕು ! ” 

ಮುದುಕಿ ಮುದುಕನನ್ನು ತುಂಬ ಪೀಡಿಸ ತೊಡಗಿದಳು , ದಿನದಿನವೂ ಅದೇ ಹಾಡು - 
“ ಮಗಳನ್ನು ಎಲ್ಲಾದರೂ ಕರೆದುಕೊಂಡು ಹೋಗಿ ಬಿಟ್ಟು ಬಿಡು ! ” ಮುದುಕ ಬೇಸತ್ಯ . 
ಮಗಳ ಬಗೆಗೆ ಎಷ್ಟೇ ಪ್ರೀತಿ ಕರುಣೆ ಇದ್ದರೂ , ಅವನು ಏನೂ ಮಾಡದಾದ. 

ಅವರು ಗಂಟುಮೂಟೆ ಕಟ್ಟಿಕೊಂಡು ಹೊರಟರು . ದಟ್ಟವಾದ ಕಾಡಿನ ಬಳಿ ಬಂದರು . 
ಮಗಳು ತಂದೆಗೆ ಹೇಳಿದಳು : 

“ನೀನು ಮನೆಗೆ ಹೋಗಪ್ಪ . ನಾನು ಮುಂದೆ ಒಬ್ಬಳೇ ಹೋಗುತ್ತೇನೆ. ಎಲ್ಲಾದರೂ ಕೆಲಸ 
ಕಂಡುಕೊಳ್ಳುತ್ತೇನೆ. ” 

" ಹಾಗೇ ಆಗಲಿ , ಮಗಳೇ ! ” ಎಂದ ಮುದುಕ . 

ಮಗಳಿಗೆ ವಿದಾಯ ಹೇಳಿದ. ಅವನು ಒಂದು ದಾರಿ ಹಿಡಿದ, ಮಗಳು ಇನ್ನೊಂದು ದಾರಿ 
ಹಿಡಿದಳು . 

ಹುಡುಗಿ ಆ ದಟ್ಟವಾದ ಕಾಡಿನಲ್ಲಿ ಹೊರಟಳು . ನೋಡುತ್ತಾಳೆ - ಅಲ್ಲೊಂದು ಸೇಬಿನ 
ಗಿಡ ಇದೆ. ಅದರ ಸುತ್ತಮುತ್ತ ಎಷ್ಟು ಕಳೆ ಬೆಳೆದಿದೆ ಎಂದರೆ ಸೇಬಿನ ಗಿಡವೇ ಕಾಣುತ್ತಿಲ್ಲ, 
ಅಷ್ಟು ! 


“ಪ್ರೀತಿಯ ಹುಡುಗಿ ! ನನ್ನ ಸುತ್ತಮುತ್ತ ಬೆಳೆದಿರೋ ಈ ಕಳೆಯನ್ನೆಲ್ಲ ಕಿತ್ತು ಹಾಕಿ ನನ್ನನ್ನು 
ಸ್ವಲ್ಪ ಶುದ್ಧಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ” ಎಂದು 
ಹೇಳಿತು ಸೇಬಿನ ಗಿಡ. 

ಮುದುಕನ ಮಗಳು ಅಂಗಿಯ ತೋಳು ಹಿಂದಕ್ಕೆ ಸರಿಸಿಕೊಂಡು ಕೆಲಸದಲ್ಲಿ ತೊಡಗಿದಳು. 
ಕಳೆಯನ್ನೆಲ್ಲ ಕಿತ್ತಳು, ಹೆಚ್ಚಿನ ರೆಂಬೆಗಳನ್ನೆಲ್ಲ ಕತ್ತರಿಸಿ ಹಾಕಿ ಗಿಡವನ್ನು ಸವರಿದಳು , ಬುಡದ 
ಸುತ್ತ ಹೊಸ ಮಣ್ಣು ಮರಳು ಹರಡಿದಳು . ಸೇಬಿನ ಗಿಡ ಅವಳಿಗೆ ತುಂಬ ವಂದನೆ ಸಲ್ಲಿಸಿತು . 
ಹುಡುಗಿ ಮುಂದುವರಿದಳು. 
* ಹೋಗುತ್ತಾಳೆ, ಹೋಗುತ್ತಾಳೆ, ಅವಳಿಗೆ ಬಾಯಾರುತ್ತೆ . ಒಂದು ಬಾವಿಯ ಬಳಿಗೆ ಹೋಗು 
ತಾಳೆ, ಬಾವಿ ಹೇಳುತ್ತೆ : 
- “ಪ್ರೀತಿಯ ಹುಡುಗಿ !. ನನ್ನನ್ನು ಸ್ವಲ್ಪ ಶುದ್ಧಗೊಳಿಸುತ್ತೀಯ ? ಸ್ವಲ್ಪ ಅಂದಗೊಳಿಸು 
ತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯಮಾಡ್ತೀನಿ. ” 

ಹುಡುಗಿ ಬಾವಿಯನ್ನು ಶುದ್ಧಗೊಳಿಸಿದಳು, ಸುತ್ತ ಬೆಣಚುಕಲ್ಲು ಮರಳು ಹರಡಿ ಅಂದ 
ಗೊಳಿಸಿದಳು . ಬಾವಿ ಅವಳಿಗೆ ತುಂಬ ವಂದನೆ ಸಲ್ಲಿಸಿತು. ಹುಡುಗಿ ಮುಂದೆ ಹೊರಟಳು. 

ಒಂದು ನಾಯಿ ಅವಳ ಕಡೆಗೇ ಓಡಿ ಬಂದಿತು . ಅದು ತುಂಬ ಕೊಳಕಾಗಿತ್ತು . ಮೈಗೆಲ್ಲ 
ಹುಲ್ಲು ಮಣ್ಣು ಮೆತ್ತಿಕೊಂಡಿತ್ತು . 

“ಪ್ರೀತಿಯ ಹುಡುಗಿ! ನನ್ನನ್ನು ಸ್ವಲ್ಪ ಶುಭ್ರಗೊಳಿಸುತ್ತೀಯ ? ಪುನಃ ಚೆನ್ನಾಗಿ ಕಾಣುವಂತೆ 
ಮಾಡುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ” ಎಂದದು ಹೇಳಿತು . 

ಹುಡುಗಿ ನಾಯಿಯ ಮೈಯನ್ನು ತಿಕ್ಕಿ ಶುಭ್ರಗೊಳಿಸಿದಳು , ಅದರ ಬಾಲಕ್ಕೆ ಅಂಟಿಕೊಂಡಿದ್ದ 
ಮುಳ್ಳುಗಳನ್ನು ಕಿತ್ತು ಹಾಕಿದಳು. 

“ ತುಂಬ ವಂದನೆಗಳು ನಿನಗೆ, ಪ್ರೀತಿಯ ಹುಡುಗಿ ! ” ಎಂದದು ಹೇಳಿತು . 
“ಓಹ್ , ಪರವಾಗಿಲ್ಲ . ಇದೇನು ಮಹಾ ! ” ಎಂದು ಹೇಳಿ ಹುಡುಗಿ ಮುಂದೆ ಹೊರಟಳು . 
ನೋಡುತ್ತಾಳೆ - ಅಲ್ಲೊಂದು ಒಲೆ ಇದೆ. ಅದರ ಗಾರೆ ಎಲ್ಲ ಕಿತ್ತು ಬಂದಿದೆ. ಅದರ ಒಡ 
ಲೆಲ್ಲ ಸುಟ್ಟು ಕಪ್ಪಗಾಗಿದೆ. ಅದರ ಪಕ್ಕದಲ್ಲಿ ಜೇಡಿಮಣ್ಣಿನ ರಾಶಿ ಇದೆ. ಒಲೆ ಹೇಳಿತು: 
- “ಪ್ರೀತಿಯ ಹುಡುಗಿ ! ನನ್ನನ್ನು ತಿಕ್ಕಿ ಸ್ವಲ್ಪ ಸ್ವಚ್ಛಗೊಳಿಸುತ್ತೀಯ ? ಆ ಜೇಡಿಮಣ್ಣು 
ಮೆತ್ತಿ ಸ್ವಲ್ಪ ಅಂದಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ !” 

ಸರಿ, ಹುಡುಗಿ ಒಲೆಯನ್ನು ತಿಕ್ಕಿ ಸ್ವಚ್ಛಗೊಳಿಸಿದಳು, ಕಪ್ಪು ಗಾರೆಯನ್ನು ಕಿತ್ತು ಹಾಕಿದಳು , 
ಅದರ ಜಾಗದಲ್ಲಿ ಹೊಸ ಜೇಡಿಮಣ್ಣು ಮೆತ್ತಿದಳು , ಸುತ್ತ ಹೂಗಳನ್ನೂ ಎಲೆಗಳನ್ನೂ ಇರಿಸಿ 
ಅಂದಗೊಳಿಸಿದಳು . ಒಲೆ ಹುಡುಗಿಗೆ ತುಂಬ ವಂದನೆ ಸಲ್ಲಿಸಿತು . ಹುಡುಗಿ ಮುಂದೆ ಹೊರಟಳು . 
ಹೋಗುತ್ತಾಳೆ, ಹೋಗುತ್ತಾಳೆ, ಅವಳಿಗೊಬ್ಬ ಹೆಂಗಸು ಭೇಟಿಯಾಗುತ್ತಾಳೆ. 
“ನಮಸ್ಕಾರ, ಹುಡುಗಿ ! ” ಅವಳು ಹೇಳುತ್ತಾಳೆ. 
“ನಮಸ್ಕಾರ, ಕುಶಲವೇ ? ” ಹುಡುಗಿ ಕೇಳುತ್ತಾಳೆ, 
“ ಎಲ್ಲಿಗೆ ಹೊರಟೆ ನೀನು ? ” 
“ ಎಲ್ಲಾದರೂ ಕೆಲಸ ಸಿಕ್ಕುತ್ತೆ ಅಂತ ಹುಡುಕಿಕೊಂಡು ಹೊರಟಿದೀನಿ. ” 
“ ಹಾಗಾದರೆ ನನ್ನ ಬಳಿಯೇ ಕೆಲಸಕ್ಕೆ ಬಾ ! ” 
“ ಆಗಲಿ, ಸಂತೋಷವೇ . ಬರೀನಿ! ” ಉತ್ತರಿಸುತ್ತಾಳೆ ಹುಡುಗಿ. 

“ ನಾನು ಹೇಗೆ ತೋರಿಸಿಕೊಡುತ್ತೇನೋ ಹಾಗೆ ಮಾಡಿದರೆ ನನ್ನ ಮನೆಯಲ್ಲಿ ಕೆಲಸವೇನೂ 
ನಿನಗೆ ಕಷ್ಟವಾಗದು. ಆಗುತ್ತ ? ” 

“ ಯಾಕೆ ಆಗೋಲ್ಲ? ಒಂದು ಸಾರಿ ತೋರಿಸಿಕೊಡಿ. ಆಮೇಲೆ ನಾನೇ ಎಲ್ಲ 
ತಿಳಿಕೊತೀನಿ. ” 

ಅವರು ಗುಡಿಸಿಲಿಗೆಹೋದರು . ಹೆಂಗಸು ಹೇಳಿದಳು : 

“ನೋಡು, ಹುಡುಗಿ, ಇಲೊಡು. ಇಲ್ಲಿ ಕೆಲವು ಮಡಕೆಗಳಿವೆ . ಬೆಳಿಗ್ಗೆ ಹಾಗೂ ಸಾಯಂಕಾಲ 
ನೀನು ಈ ಮಡಕೆಗಳಲ್ಲಿ ನೀರು ಕಾಯಿಸಬೇಕು, ಆ ನೀರನ್ನು ಒಂದು ಉದ್ದನೆಯ ಬಾನೆಗೆ 
ಹಾಕಬೇಕು. ಅದಕ್ಕೆ ಸ್ವಲ್ಪ ಹಿಟ್ಟು ಬೆರಸಿ ಕಣಕ ತಯಾರಿಸಬೇಕು. ಆದರೆ ನೋಡು, ಅದು ತುಂಬ 
ಬಿಸಿಯಾಗಿರಬಾರದು ! ಆಮೇಲೆ ಬಾಗಿಲ ಬಳಿ ನಿಂತು ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ 
ಹಾಕಬೇಕು. ಆಗ ನಿನ್ನ ಬಳಿಗೆ ನಾನಾ ರೀತಿಯ ಮೃಗಗಳು ಬರುತ್ತವೆ. ಅವಕ್ಕೆ ನೀನು ಚೆನ್ನಾಗಿ, 
ಹೊಟ್ಟೆ ತುಂಬ, ತಿನ್ನಿಸಬೇಕು. ಆಮೇಲೆ ಅವು ತಮಗೆ ಬೇಕಾದ ಸ್ಥಳಗಳಿಗೆ ಹೊರಟು ಹೋಗು 
ತವೆ. ನೀನೇನೂ ಅವಕ್ಕೆ ಹೆದರಬೇಕಾಗಿಲ್ಲ. ಅವು ನಿನಗೆ ಏನೂ ಹಾನಿ ಮಾಡವು.” 

“ ಹಾಗೇ ಆಗಲಿ, ನೀವು ಹೇಗೆ ಹೇಳಿದಿರೋ ಹಾಗೇ ಎಲ್ಲವನ್ನೂ ಮಾಡುತ್ತೇನೆ” ಎಂದಳು 
ಹುಡುಗಿ, 


ಅವರು ಸಂಜೆ ಊಟ ಮಾಡಿದರು . ಹುಡುಗಿ ಒಲೆ ಹೊತ್ತಿಸಿದಳು , ನೀರು ಕಾಯಿಸಿದಳು , 
ಅದನ್ನು ಬಾನೆಗೆ ಸುರಿದಳು , ಅದಕ್ಕೆ ಹಿಟ್ಟು ಬೆರೆಸಿ ಮಿದ್ದು ಕಣಕ ಮಾಡಿದಳು . ಆಮೇಲೆ ಬಾಗಿಲ 
ಬಳಿ ಹೋಗಿ ನಿಂತು ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ ಹಾಕಿದಳು - ಹೇಗೆ ಓಡಿ ಬಂದವು 
ತರಹೇವಾರಿ ಕಾಡು ಮೃಗಗಳು ಅವಳ ಬಳಿಗೆ ! ಅವು ಹೊಟ್ಟೆ ತುಂಬ ತಿಂದವು, ಒಂದೊಂದೂ 
ಒಂದೊಂದು ದಿಕ್ಕಿನಲ್ಲಿ ಚೆದುರಿ ಹೋದವು. 

ಹೀಗೆ ಮುದುಕನ ಮಗಳು ಇಡೀ ಒಂದು ವರ್ಷ ಅವಳ ಒಡತಿ ಹೇಗೆ ಹೇಳಿದಳೊ ಹಾಗೇ 
ಎಲ್ಲವನ್ನೂ ಮಾಡುತ್ತ ಸೇವೆ ಸಲ್ಲಿಸಿದಳು . ಒಂದು ವರ್ಷ ಮುಗಿದ ಮೇಲೆ ಯಜಮಾನಿ ಮುದು 
ಕನ ಮಗಳಿಗೆ ಹೇಳಿದಳು : 

“ ಇಲ್ಲಿ ಕೇಳಮ್ಮ , ಹುಡುಗಿ ! ನೀನು ನನ್ನ ಮನೆಗೆ ಕೆಲಸಕ್ಕೆ ಬಂದು ಇವತ್ತಿಗೆ ಸರಿಯಾಗಿ 
ಒಂದು ವರ್ಷವಾಗುತ್ತೆ . ನಿನಗೆ ಇಷ್ಟವಾದರೆ ಇನ್ನಷ್ಟು ಕಾಲ ಇಲ್ಲೇ ಉಳಿ, ಬೇಡವಾದರೆ, ನಿನ 
ಗಿಷ್ಟ ಬಂದಂತೆ ಮಾಡು . ನೀನು ನನಗಾಗಿ ತುಂಬ ಚೆನ್ನಾಗಿ ಕೆಲಸ ಮಾಡಿದೆ. ಅದಕ್ಕಾಗಿ ನಿನಗೆ 
ತುಂಬ ವಂದನೆಗಳು . ” 

ತನಗೆ ಊಟ ವಸತಿ ಕೊಟ್ಟುದಕ್ಕಾಗಿ ಮತ್ತು ಎಲ್ಲ ರೀತಿಯಲ್ಲೂ ಚೆನ್ನಾಗಿನೋಡಿಕೊಂಡು 
ದಕ್ಕಾಗಿ ಹುಡುಗಿ ಆ ಹೆಂಗಸಿಗೆ ಕೃತಜ್ಞತೆಸೂಚಿಸಿ ಹೀಗೆ ಹೇಳಿದಳು : 

“ ನನಗೆ ಮನೆಗೆ ಹೋಗೋಣ ಅನ್ನಿಸಿದೆ. ಇದುವರೆವಿಗೂ ಇಟ್ಟುಕೊಂಡುದಕ್ಕಾಗಿ ನಿಮಗೆ 
ತುಂಬ ವಂದನೆಗಳು , ಒಡತಿ ! ” 

ಹೆಂಗಸು ಅವಳಿಗೆ ಹೇಳಿದಳು : 

“ ಸರಿ , ಹಾಗೇ ಮಾಡು. ನಿನಗಿಷ್ಟವಾದ ಕುದುರೆಯನ್ನೂ ಗಾಡಿಯನ್ನೂ ಆಯ್ತು 
ಕೋ . ” 

ಆ ಹೆಂಗಸು ಒಂದು ದೊಡ್ಡ ಪೆಟ್ಟಿಗೆಯ ತುಂಬ ನಾನಾ ರೀತಿಯ ಸೊಗಸಾದ ವಸ್ತು 
ಗಳನ್ನು ತುಂಬಿ ಹುಡುಗಿಗೆ ಕೊಟ್ಟಳು. ತಾನೇ ಕಾಡಿನ ಅಂಚಿನವರೆಗೂ ಹೋಗಿ ಅವಳನ್ನು 
ಬೀಳ್ಕೊಟ್ಟಳು. ಇಬ್ಬರೂ ಪರಸ್ಪರರಿಗೆ ವಿದಾಯ ಹೇಳಿದರು . ಒಡತಿ ತನ್ನ ಮನೆಗೆ ಹಿಂದಿರುಗಿದಳು . 
ಮುದುಕನ ಮಗಳು ತನ್ನ ಮನೆಯ ಕಡೆಗೆ ಹೊರಟಳು. ಎಲ್ಲ ಇಷ್ಟು ಚೆನ್ನಾಗಿ ಕೊನೆಗಂಡದ್ದು 
ಅವಳಿಗೆ ಅಮಿತಾನಂದ ತಂದಿತ್ತು . 
- ದಾರಿಯಲ್ಲಿ ಅವಳು ಹಿಂದೆ ತಾನು ಚೊಕ್ಕಟಗೊಳಿಸಿದ್ದ ಆ ಒಲೆಯ ಸವಿಾಪ ಬಂದಳು. 
ಅದರ ತುಂಬ ಆಗಷ್ಟೆ ಬೇಯಿಸಿದ ಹಸನಾದ ಸೀರೊಟ್ಟಿಗಳಿದ್ದವು. ಅದು ಹೇಳಿತು : 

“ಪ್ರೀತಿಯ ಹುಡುಗಿ ! ನೀನು ನನ್ನನ್ನು ಶುಭ್ರಗೊಳಿಸಿ ಬಲಪಡಿಸಿದೆ. ಅದಕ್ಕಾಗಿ ತಗೋ , 
ಇಲ್ಲಿರುವ ಸೀರೊಟ್ಟಿಗಳೆಲ್ಲ ನಿನ್ನವೇ .” 

ಹುಡುಗಿ ವಂದನೆ ತಿಳಿಸಿ ಒಲೆಯ ಬಳಿ ಹೋದಳೋ ಇಲ್ಲವೋ ಸೀರೊಟ್ಟಿಗಳೆಲ್ಲ ತಾವೇ 
ಹಾರಿ ಬಂದು ಹುಡುಗಿಯ ಗಾಡಿಯೊಳಗೆ ತುಂಬಿಕೊಂಡವು. ಅವಳು ಒಲೆಗೆ ವಂದನೆ ಹೇಳಿ 
ಮುಂದೆ ಪ್ರಯಾಣ ಬೆಳೆಸಿದಳು . 

ಬರುತ್ತಾಳೆ, ಬರುತ್ತಾಳೆ, ನೋಡುತ್ತಾಳೆ - ಅವಳು ಹಿಂದೆ ಸಹಾಯಮಾಡಿದ ಆ ನಾಯಿ 
ಅವಳ ಬಳಿಗೆ ಓಡಿ ಬರುತ್ತಿದೆ. ಅದು ತನ್ನ ಹಲ್ಲುಗಳ ಮಧ್ಯೆ ಒಂದು ಸರವನ್ನು ಕಚ್ಚಿ ಹಿಡಿದಿದೆ.
ಹಾಗೆ 


ಎಂತಹ ಸುಂದರವಾದ, ಥಳಥಳಿಸುವ, ಉದ್ದನೆಯ ಸರ ! ನಾಯಿ ಗಾಡಿಯ ಬಳಿಗೆ ಓಡಿ ಬಂದು 
ಹೇಳುತ್ತೆ : 

“ ಇದು ನಿನಗೆ , ಪ್ರೀತಿಯ ಹುಡುಗಿ ! ನೀನು ನನ್ನ ಮೈ ಉಜ್ಜಿ ಶುಭ್ರಗೊಳಿಸಿದುದಕ್ಕಾಗಿ, 
ನನ್ನ ಬಾಲಕ್ಕೆ ಅಂಟಿಕೊಂಡಿದ್ದ ಮುಳ್ಳುಗಳನ್ನು ಕಿತ್ತು ಹಾಕಿದುದಕ್ಕಾಗಿ ! ” 

ಹುಡುಗಿ ಆ ಸರವನ್ನು ಸ್ವೀಕರಿಸಿ, ನಾಯಿಗೆ ವಂದನೆ ಸಲ್ಲಿಸಿ, ಸಂತಸದಿಂದ ಮುಂದಕ್ಕೆ 
ಪ್ರಯಾಣ ಮಾಡಿದಳು , 

ಬರುತ್ತಾಳೆ, ಅವಳಿಗೆ ಬಾಯಾರಿಕೆಯಾಗುತ್ತೆ . ಸಹಿಸೋಕೇ ಆಗೋಲ್ಲ, ಅಷ್ಟು ಬಾಯಾರಿಕೆ ! 
ತನ್ನಲ್ಲೇ ಹೇಳಿಕೊಳ್ಳುತ್ತಾಳೆ: 

“ ನಾನು ಹಿಂದೆ ಶುದ್ಧಗೊಳಿಸಿದೆನಲ್ಲ ಆ ಬಾವಿಗೆ ಹೋಗಿ ಒಂದಿಷ್ಟು ನೀರು ಕುಡಿಯೋಣ. ” 

ಅವಳು ಬಾವಿಯ ಬಳಿಗೆ ಹೋದಳು. ಅದರಲ್ಲಿ ಅಂಚಿನವರೆಗೂ ಅತ್ಯಂತ ಸ್ವಚ್ಛವಾದ 
ನಿರ್ಮಲವಾದ ನೀರು ತುಂಬಿತ್ತು . ಬಾವಿಯ ಪಕ್ಕದಲ್ಲಿ ಒಂದು ಚಿನ್ನದ ಪೀಪಾಯಿ ಹಾಗೂ 
ಒಂದು ಚಿನ್ನದ ಸೌಟು ಇದ್ದವು. 

ಬಾವಿ ಹೇಳಿತು : 
“ ಬಾ , ಪ್ರೀತಿಯ ಹುಡುಗಿ, ಬಾ ! ನೀರು ಕುಡಿ. ಈ ಚಿನ್ನದ ಪೀಪಾಯಿಯ ಚಿನ್ನದ ಸೌಟೂ 
ನಿನ್ನವೇ , ತಗೋ ! ” 

ಹುಡುಗಿ ಕುಡಿಯುತ್ತಾಳೆ. ಅದು ಕೇವಲ ನೀರಾಗಿರಲಿಲ್ಲ , ದ್ರಾಕ್ಷಾರಸವಾಗಿತ್ತು . ಅಂಥ 
ರುಚಿಕರವಾದ ದ್ರಾಕ್ಷಾರಸವನ್ನು ಅವಳು ಹಿಂದೆಂದೂ ಕುಡಿದಿರಲಿಲ್ಲ. ಅವಳು ಪೀಪಾಯಿಯ 
ತುಂಬ ಆ ದ್ರಾಕ್ಷಾರಸವನ್ನು ತುಂಬಿಕೊಂಡು, ಸೌಟನ್ನೂ ತೆಗೆದುಕೊಂಡು, ಬಾವಿಗೆ ವಂದನೆ 
ಸಲ್ಲಿಸಿ ಪ್ರಯಾಣ ಮುಂದುವರಿಸಿದಳು . 

ಸ್ವಲ್ಪ ದೂರ ಹೋದ ಮೇಲೆ ನೋಡುತ್ತಾಳೆ – ಎಂಥ ಸುಂದರವಾದ ಸೇಬಿನ ಗಿಡ ! 
ಅವಳು ಹಿಂದೆ ಸಹಾಯಮಾಡಿದ್ದಳಲ್ಲ ಅದೇ ಗಿಡ . ಈಗ ಎಷ್ಟು ಫಲಭರಿತವಾಗಿ ದಟ್ಟವಾಗಿ 
ಬೆಳೆದು ನಿಂತಿದೆ ! ಅದರ ಸೌಂದರ್ಯ ವರ್ಣನಾತೀತ ! ಅದರಲ್ಲಿನ ಸೇಬಿನ ಹಣ್ಣುಗಳೆಲ್ಲ 
ಚಿನ್ನ ಬೆಳ್ಳಿಯವು. ಗಿಡದ ಕೊಂಬೆಗಳು ಹಣ್ಣುಗಳ ಭಾರಕ್ಕೆ ಜಗ್ಗುತ್ತಿವೆ. ಅದು 
ಹೇಳಿತು : 

“ಪ್ರೀತಿಯ ಹುಡುಗಿ ! ಈ ಹಣ್ಣುಗಳೆಲ್ಲ ನಿನ್ನವು. ನೀನು ನನ್ನನ್ನು ಸ್ವಚ್ಛಗೊಳಿಸಿ 
ಸುಂದರಗೊಳಿಸಿದುದಕ್ಕಾಗಿ.” 

ಹುಡುಗಿ ಹೇಳಿದಳು : " ವಂದನೆಗಳು ! ” 
ಗಿಡದ ಕೆಳಗೆ ಹೋದಳು , ಹಣ್ಣುಗಳೆಲ್ಲ ತುಪತುಪನೆ ತಾವೇ ಉದುರಿ ಹುಡುಗಿಯ ಗಾಡಿ 
ಯಲ್ಲಿ ತುಂಬಿಕೊಂಡವು. 

ಎಲ್ಲವನ್ನೂ ತೆಗೆದುಕೊಂಡು ಮುದುಕನ ಮಗಳು ಮನೆಯ ಬಳಿ ಬಂದು ಕೂಗಿ ಹೇಳಿದಳು : 
“ ಅಪ್ಪ ! ನೋಡು ಬಾ , ಅಪ್ಪ , ನಾನು ನಿನಗಾಗಿ ಏನೇನು ತಂದಿದೀನಿ ಅಂತ ! ” 

ತಂದೆ ಗುಡಿಸಿಲಿನಿಂದ ಹೊರಬಂದು ನೋಡುತ್ತಾನೆ - ಮಗಳು ಬಂದಿದಾಳೆ. ಅವನಿಗೆ 
ತುಂಬ ಸಂತೋಷವಾಯಿತು. ಅವಳನ್ನು ಅಪ್ಪಿ ಮುದ್ದಾಡಿದ . ಕೇಳಿದ : 

“ಎಲ್ಲಿಗೆ ಹೋಗಿದ್ದೆ, ಮಗಳೇ ? ಏನು ಮಾಡಿದೆ ? ” 
“ ಕೆಲಸ ಮಾಡಿದೆ, ಅಪ್ಪ ” ಅವಳೆಂದಳು . “ ಇವೆಲ್ಲವನ್ನೂ ಒಳಕ್ಕೆ ಕೊಂಡೊಯ್ದಿರಿ! ” 

ಓಹ್ , ಅವೂ ಎಷ್ಟೊಂದು ! ಎಂಥೆಂಥ ಸೊಗಸಾದ ವಸ್ತುಗಳು ! ಇಡೀ ಗಾಡಿ ತುಂಬ ! 
ಅಷ್ಟೇ ಸಾಲದೆನ್ನುವಂತೆ ಅತ್ಯಂತ ಹೆಚ್ಚಿನ ಬೆಲೆಯ ಸೊಗಸಾದ ಸರ ಬೇರೆ! 

ಸಾಮಾನುಗಳನ್ನೆಲ್ಲ ಒಳಕ್ಕೆ ಒಯ್ಯ ತೊಡಗಿದರು . ಒಂದು ಚೆನ್ನಾಗಿದ್ದರೆ ಇನ್ನೊಂದು ಅದ 
ಕ್ಕಿಂತ ಚೆನ್ನ , ಮುದುಕನ ಮಗಳು ಇಷ್ಟೊಂದು ಸೊಗಸಾದ ವಸ್ತುಗಳನ್ನು ತಂದುದನ್ನು ಕಂಡು 
ಮುದುಕಿ ಮುದುಕನನ್ನು ಪೀಡಿಸ ತೊಡಗಿದಳು : 

“ಹೋಗು, ನಿನ್ನ ಮಗಳನ್ನು ಎಲ್ಲಿಗೆ ಕರಕೊಂಡು ಹೋಗಿದ್ದೆಯೋ ಅಲ್ಲಿಗೇ ನನ್ನ ಮಗಳನ್ನೂ 
ಕರೆದುಕೊಂಡು ಹೋಗು! ” 

ಅವಳು ಅವನನ್ನು ಎಷ್ಟು ಬಲಾತ್ಕರಿಸಿದಳೆಂದರೆ ಅವನು ಹೇಳಿದ: 
“ಸರಿ, ಹೇಳು ಅವಳಿಗೆ, ಪ್ರಯಾಣಕ್ಕೆ ಸಿದ್ದವಾಗು ಅಂತ.” 

ವಿದಾಯ ಹೇಳಿ ಮುದುಕನೂ ಮುದುಕಿಯ ಮಗಳೂ ಹೊರಟರು. ಕಾಡಿನ ಬಳಿ ಬಂದರು . 
ಮುದುಕ ಹೇಳಿದ: 

“ ಇನ್ನು ಮುಂದೆ ನೀನೇ ಹೋಗು, ಮಗಳೇ ! ನಾನು ಮನೆಗೆ ಹಿಂದಿರುಗುತ್ತೇನೆ. ” 
“ ಆಗಲಿ ” ಅವಳೆಂದಳು . 
ಅವರು ಅಗಲಿದರು . ಹುಡುಗಿ ಕಾಡಿನಲ್ಲಿ ಹೊರಟಳು. ಮುದುಕ ಮನೆಗೆ ಹಿಂದಿರುಗಿದ. 

ಮುದುಕಿಯ ಮಗಳು ಕಾಡಿನಲ್ಲಿ ಹೋಗುತ್ತಾಳೆ, ನೋಡುತ್ತಾಳೆ - ಅಲ್ಲೊಂದು ಸೇಬಿನ 
ಗಿಡವಿದೆ. ಅದರ ಸುತ್ತಮುತ್ತ ಕಳೆ ಎಷ್ಟು ತುಂಬಿದೆಯೆಂದರೆ ಸೇಬಿನ ಗಿಡವೇ ಕಾಣುತ್ತಿಲ್ಲ, ಅಷ್ಟು ! 

“ಪ್ರೀತಿಯ ಹುಡುಗಿ ! ನನ್ನ ಸುತ್ತಮುತ್ತ ಬೆಳೆದಿರೋ ಈ ಕಳೆಯನ್ನೆಲ್ಲ ಕಿತ್ತು ಹಾಕಿ ನನ್ನನ್ನು 
ಸ್ವಲ್ಪ ಶುದ್ಧಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” ಎಂದು 
ಹೇಳಿತು ಸೇಬಿನ ಗಿಡ. 
ಹುಡುಗಿ ಉತ್ತರಿಸಿದಳು : " ನನ್ನ ಕೈಯನ್ನು ಕೊಲೆ ಮಾಡಿಕೊಳ್ಳುವುದೆ ? ಅದೆಂದೂ ಆಗದು ! ” 
ಹಾಗೆಂದು ಅವಳು ಮುಂದೆ ಹೊರಟಳು . 

ನೋಡುತ್ತಾಳೆ - ಅಲ್ಲೊಂದು ಬಾವಿ ಇದೆ. ಅದರಲ್ಲಿ ಎಷ್ಟೊಂದು ಕೊಳೆ ತುಂಬಿದೆ ಅಂದರೆ, 
ನೀರೇ ಕಾಣುತ್ತಿಲ್ಲ, ಅಷ್ಟು . 

ಅದು ಹುಡುಗಿಗೆ ಹೇಳುತ್ತೆ : “ಪ್ರೀತಿಯ ಹುಡುಗಿ, ನನ್ನನ್ನು ಸ್ವಲ್ಪ ಶುದ್ಧಗೊಳಿಸುತ್ತೀಯ ? 
ಸ್ವಲ್ಪ ಅಂದಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” 
- “ಹೋಗಿ, ಹೋಗಿ, ಯಾಕೆ ನೀವು ನನಗೆ ಇಷ್ಟು ಕಾಟ ಕೊಡ್ತೀರ? ಅದೆಂದೂ ಆಗದು ! 
ನಾನು ಮುಂದೆ ಹೋಗಬೇಕು ! ” 

ಹೀಗೆ ಹೇಳಿ ಮುದುಕಿಯ ಮಗಳು ಮುಂದುವರಿದಳು . 
ಹೋಗುತ್ತ ಹೋಗುತ್ತ ಅವಳು ಒಂದು ಒಲೆಯ ಬಳಿಗೆ ಬರುತ್ತಾಳೆ. ಆ ಒಲೆ ಅವಳಿಗೆ 
ಹೇಳುತ್ತೆ : 

“ಪ್ರೀತಿಯ ಹುಡುಗಿ ! ನನ್ನನ್ನು ತಿಕ್ಕಿ ಸ್ವಲ್ಪ ಸ್ವಚ್ಛಗೊಳಿಸುತ್ತೀಯ ? ನನ್ನನ್ನು ಅಂದ 
ಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” 

“ ನಾನೇನು ಅಂಥ ಮೂರ್ಖಳೇ ! ನಾನು ನಿನ್ನ ಗೋಡೆ ತಿಕ್ಕಬೇಕೆ ? ಅದೆಂದೂ ಆಗದು ! ” 
ಹಾಗೆಂದು ಅವಳು ಮುಂದೆ ಹೊರಟಳು . 

ನೋಡುತ್ತಾಳೆ - ಒಂದು ನಾಯಿ ಅವಳ ಕಡೆಗೇ ಓಡಿ ಬರುತ್ತಿದೆ. ಅದು ತುಂಬ ಕೊಳ 
ಕಾಗಿದೆ. ಮೈಗೆಲ್ಲ ಮಣ್ಣು ಮೆತ್ತಿಕೊಂಡಿದೆ . 

“ಪ್ರೀತಿಯ ಹುಡುಗಿ ! ನನ್ನನ್ನು ಸ್ವಲ್ಪ ಶುಭ್ರಗೊಳಿಸುತ್ತೀಯ ? ಸ್ವಲ್ಪ ಅಂದಗೊಳಿಸು 
ತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” 

ಹುಡುಗಿ ಮುಖ ಸೊಟ್ಟಗೆ ಮಾಡಿಕೊಂಡು ಹೇಳಿದಳು : 

“ ಅಬ್ಬಾ , ಎಂಥ ಮಾತು ನಿನ್ನದು ! ಇಷ್ಟು ಕೊಳಕಾಗಿದೀಯ , ಮತ್ತೆ ನಾನು ನಿನ್ನನ್ನು 
ಶುದ್ದಗೊಳಿಸಬೇಕೆ? ಅದೆಲ್ಲ ಆಗದು !” 

ಹಾಗೆಂದು ಅವಳು ಮುಂದೆ ಹೋದಳು . 
ಅಲ್ಲಿ ಮುದುಕನ ಮಗಳನ್ನು ಸಂಧಿಸಿದ ಹೆಂಗಸೇ ಇವಳನ್ನೂ ಸಂಧಿಸಿದಳು . 
“ ನಮಸ್ಕಾರ, ಹುಡುಗಿ ! ” ಅವಳು ಹೇಳಿದಳು . 
“ ನಮಸ್ಕಾರ . ನಿಮಗೆ ಆರೋಗ್ಯವಿರಲಿ, ಚಿಕ್ಕಮ್ಮ ! ” 
“ ಎಲ್ಲಿಗೆ ಹೊರಟೆ ? ” 
“ ಎಲ್ಲಾದರೂ ಕೆಲಸ ಸಿಕ್ಕುತ್ತೆ ಅಂತ ಹುಡುಕಿಕೊಂಡು ಹೊರಟೆ, ಚಿಕ್ಕಮ್ಮ ” 
“ ನನ್ನ ಬಳಿಗೇ ಬಾ ! ” 
“ ಆಗಲಿ , ಚಿಕ್ಕಮ್ಮ , ಎಂಥ ಕೆಲಸ ನಿಮ್ಮ ಬಳಿ ? ” 

“ ಅಷ್ಟೇನೂ ಕಷ್ಟವಿಲ್ಲ, ಮಗಳೇ ! ನಾನು ಹೇಳಿದ ಹಾಗೆ ಮಾಡಿದರೆ ಎಲ್ಲ ಸುಲಭವಾಗಿ 
ಆಗುತ್ತೆ . ” 

“ ಯಾಕಾಗೊಲ್ಲ? ಒಂದು ಸಾರಿ ಹೇಳಿಕೊಡಿ, ಎರಡನೆ ಸಾರಿ ನಾನೇ ಮಾಡ್ತೀನಿ.” 

“ಕೆಲಸ ಹೀಗಿದೆ, ಹುಡುಗಿ ” ಎಂದು ಹೇಳಿದಳು ಆ ಹೆಂಗಸು. “ ಅಲ್ಲಿ ನೋಡು, ಮಡಕೆ 
ಗಳು ಕಾಣುತ್ತವ? ಬೆಳಿಗ್ಗೆ ಹಾಗೂ ಸಾಯಂಕಾಲ ನೀನು ಈ ಮಡಕೆಗಳಲ್ಲಿ ನೀರು ಕಾಯಿಸಬೇಕು. 
ಆ ನೀರನ್ನು ಒಂದು ಉದ್ದನೆಯ ಬಾನೆಗೆ ಹಾಕಬೇಕು. ಅದಕ್ಕೆ ಸ್ವಲ್ಪ ಹಿಟ್ಟು ಬೆರಸಿ ಕಣಕ ತಯಾರಿಸ 
ಬೇಕು . ಆದರೆ ನೋಡು, ಅದು ತುಂಬ ಬಿಸಿಯಾಗಿರಬಾರದು ! ಆಮೇಲೆ ಬಾಗಿಲ ಬಳಿ ನಿಂತು 
ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ ಹಾಕಬೇಕು. ಆಗ ನಿನ್ನ ಬಳಿಗೆ ನಾನಾ ರೀತಿಯ ಮೃಗಗಳು 
ಬರುತ್ತವೆ. ಅವಕ್ಕೆ ನೀನು ಚೆನ್ನಾಗಿ, ಹೊಟ್ಟೆ ತುಂಬ , ತಿನ್ನಿಸಬೇಕು. ಆಮೇಲೆ ಅವು ತಮಗೆ ಬೇಕಾದ 
ಸ್ಥಳಗಳಿಗೆ ಹೊರಟು ಹೋಗುತ್ತವೆ. ಅಂದ ಹಾಗೇ , ನೀನೇನೂ ಅವುಗಳಿಗೆ ಹೆದರಬೇಕಾದ್ದಿಲ್ಲ . 
ಅವು ನಿನಗೇನೂ ಹಾನಿ ಮಾಡವು. ಈ ಕೆಲಸ ಮಾಡಬಲ್ಲೆಯಾ? ” 

“ ಮಾಡಬಲ್ಲೆ ! ” ಎಂದಳು ಮುದುಕಿಯ ಮಗಳು . 

ಹೀಗೆ ಅವರು ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದರು . ಸಂಜೆಯಾಯಿತು. ಮುದುಕಿಯ 
ಮಗಳು ಒಲೆ ಹೊತ್ತಿಸಿದಳು , ನೀರು ತುಂಬಿದ ಮಡಕೆಗಳನ್ನು ಅದರ ಮೇಲಿರಿಸಿದಳು . ನೀರು 
ಕುದಿಯ ತೊಡಗಿದಾಗ ಅದನ್ನು ಒಂದು ದೊಡ್ಡ ಬಾನೆಗೆ ಸುರಿದಳು . ಆಮೇಲೆ ಅದಕ್ಕೆ ಅಲ್ಲಿದ್ದ 
ಇಡೀ ಹಿಟ್ಟನ್ನು ಹಾಕಿದಳು . ಅದು ಮೆತ್ತಗಿನ ಕಣಕವಾಗುವ ಬದಲು ಒಂದು ಗಟ್ಟಿ ಮುದ್ದೆ 
ಯಾಯಿತು. ಬಾಗಿಲ ಬಳಿ ನಿಂತು ಒಂದು, ಎರಡು, ಮೂರು ಬಾರಿ ಶಿಳ್ಳೆ ಹಾಕಿದಳು... ನಾನಾ 
ರೀತಿಯ ಮೃಗಗಳು ಬಂದು ನೆರೆಯ ತೊಡಗಿದವು. ಅವು ನಾ ಮುಂದು ತಾ ಮುಂದು ಅನ್ನುತ್ತ 
ಆಹಾರ ತಿನ್ನಲು ಬಾನೆಯ ಕಡೆಗೆ ಧಾವಿಸಿದವು. ಬಾಯಿ ಹಾಕಿದವು, ತಕ್ಷಣವೇ ನೆಲದ ಮೇಲೆ 
ಪಂಜಗಳನ್ನು ಮೇಲೆ ಮಾಡಿಕೊಂಡು ಬಿದ್ದವು. ಎಲ್ಲವೂ ಹಾಗೆಯೇ ಬಿದ್ದವು- ಸುಟ್ಟು ಸತ್ತು 
ಬಿದ್ದವು. 

ಎಲ್ಲ ಪ್ರಾಣಿಗಳೂ ತಿಂದು ಮಲಗಿ ಮತ್ತೆ ಏಳದೇ ಇದ್ದುದನ್ನು ಕಂಡು ಮುದುಕಿಯ ಮಗಳು 
ಒಡತಿಯ ಬಳಿಗೆ ಹೋಗಿ ಹೇಳಿದಳು : 

“ ಏನು, ಒಡತಿ , ನಿಮ್ಮ ಪ್ರಾಣಿಗಳೆಲ್ಲ ವಿಚಿತ್ರವಾದವು. ಎಲ್ಲವೂ ತಿಂದವು, ಮಲಗಿದವು, 
ಮತ್ತೆ ಏಳುತ್ತಲೇ ಇಲ್ಲವಲ್ಲ !” 

“ ಯಾಕೆ ಏಳುತ್ತಿಲ್ಲ ? ” ಎಂದು ಒಡತಿ ಕೂಗಿ ಹೇಳಿ ಬಾನೆಯ ಕಡೆಗೆ ಓಡಿದಳು . 
ನೋಡುತ್ತಾಳೆ – ಎಲ್ಲವೂ ನಿರ್ಜಿವವಾಗಿ ಬಿದ್ದಿವೆ. ಅವಳು ಕೈ ಮೇಲೆ ತಲೆ ಹೊತ್ತುಕೊಂಡು 
ಅರಚಿದಳು : 

“ ಅಯ್ಯೋ , ದೇವರೇ ! ಅಯ್ಯೋ , ಭಗವಂತ ! ಏನಮ್ಮ , ನೀನು ಏನು ಮಾಡಿಬಿಟ್ಟೆ ! ಅವ 
ನ್ನೆಲ್ಲ ಸಾಯಿಸಿ ಬಿಟ್ಟೆಯಲ್ಲ !” 

ಅವಳು ಗೋಳಾಡಿದಳು , ಅತ್ತಳು. ಆದರೆ ಅದು ಏನೂ ಸಹಾಯವಾಗಲಿಲ್ಲ. ಸತ್ತ ಪ್ರಾಣಿ 
ಗಳನ್ನೆಲ್ಲ ಒಂದು ಪೆಟ್ಟಿಗೆಯಲ್ಲಿ ತುಂಬಿ ಬೀಗ ಹಾಕಿ ಇರಿಸಿದಳು . 

ಮುದುಕಿಯ ಮಗಳ ಒಂದು ವರ್ಷದ ಅವಧಿ ಮುಗಿಯಿತು. ಒಡತಿ ಅವಳಿಗೆ ಒಂದು 
ಬಡಕಲು ಕುದುರೆಯನ್ನೂ ಒಂದು ಮುರುಕಲು ಬಂಡಿಯನ್ನೂ ಕೊಟ್ಟಳು. ಆ ಬಂಡಿಯೊಳಗೆ 
ಸತ್ಯ ಪ್ರಾಣಿಗಳ ಪೆಟ್ಟಿಗೆಯನ್ನಿರಿಸಿ ಹುಡುಗಿಯನ್ನು ಕಾಡಿಗೆ ಕಳಿಸಿಕೊಟ್ಟಳು. 

ಮುದುಕಿಯ ಮಗಳು ಹಿಂದೆ ತಾನು ಸಂಧಿಸಿದ್ದ ಆ ಒಲೆಯ ಬಳಿಗೆ ಬಂದಳು . ಅವಳಿಗೆ 
ತುಂಬ ಹಸಿವಾಯಿತು. ಒಲೆಯಲ್ಲಿ ತಟ್ಟೆಗಳಲ್ಲಿ ತುಂಬ ಸೀರೊಟ್ಟಿಗಳಿದ್ದವು – ಚೆನ್ನಾಗಿದ್ದವು, 
ಘಮಘಮಿಸುತ್ತಿದ್ದವು. ಮುದುಕಿಯ ಮಗಳು ಅವುಗಳಲ್ಲಿ ಒಂದನ್ನು ಎತ್ತಿಕೊಂಡಿ 
ಇಲ್ಲವೋ ಅದು ಪುಟನೆಗೆದುಕೊಂಡು ಮತ್ತೆ ಒಲೆಯೊಳಕ್ಕೆ ಹೋಗಿ ಬಿದ್ದಿತು. ಒಲೆಯ 
ಬಾಗಿಲು ಮುಚ್ಚಿಕೊಂಡಿತು . ಒಲೆ ಹೇಳಿತು : 

“ಏಯ್ , ಹುಡುಗಿ, ನೀನು ನನ್ನನ್ನು ಶುದ್ಧಗೊಳಿಸಲಿಲ್ಲ. ನಾನು ನಿನಗೇಕೆ ಸೀರೊಟ್ಟಿ 
ಕೊಡಬೇಕು ? ” 

ಹುಡುಗಿ ಅತ್ತಳು, ಮುಂದೆ ಹೊರಟಳು. 

ಬಾವಿಯ ಬಳಿಗೆ ಬಂದಳು . ತುಂಬ ಬಾಯಾರಿಕೆ ಆಯಿತು .ನೋಡುತ್ತಾಳೆ – ಬಾವಿಯ ತುಂಬ , 
ಅಂಚಿನವರೆಗೂ , ಸೀನೀರು ತುಂಬಿದೆ. ಅವಳು ಬೇಗ ಅದರ ಬಳಿಗೆ ಓಡಿದಳು . ಆದರೆ ಅವಳು 
ಹತ್ತಿರ ಹೋದಳೋ ಇಲ್ಲವೋ ಬಾವಿ ಇದ್ದಕ್ಕಿದ್ದಂತೆ ಒಣಗಿತು . ಸಣ್ಣ ಪಿಸುಧ್ವನಿಯಲ್ಲಿ 
ಹೇಳಿತು : 


“ಏಯ್, ಹುಡುಗಿ ! ನೀನು ನನ್ನನ್ನು ಶುದ್ಧಗೊಳಿಸಿ ಅಂದಗೊಳಿಸಲು ಇಷ್ಟಪಡಲಿಲ್ಲ. 
ಈಗ ನಿನಗೆ ನೀರೂ ಇಲ್ಲ ! ” 

ಹುಡುಗಿ ಅತ್ತಳು, ಮುಂದೆ ಹೋದಳು. 
ಅವಳು ಸೇಬಿನ ಗಿಡದ ಬಳಿಗೆ ಬಂದಳು . ಗಿಡದ ತುಂಬ ಹಣ್ಣುಗಳು ತೂಗಿ ಬಿದ್ದಿವೆ . ಎಲ್ಲವೂ 
ಚೆನ್ನಾದ ಹಣ್ಣುಗಳು – ಬೆಳ್ಳಿಯ ಹಣ್ಣುಗಳು , ಚಿನ್ನದ ಹಣ್ಣುಗಳು ! ಅವನ್ನು ನೋಡಿ ಹುಡುಗಿ 
ಅಂದುಕೊಂಡಳು : 

“ ಈ ಕೆಲವು ಸೇಬಿನ ಹಣ್ಣುಗಳನ್ನು ಅಮ್ಮನಿಗೆ ಬಳುವಳಿಯಾಗಿ ಕೊಟ್ಟರೆ ಚೆನ್ನಾಗಿರುತ್ತೆ .” 

ಹಾಗೆಂದುಕೊಂಡು ಅವಳು ಸೇಬಿನ ಗಿಡದ ಬಳಿಗೆ ಹೋದಳಷ್ಟೆ ತಕ್ಷಣವೇ ಸೇಬಿನ ಗಿಡ 
ತನ್ನ ಕೊಂಬೆಗಳನ್ನೆಲ್ಲ ಮೇಲಕ್ಕೆ ಮಾಡಿಕೊಂಡು ಬಿಟ್ಟಿತು. ಅದು ಹೇಳಿತು : 

“ಏಯ್ , ಹುಡುಗಿ ! ನನ್ನ ಸುತ್ತ ಬೆಳೆದಿದ್ದ ಕಳೆ ತೆಗೆದು ಹಾಕಿ ಸ್ವಚ್ಛಗೊಳಿಸಲು ನೀನು ಇಷ್ಟ 
ಪಡಲಿಲ್ಲ. ಈಗ ಸೇಬಿನ ಹಣ್ಣುಗಳೂ ನಿನಗಿಲ್ಲ ! ” 

ಮುದುಕಿಯ ಮಗಳು ಅತ್ತಳು. ಮುಂದಕ್ಕೆ ಹೋದಳು . 
ನೋಡುತ್ತಾಳೆ - ನಾಯಿಯೊಂದು ತನ್ನ ಬಳಿಗೇ ಓಡಿ ಬರುತ್ತಿದೆ. ಅದರ ಕತ್ತಿನ ಸುತ್ತ ಒಂದು 
ಸೊಗಸಾದ ಸರವಿದೆ – ಎಷ್ಟು ಸುಂದರವಾಗಿದೆ , ಹೇಗೆ ಥಳಥಳ ಅಂತ ಹೊಳೆಯುತ್ತಿದೆ, 
ಎಷ್ಟು ಉದ್ದವಾಗಿದೆ ! ಹುಡುಗಿ ಗಾಡಿಯಿಂದ ಇಳಿದು ಆ ನಾಯಿಯನ್ನು ಹಿಡಿದುಕೊಳ್ಳಲು 
ಓಡಿದಳು. ಅದರ ಸರವನ್ನು ತೆಗೆದುಕೊಳ್ಳಲು ಅವಳು ಇಚ್ಚಿಸಿದ್ದಳು. ನಾಯಿ ಅವಳಿಗೆ ಹೇಳಿತು : 

“ಏಯ್, ಹುಡುಗಿ , ನನ್ನ ಮೈ ಶುಭ್ರಗೊಳಿಸಿ ಅಂದಗೊಳಿಸಲು ನೀನು ಇಚ್ಚಿಸಲಿಲ್ಲ . ಈ 
ಸರವೂ ನಿನಗೆ ಸೇರೋಲ್ಲ! ” 

ಹಾಗೆಂದು ಅದು ಓಡಿ ಹೋಯಿತು. ಮುದುಕಿಯ ಮಗಳು ಅಳುತ್ತ ಮನೆಯ ಕಡೆಗೆ 
ನಡೆದಳು . 

ಮನೆ ತಲುಪಿದಳು . ಹೊರಗಿನಿಂದಲೇ ಮುದುಕಿಯನ್ನೂ ಮುದುಕನನ್ನೂ ಕೂಗಿ ಕರೆದು 
ಹೇಳುತ್ತಾಳೆ: 
“ ಬನ್ನಿ , ನಾನು ತಂದಿರುವ ಸಂಪತ್ತನ್ನೆಲ್ಲ ನೋಡಿ, ಬನ್ನಿ ! ” 

ಮುದುಕನೂ ಮುದುಕಿಯ ಗುಡಿಸಿಲಿನಿಂದ ಹೊರ ಬಂದರು . ನೋಡುತ್ತಾರೆ - ಮಗಳು 
ಬಂದಿದಾಳೆ ! ಅವರಿಗೆ ತುಂಬ ಸಂತೋಷವಾಯಿತು. ಅವಳನ್ನು ಗುಡಿಸಿಲಿನೊಳಕ್ಕೆ ಕರೆದುಕೊಂಡು 
ಹೋದರು. ಪೆಟ್ಟಿಗೆಯನ್ನೂ ಒಳಕ್ಕೆ ಹೊತ್ತು ತಂದರು. ಪೆಟ್ಟಿಗೆ ತೆರೆದು ನೋಡುತ್ತಾರೆ - 
ಅದರ ತುಂಬ ಸತ್ಯ ಹಾವುಗಳು , ಹಲ್ಲಿಗಳು ಹಾಗೂ ಕಪ್ಪೆಗಳು ! ಮುದುಕಿ ಹೇಗೆ ಚೀರಿದಳು : 

" ಮಗಳೇ , ಏನಿದು ನೀನು ತಂದಿರೋದು? ” 

ಆಗ ಮುದುಕಿಯ ಮಗಳು ತನಗೆ ಆದ ಅನುಭವವನ್ನೆಲ್ಲ ವಿವರಿಸಿ ತಿಳಿಸಿದಳು . ಮುದುಕಿ 
ಹೇಳಿದಳು : 

“ಹೋಗಲಿ ಬಿಡು . ನೀನು ಮನೆಯಲ್ಲೇ ಕುಳಿತಿರೋದು ಒಳ್ಳೆಯದು. ಏನು ಮಾಡೋಕೆ
ಆಗುತ್ತೆ - ನಿನ್ನ ಅದೃಷ್ಟವೇ ಅಂಥದು ! ಅವಳು ಎಷ್ಟೊಂದು ಸಂಪತ್ತು ತಂದಳು , ಆದರೆ ನೀನು 
ಈ ಸತ್ಯ ಹಾವು ಕಪ್ಪೆಗಳನ್ನಷ್ಟೆ ತಂದಿದೀಯ ! ಸದ್ಯಕ್ಕೆ ನೀನು ಜೀವದಿಂದ ವಾಪಸಾದೆಯಲ್ಲ, 
ಅಷ್ಟೇ ಸಾಕು !” 
- ಹೀಗೆ ಅವರು ವಾಸಿಸುತ್ತಿದ್ದಾರೆ. ಬ್ರೆಡ್ಡು ಉಪ್ಪು ತಿಂದುಕೊಂಡು ಜೀವಿಸುತ್ತಿದ್ದಾರೆ. ನಾನೂ 
ಅಲ್ಲಿಗೆ ಹೋಗಿದ್ದೆ. ಜೇನು ಮದ್ಯ ಕುಡಿದೆ. ಅದು ಬಾಯಿಯ ಪಕ್ಕದಲ್ಲೇ ಹರಿದು ಹೋಯಿತು. 
ಬಾಯಿಯೊಳಕ್ಕೆ ಒಂದು ತೊಟ್ಟೂ ಬೀಳಲಿಲ್ಲ. ಮುದುಕನ ಮಗಳು ಮದುವೆಯಾದಳು . ಆದರೆ 
ಮುದುಕಿಯ ಮಗಳು ಇದುವರೆವಿಗೂ ಒಂಟಿಯಾಗಿಯೇ ಉಳಿದಿದಾಳೆ. 
Read More

ಲಿಂಡನ್ ಗಿಡ ಹಾಗೂ ದುರಾಶೆಯ ಮುದುಕಿ

ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬಳು ಮುದುಕಿ ವಾಸಿಸುತ್ತಿದ್ದರು . ಅವರು 
ತುಂಬ ಬಡವರಾಗಿದ್ದರು . ಒಂದು ದಿನ ಮುದುಕಿ ಮುದುಕನಿಗೆ ಹೇಳಿದಳು : 

“ ಮುದುಕ , ಕಾಡಿಗೆ ಹೋಗಿಒಂದು ಲಿಂಡನ್ ಮರ ಕಡಿದುಕೊಂಡು ಬಾ . ಅದನ್ನು ಉರಿಸಿ 
ನಮ್ಮ ಮನೆಯನ್ನು ಸ್ವಲ್ಪ ಬೆಚ್ಚಗಾದರೂ ಇರಿಸಬಹುದು.” 

“ ಆಗಲಿ ” ಮುದುಕ ಹೇಳಿದ, ಕೊಡಲಿ ತೆಗೆದುಕೊಂಡು ಕಾಡಿಗೆ ಹೋದ. 

ಕಾಡಿಗೆ ಬಂದವನೇ ಒಂದು ಒಳ್ಳೆಯ ಲಿಂಡನ್ ಮರವನ್ನು ಆಯ್ಕೆ ಮಾಡಿದ. ಅದನ್ನು 
ಕಡಿದು ಕೆಡವಲೆಂದು ಕೊಡಲಿಯನ್ನು ಮೇಲಕ್ಕೆತ್ತಿದ. ಕೂಡಲೇ ಅವನಿಗೆ ಕೇಳಿಸಿತು - ಲಿಂಡನ್ 
ಮರ ಮನುಷ್ಯರ ಧ್ವನಿಯಲ್ಲಿ ಮಾತನಾಡುತ್ತಿದೆ: 

- “ಓಮ್, ದಯವಿಟ್ಟು ನನ್ನನ್ನು ಕೆಡವಬೇಡ, ಮುದುಕಪ್ಪ, ನಿನಗೆ ಕಷ್ಟ ಬಂದಾಗ ನಾನು 
ಸಹಾಯ ಮಾಡ್ತೀನಿ! ” 

ಮುದುಕ ಹೆದರಿ ಕೊಡಲಿಯನ್ನು ಕೆಳಗೆ ಬೀಳಿಸಿದ. ಸ್ವಲ್ಪ ಹೊತ್ತು ಹಾಗೇ ನಿಂತ, ಯೋಚನೆ 
ಮಾಡಿದ. ಆಮೇಲೆ ಮನೆಗೆ ಹಿಂದಿರುಗಿದ. 

ಮನೆಗೆ ಹಿಂದಿರುಗಿದವನೇ ತನಗಾದುದನ್ನೆಲ್ಲ ಮುದುಕಿಗೆ ತಿಳಿಸಿದ . ಮುದುಕಿ ಹೇಳಿದಳು : 

“ನೀನು ಎಂಥ ಮೂರ್ಖ! ಈಗಿಂದೀಗಲೇ ಲಿಂಡನ್ ಮರದ ಬಳಿಗೆ ಹೋಗಿ ನಮಗೆ ಒಂದು 
ಕುದುರೆ, ಒಂದು ಗಾಡಿಕೊಡು ಅಂತ ಕೇಳು. ನಾವು ಇಷ್ಟು ದಿನದವರೆಗೂ ನಡೆದದ್ದು ಸಾಲದೆ ? ” 

“ ಆಗಲಿ , ನಿನಗೆ ಅದು ಇಷ್ಟವಾದರೆ ಹಾಗೇ ಮಾಡ್ತೀನಿ” ಎಂದು ಮುದುಕ ಹೇಳಿದ , ಟೋಪಿ 
ಹಾಕಿಕೊಂಡು ಕಾಡಿಗೆ ಹೊರಟ. 
* ಲಿಂಡನ್ ಮರದ ಬಳಿ ಬಂದು ಹೇಳಿದ : 

“ ಲಿಂಡನ್ ಮರ, ಲಿಂಡನ್ ಮರ ! ನನ್ನ ಮುದುಕಿ ಹೇಳ್ತಾಳೆ ನೀನು ನಮಗೆ ಒಂದು ಕುದುರೆ, 
ಒಂದು ಗಾಡಿ ಕೊಡು ಅಂತ. ” 

“ ಆಗಲಿ ” ಎಂದಿತು ಲಿಂಡನ್ ಮರ, “ ಮನೆಗೆ ಹೋಗು. ” 

ಮುದುಕ ಮನೆಗೆ ಹಿಂದಿರುಗಿದ. ನೋಡ್ತಾನೆ - ಮನೆಯ ಮುಂದೆ ಒಂದು ಕುದುರೆ, ಒಂದು 
ಗಾಡಿ ನಿಂತಿವೆ. 

“ನೋಡು, ಮುದುಕ ” ಎಂದಳು ಮುದುಕಿ. “ ಇದೀಗ ನಾವೂ ಜನ ಅಂತ ಆದಿವಿ . ಆದರೆ 
ನಮ್ಮ ಮನೆ ಎಲ್ಲಿ ಮುರುಕಲು , ಹೋಗುಕಾಡಿಗೆ ಹೋಗಿ ಲಿಂಡನ್ ಮರವನ್ನು ಕೇಳು, ನಮಗೆ 
ಒಂದು ಹೊಸ ಮನೆ ಕೊಡು, ಅಂತ, ಅದು ಕೊಟ್ಟರೂ ಕೊಡಬಹುದು. ” 

ಮುದುಕ ಲಿಂಡನ್ ಮರದ ಬಳಿಗೆ ಹೋಗಿಹೊಸ ಮನೆ ಬೇಕು ಅಂತ ಕೇಳಿದ . 
“ ಆಗಲಿ , ಮನೆಗೆ ಹೋಗು” ಅಂದಿತು ಲಿಂಡನ್ ಮರ. 

ಮುದುಕ ಮನೆಗೆ ಹಿಂದಿರುಗಿದ. ಅವನಿಗೆ ಗುರುತೇ ಸಿಗಲಿಲ್ಲ. ಹಳೆಯ ಮನೆಯ ಸ್ಥಳದಲ್ಲಿ 
ಒಂದು ಹೊಸತಾದ ಸುಂದರವಾದ ಮನೆ ನಿಂತಿದೆ. ಇಬ್ಬರೂ ಮಕ್ಕಳಷ್ಟು ಸಂತೋಷಪಟ್ಟರು. 

“ ಏನು, ಮುದುಕ , ನೀನು ಮತ್ತೆ ಆ ಮರದ ಬಳಿಗೆ ಹೋಗಿ ಒಂದಿಷ್ಟು ದನಕರು,ಕೋಳಿ 
ಕೊಡು ಅಂತ ಕೇಳಿದರೆ ಹೇಗೆ? ಅದು ಕೊಟ್ಟರೆ ಸಾಕು . ಆಮೇಲೆ ನಮಗೆ ಹೆಚ್ಚಿಗೆ ಏನೂ ಬೇಕಾ 
ಗೊಲ್ಲ” ಎಂದಳು ಮುದುಕಿ. 

ಮುದುಕ ಲಿಂಡನ್ ಮರದ ಬಳಿಗೆ ಹೋಗಿ, ದನಕರು ಬೇಕು ಅಂತ ಕೇಳಿದ. 
“ ಆಗಲಿ, ಮನೆಗೆ ಹೋಗು” ಎಂದಿತು ಲಿಂಡನ್ ಮರ. 

ಮುದುಕ ಹಿಂದಿರುಗಿದ. ಅವನಿಗೆ ಅಮಿತಾನಂದವಾಯಿತು - ಅಂಗಳದಲ್ಲೆಲ್ಲ ದನಕರು 
ಗಳು , ಕೋಳಿಗಳು ನಿಂತಿವೆ. 

“ ಸರಿ. ಇನ್ನು ನಮಗೆ ಹೆಚ್ಚಿಗೆ ಏನೂ ಬೇಡ” ಎಂದ ಮುದುಕ . 
“ ಇಲ್ಲ, ಮುದುಕ. ಮತ್ತೆ ಹೋಗಿ, ಸ್ವಲ್ಪ ಹಣ ಬೇಕು ಅಂತ ಕೇಳು.” 
ಮುದುಕ ಲಿಂಡನ್ ಮರದ ಬಳಿಗೆ ಹೋಗಿ ಹಣ ಬೇಕು ಅಂತ ಕೇಳಿದ. 
“ ಆಗಲಿ , ಮನೆಗೆ ಹೋಗು” ಎಂದಿತು ಅದು. 

ಮುದುಕ ಮನೆಗೆ ಹಿಂದಿರುಗಿದ. ನೋಡ್ತಾನೆ - ಮುದುಕಿ ಹಣ ಎಣಿಸ್ತಿದಾಳೆ, ಚೀಲಗಳಲ್ಲಿ 
ತುಂಬಿ ಮೇಜಿನ ಮೇಲೆ ಪೇರಿಸ್ತಿದಾಳೆ ! 

“ ಈಗನೋಡಿದೆಯಾ, ಮುದುಕ, ನಾವೆಷ್ಟು ಶ್ರೀಮಂತರು ! ” ಎಂದಳು ಮುದುಕಿ, “ ಆದರೆ 
ಇದೂ ಸ್ವಲ್ಪವೇ . ನಮಗೆ ಇನ್ನೂ ಬೇಕು. ಎಲ್ಲ ಜನರೂ ನಮ್ಮನ್ನು ಕಂಡರೆ ಭಯಪಡೋ ಹಾಗೆ 
ಆಗಬೇಕು. ಆಗಷ್ಟೆ ನಾವು ನಿಜಕ್ಕೂ ಶ್ರೀಮಂತರಾಗೀವಿ! ಹೋಗು, ಮುದುಕ, 
ಲಿಂಡನ್ ಮರದ ಬಳಿಗೆ ಹೋಗಿ, ನಮ್ಮನ್ನು ಕಂಡರೆ ಎಲ್ಲರೂ ಭಯಪಡೋ ಹಾಗೆ ಏನಾ 
ದರೂ ಮಾಡು, ಅಂತ ಕೇಳು. ” 

ಮುದುಕ ಲಿಂಡನ್ ಮರದ ಬಳಿಗೆ ಹೋದ. ಹಾಗೆ ಮಾಡುವಂತೆ ಲಿಂಡನ್ ಮರವನ್ನು 
ಕೇಳಿಕೊಂಡ. 

“ ಹಾಗೇ ಆಗಲಿ, ಮನೆಗೆ ಹೋಗು” ಎಂದಿತು ಲಿಂಡನ್ ಮರ. 

ಮುದುಕ ಮನೆಗೆ ಹಿಂದಿರುಗಿದ.ನೋಡ್ತಾನೆ - ಮನೆಯ ಸುತ್ತ ತುಂಬ ಮಂದಿ ಭಟರಿದ್ದಾರೆ , 
ಎಲ್ಲರೂ ಮನೆಯನ್ನು ಕಾಯುತ್ತಿದ್ದಾರೆ. ಆದರೆ ಮುದುಕಿಗೆ ಇನ್ನೂ ಸಾಲದು. 

“ ಏನು , ಮುದುಕ ” ಎಂದವಳು ಹೇಳಿದಳು . “ ಈಗ ಏನು ಆಗಬೇಕೂಂದರೆ, ಹಳ್ಳಿಯ ಸಮ 
ಸ್ವರೂ ನಮಗಾಗಿ ದುಡಿಯುವಂತೆ ಮಾಡಬೇಕು. ಅದು ಬಿಟ್ಟರೆ ನಮಗೆ ಬೇಕಾದುದು ಬೇರೇನೂ 
ಇಲ್ಲ . ಈಗ ನಮ್ಮ ಬಳಿ ಎಲ್ಲ ಇದೆ.” 

ಮುದುಕ ಲಿಂಡನ್ ಮರದ ಬಳಿಗೆ ಹೋಗಿತನ್ನ ಹೆಂಡತಿ ಹೇಳಿದಂತೆ ಮಾಡುವ ಹಾಗೆ ಕೇಳಿ 
ಕೊಂಡ, ಲಿಂಡನ್ ಮರ ತುಂಬ ಹೊತ್ತು ಮೌನದಿಂದಿತ್ತು . ಆಮೇಲೆ ಹೇಳಿತು : “ ಸರಿ, ಮನೆಗೆ 
ಹೋಗು. ಇದೇ ಕೊನೆಯ ಬಾರಿಗೆ ನಾನು ನಿಮ್ಮ ಅಪೇಕ್ಷೆಯನ್ನು ಪೂರೈಸುವುದು . ” 

ಮುದುಕ ಮನೆಗೆ ಹಿಂದಿರುಗುತ್ತಾನೆ. ನೋಡುತ್ತಾನೆ - ಅಲ್ಲಿ ಏನೂ ಇಲ್ಲ. ಅದೇ ಹಳೆಯ 
ಮನೆಯಷ್ಟೆ ಇದೆ. ಅದರಲ್ಲಿ ಅವನ ಮುದುಕಿ ಹೆಂಡತಿ ಕುಳಿತಿದ್ದಾಳೆ. ಎಲ್ಲ ಜನರೂ ತಮಗೆ 
ಸೇವೆ ಸಲ್ಲಿಸಬೇಕು ಅಂತ ಬಯಸಿದ ಆ ದುರಾಶೆಯ ಮುದುಕಿಗೆ ಲಿಂಡನ್ ಮರ ಹೀಗೆ ಶಿಕ್ಷೆ 
ನೀಡಿತ್ತು . 
Read More